
ನನ್ನ ಹಿಂದು ಧರ್ಮ
ಈ ಜಗತ್ತಿನಲ್ಲಿ ಅಸಂಖ್ಯ ಜೀವರಾಶಿಗಳಿವೆ. ಅವುಗಳಲ್ಲಿ ಮನುಷ್ಯಜೀವಿಯೂ ಒಂದು. ಈ ಎಲ್ಲ ಜೀವರಾಶಿಗಳು ‘ಐದು ಅಲಿಖಿತ ನಿಯಮಗಳಿಗೆ’ ಒಳಪಟ್ಟಿವೆ.
೧. ಜೀವಜಗತ್ತಿನ ಪ್ರತಿಯೊಂದು ಜೀವರಾಶಿಯ ಮೂಲ ಉದ್ದೇಶ ಸಂತಾವರ್ಧನೆಯಾಗಿರುತ್ತದೆ.
೨. ಸಂತಾನ ವರ್ಧನಾ ವಯಸ್ಸನ್ನು ತಲುಪಲು ಹಾಗೂ ತಾನು ಹೆತ್ತ ಸಂತಾನವನ್ನು ರಕ್ಷಿಸಲು ಜೀವಿಗಳು ಆಹಾರವನ್ನು ಸಂಪಾದಿಸಿ ಸೇವಿಸುತ್ತವೆ.
೩. ಜೀವಜಗತ್ತಿನಲ್ಲಿ ಯಾವ ಒಂದು ಜೀವಿಯೂ ಸ್ವತಂತ್ರವಲ್ಲ. ಜೀವಿಗಳು ಬದುಕಲು ಪರಸ್ಪರ ಅವಲಂಬಿತವಾಗಿರುತ್ತವೆ.
೪. ಈ ಭೂಮಿಯಲ್ಲಿ ಬದುಕಲು ಸದಾ ಹೋರಾಟ ನಡೆಯುತ್ತಿರುತ್ತದೆ. (ಹಾಗಾಗಿ ತನ್ನ ಅಸ್ತಿತ್ವಕ್ಕಾಗಿ ಶತ್ರುವನ್ನು ಕೊಲ್ಲುವುದು ಪಾಪವಲ್ಲ. ಹಾಗಾಗಿ ‘ಕೊಂದು ತಿನ್ನುವುದು ಈ ಭೂಮಿಯ ನ್ಯಾಯ‘ ವಾಗಿರುತ್ತದೆ)
೫. ಸಾವು-ಬದುಕಿನ ಈ ಹೋರಾಟದಲ್ಲಿ ಬಲಶಾಲಿಯಾದದ್ದು ಬದುಕುತ್ತದೆ. ದುರ್ಬಲವಾದದ್ದು ಅಳಿಯುತ್ತದೆ.
”ಮತಿವಂತ’
ಮನುಷ್ಯನೂ ಒಂದು ಜೀವಿಯೇ! ಇವನನ್ನು ತನ್ನನ್ನು ತಾನು ‘ಹೋಮೋ ಸೆಪಿಯನ್ಸ್‘ ಎಂದು ಕರೆದುಕೊಂಡಿದ್ದಾನೆ. ‘ಮತಿವಂತ ಮಾನವ‘ ಎಂದು ಇದರ ಅರ್ಥ! ಕಾರಣ ಈ ಜಗತ್ತಿನಲ್ಲಿ ಯಾವೊಂದು ಜೀವಿಗೂ ಇರದಂತಹ ಒಂದು ಅದ್ಭುತ ಮಿದುಳು ಇವನಿಗಿದೆ. ಈ ಮಿದುಳಿನ ಮೂಲಕ ಇವನು ವಿಚಾರಮಾಡಬಲ್ಲ! ಈ ಭೂಮಿಯಲ್ಲಿ ಇವನು ಕಣ್ಣು ತೆರೆದಾಗ ‘ನಾನು ಯಾರು? ಎಲ್ಲಿಂದ ಬಂದೆ? ಎಲ್ಲಿಗೆ ಹೋಗುವೆ? ದೇವನೆಂಬುವನೊಬ್ಬ ಇದ್ದಾನೆಯೆ? ಈ ಪ್ರಪಂಚಕ್ಕೆ ಕಾರಣವೆಂಬುದೊಂದು ಉಂಟೆ? ಸತ್ತಮೇಲೆ ಏನದರೂ ಉಳಿಯುತ್ತದೆಯೆ?‘ ಎಂಬ ಮೂಲಭೂತ ಪ್ರಶ್ನೆಗಳು ಅವನ ಮನಸ್ಸಿನಲ್ಲಿ ಉದ್ಭವಿಸಿದವು. ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವಾಗ, ತನಗೂ ಹಾಗೂ ಇತರ ಜೀವರಾಶಿಗಳಿಗೂ ಇರುವ ಮುಖ್ಯ ವ್ಯತ್ಯಾಸ ಅವನ ಗಮನಕ್ಕೆ ಬಂದಿತು.
“ಆಹಾರ ನಿದ್ರಾ ಭಯ ಮೈಥುನಾಂಚ ಸಾಮಾನ್ಯಮೇತತ್ ಪಶುರ್ಭಿನರಾಣಾಂ|
ಧರ್ಮೋ ಹಿ ತೇಷಾಂ ಅಧಿಕೋ ವಿಶೇಷೋ ಧರ್ಮೇಣ ಹೀನಾಃ ಪಶುಭಿಸಮಾನಃ||
ಹಿತೋಪದೇಶವನ್ನು ಬರೆದ ಸರ್ಮಜ್ಞ ನಾರಾಯಣನು ‘ಪ್ರಾಣಿಗಳಿಗೆ ಇರುವ ಸ್ವಭಾವಗಳನ್ನು ಮಾತ್ರ ಮೈಗೂಡಿಸಿಕೊಂಡವನು ಆ ಪ್ರಾಣಿಗಳಿಗೆ ಸಮನಾಗಿರುತ್ತಾನೆ. ಮನುಷ್ಯನಾಗಬೇಕಾದರೆ ಅವನು ಧರ್ಮಕ್ಕನುಗುಣವಾಗಿ ನಡೆಯಬೇಕು’ ಎಂದು ಪ್ರಾಣಿ ಹಾಗೂ ಮನುಷ್ಯರ ನಡುವಿನ ಮುಖ್ಯ ವ್ಯತ್ಯಾಸವನ್ನು ಹೇಳಿದನು.
