ನನ್ನ ಹಿಂದು ಧರ್ಮ-ಪೂರಕ ವಿಚಾರ.

 

ಪೀಠಿಕೆ:

  • ನನ್ನ ಹಿಂದು ಧರ್ಮ ಲೇಖನಕ್ಕೆ ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ನನ್ನ ಅಭಿನಂದನೆಗಳು ಹಾಗೂ ಧನ್ಯವಾದಗಳು.
  • ನನ್ನ ಲೇಖನದಲ್ಲಿರುವ ವಿವಿಧ ಅಂಶಗಳನ್ನು ಕುರಿತು ಪ್ರಶ್ನೆಗಳನ್ನು, ಸಂದೇಹಗಳನ್ನು ಹಾಗೂ ವಿವರಗಳನ್ನು ಅನೇಕರು ಬಯಸಿರುವರು. ಅವರವರ ಪ್ರಶ್ನೆಗಳಿಗೆ ಮಾತ್ರ ಉತ್ತರವನ್ನು ನೀಡುತ್ತಾ ಹೋದರೆ, ವಿಷಯದ ಪುನರಾವರ್ತನೆ ಹಾಗೂ ಕೊಂಡಿಯ ನಿರಂತರತೆ ತಪ್ಪಿಹೋಗುತ್ತದೆ ಎನ್ನುವ ಕಾರಣದಿಂದ, ನನ್ನ ಗೆಳೆಯರು ಎತ್ತಿರುವ ಮುಖ್ಯ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಂಡು ಅವುಗಳಿಗೆ ಉತ್ತರ ನೀಡಲು ಪ್ರಯತ್ನಿಸುತ್ತಿದ್ದೇನೆ.
  • ಮಿತ್ರರು ಕೇಳಿರುವ ಪ್ರಶ್ನೆಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸಬಹುದು. ಮೊದಲನೆಯದು ಆರ್ಯರ ಉಗಮದ ಬಗೆಗಿನ ಪ್ರಶ್ನೆ. ಎರಡನೆಯದು ಜೀವಜಗತ್ತಿನ ಅಲಿಖಿತ ನಿಯಮಗಳು. ಅವೆರಡರ ಬಗ್ಗೆ ನಾನು ಇಲ್ಲಿ ಪ್ರಸ್ತಾಪಿಸುತ್ತಿಲ್ಲ. ಅವುಗಳನ್ನು ಕುರಿತು ಪ್ರತ್ಯೇಕ ಲೇಖನಗಳನ್ನು ಬರೆಯಬೇಕಾಗುತ್ತದೆ. ಹಾಗಾಗಿ ಈ ಎರಡು ಅಂಶಗಳನ್ನು ಬಿಟ್ಟು ಉಳಿದವನ್ನು ಇಲ್ಲಿ ಆಯ್ಕೆ ಮಾಡಿಕೊಂಡಿದ್ದೇನೆ.
  • ಮೊದಲು ಒಂದು ವಿಷಯವನ್ನು ನಾನು ಸ್ಪಷ್ಟಪಡಿಸಬೇಕು. ನಾನು ಸಂಸ್ಕೃತವನ್ನಾಗಲಿ, ವೇದವನ್ನಾಗಲಿ ಆಳವಾಗಿ ಅಧ್ಯಯನ ಮಾಡಿದವನಲ್ಲ. ಹಿಂದು ಧರ್ಮದ ಬಗ್ಗೆ ನನಗೆಲ್ಲ ಗೊತ್ತು, ನಾನು ಎಲ್ಲವನ್ನು ತಿಳಿದಿದ್ದೇನೆ ಎಂಬ ಹಮ್ಮು ನನಗಿಲ್ಲ.
  • ಹಿಂದುಧರ್ಮದ ಬಗ್ಗೆ (ಹಾಗೂ ಇತರ ಧರ್ಮಗಳ ಬಗ್ಗೆ) ನಾನು ಗಂಭೀರ ಸಂಶೋಧನೆಯನ್ನು ನಡೆಸುವ ವಿದ್ಯಾರ್ಥಿಯೂ ಅಲ್ಲ. ನನಗಿರುವ ಸೀಮಿತ ಕಾಲ, ಸೀಮಿತ ತಿಳಿವಳಿಕೆ ಹಾಗೂ ಸೀಮಿತ ಬುದ್ಧಿಶಕ್ತಿಯ ಮೂಲಕ ನಾನೇನು ತಿಳಿದುಕೊಂಡಿದ್ದೇನೆ ಎಂಬುದನ್ನು ಮಾತ್ರ ಇಲ್ಲಿ ವಿಷದಪಡಿಸುತ್ತೇನೆ.
  • ಹಿಂದು ಧರ್ಮದ ಬಗ್ಗೆ ಬೇರೆಯ ಕಡೆ ಚರ್ಚೆಗಳು ನಡೆಯುತ್ತಿವೆ. ದಯವಿಟ್ಟು ಶ್ರೀಚಿದಾನಂದಮೂರ್ತಿ, ಶ್ರೀಚಂಪಾ, ಶ್ರೀನರಸಿಂಹಮೂರ್ತಿ ಅವರ ವಿಚಾರಧಾರೆಯನ್ನು ಇಲ್ಲಿ ನಿರೀಕ್ಷಿಸಬೇಡಿ. ಅವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪಂಡಿತರು. ಅವರಿಗೆ ಸರಿಸಮಾನವಾಗಿ ಚರ್ಚಿಸಬೇಕೆಂದರೆ, ನಾನು ಅವರಿಗಿಂತ ಹೆಚ್ಚಲ್ಲದಿದ್ದರೂ, ಅವರಿಗೆ ಸರಿಸಮಾನವಾಗಿಯಾದರೂ ತಿಳಿದಿರಬೇಕು. ಅಷ್ಟು ತಿಳಿವಳಿಕೆ ನನಗಿಲ್ಲ.
  • ಕುರುಡನೊಬ್ಬ ಆನೆಯನ್ನು ತಿಳಿಯಲೆತ್ನಿಸಿದಂತೆ, ನನ್ನ ತಿಳಿವಳಿಕೆ ಎಳಸಾಗಿರಬಹುದು, ಅಪಕ್ವವಾಗಿರಬಹುದು, ಅಪೂರ್ಣವಾಗಿರಬಹುದು, ನನಗೆ ಹಿಂದು ಧರ್ಮದ ಮೂಲವೇ (ಬೇಸಿಕ್ಕೇ) ತಿಳಿಯದಿರಬಹುದು-ಒಪ್ಪಿಕೊಳ್ಳುವೆ. ಅದಕ್ಕೆ ನನ್ನ ಸೀಮಿತ ತಿಳಿವಳಿಕೆಯೇ ಕಾರಣ ಹೊರತು ಮೂಲವಿಷಯವಲ್ಲ.
