ಅವಳ ಈ ಮನಸ್ಸೇ ಹೀಗೆ...
ಏನೆಲ್ಲ ಹೂತಿಟ್ಟು ಬೇಯಿಸುತ್ತದೆ.
ಬಾಡಿಗೆ ಮನೆಯ ಮುರುಕು
ಗೇಟಿನ ಹಿಂದೆ ನಿಂತ ಅವಳಿಗೆ
ಮದುವೆಗೆ ಮುಂಚಿನ
ದಿನದ ಕನಸುಗಳ ನೆನಪು.........
ರಸ್ತೆಯಂಚಿನಲಿ ಹಾದು ಹೋಗುತ್ತಿರುವ
ಕಟ್ಟುಮಸ್ತಾದ ಯುವಕ..
ಕಾರಿನಲಿ ಕಿಲ ಕಿಲ ನಗುತ್ತಾ ಸಾಗುತ್ತಿರುವ ದಂಪತಿ.!
ಎದುರಿಗಿರುವ ಭವ್ಯ ಬಂಗಲೆ..
ಇನ್ನೂ.. ಏನೇನೊ
" ನಾನು ಮೋಸ ಹೋದೆ!"
ನಡುಗುವ ಕರಗಳಿಂದ......
ಗೇಟಿನ ಸರಳು ಹಿಡಿದು..
ದವಾಖಾನೆಗೆ ಹೋದ
ಗಂಡನ ಬರುವಿಕೆಯ ನಿರೀಕ್ಷೆಯಲ್ಲಿ....
ಅಷ್ಟರಲ್ಲಿ ಯಾರೋ ಸೀರೆ ಜಗ್ಗಿದಂತಾಗಿ
ಬೆಚ್ಚಿದಳು....!
"ಅಜ್ಜೀ ಅಮ್ಮ ಕರೀತಿದಾಳೆ"
ಪುಟ್ಟ ಮೊಮ್ಮಗಳ ಗಿಳಿ ಮಾತು
ಮನಸ್ಸಿನಲ್ಲೇ ನಕ್ಕು ಒಳ ನಡೆದಳು.....
ಅವಳ ಈ ಮನಸ್ಸೇ ಹೀಗೆ...
ಏನೆಲ್ಲ ಹೂತಿಟ್ಟು ಎಲ್ಲರನ್ನೂ ಬೇಯಿಸುತ್ತದೆ.
ಪ್ರತಿಕ್ರಿಯೆ (2)