”ನೀನೂ ಬದುಕು. ನನ್ನನ್ನೂ ಬದುಕಲು ಬಿಡು” (ಸರ್ವೇ ಜನಾಃ ಸುಖಿನೋ ಭವಂತು) ಎಂಬ ತತ್ವವನ್ನು ಎಲ್ಲ ಮನುಷ್ಯರಲ್ಲಿ ಬಿತ್ತುವುದೇ ಧರ್ಮದ ಉದ್ದೇಶವಾಗಿರುತ್ತದೆ. ಇದು ಜೀವಜಗತ್ತಿನ ಅಲಿಖಿತ ನಿಯಮಕ್ಕೆ ವಿರುದ್ಧವಾದದ್ದು. ಆದರೆ ಮನುಷ್ಯ ‘ಮೃಗತ್ವದಿಂದ ಮನುಷ್ಯತ್ವಕ್ಕೆ ಏರಬಯಸಿದ ಕಾರಣ, ಈ ಧರ್ಮವನ್ನು ಒಪ್ಪಿ, ಆಚರಣೆಗೆ ತರಬೇಕಾಯಿತು. ಜಗತ್ತಿನ ವಿವಿಧ ಪ್ರದೇಶಗಳಲ್ಲಿ, ವಿವಿಧ ಕಾಲಮಾನಗಳಲ್ಲಿ ವಿವಿಧ ಧರ್ಮಗಳು ಹುಟ್ಟಿದವು. ಹಾಗೆ ಹುಟ್ಟಿದವುಗಳಲ್ಲಿ ಶ್ರೇಷ್ಠವಾದದ್ದು ಹಿಂದೂ ಧರ್ಮ!
ಹೆಮ್ಮೆ-ನಾಚಿಕೆ:
ನಾನು ಹಿಂದುವಾಗಿ ಹುಟ್ಟಿದುದಕ್ಕೆ ಹೆಮ್ಮೆ ಪಡುತ್ತೇನೆ ಹಾಗೆಯೇ ನಾಚಿಕೆಯನ್ನೂ ಪಡುತ್ತೇನೆ. ಹೆಮ್ಮೆ ಪಡಲು ಕಾರಣ ಈ ಧರ್ಮದಲ್ಲಿ ನಮಗೆ ದೊರೆಯುವ ವಿಚಾರ ಸ್ವಾತಂತ್ರ್ಯ! (ಇಸ್ಲಾಂ ಹಾಗೂ ಕ್ರೈಸ್ತ ಮತಗಳು ನಂಬಿಕೆಯ ಮೇಲೆ ನಿಂತಿವೆ. ಇವುಗಳಲ್ಲಿ ಶ್ರದ್ಧೆ ಮುಖ್ಯ. ಇಲ್ಲಿ ಪ್ರತಿಯೊಬ್ಬನೂ ದೇವರನ್ನು ನಂಬಲೇಬೇಕು. ದೇವರು ತನ್ನ ಮಗ ಇಲ್ಲವೇ ಪ್ರವಾದಿಯ ಮೂಲಕ ತನ್ನ ಸ್ವರೂಪವನ್ನು ತಿಳಿಯಪಡಿಸುತ್ತಾನೆ. ಇಲ್ಲಿ ದೇವಪುತ್ರ ಇಲ್ಲವೇ ಪ್ರವಾದಿಯ ಮಾತೇ ಅಂತಿಮ. ಇವರನ್ನು ನಂಬದವನು ಸೈತಾನನ ಅನುಯಾಯಿ. ಅವನು ನರಕಕ್ಕೆ ಹೋಗುತ್ತಾನೆ. ಹಿಂದು ಧರ್ಮ ಪ್ರಶ್ನೆ-ವಿಚಾರಗಳ ಮೇಲೆ ನಿಂತಿದೆ. ವೇದವು ಪ್ರಶ್ನೆಗಳನ್ನು ಕೇಳುತ್ತದೆ. ಅದಕ್ಕೆ ಉತ್ತರವನ್ನು ತಿಳಿಯುವ ಪ್ರಯತ್ನ ಮಾಡುತ್ತದೆ. ಹಲವು ಜನರಿಗೆ ಕಂಡ ಸತ್ಯದ ಮಥನ ನಡೆಯುತ್ತದೆ. ಇಲ್ಲಿ ನಂಬಿಕೆ ಅಥವ ಶ್ರದ್ಧೆಗಳಿಗಿಂತ ಪುರಾವೆಗಳನ್ನು ಹುಡುಕುವ ಪ್ರಯತ್ನ ನಡೆಯಿತು. ದೇವರನ್ನು ಕಾಣುವುದು ಹಿಂದು ಧರ್ಮದ ಮುಖ್ಯ ಗುರಿಯಾಗಿರಲಿಲ್ಲ. ದೇವರು ಎನ್ನುವವನು ಇಲ್ಲ ಎನ್ನುತ್ತದೆ ಚಾರ್ವಾಕ ದರ್ಶನ. ಸಾಂಖ್ಯವು ದೇವರಿಲ್ಲ ಎನ್ನುತ್ತದೆ. ನಿರ್ಗುಣಬ್ರಹ್ಮನನ್ನು ಆರಾಧಿಸುವ ಅದ್ವೈತಿಗಳಿಗೆ ದೇವರ ಅಗತ್ಯವಿರುವುದಿಲ್ಲ. ಭೌದ್ಧ ಧರ್ಮ, ಜೈನಧರ್ಮಗಳು ದೇವರೆಂಬುವವನು ಇಲ್ಲ ಎನ್ನುತ್ತವೆ. ಆದರೆ ಹಿಂದೂಧರ್ಮದಲ್ಲಿ ಕಾಲಕ್ರಮೇಣ ದೇವರ ಆವಿಷ್ಕಾರವಾಯಿತು. ಅವನನ್ನು ೩೩ ಕೋಟಿ ರೂಪಗಳಲ್ಲಿ ಪೂಜಿಸುವ ಪದ್ಧತಿ ಬೆಳೆಯಿತು. ಹಿಂದು ಆದವನು ತನ್ನ ಬೌದ್ಧಿಕ ಸಾಮರ್ಥ್ಯಕ್ಕನುಗುಣವಾಗಿ ದೇವರ ಬಗ್ಗೆ ಚಿಂತಿಸಲು ಇಂದಿಗೂ ಅವಕಾಶವಿದೆ) ಈ ಧರ್ಮದ ಅಡಿಯಲ್ಲಿ ಬೆಳೆದ ಚಾತುರ್ವರ್ಣ ಪದ್ಧತಿ ಹಾಗೂ ಕ್ರಮೇಣ ಕಂಡುಬಂದ ಸ್ತ್ರೀಯರ ಅವನತಿಗಳು ನನ್ನನ್ನು ತಲೆತಗ್ಗಿಸುವ ಹಾಗೆ ಮಾಡಿವೆ.