  • ನನ್ನ ತಿಳಿವಳಿಕೆ ತಪ್ಪಾಗಿದ್ದರೆ ಅದನ್ನು ತಿದ್ದಿಕೊಳ್ಳಲು ನಾನು ಸದಾ ಸಿದ್ಧವಾಗಿದ್ದೇನೆ. ಮಂಡನಮಿಶ್ರರಂತಹ ಮಹಾನ್ ಪಂಡಿತರು ಬಾಲಕ ಶಂಕರನ ತಿಳಿವಳಿಕೆಗೆ ಸೋತು ಅವರ ಶಿಷ್ಯರಾಗುತ್ತಾರೆ. ಹಾಗಿರುವಾಗ ನಾನು ಹೇಳಿದ್ದೇ ಸರಿ ಎಂದು ಎಲ್ಲಿಯೂ ವಾದಿಸಲು ಹೋಗುವುದಿಲ್ಲ. ‘ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ-ಮಂಗಳಮಯವಾದ ಅರಿವು ಎಲ್ಲೆಡೆಯಿಂದ ಬಂದು ನಮ್ಮನ್ನು ಸೇರಲಿ-ಎಂಬ ಆಶಯ ನನ್ನದು.

ಹಿಂದು ಧರ್ಮದಲ್ಲಿರುವ ’ಹಿಂದು” ಎಂಬ ಶಬ್ಧ:

  • ಹಿಂದು ಎನ್ನುವ ಶಬ್ಧವೇ ತಪ್ಪು. ಇದು ಕೃತಕವಾದದ್ದು. ಅನ್ಯನಿರ್ಮಿತವಾದದ್ದು.
  • ಸಿಂಧು-ಸರಸ್ವತಿ ನದಿಗಳ ಬಯಲಿನಲ್ಲಿ ವಾಸವಾಗಿದ್ದ ಜನರು, ತಾವು ನಡೆಸುತ್ತಿದ್ದ ಜೀವನಶೈಲಿಯನ್ನು ಧರ್ಮ ಎಂದು ಕರೆದರು. ಜೀವನವನ್ನು ನಡೆಸಲು ಬೇಕಾಗಿದ್ದ ಅರಿವಿಗೆ ವೇದ ಎಂದು ಹೆಸರು. 
  • ಧರ್ಮ ಎನ್ನುವ ಶಬ್ಧವನ್ನು ಮೊದಲ ಬಾರಿಗೆ ಋಗ್ವೇದದಲ್ಲಿ ನೋಡಬಹುದು. ಧರ್ಮ ಎನ್ನುವ ಶಬ್ಧದ ಧಾತು ಧೃ. ‘ಧಾರಣಾತ್ ಧರ್ಮಂ ಇತ್ಯಾಹುಃ-ಧರ್ಮೋ ಧಾರಯತೆ ಪ್ರಜಾ: ಎಂಬುದು ವಿವರಣೆ. ಯಾವುದು ಜನರ ಬದುಕಿಗೆ ಆಧಾರವಾಗಿದೆಯೇ, ಯಾವುದು ಜನರ ಬದುಕನ್ನು ಉದ್ಧರಿಸುತ್ತದೆಯೋ, ಯಾವುದು ಎಲ್ಲರ ಬದುಕನ್ನು ಹಸನಾಗಿಸುತ್ತದೆಯೋ-ಅದುವೇ ಧರ್ಮ.
  • ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿಗೂ ಹುಟ್ಟು ಹಾಗೂ ಸಾವು ಅನಿವಾರ್ಯ. ಈ ಹುಟ್ಟು ಹಾಗೂ ಸಾವುಗಳನ್ನು ನಿಯಂತ್ರಿಸುವ ಒಂದು ಶಕ್ತಿ ಇರಬೇಕು; ಆ ಶಕ್ತಿಯೇ ಹುಟ್ಟು-ಸಾವುಗಳ ಜೊತೆಯಲ್ಲಿ ಬದುಕನ್ನೂ ನಿರ್ದೇಶಿಸುತ್ತಿರಬೇಕು. ಧರ್ಮವು ಬದುಕನ್ನು ನಡೆಸುತ್ತದೆ ಎಂಬುದು ಅವರ ಭಾವನೆ. ಮನುಷ್ಯನ ಬದುಕಿನ ಹಾಗೆ ಈ ಭೂಮಿ, ಈ ಸೂರ್ಯ, ಈ ಬ್ರಹ್ಮಾಂಡ ಎಲ್ಲವನ್ನೂ ಸಹಾ ಆ ಶಕ್ತಿಯ ನಿರ್ಮಿಸರಬೇಕು. ಆ ಶಕ್ತಿಗೆ ಪರಬ್ರಹ್ಮ ಎಂಬ ಹೆಸರನ್ನು ನೀಡಿದರು. 
  • ವೇದಕಾಲದ ಸಿಂಧು-ಸರಸ್ವತಿ ನದಿ ಬಯಲಿನ ಜನರು ತಮ್ಮ ಅಸ್ತಿತ್ವಕ್ಕೆ ಪ್ರಾಕೃತಿಕ ಶಕ್ತಿ/ ಪರಬ್ರಹ್ಮ ಎಂದು ನಂಬಿದ್ದರು. ಪರಬಹ್ಮವನ್ನು ‘ಸತ್ ಹಾಗೂ ‘ತತ್ ಎಂಬ ಎರಡು ಶಬ್ಧಗಳ ಮೂಲಕವೂ ಸೂಚಿಸಿದರು. ಈ ಪರಬ್ರಹ್ಮವನ್ನು ಪುರಾಣ ಕಾಲದಲ್ಲಿ ಸರಳೀಕರಿಸಿ ‘ದೇವರು ಎಂದು ಕರೆದರು.
  • ನಾವು ವೇದಕಾಲದ ಧರ್ಮದ ಬಗ್ಗೆ ಮಾತನಾಡುವಾಗ ಎರಡು ಶಬ್ಧಗಳನ್ನು ಪರಿಚಯ ಮಾಡಿಕೊಳ್ಳಬೇಕಾಗುತ್ತದೆ. ಋತ ಮತ್ತು ಸತ್ಯ. ಧರ್ಮವನ್ನು ಅರ್ಥ ಮಾಡಿಕೊಳ್ಳಲು ಈ ಎರಡು ಶಬ್ಧಗಳ ಆಳ ಹಾಗೂ ವ್ಯಾಪ್ತಿಯನ್ನು ತಿಳಿದುಕೊಳ್ಳುವುದು ಅಗತ್ಯ. 
  • ಋತ ಎನ್ನುವ ಶಬ್ಧವು ವೇದಗಳಲ್ಲಿ, ಮುಖ್ಯವಾಗಿ ಋಗ್ವೇದದಲ್ಲಿ ಪದೇ ಪದೇ ಬರುತ್ತದೆ. ಋತ ಎನ್ನುವುದು ಜಗತ್ತಿನಲ್ಲಿರುವ ಪ್ರಾಕೃತಿಕ ನಿಯಮಗಳು. ಇವು ವ್ಯಕ್ತಿವಿಶೇಷಗಳಲ್ಲ. ಈ ಜಗತ್ತಿನಲ್ಲಿರುವ ಎಲ್ಲ ಚರಾಚರ ವಸ್ತುಗಳಿಗೆ ಅನ್ವಯವಾಗುವಂತಹವು.