ಹಿಂದೂ ಧರ್ಮ:
ಹಿಂದೂ ಧರ್ಮ ಎಂದರೆ ಏನು?
ಈ ಪ್ರಶ್ನೆಗೆ ಉತ್ತರವನ್ನು ಕೊಡುವುದು ಕಷ್ಟ. ಹಿಂದೂ ಧರ್ಮವೆನ್ನುವುದು ಒಂದು ನಿರ್ದಿಷ್ಠ ಕಾಲಮಾನದಲ್ಲಿ ಹುಟ್ಟಿದ ಇಲ್ಲವೇ ಓರ್ವ ನಿರ್ದಿಷ್ಟ ವ್ಯಕ್ತಿಯಿಂದ ರೂಪುಗೊಂಡುದುದಲ್ಲ. ಮೋನಿಯರ್ ವಿಲಿಯಮ್ಸ್ ಎಂಬ ಮಹಾಶಯ ‘ಹಿಂದೂ ಧರ್ಮ ಎನ್ನುವುದು ಒಂದು ಮಹಾನದಿ. ಅನೇಕ ಉಪನದಿಗಳಿಂದ ಕೂಡಿ ಹರಿಯುವ ಬೃಹತ್ ನದಿ‘ ಎಂದಿದ್ದಾನೆ. ಇದು ನಿಜವಿರಬಹುದು ಎಂದು ನನ್ನ ಭಾವನೆ. ಹಿಂದೂ ಧರ್ಮಕ್ಕೆ ಸಂಬಂಧಿಸಿದ ಹಾಗೆ ವೇದಗಳಿವೆ. ಉಪನಿಷತ್ತುಗಳಿವೆ. ಪುರಾಣಗಳಿವೆ. ರಾಮಾಯಣ, ಮಹಾಭಾರತಗಳಂತಹ ಐತಿಹಾಸಿಕ ಕಾವ್ಯಗಳಿವೆ. ಆದರೆ ಇವೆಲ್ಲಕ್ಕೂ ಮೂಲ ವೇದ. ವೇದವೇ ಹಿಂದೂ ಧರ್ಮದ ಬುನಾದಿ. ಇವುಗಳಲ್ಲಿ ‘ಜಗತ್ಸತ್ಯ‘ (ಈ ಮೇಲೆ ತಿಳಿಸಿದ ಮೂಲಭೂತ ಪ್ರಶ್ನೆಗಳಿಗೆ ಉತ್ತರ) ಉಕ್ತವಾಗಿದೆಯಂತೆ! ಈ ಜಗತ್ಸತ್ಯವನ್ನು ತಿಳಿದುಕೊಳ್ಳಲು ಬಲ್ಲವರು (ಯಂ ಶೈವಾಃ ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನೋ ಬೌದ್ಧಾ ಬುದ್ಧ ಇತಿ ಪ್ರಮಾಣಪಟವಃ ಕರ್ತೇತಿ ನೈಯ್ಯಾಯಿಕಾಃ ಅರ್ಹನಿತ್ಯಥ ಜೈನಶಾಸನರತಾಃ ಕರ್ಮೇತಿ ಮೀಮಾಂಸಕಾಃ ಸೋಯಂ ನೋ ವಿದಧಾತು ವಾಂಛಿತಫಲಂ ತ್ರೈಲೋಕ್ಯನಾಥೋ ಹರಿಃ = ಶೈವರು ಶಿವನೆಂದೂ, ವೇದಾಂತಿಗಳು ಬ್ರಹ್ಮನೆಂದೂ, ಬೌದ್ಧರು ಬುದ್ಧನೆಂದೂ, ತಾರ್ಕಿಕರು ಕರ್ತನೆಂದೂ ಮತ್ತು ನ್ಯಾಯವೇತರು ಕರ್ಮವೆಂದೂ ಪೂಜಿಸುವ ಮೂರು ಲೋಕಗಳ ಒಡೆಯನಾದ ಪರಮಾತ್ಮನು ಎಲ್ಲರ ಆಸೆಗಳನ್ನು ಪೂರೈಸಲಿ) ಹಲವು ಮಾರ್ಗಗಳನ್ನು ಕಂಡುಕೊಂಡಿದ್ದಾರಂತೆ! ಹಾಗಾಗಿ ಇವರು ತಿಳಿಸಿದ ಯಾವುದಾದರೊಂದು ಮಾರ್ಗದಲ್ಲಿ ಅಥವಾ ನಮ್ಮದೇ ಆದ ಮಾರ್ಗದಲ್ಲಿ ನಡೆಯುವ ಅವಕಾಶ ನಮಗಿದೆ.
ಯಾರು?
ಹಿಂದೂ ಎಂದರೆ ಯಾರು?
ಹಿಂದೂ ತಂದೆತಾಯಿಗಳಿಗೆ ಹುಟ್ಟಿದವರೆಲ್ಲ ಹಿಂದೂಗಳೇ? ಹಿಂದೂಸ್ಥಾನದಲ್ಲಿ (ಭಾರತದಲ್ಲಿ) ಜನಿಸಿದವರೆಲ್ಲ ಹಿಂದೂಗಳೇ? ಹಿಂದೂಧರ್ಮದ ತತ್ವಗಳನ್ನು ಒಪ್ಪಿ ಪಾಲಿಸುವವರೆಲ್ಲ ಹಿಂದೂಗಳೇ? ಈ ಪ್ರಶ್ನೆಗೆ ಉತ್ತರ ನನಗೆ ಗೊತ್ತಿಲ್ಲ. ಆದರೆ ಸರ್ವೋನ್ನತ ನ್ಯಾಯಾಲಯವು ಹಿಂದೂ ಧರ್ಮಕ್ಕೆ ನೀಡಿರುವ ವ್ಯಾಖ್ಯೆಯನ್ನು ಇಲ್ಲಿ ಗಮನಿಸಬಹುದು.