  • ಋತವನ್ನು ಮನುಷ್ಯರ ಮಟ್ಟಿಗೆ ಸರಳೀಕರಿಸಿ ಹೇಳುವುದಾದರೆ, ಅದು ಒಬ್ಬ ವ್ಯಕ್ತಿಯ ನಡವಳಿಕೆ. ಋತವು ಒಬ್ಬ ಮನುಷ್ಯನ ಮನಸ್ಸಿನಲ್ಲಿ ಮೂಡುವ ಒಳ ಅರಿವು. ಮನುಷ್ಯ ಸಮಾಜ ಜೀವಿಯಾಗಿರುವ ಕಾರಣ, ಸಮಾಜದ ಒಳಿತು ಅವನಿಗೆ ಮುಖ್ಯವಾಗಬೇಕು. ಸಮಾಜಕ್ಕೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ತಿಳಿಯುವ ತಾರತಮ್ಯ ಶಕ್ತಿಯನ್ನು ಅವನು ಬೆಳೆಸಿಕೊಳ್ಳಬೇಕು. ಸಮಾಜದ ಒಳಿತಿಗೆ ಅವನು ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬ ತಿಳಿವಳಿಕೆಯನ್ನು ಗಳಿಸಿಕೊಳ್ಳಬೇಕು. ಇದನ್ನು ಮಾತಿನ ಮೂಲಕ ವ್ಯಕ್ತಪಡಿಸಿದಾಗ ಹಾಗೂ ಅದನ್ನು ಕಾರ್ಯರೂಪಕ್ಕೆ ತಂದಾಗ, ಅದು ಸತ್ಯ ಎಂದು ಅನಿಸಿಕೊಳ್ಳುತ್ತದೆ.
  • ಧರ್ಮವು ಈ ಋತ ಹಾಗೂ ಸತ್ಯಗಳನ್ನು ಒಳಗೊಳ್ಳುತ್ತದೆ.
  • ಧರ್ಮವು ಬದುಕಿನ ಬುನಾದಿ. ಒಬ್ಬ ವ್ಯಕ್ತಿಯು ಸಮಾಜಕ್ಕೆ ಒಳಿತಾಗುವ ರೀತಿಯಲ್ಲಿ ಜೀವನವನ್ನು ನಡೆಸಬೇಕು. ಇದು ಧರ್ಮದ ಆಶಯ.
  • ಸಮಾಜದ ಒಳಿತಿಗೆ ಪೂರಕವಾದ ಬದುಕನ್ನು ನಡೆಸಲು ನೀನು ಹೀಗೆ ಮಾಡಬೇಕು, ನೀನು ಹೀಗೆ ಮಾಡಬಾರದು ಎಂಬ ಮಾರ್ಗದರ್ಶನವನ್ನು ಧರ್ಮವು ನೀಡುತ್ತದೆ. ಋಗ್ವೇದದಲ್ಲಿ ಧರ್ಮ ಎನ್ನುವ ಶಬ್ಧವು ೫೬ ಸಲ ಬರುತ್ತದೆ. ಈ ಎಲ್ಲ ಕಡೆ ಒಬ್ಬ ವ್ಯಕ್ತಿಯ ಕರ್ತವ್ಯ ಹಾಗೂ ಒಬ್ಬ ವ್ಯಕ್ತಿಯ ಕ್ರಿಯೆ ಎಂಬ ಅರ್ಥವೇ ಪ್ರಧಾನವಾಗಿರುತ್ತದೆ. ಇದನ್ನು ಜಗತ್-ಧಾರಕ-ಕರ್ಮ ಎಂದು ಸಂಗ್ರಹಿಸಬಹುದು. ಎಂದರೆ ‘ಸಮಾಜದ ಒಳಿತಿಗೆ ಒಬ್ಬ ವ್ಯಕ್ತಿಯು ಹೇಗೆ ನಡೆದುಕೊಳ್ಳಬೇಕು ಎಂದು ಸರಳೀಕರಿಸಿ ವಿವರಿಸಬಹುದು.

ಹಿಂದು ಶಬ್ಧದ ಉತ್ಪತ್ತಿ:

  • ವೇದಕಾಲದ ಜನರು ಸಿಂಧೂ-ಸರಸ್ವತಿ ನದಿ ತೀರದಲ್ಲಿ ಬದುಕಿದ್ದರು. ಇವರು ತಮ್ಮ ಧರ್ಮವನ್ನು ರೂಪಿಸಿಕೊಂಡಾಗ, ಬಹುಶಃ ಜಗತ್ತಿನಲ್ಲಿ ಯಾವುದೇ ಪ್ರಧಾನ ರಿಲಿಜನ್ ಇದ್ದಿರಲಿಲ್ಲ. ಹಾಗಾಗಿ ಇತರ ರಿಲಿಜನ್-ಗಳಿಂದ ತಮ್ಮನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಒಂದು ಹೆಸರನ್ನು ಇಟ್ಟುಕೊಳ್ಳಬೇಕು ಎಂದು ವೇದಕಾಲದ ಜನರಿಗೆ ಅನಿಸಲೇ ಇಲ್ಲ.
  • ಪರ್ಶಿಯನ್ನರು ಸಿಂಧು ನದಿಯ ತೀರದಲ್ಲಿದ್ದ ಜನರನ್ನು ‘ಸಿಂಧುಗಳೆಂದು ಕರೆದರು. ಈ ಶಬ್ಧವನ್ನೇ ಆಧಾರವಾಗಿಟ್ಟುಕೊಂಡು ಗ್ರೀಕರು ಇಂಡೋಸ್ ಅಥವ ಇಂಡಸ್ ಎಂದರು.  ಪ್ರಾಚೀನ ಪರ್ಶಿಯನ್ನರಿಗೆ ಸಕಾರವನ್ನು ನಿಖರವಾಗಿ ಉಚ್ಚರಿಸಲು ಬರುತ್ತಿರಲಿಲ್ಲ. ಸಕಾರವನ್ನು ಹಕಾರವನ್ನಾಗಿ ಉಚ್ಚರಿಸುತ್ತಿದ್ದರು. ಹಾಗಾಗಿ ಕಾಲಕ್ರಮೇಣ ಸಿಂಧು ಎನ್ನುವ ಶಬ್ಧವು ಪರ್ಶಿಯನ್ನರ ಬಾಯಿಯಲ್ಲಿ ಹಿಂದು ಎಂದಾಯಿತು.