``Acceptance of Vedas as the highest authority in religious and philosophical matters and acceptance with reverence of the vedas by Hindu thinkers and philosophers as the sole foundation of Indian philosophy’’ (1995-4-Supreme court cases. 646. Decided on on July 2, 1995).
ಹಿಂದೂಗಳಿಗೆ ಮೂಲ ವೇದ. ವೇದಗಳಲ್ಲಿ ಪರಿಪೂರ್ಣ ನಂಬುಗೆಯನ್ನಿಟ್ಟು, ವೇದ ತತ್ವಗಳನ್ನು ಒಪ್ಪಿ, ಅವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬಯಸುವ ಪ್ರತಿಯೊಬ್ಬನೂ ಹಿಂದೂವೆ! ನ್ಯಾಯಾಲಯದ ಈ ಮಾತನ್ನು ‘ಕಟ್ಟರ್ ಹಿಂದೂವಾದಿ’ ಗಳು ಒಪ್ಪದಿರಬಹುದು. ಆದರೆ ನ್ಯಾಯಾಲಯದ ಈ ವ್ಯಾಖ್ಯೆಯಲ್ಲಿ ತಿರುಳಿದೆ ಎಂದು ನನ್ನ ಅಭಿಮತ.
ಪುರೋಹಿತಶಾಹಿ
ಜಗತ್ತಿನ ಎಲ್ಲಾ ನಾಗರಿಕತೆಗಳ ಹುಟ್ಟು, ಬೆಳವಣಿಗೆ ಹಾಗೂ ವಿನಾಶಗಳಲ್ಲಿ ಪುರೋಹಿತಶಾಹಿ ಪ್ರಧಾನ ಪಾತ್ರವಹಿಸಿದೆ.
ಇದಕ್ಕೆ ಹಿಂದೂ ಧರ್ಮ ಹೊರತಲ್ಲ.
ವೇದಗಳ ನಂತರ ಬಂದ ಉಪನಿಷತ್ತುಗಳು ‘ಮನುಷ್ಯನ ವಿವೇಕದ ಅತ್ಯುನ್ನತ ಫಲ‘ ಎಂದು ಗೊಪೆನ್ ಹೌರ್ ನಂತಹವರು ಹೇಳಿದ್ದಾರೆ. ಆದರೆ ಇವೆಲ್ಲವು ಸಂಸ್ಕೃತದಲ್ಲಿತ್ತು. ಪುರೋಹಿತಶಾಹಿಗಳ ವಶದಲ್ಲಿತ್ತು. ಸರಳವಾಗಿದ್ದ ವೇದಗಳು ಉಪನಿಷತ್ತಿನಲ್ಲಿ ಸಂಕೀರ್ಣವಾದವು. ಈ ಸಂಕೀರ್ಣತೆಯ ಲಾಭವನ್ನು ಪಡೆದ ಕೆಲವರು ಅವನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಅರ್ಥೈಸಿಕೊಂಡರು. ಪುರುಷಸೂಕ್ತವನ್ನು ರಚಿಸಿದರು. ಚಾತುರ್ವರ್ಣಗಳನ್ನು ಸೃಜಿಸಿದರು. ನೇರ ಶೋಷಣೆಗೆ ಇಳಿದರು. (ಜೀವಜಗತ್ತಿನ ಮೂರು ಮತ್ತು ಐದನೆಯ ಅಲಿಖಿತ ನಿಯಮಗಳನ್ನು ಸ್ಮರಿಸಿಕೊಳ್ಳಿ) ವೇದಕಾಲದಲ್ಲಿ ಎಲ್ಲರೂ ಸಮಾನರಾಗಿದ್ದರು. ಸ್ತ್ರೀ-ಪುರುಷ ನಡುವೆ ಸಮಾನತೆಯಿತ್ತು. ವೇದೋತ್ತರ ಕಾಲದಲ್ಲಿ ಪುರುಷ ಸರ್ವಶ್ರೇಷ್ಠನಾದನು. ಹೆಣ್ಣಿನ ಸ್ವಾತಂತ್ರ್ಯವನ್ನು ಕಿತ್ತುಕೊಂಡನು. ವೇದಾಧ್ಯಯನಕ್ಕೆ ಅನರ್ಹನೆಂದನು. ದಾಸಿಯನ್ನಾಗಿಸಿದನು. ಭೋಗವಸ್ತುವನ್ನಾಗಿ ಪರಿವರ್ತಿಸಿದನು. ಆಕೆಯನ್ನು ಒಂದಲ್ಲ ಹತ್ತು ಕಡಿವಾಣಗಳ ಮೂಲಕ ನಿಯಂತ್ರಿಸಲಾರಂಬಿಸಿದರು. ಹಿಂದೂ ಧರ್ಮದ ಅವನತಿ ಆರಂಭವಾಯಿತು. ಪುರೋಹಿತಶಾಹಿಗಳ ಈ ಕೃತ್ಯಕ್ಕೆ, ಇಡೀ ಹಿಂದುಗಳು ಇಂದು ವಿಶ್ವದೆದುರು ತಲೆತಗ್ಗಿಸಿ ನಿಲ್ಲಬೇಕಾಗಿದೆ.
ಮೂರು ಮುಖ:
ಧರ್ಮವನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಅದನ್ನು ಮೂರು ಹಂತದಲ್ಲಿ ವಿಭಜಿಸೋಣ. ಧಾರ್ಮಿಕ ಮುಖ, ಸಾಮಾಜಿಕ ಮುಖ ಹಾಗೂ ಆಧ್ಯಾತ್ಮಿಕ ಮುಖ.