  • ಸಿಂಧೂ-ಸರಸ್ವತಿ ನದಿ ಬಯಲು ಪ್ರದೇಶದ ಮೇಲೆ ಅನೇಕ ಜನರು ದಂಡೆತ್ತಿ ಬಂದರು.  ಗ್ರೀಕರು, ಪರ್ಶಿಯನ್ನರು, ಸಿಥಿಯನ್ನರು, ಹೂಣರು, ತುರ್ಕರು-ಇವರೆಲ್ಲರೂ ಹಿಂದು ಎಂಬ ಶಬ್ಧವನ್ನೇ ಬಳಸಿದರು. ಮುಸ್ಲೀಮರು ಈ ಶಬ್ಧವನ್ನು ವಿಸ್ತೃತಗೊಳಿಸಿ, ಸಿಂಧೂನದಿ ಹರಿಯುವ ಪ್ರದೇಶವನ್ನು ಹಿಂದೂಸ್ಥಾನ ಎಂದರು. ಬ್ರಿಟೀಷರೂ ಸಹಾ ಈ ಹಿಂದು ಶಬ್ಧವನ್ನು ರಾಜಕೀಯ ದೃಷ್ಟಿಯಲ್ಲಿ ಬಹು ಪರಿಣಾಮಕಾರಿಯಾಗಿ ಬಳಸಿದರು. ಸಿಂಧೂ-ಸರಸ್ವತಿ ಹಾಗೂ ಅದರ ಮುಂದಿನ ಯಾವ ಪ್ರದೇಶವನ್ನು ಇಂದು ನಾವು ಭಾರತ ಎಂದು ಕರೆಯುತ್ತೇವೆಯೋ, ಅಲ್ಲಿಯ ಜನರು ತಮ್ಮನ್ನು ಹಾಗೂ ತಮ್ಮ ಧರ್ಮವನ್ನು ಯಾವ ಹೆಸರಿನಿಂದ ಕರೆಯುತ್ತಾರೆ ಎಂದು ವಿಚಾರಿಸುವ ಗೋಜಿಗೆ ಹೋಗದೆ, ಇಂಡಸ್ ನದಿ ಹರಿಯುವ ಈ ಪ್ರದೇಶವನ್ನು ಇಂಡಿಯ ಎಂದು ಕರೆದರು. ಇಂಡಸ್ ನದಿಯನ್ನು ಮೀರಿದ ಭೂಭಾಗವೂ ಸಹಾ ಇಂಡಿಯದ ವ್ಯಾಪ್ತಿಯಲ್ಲಿ ಬಂದಿತು.
  • ಇಲ್ಲಿರುವ ಜನರೂ ಅಷ್ಟೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವಾಗ, ತಮ್ಮತನದ ಗಟ್ಟಿತನವನ್ನು ತೋರಲೇ ಇಲ್ಲ. ಸ್ವಾತಂತ್ರ್ಯ ಬಂದ ಮೇಲೆ ಭಾರತ್ ದಟ್ ಇಸ್ ಇಂಡಿಯ ಎಂದು ನಮ್ಮನ್ನು ಕರೆದುಕೊಂಡೆವು.
  • ಹಿಂದು, ಹಿಂದು ಧರ್ಮ, ಹಿಂದೂಸ್ಥಾನ ಎಂಬ ಎಲ್ಲ ಶಬ್ಧಗಳನ್ನು ರೂಪಿಸಿದವರು ಈ ನೆಲಕ್ಕೆ ಸೇರದ ಅನ್ಯರು. ಅದನ್ನೇ ಪರಮಸತ್ಯವೆಂದು ನಮ್ಮ ಸರ್ಕಾರ, ನಮ್ಮ ಜನ ಒಪ್ಪಿರುವುದು ಒಂದು ದೊಡ್ಡ ದುರಂತ.

ಧರ್ಮ ಎನ್ನುವುದು ರಿಲಿಜನ್ ಅಲ್ಲ:

  • ಇಂದು ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ರಿಲಿಜನ್-ಗಳ ಸಾಂಪ್ರದಾಯಿಕ ತಿಳಿವಳಿಕೆಯನ್ನು ಸಂಗ್ರಹಿಸೋಣ.
  • ಅಬ್ರಹಾಮಿಕ್ ರಿಲಿಜನ್-ಇವುಗಳ ಬಗ್ಗೆ ತಿಳಿದುಕೊಳ್ಳಬೇಕು. ಜುದಾಯಿಸಂ, ಕ್ರಿಶ್ಚಿಯಾನಿಟಿ, ಇಸ್ಲಾಂ, ಬಹಾಯಿ ಮುಂತಾದವು ಅಬ್ರಹಾಮಿಕ್ ರಿಲಿಜನ್ ವ್ಯಾಪ್ತಿಯಲ್ಲಿ ಬರುವ ಮುಖ್ಯ ರಿಲಿಜನ್-ಗಳು.
  • ಇಂಡಿಯನ್ ರಿಲಿಜನ್-ಈ ಹೆಸರಿನ ವ್ಯಾಪ್ತಿಯಲ್ಲಿ ಹಿಂದೂಯಿಸಂ, ಜೈನಿಸಂ, ಬುದ್ಧಿಸಂ, ಸಿಖಿಸಂ ಮುಂತಾದವು ಮುಖ್ಯವಾದ ರಿಲಿಜನ್-ಗಳು.
  • ಇಂದಿನ ಚರ್ಚೆಗೆ ಈ ಎರಡು ಪ್ರಧಾನ ರಿಲಿಜನ್-ಗಳನ್ನು ಮಾತ್ರ ಪರಿಗಣಿಸೋಣ. ಕರ್ದಿಶ್ ರಿಲಿಜನ್ ವ್ಯಾಪ್ತಿಯಲ್ಲಿ ಬರುವ ಯಜ಼ೀದಿ, ಅಲೇವಿ, ಅಹ್ಲ್-ಎ-ಹಕ್-ಗಳನ್ನಾಗಲಿ, ಯೂರೋಪಿನಲ್ಲಿ ಅಬ್ರಹಾಮಿಕ್ ರಿಲಿಜನ್-ಗಳು ಅಸ್ತಿತ್ವಕ್ಕೆ ಬರುವ ಮೊದಲು ಇದ್ದ ಪೇಗನಿಸಂ, ಶಮಾನಿಸಂ, ಆನಿಮಿಸಂ, ಟೋಟೆನಿಸಂ-ಗಳನ್ನಾಗಲಿ, ಆಫ್ರಿಕ ಖಂಡದಲ್ಲಿರುವ ಯೋರುಬ ರಿಲಿಜನ್, ಸಂಟೇರಿಯ, ಕ್ಯಾಂಡೋಂಬ್ಲ್, ಉಂಬಾಂಡ, ವೂಡು, ಒಯೋತುಂಜಿಗಳ ಬಗ್ಗೆಯಾಗಲಿ, ಚೀನದಲ್ಲಿರುವ ಕನ್ಫ್ಯೂಶಿಯನಿಸಂ, ಟಾವೋಯಿಸಂ, ಫಲುನ್ ಗಾಂಗ್, ಐ-ಕ್ವಾನ್ ಟಾವೋಗಳ ಬಗ್ಗೆಯಾಗಲಿ, ಜಪಾನಿನ ಶಿಂಟೊ ರಿಲಿಜನ್ ಬಗ್ಗೆಯಾಗಲಿ ಚರ್ಚಿಸುವುದು ಅನಗತ್ಯ.
  • ಅಬ್ರಹಾಮಿಕ್ ರಿಲಿಜನ್, ಹೆಸರೇ ಸೂಚಿಸುವ ಹಾಗೆ ಯಹೂದಿಗಳ ಮೂಲ ಪುರುಷ ಅಬ್ರಹಾಮಿನ ಕಾರಣ ಹುಟ್ಟಿದಂತಹ ರಿಲಿಜನ್-ಗಳು. ಅಬ್ರಹಾಮಿಕ್ ರಿಲಿಜನ್-ಗಳಿಗೆ ತೋರಾ ಎನ್ನುವ ಗ್ರಂಥಗಳೇ ಮೂಲ ಆಧಾರ ಗ್ರಂಥಗಳು. ತೋರಾ ಎನ್ನುವುದು ಹಿಬ್ರೂ ಶಬ್ಧ. ಇದಕ್ಕೆ ಬೋಧನೆ ಅಥವ ಆದೇಶ ಎಂಬ ಅರ್ಥವಿದೆ. ತೋರಾ ಐದು ಪುಸ್ತಕಗಳನ್ನು ಒಳಗೊಂಡಿದೆ. ಇವನ್ನು ಮೋಸೆಸ್ ಬರೆದನು.
  • ಕ್ರಿಶ್ಚಿಯನ್ನರು ಯಹೂದಿಗಳ ತೋರಾವನ್ನು ಹಳೆಯ ಒಡಂಬಡಿಕೆ (ಓಲ್ಡ್ ಟೆಸ್ಟ್‌ಮೆಂಟ್) ಎಂಬ ಹೆಸರಿನಲ್ಲಿ ಸ್ವೀಕರಿಸುತ್ತಾರೆ. ಇಸ್ಲಾಮಿನಲ್ಲೂ ಮೋಸೆಸನ ಐದು ಗ್ರಂಥಗಳಿಗೆ ಮಾನ್ಯತೆಯಿದೆ. ಒಂದು ಮುಖ್ಯ ವ್ಯತ್ಯಾಸವನ್ನು ಗಮನಿಸಬೇಕು. ಯಹೂದಿಗಳು ತೋರಾ ಗ್ರಂಥಗಳಿಗೆ ಯಾವ ಮಟ್ಟದ ಗೌರವ ಹಾಗೂ ಮಾನ್ಯತೆಯನ್ನು ನೀಡುತ್ತಾರೋ, ಆ ಮಟ್ಟಿಗೆ ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಮ್ ರಿಲಿಜನ್-ಗಳು ನೀಡುವುದಿಲ್ಲ.
  • ತೋರಾಗ್ರಂಥಗಳನ್ನು ಅರ್ಥೈಸಿ ಆದೇಶ ನೀಡುವವರು ರಬ್ಬಿಗಳು. ಓಲ್ಡ್ ಟೆಸ್ಟ್‌ಮೆಂಟ್ ಹಾಗೂ ನ್ಯೂ ಟೆಸ್ಟ್‌ಮೆಂಟ್-ಗಳನ್ನು (ನ್ಯೂ ಟೆಸ್ಟ್‌ಮೆಂಟ್-ಹೊಸ ಒಡಂಬಡಿಕೆ-೨೭ ಗ್ರಂಥಗಳನ್ನು ಒಳಗೊಂಡಿದೆ. ಏಸುಕ್ರಿಸ್ತನ ಮರಣಾನಂತರ ಆತನ ಶಿಷ್ಯರು ಇವನ್ನು ಬರೆದರು ಎನ್ನಲಾಗಿದೆ. ಕ್ರಿಸ್ತನ ಸಂದೇಶಗಳು ಕಿ.ಶ.೫೦ ರ ನಂತರ ಬರಹ ರೂಪವನ್ನು ತಳೆದವು. ಮೊದಲು ಇವನ್ನು ಅಂದಿನ ಗ್ರೀಸಿನಿನ ಭಾಷೆಯಾದ ಕೋನಿ ಗ್ರೀಕಿನಲ್ಲಿ ಬರೆದರು ಎನ್ನಲಾಗಿದೆ. ಇಂದು ಕ್ರಿಶ್ಚಿಯಾನಿಟಿ ಪ್ರಧಾನವಾಗಿ ಹೊಸ ಒಡಂಬಡಿಕೆಯನ್ನು ಪರಿಪಾಲಿಸುತ್ತದೆ) ಅರ್ಥೈಸಿ ಆದೇಶ ನೀಡುವವರು ಪಾದ್ರಿಗಳು ಹಾಗೂ ಕುರ್‌ಆನನ್ನು ಅರ್ಥೈಸಿ, ಆದೇಶ ನೀಡುವವರು ಮೌಲ್ವಿಗಳು. ಈ ಮೂರು ಅಬ್ರಹಾಮಿಕ್ ರಿಲಿಜನ್-ಗಳು ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ಹುಟ್ಟಿದವು.
  • ಬಹಾಯಿ ಪಂಥವು ಇಂದಿನ ಇರಾನಿನಲ್ಲಿ ಸುಮಾರು ೧೯ ನೆಯ ಶತಮಾನದಲ್ಲಿ ಜನಿಸಿದ ಹೊಸ ರಿಲಿಜನ್. ಜುದಾಯಿಸಂ, ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಮಿನಲ್ಲಿರುವ ಎಲ್ಲ ಪ್ರವಾದಿಗಳ ಸಂದೇಶವನ್ನು ಹಾಗೂ ಬಹಾಯಿ ಸಂಸ್ಥಾಪಕ ಬಹೌಉಲ್ಲ ಅವರ ಬೋಧನೆಯನ್ನೂ ಒಪ್ಪುತ್ತದೆ.
  • ಇಂಡಿಯನ್ ರಿಲಿಜನ್ ವ್ಯಾಪ್ತಿಯಲ್ಲಿ ಹಿಂದು ರಿಲಿಜನ್-ಅನ್ನು ಸೇರಿಸಲಾಗಿದೆ. ಇದು ರಿಲಿಜನ್ ಅಲ್ಲ. ಅದಕ್ಕೆ ಕಾರಣಗಳನ್ನು ಪಟ್ಟಿ ಮಾಡುತ್ತಾ ಹೋಗೋಣ.
  • ಮೊದಲನೆಯದಾಗಿ ಸಿಂಧೂ-ಸರಸ್ವತಿ ನದಿ ಬಯಲಿನ ಜನರ ಜೀವನಶೈಲಿಯು ನಿರ್ದಿಷ್ಟ ಕಾಲಮಾನದಲ್ಲಿ ಜನ್ಮ ತಳೆಯಲಿಲ್ಲ. ಇದು ಕ್ರಿ.ಪೂ. ೪,೦೦೦-೧,೫೦೦ ವರ್ಷಗಳ ಅವಧಿಯಲ್ಲಿ ಅಥವ ಅದಕ್ಕಿಂತಲೂ ಹಿಂದೆ ರೂಪುಗೊಂಡಿರಬೇಕು ಎಂದು ವೇದಗಳನ್ನು ಅಧ್ಯಯನ ಮಾಡಿರುವ ಪಾಶ್ಚಾತ್ಯ ಹಾಗೂ ಪೌರ್ವಸ್ತ್ಯ ಪಂಡಿತರ ಅಭಿಪ್ರಾಯ.  ಇದು ರೂಪುಗೊಳ್ಳಲು ಸಾವಿರಾರು ವರ್ಷಗಳು ಬೇಕಾಯಿತು.