ಒಂದು ಮಗುವು ಮನೆಯಲ್ಲಿ ಹುಟ್ಟಿದಾಗ, ಅದು ಮನೆಯಲ್ಲಿರುವ ಜನರು ಪಾಲಿಸುವ ಧಾರ್ಮಿಕ ಚಟುವಟಿಕೆಗಳನ್ನು ಗಮನಿಸುತ್ತದೆ. ಅವನ್ನು ಅನುಕರಿಸಲು ಪ್ರಯತ್ನಿಸುತ್ತದೆ. ಸ್ನಾನ, ಸಂಧ್ಯಾವಂದನೆ, ಮನೆಯಲ್ಲಿ ಮಾಡುವ ಪೂಜೆ, ಹಬ್ಬಗಳು ಮಗುವಿನ ಗಮನಕ್ಕೆ ಬರುತ್ತದೆ. ಅನ್ನಪ್ರಾಶನ, ಕರ್ಣವೇದನ, ಚೂಡಾಕರಣ, ವಿದ್ಯಾರಂಭ, ಉಪನಯನ, ಸಮಾವರ್ತನ ಮುಂತಾದ ಸಂಸ್ಕಾರಗಳಿಗೆ ಒಳಪಡುತ್ತದೆ. ಮನೆಯಿಂದ ಹೊರಗೆ ಹೆಜ್ಜೆಯನ್ನು ಇಡುತ್ತಿದ್ದ ಹಾಗೆ, ದೇವಾಲಯ, ಮಠಗಳು, ಸಾರ್ವಜನಿಕವಾಗಿ ಆಚರಿಸುವ ಕಲಾಪಗಳು, ಪುಣ್ಯಕ್ಷೇತ್ರಗಳು ಇತ್ಯಾದಿಗಳನ್ನು ಗಮನಿಸುತ್ತದೆ. ಚಿಂತಿಸುವ ವಯಸ್ಸು ಬಂದಾಗ ಮಗುವು ನಾವು ಮೇಲೆ ಗಮನಿಸಿದ ಮೂಲಭೂತ ಪ್ರಶ್ನೆಗಳನ್ನು ತನಗೆ ತಾನೇ ಕೇಳಿಕೊಳ್ಳುತ್ತದೆ. ವಿಚಾರ ಮಾಡುತ್ತದೆ. ಇದು ಆ ಮಗುವಿನ ಆಧ್ಯಾತ್ಮಿಕ ಮುಖವಾಗಿರುತ್ತದೆ. ಮೊದಲ ಎರಡು ಮುಖಗಳ ಬಗ್ಗೆ ತೀವ್ರ ನಿರ್ಲಿಪ್ತತೆ / ಜುಗುಪ್ಸೆ / ವಿರೋಧವನ್ನು ಹೊಂದಿರುವವರೂ ಸಹಾ ಈ ಮೂರನೆಯ ಮುಖವನ್ನು ಒಪ್ಪುತ್ತಾರೆ. ಇದು ಪೂರ್ಣ ವೈಯುಕ್ತಿಕ ಲೋಕ. ನಾಸ್ತಿಕರು ಸಹಾ, ಈ ಮುಖವನ್ನು ಹೊಂದಿರುತ್ತಾರೆ ಎನ್ನುವುದು ವಿಚಿತ್ರ ಆದರೂ ಸತ್ಯ!
ನಾನು ಹಿಂದೂ ಧರ್ಮವನ್ನು ನೆಚ್ಚಲು ಇಲ್ಲಿ ಈ ಆಧ್ಯಾತ್ಮಿಕ ಮುಖವನ್ನು ಬೆಳೆಸಿಕೊಳ್ಳಲು ನನಗಿರುವ ಸ್ವಾತಂತ್ರ್ಯವೇ ಕಾರಣ! ಇತರ ಧರ್ಮಗಳಲ್ಲಿ ಇರುವ ಕಟ್ಟುಪಾಡುಗಳು ಹಾಗೂ ವಿಧಿನಿಷೇದಗಳು ಇಲ್ಲಿಲ್ಲ. ಇದಕ್ಕಾಗಿ ನಾನು ಕೃತಜ್ಞ.
ಹಿಂದು:
ನನ್ನ ಜಗತ್ಸತ್ಯವನ್ನು ತಿಳಿಯುವ ಮಾರ್ಗ ನನ್ನದೇ ಆದ ಮಾರ್ಗ. ಇದನ್ನು ನಾನು ಇತರರಿಗೆ ಹೇಳುವ ಅಗತ್ಯವಿಲ್ಲ. ಗುರು ಆದವನು ದಾರಿಯನ್ನು ತೋರಬಲ್ಲನು. ಶಿಷ್ಯನಾದವನು ಆ ದಾರಿಯಲ್ಲಿ ಸ್ವಯಂ ನಡೆದು ಗುರಿಯನ್ನು ಮುಟ್ಟಬೇಕಾಗುತ್ತದೆ. ಹಿಂದೂ ಧರ್ಮದಲ್ಲಿ ಅನೇಕ ಗುರುಗಳು ಅನೇಕ ಮಾರ್ಗಗಳನ್ನು ತೋರಿರುವರು. ಅವರು ತೋರಿರುವ ವಿವಿಧ ದಾರಿಗಳನ್ನು ವಿಚಾರ ಮಾಡಲು ಆಕಾಶವಿದೆ. ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಅವರು ಸೂಚಿಸಿರುವ ದಾರಿಯಲ್ಲಿ ನಡೆಯುತ್ತಾ, ಜಗತ್ಸತ್ಯವನ್ನು ತಿಳಿದುಕೊಳ್ಳಲು ನಮ್ಮದೇ ಆದ ಮಾರ್ಗವನ್ನು ರೂಪಿಸಿಕೊಳ್ಳಬಹುದು. ಇಂತಹ ಮಾರ್ಗದಲ್ಲಿ ನಡೆಯುವವರೆಲ್ಲರೂ ಹಿಂದೂಗಳೆಂದು ನನ್ನ ಭಾವನೆ.