  • ಅಬ್ರಹಾಮ್ ರಿಲಿಜನ್-ಗಳನ್ನು ಅಬ್ರಹಾಮ್, ಮೋಸೆಸ್, ಏಸುಕ್ರಿಸ್ತ, ಮೊಹಮ್ಮದ್ ಪೈಗಂಬರ್ ಮುಂತಾದ ಪ್ರವಾದಿಗಳು ಸ್ಥಾಪಿಸಿದರು. ಸಿಂಧೂ-ಸರಸ್ವತಿ ನದಿ ಬಯಲಿನ ಧರ್ಮವನ್ನು ಯಾವ ಒಬ್ಬ ವ್ಯಕ್ತಿ ಸ್ಥಾಪಿಸಲಿಲ್ಲ.
  • ಅಬ್ರಹಾಮ್ ರಿಲಿಜನ್-ಗಳಿಗೆ ತೋರಾ, ಬೈಬಲ್, ಕುರ್‌ಆನ್ - ಇವು ಪವಿತ್ರಗ್ರಂಥಗಳು. ಇವನ್ನು ಅರ್ಥೈಸಲು ಹಾಗೂ ಇವುಗಳ ಬೋಧನೆಯನ್ನು ನಿಖರವಾಗಿ ಆದೇಶಿಸಲು ರಬ್ಬಿಗಳು, ಪಾದ್ರಿಗಳು, ಮೌಲ್ವಿಗಳಿದ್ದಾರೆ. ಸಿಂಧೂ-ಸರಸ್ವತಿ ನದಿ ಬಯಲಿನ ಜನರಿಗೆ ಇಂತಹ ಒಂದು ನಿಖರ ಧಾರ್ಮಿಕ ಗ್ರಂಥವಿರಲಿಲ್ಲ. ಮೇಲುನೋಟಕ್ಕೆ ವೇದ ಎನ್ನುವುದು ಒಂದು ಗ್ರಂಥವಾಗಿ ಕಂಡರೂ ಇದರಲ್ಲಿ ನಾಲ್ಕು ಭಾಗಗಳಿವೆ. ಋಗ್ವೇದ, ಸಾಮವೇದ, ಯಜುರ್ವೇದ ಹಾಗೂ ಅಥರ್ವಣವೇದ. ಇವುಗಳಲ್ಲಿ ಪ್ರಾಚೀನವಾದದ್ದು ಋಗ್ವೇದ. ಅರ್ವಾಚೀನವಾದದ್ದು ಅಥರ್ವಣವೇದ. ಇವೆಲ್ಲವೂ ಸಾವಿರಾರು ವರ್ಷಗಳ ಅವಧಿಯಲ್ಲಿ ಅಸಂಖ್ಯ ಋಷಿಗಳಿಂದ ರೂಪುಗೊಂಡಂತಹವು. ಸಿಂಧೂ-ಸರಸ್ವತಿ ನದಿ ಬಯಲಿನಲ್ಲಿದ್ದ ಜನರು ಈ ನಾಲ್ಕು ವೇದಗಳಲ್ಲಿ ಯಾವ ವೇದವನ್ನು ಬೇಕಾದರೂ ಪಾಲಿಸಬಹುದಾಗಿತ್ತು. ಒಂದು ವೇದವನ್ನು ಮಾನ್ಯ ಮಾಡುವವರು ಮತ್ತೊಂದು ವೇದವನ್ನು ಮಾನ್ಯ ಮಾಡಲೇ ಬೇಕು ಎಂಬ ನಿಯಮವೇನೂ ಇರಲಿಲ್ಲ. ಸಪ್ತರ್ಷಿಗಳು ತಮ್ಮ ತಮ್ಮ ಗೋತ್ರಗಳನ್ನು ಪ್ರವರ್ಧಿಸಿದರು. ನಾಲ್ಕು ವೇದಗಳಲ್ಲಿ ತಮಗೆ ಸರಿಯೆಸಿದ  ವೇದವನ್ನು ಅನುಸರಿಸಿದರು. ತಮಗೆ ಸರಿ ಎಂದು ಕಂಡದ್ದನ್ನು ತಾವು ಪರಿಪಾಲಿಸಿದರು. ಸಿಂಧೂ-ಸರಸ್ವತಿ ನದಿ ಬಯಲಿನ ಜನರು ತಮ್ಮ ಚಿಂತನೆ-ಪರಿಪಾಲನೆಯ ಸ್ವಾತಂತ್ರ್ಯವನ್ನು ಉಳಿಸಿಕೊಂಡರು. ಇಂತಹ ಸ್ವಾತಂತ್ರ್ಯ ಬಹುಶಃ ಜಗತ್ತಿನ ಯಾಯಾವುದೇ ರಿಲಿಜನ್-ಗಳಲ್ಲಿ ಇಲ್ಲ.
  • ಸಿಂಧೂ-ಸರಸ್ವತಿ ನದಿ ಬಯಲಿನಲ್ಲಿ ವಾಸಿಸುತ್ತಿದ್ದ ಜನರು ರೂಡಿಸಿಕೊಂಡ ಜೀವನಶೈಲಿ ಅತ್ಯಂತ ಸರಳವಾಗಿತ್ತು. ಪ್ರಾಕೃತವಾಗಿತ್ತು. ಮೊದಲ ಬಾರಿಗೆ ಮಾನವ ಜನಾಂಗ ಕಂಡುಕೊಂಡ ಅರಿವಿನ ಪ್ರತೀಕವಾಗಿತ್ತು. ಮೂಲವಾಗಿತ್ತು.
  • ಸಿಂಧೂ-ಸರಸ್ವತಿ ನದಿ ಬಯಲಿನ ಜನರು ನಡೆಸುತ್ತಿದ್ದ ಜೀವನಶೈಲಿಯನ್ನು ಇಂದು ನಾವು ಹೇಗೆ ಗುರುತಿಸಬೇಕು? ಹಿಂದು ಎಂಬ ಶಬ್ಧದಿಂದ ಖಂಡಿತಾ ಗುರುತಿಸುವಂತಿಲ್ಲ. ಕೆಲವರು ‘ಸನಾತನ ಧರ್ಮ ಎಂಬ ಹೆಸರನ್ನು ಬಳಸಿರುವರು. ವೈದಿಕ ಧರ್ಮ ಎಂಬ ಪದಪ್ರಯೋಗವೂ ಆಗಿದೆ.
  • ಸನಾತನ ಧರ್ಮ ಎಂದರೆ ಪ್ರಾಚೀನವಾದ ಧರ್ಮ ಎಂದು ಅರ್ಥ. ವೈದಿಕ ಧರ್ಮ ಎನ್ನುವುದು ವೇದಕಾಲದ ಧರ್ಮಕ್ಕಿಂತ, ಆನಂತರ ಬಂದ ಬ್ರಾಹ್ಮಣ ಕಾಲದ ಧರ್ಮವನ್ನು ಸೂಚಿಸುತ್ತದೆ. ಹಾಗಾಗಿ ಇವೆರಡು ಸೂಕ್ತವಾಗಲಾರದು.