ವೇದಗಳನ್ನು ಓದಿ, ಅದರಲ್ಲಿರುವ ತತ್ವಗಳನ್ನು ಅರ್ಥಮಾಡಿಕೊಂಡು ಅವನ್ನು ತಮ್ಮ ಬದುಕಿನಲ್ಲಿ ಪಾಲಿಸಲು ಸಮಯವಿಲ್ಲದ ಜನರು, ವೇದಗಳಲ್ಲಿ ಉಕ್ತವಾಗಿರುವ ಹಾಗೂ ಈ ಕೆಳಗೆ ಸಂಗ್ರಹಿಸಿರುವ ‘ಮಾನವೀಯ ಮೌಲ್ಯ‘ಗಳನ್ನು ಒಪ್ಪಿ ಪಾಲಿಸಿದರೆ ಸಾಕು, ಅವನು ಹಿಂದುವಾಗುತ್ತಾನೆ. ಜಗತ್ಸತ್ಯವನ್ನು ತಿಳಿದುಕೊಳ್ಳುವ ಮೂಲಭೂತ ಅರ್ಹತೆಯು ದೊರೆಯುತ್ತದೆ.
೧. ಕೃತಜ್ಞತೆ: ಬದುಕು ಎನ್ನುವುದು ಋಣಗಳ ಗಣಿ. ನಾವೆಲ್ಲ ಪ್ರಕೃತಿಯಿಂದ ಹಿಡಿದು, ಹೆತ್ತವರಿಂದ ಹಿಡಿದು, ಅಧ್ಯಾಪಕವರ್ಗದವರಿಂದ ಹಿಡಿದು, ಬಂಧುಮಿತ್ರರಿಂದ ಹಿಡಿದು ಈ ಸಮಾಜದವರಿಗೆ ಉಪಕಾರವನ್ನು ಪಡೆಯುತ್ತಿರುವವರೆ! ನಾವು ಯಾರಿಂದ ಉಪಕಾರವನ್ನು ಪಡೆಯುತ್ತೇವೆಯೋ ಅವರಿಗೆ ನಾವು ಬದುಕಿರುವವರಿಗೂ ಕೃತಜ್ಞರಾಗಿರಬೇಕು. ಕೃತಜ್ಞತೆಯು ನಮ್ಮ ರಕ್ತದಲ್ಲಿ ಹರಿಯಬೇಕು.
೨. ಸ್ತ್ರೀತ್ವಕ್ಕೆ ಗೌರವ: ಸ್ತ್ರೀ ಎಂದರೆ ಪ್ರೀತಿಯ ಪ್ರತಿಮೂರ್ತಿ. ಪಾಲಿಸಿ, ಪೋಷಿಸಿ ಕಾಪಾಡುವುದಕ್ಕಾಗಿಯೇ ಸ್ತ್ರೀಕುಲ ಅವತರಿಸಿದೆ. ಹಾಗಾಗಿ ಆಕೆಗೆ ಕೃತಜ್ಞರಾಗಿರಬೇಕು. ಜೊತೆಗೆ ಗೌರವಿಸಬೇಕು. ಯಾವ ಮನೆಯಲ್ಲಿ, ಯಾವ ದೇಶದಲ್ಲಿ ಸ್ತ್ರೀಯರು ನೆಮ್ಮದಿ ಹಾಗೂ ಗೌರವದಿಂದ ಬಾಳುತ್ತಾರೋ ಆ ಮನೆ ಹಾಗೂ ಆ ದೇಶ ಸುಖಿಯಾಗಿರುತ್ತದೆ.
೩. ಆಶ್ರಮಧರ್ಮ: ಇದು, ಹಿಂದೂ ಧರ್ಮ ಮನುಕುಲಕ್ಕೆ ನೀಡಿದ ದೊಡ್ಡ ಕೊಡುಗೆ. ಧರ್ಮ ಮಾರ್ಗದ ಮೂಲಕ ಅರ್ಥವನ್ನು ಆರ್ಜಿಸಿ ಕಾಮಿತ ಭೋಗಗಳನ್ನು ಪಡೆಯುವುದು ವಿಹಿತ.
೪. ನಾಲ್ಕು ಋಣಗಳು: ಇವು ದೈವಋಣ, ಪಿತೃಋಣ, ಆಚಾರ್ಯ ಋಣ ಹಾಗೂ ಸಮಾಜ ಋಣ. ದೇವಋಣ ಎಂಬುದನ್ನು ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನಿಸುವುದುಂಟು. ಈ ಋಣವನ್ನು ಪ್ರಸ್ತಾಪಿಸುವ ಹಿಂದೂ ಧರ್ಮವು ಯಾವ ದೇವರ ಋಣವನ್ನು ತೀರಿಸಬೇಕು ಎಂದು ಹೇಳುವುದಿಲ್ಲ. ಸಾಮಾನ್ಯವಾಗಿ ಕುಲದೇವತೆಯನ್ನೋ ಇಲ್ಲವೇ ಇಷ್ಟದೇವತೆಯನ್ನೋ ಜೀವನಪರ್ಯಂತ ಪೂಜಿಸಿ ಋಣಮುಕ್ತರಾಗಲು ಪ್ರಯತ್ನಿಸುವುದುಂಟು. ಆದರೆ ವಾಸ್ತವದಲ್ಲಿ ಇದಕ್ಕೆ ಭಿನ್ನವಾದ ಅರ್ಥವಿದೆ. ಮೂಲಭೂತ ಪ್ರಶ್ನೆಗಳಿಗೆ ಉತ್ತರವೇ ಈ “ದೇವರು“! ಅದರ ಸ್ವರೂಪವನ್ನು ತಿಳಿದಾಗ ಈ ದೈವಋಣ ತೀರುತ್ತದೆ. ನಮಗೆ ಜನ್ಮ ನೀಡಿ ನಮ್ಮನ್ನು ಋಣಿಗಳನ್ನಾಗಿಸಿದ ಪಿತೃಋಣವನ್ನು, ಸಂತಾನವನ್ನು ಹೆತ್ತು ಅವರನ್ನು ಸತ್ಪ್ರಜೆಗಳನ್ನಾಗಿಸುವುದರ ಮೂಲಕ ನಾವು ತೀರಿಸಿಕೊಳ್ಳಬಹುದು. ನಮಗೆ ಬದುಕಿನ ಪಾಠ ಕಲಿಸಿದ ಗುರುಗಳು, ಗುರುಸದೃಶ ಜನರು ಅದೆಷ್ಟೋ! ಇವರಿಂದ ನಾವು ಕಲಿತದ್ದನ್ನು ಇತರರಿಗೆ ಕಲಿಸಿದಾಗ ಆಚಾರ್ಯ ಋಣ ತೀರುತ್ತದೆ. ನಾವು ಸಮಾಜ ಜೀವಿಗಳು. ಸಮಾಜದಿಂದ ನಾವು ಎಷ್ಟು ಪಡೆಯುತ್ತೇವೆಯೋ, ಅದಕ್ಕಿಂತ ಹೆಚ್ಚಲ್ಲದಿದ್ದರೂ, ಅಷ್ಟನ್ನಾದರೂ ಸಮಾಜಕ್ಕೆ ಹಿಂದಿರುಗಿಸಬೇಕಾಗುತ್ತದೆ. ಆಗ ಸಮಾಜಋಣ ತೀರುತ್ತದೆ.
೫. ನಾಲ್ವರಿಗೆ ಗೌರವಗಳು: ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ ಹಾಗೂ ಅತಿಥಿದೇವೋಭವ ಎಂಬುದನ್ನು ನಂಬಿ ಪಾಲಿಸಬೇಕು.
೬. ಪರಧರ್ಮ ಸಹಿಷ್ಣುತೆ: ಹಿಂದೂಧರ್ಮದ ಒಳಪಂಗಡಗಳು ಉದಾ: ಶೈವ ಹಾಗೂ ವೈಷ್ಣವ ತಮ್ಮ ಪಾರಮ್ಯಕ್ಕಾಗಿ ಹೊಡೆದಾಡಿರುವುದನ್ನು ನಾವು ನೋಡಿದ್ದೇವೆ. ಇವರು ವಾಸ್ತವದಲ್ಲಿ ಹಿಂದು ಧರ್ಮದ ತಿರುಳನ್ನು ಅರಿತಿಲ್ಲ. ಹಾಗೆಯೇ ಆಯಾ ಧರ್ಮದಲ್ಲಿ ನಂಬಿಕೆಯಿಟ್ಟಿರುವ ಜನರಿಗೆ, ಅವರವರ ಧರ್ಮಗಳನ್ನು ಪಾಲಿಸಲು ಅವಕಾಶವನ್ನು ಮಾಡಿಕೊಡಬೇಕಾಗುತ್ತದೆ.
೭. ಕರ್ತವ್ಯ ನಿಭಾವಣೆ: ಹಕ್ಕು ಮತ್ತು ಕರ್ತವ್ಯ ನಾಗರಿಕ ಸಮಾಜದ ಬೆನ್ನೆಲುಬು. ಹಕ್ಕು ಸ್ವಾರ್ಥದಿಂದ ಹುಟ್ಟುತ್ತದೆ. ಕರ್ತವ್ಯವು ನಿಸ್ವಾರ್ಥದಿಂದ ಹುಟ್ಟುತ್ತದೆ. ಒಬ್ಬ ವ್ಯಕ್ತಿಯ ಕರ್ತವ್ಯವು ಅವನ ವಯಸ್ಸು ಹಾಗೂ ಆಶ್ರಮಕ್ಕೆ ಅನುಗುಣವಾಗಿ ಇರುತ್ತದೆ. ಹಕ್ಕನ್ನು ಪ್ರತಿಪಾದಿಸುವವನಿಗೆ ತ್ಯಾಗದ ಕಲ್ಪನೆಯಿರುವುದಿಲ್ಲ. ಕರ್ತವ್ಯವನ್ನು ಪಾಲಿಸುವವನು ಬೇರೆಯವರ ಹಿತದಲ್ಲಿ ತನ್ನ ಹಿತವನ್ನು ಕಾಣುತ್ತಾನೆ.
೮. ಸಮಾನತೆ: ಋಗ್ವೇದ ಹಾಗೂ ಯಜುರ್ವೇದಗಳು ಸಮಾನತೆಯ ಬಗ್ಗೆ ವಿಸ್ತೃತವಾಗಿ ವರ್ಣಿಸುತ್ತವೆ. (ಇದನ್ನು ಮರೆತು ಚಾತುರ್ವರ್ಣಗಳು ರೂಪುಗೊಂಡದ್ದು ವೇದಗಳಿಗೆ ಬಗೆದ ಅಪಚಾರ)
ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ ಸಂ ಭ್ರಾತಾರೋ ವಾವೃಧುಃ ಸೌಭಗಾಯ
(ಯಾರೂ ಮೇಲಲ್ಲ ಅಥವಾ ಕೀಳಲ್ಲ. ಎಲ್ಲರೂ ಸಹೋದರರು. ಎಲ್ಲರೂ ಎಲ್ಲರ ಹಿತಕ್ಕಾಗಿ ದುಡಿಯಬೇಕು ಮತ್ತು ಸಾಮೂಹಿಕವಾಗಿ ಅಭಿವೃದ್ದಿ ಹೊಂದಬೇಕು - ಋಗ್ವೇದ ೫-೬೦-೫)
ಎನ್ನುತ್ತದೆ ವೇದ. ಎಲ್ಲ ಮನುಷ್ಯರು ಒಟ್ಟುಗೂಡಿ ಜೀವಿಸುವ ಬಗ್ಗೆ, ಸ್ನೇಹಪೂರ್ವಕಾಗಿ ನಡೆಯುವ ಬಗ್ಗೆ, ವಿಚಾರ ಮತ್ತು ಕೃತಿಗಳಲ್ಲಿ ಏಕತೆಯಿರುವ ಬಗ್ಗೆ, ಪರಸ್ಪರ ಸಹಕಾರದಿಂದ ಜೀವಿಸುವ ಬಗ್ಗೆ ಸ್ಪಷ್ಟವಾಗಿ ಮಾತನಾಡುತ್ತದೆ.