  • ಸಿಂಧೂ-ಸರಸ್ವತಿ ನದಿ ಬಯಲಿನ ಜನರ ಜೀವನಶೈಲಿಯು ಮಾನವ ಜನಾಂಗದ ಮೂಲ ಜೀವನಶೈಲಿಯಾಗಿದ್ದ ಕಾರಣ ಇದು ಜಗತ್ತಿನ ಆದಿ ಧರ್ಮ. ಮಾನವ ಮೂಲಧರ್ಮ. ವೇದಕಾಲೀನ ಧರ್ಮ ಅಥವ ಸರಳವಾಗಿ ಧರ್ಮ ಎಂದೇ ಕರೆಯಬಹುದು. ಇದು ನನ್ನ ಅಭಿಪ್ರಾಯ.
  • ಇನ್ನು ಮುಂದೆ ಕೇವಲ ಚರ್ಚೆಗಾಗಿ, ಸಿಂಧೂ-ಸರಸ್ವತಿ ನದಿ ಬಯಲಿನ ಜನರ ಜೀವನಶೈಲಿಯನ್ನು, ಹಿಂದು ಶಬ್ಧದಿಂದ ಗುರುತಿಸುತ್ತೇನೆ. ಇದು ಕೇವಲ ನಮ್ಮ ಅನುಕೂಲಕ್ಕಾಗಿ ಮಾತ್ರ. ಹಿಂದು ಎಂಬ ಶಬ್ಧವನ್ನು ನಾನು ಒಪ್ಪಿದ್ದೇನೆ ಎಂದು ಅರ್ಥೈಸಬಾರದು.

ಇಂದು ಹಿಂದು ಧರ್ಮ ಎನ್ನುವುದು ಇದೆಯೆ?

  • ಇಂದು ಹಿಂದು ಧರ್ಮ ಎನ್ನುವುದು ಇಲ್ಲ ಎಂದು ಕೆಲವರ ಅಭಿಪ್ರಾಯ. ನಿಜ. ರಿಲಿಜನ್ ಎನ್ನುವ ಅರ್ಥದಲ್ಲಿ ಇಲ್ಲ. ಆದರೆ ಜೀವನಶೈಲಿ ಎಂಬ ಅರ್ಥದಲ್ಲಿ ಕನಿಷ್ಟ ಪ್ರಮಾಣದಲ್ಲಿಯಾದರೂ ಅಸ್ತಿತ್ವದಲ್ಲಿ ಇದೆ. ಏಕೆ ಕನಿಷ್ಟ ಪ್ರಮಾಣದಲ್ಲಿ ಅಸ್ತಿತ್ವದಲ್ಲಿ ಇದೆ, ಪೂರ್ಣ ಪ್ರಮಾಣದಲ್ಲಿ ಏಕಿಲ್ಲ ಎನ್ನುವುದು ಬೇರೆಯ ಪ್ರಶ್ನೆ. ಅದರ ಚರ್ಚೆ ಇಲ್ಲಿ ಅಪ್ರಸ್ತುತ. ಆದರೆ ಹಿಂದು ಧರ್ಮ ಎನ್ನುವುದು ಇದೆ ಎನ್ನುವುದಕ್ಕೆ ನನಗೆ ಅನುಮಾನವಿಲ್ಲ. ನನ್ನ ಅನಿಸಿಕೆಗೆ ಆಧಾರಗಳನ್ನು ನಾನು ಕೊಡಬೇಕಾಗುತ್ತದೆ.

ಹಿಂದು ಧರ್ಮ ಎಂದರೆ ಏನು?

  • ಹಿಂದು ಧರ್ಮ ಎನ್ನುವುದು ನಿಂತ ನೀರಲ್ಲ. ಇದು ನದಿಯಂತೆ ಸದಾ ಚಲನಶೀಲವಾದದ್ದು. ಕಾಲ ಕಾಲಕ್ಕೆ ಹೊಸ ಹೊಸ ವಿಚಾರಧಾರೆಗಳೆಂಬ ಉಪನದಿಗಳು ಸೇರಿ ಬೃಹತ್ ನದಿಯಾಗಿ ಹಿಂದು ಧರ್ಮವು ಹರಿಯುತ್ತಿದೆ. ಇಲ್ಲಿ ಸಂಗ್ರಹವಾಗಿರುವು ಅರಿವು ಅಪಾರ.
  • ಹಿಂದು ಧರ್ಮವನ್ನು ಅರ್ಥ ಮಾಡಿಕೊಳ್ಳಬಯಸುವವರು ವೇದ ಮತ್ತು ಉಪನಿಷತ್ತುಗಳ ಸಾರವಾದ ದರ್ಶನಗಳನ್ನು ಓದಬೇಕು. ಈ ಆರು ದರ್ಶನಗಳು ಯಾವ ವಿಷಯಗಳ ಬಗ್ಗೆ ಚರ್ಚಿಸುತ್ತವೆ ಎಂಬುದನ್ನು ಸ್ಥೂಲವಾಗಿ ಸಂಗ್ರಹಿಸಬಹುದು. ದೇವರು ಎನ್ನುವನು ಇರುವನೆ? ಈ ಜಗತ್ತಿನ ಸೃಷ್ಟಿ ಹೇಗಾಯಿತು? ಮನುಷ್ಯರು ಹಾಗೂ ಇತರ ಜೀವರಾಶಿ ಹೇಗೆ ಸೃಷ್ಟಿಯಾದವು? ಒಳ್ಳೆಯದು ಹಾಗೂ ಕೆಟ್ಟದ್ದು-ಅವುಗಳ ಪರಿಣಾಮಗಳೇನು?, ಒಳ್ತನದರಿಮೆ ಮತ್ತು ಸನ್ನಡತೆ ಏಕೆ ಬೇಕು, ಮನುಷ್ಯನ ವಿಧಿ ಅಥವ ನಿಯತಿ ಎನ್ನುವುದು ಇವೆಯೆ?, ಮನುಷ್ಯನ ಬದುಕಿನ ಉದ್ದೇಶವೇನು? - ಇತ್ಯಾದಿ.
  • ದರ್ಶನಗಳನ್ನು ಎರಡು ವಿಶಾಲ ಗುಂಪುಗಳಲ್ಲಿ ವಿಂಗಡಿಸಬಹುದು. ಆಸ್ತಿಕ ದರ್ಶನ ಹಾಗೂ ನಾಸ್ತಿಕ ದರ್ಶನ. ಆಸ್ತಿಕ ದರ್ಶನಗಳು ವೇದಗಳನ್ನು ಒಪ್ಪುತ್ತವೆ. ನಾಸ್ತಿಕ ದರ್ಶನಗಳು ವೇದಗಳನ್ನು ಒಪ್ಪುವುದಿಲ್ಲ. ಆಸ್ತಿಕ ದರ್ಶನಗಳು ಆರು. ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಮೀಮಾಂಸ ಹಾಗೂ ವೇದಾಂತ. ನಾಸ್ತಿಕ ದರ್ಶನಗಳಲ್ಲಿ ಚಾರ್ವಾಕ ದರ್ಶನ, ಜೈನದರ್ಶನ ಹಾಗೂ ಬೌದ್ಧದರ್ಶನಗಳು ಮುಖ್ಯವಾದವು.