೯. ಸರಳ ಜೀವನ: ನಾವು ಬದುಕಲು ಆಹಾರ, ನೀರು, ವಸನ ವಸತಿಗಳು ಅವಶ್ಯಕ. ಇದಕ್ಕಿಂತಲೂ ಮಿಗಿಲಾದ ಧನ ವಾಸ್ತವದಲ್ಲಿ ವ್ಯರ್ಥ. ಅಂದ ಮಾತ್ರಕ್ಕೆ ಜನರು ದುಡಿಯಬಾರದು, ಹಣವನ್ನು ಗಳಿಸಬಾರದು ಎಂದರ್ಥವಲ್ಲ. ಧರ್ಮಕ್ಕೆ ಚ್ಯುತಿಯಿಲ್ಲದ ಹಾಗೆ ಹೆಚ್ಚುವರಿ ಹಣವನ್ನು ಖಂಡಿತ ಗಳಿಸಬಹುದು. ಈ ಹೆಚ್ಚುವರಿ ಹಣದಿಂದ ನಮ್ಮ ಋಣಗಳನ್ನು ನಾವು ತೀರಿಸಿಕೊಳ್ಳಬಹುದು. ಸರಳ ಜೀವನದಲ್ಲಿ ನಂಬಿಕೆಯಿಟ್ಟವರು ಪ್ರಕೃತಿಯನ್ನು ಶೋಷಿಸುವುದಿಲ್ಲ. ಪ್ರಕೃತಿ ವಿನಾಶಕ್ಕೆ ಕಾರಣರಾಗುವುದಿಲ್ಲ. ಈಶಾವಾಸ್ಯೋಪನಿಷತ್ತಿನ ಮೊದಲ ಶ್ಲೋಕದಲ್ಲಿ
ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂಜಗತ್
ತೇನ ತ್ಯಕ್ತೇನ ಭುಂಜೀಥಾಃ ಮಾ ಗೃಧಾಃ ಕಸ್ಯಸ್ವಿದ್ಧನಂ
(ಈ ಜಗತ್ತಿನಲ್ಲಿರುವುದನ್ನೆಲ್ಲ ದೇವರು ಸೃಷ್ಟಿಸಿದ್ದಾನೆ. ಅವನ್ನು ಮಿತವಾಗಿ ಬಳಸೋಣ. ಇತರರಿಗೆ ಸೇರಿದ ಸಂಪತ್ತನ್ನು ಅಪಹರಿಸುವುದು ಬೇಡ) ಎಂದು ಹೇಳುತ್ತದೆ.
೧೦. ವಸುಧೈವ ಕುಟುಂಬಕಂ: ಇಡೀ ವಿಶ್ವ ಒಂದು ಕುಟುಂಬ ಎಂಬ ಪರಿಕಲ್ಪನೆ ಹಿಂದೂಧರ್ಮದ್ದು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯೆನಿಸುತ್ತದೆ.
ಸರ್ವೇಪಿ ಸುಖಿನಃ ಸನ್ತು,
ಸರ್ವೇ ಸನ್ತು ನಿರಾಮಯಾಃ,
ಸರ್ವೇ ಭದ್ರಾಣಿ ಪಶ್ಯಂತು,
ಮಾ ಕಶ್ಚಿದುಃಖಭಾಗ್ಭವೇತ್
(ಎಲ್ಲರೂ ಸಂತೋಷವಾಗಿರಲಿ, ಯಾರೂ ಕಾಯಿಲೆಗಳಿಂದ ನರಳದಿರಲಿ, ಎಲ್ಲರೂ ಸುಖವನ್ನೇ ಕಾಣಲಿ ಮತ್ತು ಯಾರೂ ದುಃಖದಿಂದ ತೊಳಲದಿರಲಿ)
ಎನ್ನುತ್ತದೆ. ಈ ಶಾಂತಿಮಂತ್ರದ ವ್ಯಾಪ್ತಿಯಲ್ಲಿ ಕೇವಲ ಹಿಂದುಗಳು ಮಾತ್ರವಲ್ಲ, ಕೇವಲ ಮಾನವರು ಮಾತ್ರವಲ್ಲ, ಈ ಜಗತ್ತಿನ ಸರ್ವಜೀವರಾಶಿಗಳೂ ಹಾಗೂ ಪ್ರಕೃತಿಯೂ ಒಳಗೊಳ್ಳುತ್ತವೆ ಎಂಬುದು ವಿಶೇಷ.
ಉಪಸಂಹಾರ:
ಹಿಂದೂಧರ್ಮವು ಹಲವು ಮತಿವಂತ ಮಾನವರ ಕೊಡುಗೆ. ವಿಚಾರಸ್ವಾತಂತ್ರ್ಯ ಇಲ್ಲಿದೆ. ಜೀವಜಗತ್ತಿನ ಮೂರನೆಯ ಅಲಿಖಿತ ನಿಯಮವನ್ನು ಒಪ್ಪುತ್ತದೆ. ಈ ಸಮಾಜ ಹಾಗೂ ಭೂಮಿಯಲ್ಲಿ ಶಾಂತಿ ನೆಲೆಸಬೇಕಾದರೆ ಒಂದು ಸಮತೋಲನವಿರಬೇಕು ಎನ್ನುತ್ತದೆ. ಆಸೆ ಸಹಜವಾದದ್ದು (ಧರ್ಮ-ಅರ್ಥ-ಕಾಮ). ದುರಾಸೆ ಕೆಟ್ಟದ್ದು ಎನ್ನುತ್ತದೆ. ‘ಹಿತ-ಮಿತ ಬದುಕಿನ ಸತ್ಯ‘ ಎನ್ನುವುದನ್ನು ಪ್ರತಿಪಾದಿಸುತ್ತದೆ. ವೇದಗಳ ನಂತರ ಪುರೋಹಿತಶಾಹಿವರ್ಗದವರು ಸ್ವಾರ್ಥದಿಂದ ಕಟ್ಟಿದ ಕಗ್ಗಗಳು ಹಿಂದೂಧರ್ಮಕ್ಕೆ ಕೆಟ್ಟ ಹೆಸರನ್ನು ತಂದಿವೆ. ಹಾಗಾಗಿ ಇಂದು ನಿಜವಾದ ಹಿಂದೂಧರ್ಮವನ್ನು ನಾವು ಪುನರ್ ಸಂಶೋಧಿಸಬೇಕಿದೆ.
--------
- ಡಾ.ನಾ.ಸೋಮೇಶ್ವರ
www.yakshaprashne.org
http://fivenonblondes.files.wordpress.com/2008/04/sun-jar.jpg
ಪ್ರತಿಕ್ರಿಯೆ (23)