  • ದರ್ಶನ ಎಂದರೆ ನೋಡುವುದು. ಇದು ಮೇಲುನೋಟದ ಅರ್ಥ. ವಾಸ್ತವದಲ್ಲಿ ತಮ್ಮ ಲೋಕನ, ಚಿಂತನ, ಮಂಥನ, ಧ್ಯಾನಗಳ ನಂತರ ಯಾವ ಜ್ಞಾನವನ್ನು ಪಡೆದರೋ ಅದನ್ನೇ ದರ್ಶನ ಎಂದು ಹೇಳುವರು. ದರ್ಶನಗಳು ವಿಭಿನ್ನವಾಗಿವೆ. ಸಾಮ್ಯತೆಗಳಿಗಿಂತ ವೈರುದ್ಧ್ಯಗಳೇ ಹೆಚ್ಚು. ಒಬ್ಬ ವ್ಯಕ್ತಿಯು ಲಭ್ಯವಿರುವ ದರ್ಶಗಳಲ್ಲಿ ಯಾವ ದರ್ಶನವನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಆ ಸ್ವಾತಂತ್ರ್ಯ ಅವನಿಗಿರುತ್ತದೆ. ಲಭ್ಯ ಅರಿವಿನ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಚಿಂತಿಸುವ ಅವಕಾಶವನ್ನು ಪಡೆದಿರುತ್ತಾನೆ. ಸಮರ್ಥ ವ್ಯಕ್ತಿ ತನ್ನ ಸ್ವಸಾಮರ್ಥ್ಯದಿಂದ ತಾನೇ ಹೊಸ ದರ್ಶನವನ್ನು ರೂಪಿಸಲೂ ಇಲ್ಲಿ ಅವಕಾಶವಿದೆ. ಇಂತಹ ಸ್ವಾತಂತ್ರ್ಯ ಅಬ್ರಹಾಮಿಕ್ ರಿಲಿಜನ್-ಗಳಲ್ಲಿ ದೊರೆಯುವುದಿಲ್ಲ.
  • ದರ್ಶನ ಎನ್ನುವುದು ಥಿಯರಿ ಇದ್ದ ಹಾಗೆ. ಧರ್ಮ ಎನ್ನುವುದು ಆ ಥಿಯರಿಯನ್ನು ಅನುಸರಿಸಿ ದೈನಂದಿನ ಬದುಕಿಗೆ ಅನ್ವಯವಾಗುವ ಪ್ರಾಯೋಗಿಕ ಮಾರ್ಗದರ್ಶನ.
  • ಧರ್ಮದಲ್ಲಿ ಎರಡು ಪ್ರಧಾನ ಮಾರ್ಗಗಳು. ಜ್ಞಾನಮಾರ್ಗ ಮತ್ತು ಭಕ್ತಿಮಾರ್ಗ. ಜ್ಞಾನಮಾರ್ಗವನ್ನು ಅನುಸರಿಸುವವರು ನಿರಾಕಾರ ಪರಬ್ರಹ್ಮದ ಚಿಂತನೆಯಲ್ಲಿ ತೊಡಗುವರು. ಇವರ ಪ್ರಮಾಣ ಸೀಮಿತ. ಭಕ್ತಿಮಾರ್ಗವನ್ನು ಅನುಸರಿಸುವವರಿಗಾಗಿ ಪುರಾಣಗಳು, ತ್ರಿಮೂರ್ತಿಗಳು ಹಾಗೂ ಇತರ ಎಲ್ಲ ದೇವಾನು ದೇವತೆಗಳು ರೂಪುಗೊಂಡವು. ಇವರ ಪ್ರಮಾಣ ಅಪರಿಮಿತ.
  • ದೇವಾನುದೇವತೆಗಳ ಸ್ವರೂಪವನ್ನು ರೂಪಿಸಲು ಶಿಲ್ಪಶಾಸ್ತ್ರ ರೂಪುಗೊಂಡಿತು. ಇಲ್ಲಿ ದೇವ ಮೂರ್ತಿ ಶಿಲ್ಪ ಎನ್ನುವುದನ್ನು ಒಂದು ಸಂಕೇತದ ಹಾಗೆ ಸ್ವೀಕರಿಸಬೇಕು. ಕ್ರಿಶ್ಚಿಯನರಿಗೆ ಶಿಲುಬೆ ಎನ್ನುವುದು ದೇವಸಂಕೇತ. ಇಸ್ಲಾಂ ಅನುಯಾಯಿಗಳಿಗೆ ಕಾಬಾ ಎನ್ನುವುದು ಒಂದು ದೇವಸಂಕೇತ. ಸಿಖ್ಖರಿಗೆ ಆದಿಗ್ರಂಥವು ದೇವಸಂಕೇತ. ಜೈನರು ಹಾಗೂ ಬೌದ್ಧರು ಮೂರ್ತಿಸಂಕೇತವನ್ನು ಸ್ವೀಕರಿಸಿರುವರು.
  • ಹಿಂದು ಧರ್ಮವು ಕರ್ಮ-ಪುನರ್ಜನ್ಮಗಳನ್ನು ನಂಬುತ್ತದೆ. ಹಿಂದುವಿನ ಬದುಕಿನ ಗುರಿಯು ಮೋಕ್ಷವನ್ನು ಪಡೆಯುವುದಾಗಿರುತ್ತದೆ.
  • ಹಿಂದುಧರ್ಮವು ವ್ಯಕ್ತಿಯ ಶಿಕ್ಷಣಕ್ಕೆ ಮಹತ್ವವನ್ನು ನೀಡುತ್ತದೆ. ವಿದ್ಯೆಯನ್ನು ಎರಡು ವಿಶಾಲ ಗುಂಪುಗಳಲ್ಲಿ ವಿಂಗಡಿಸುತ್ತದೆ. ಪರಾವಿದ್ಯಾ ಮತ್ತು ಅಪರಾ ವಿದ್ಯಾ. ಪರಾವಿದ್ಯಾ, ವ್ಯಕ್ತಿಯು ಮೋಕ್ಷವನ್ನು ಪಡೆಯಲು ಅಗತ್ಯವಾದ ಅರಿವನ್ನು ನೀಡುವತ್ತ ಗಮನವಹಿಸುತ್ತದೆ. ಅಪರಾವಿದ್ಯಾ, ದೈನಂದಿನ ಬದುಕಿಗೆ ಅಗತ್ಯವಾದ, ಹಣವನ್ನು ಸಂಪಾದಿಸಿ ಬದುಕನ್ನು-ಸಂಸಾರವನ್ನು ನಡೆಸಲು ಅಗತ್ಯವಾದ ಅರಿವನ್ನು ನೀಡುತ್ತದೆ.
  • ಹಿಂದುಧರ್ಮವು ಪುರುಷಾರ್ಥಗಳನ್ನು ಬೋಧಿಸುತ್ತದೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ಪುರುಷಾರ್ಥಗಳು ಓರ್ವ ಹಿಂದು ಹೇಗೆ ತನ್ನ ಜೀವನವನ್ನು ನಡೆಸಬೇಕು ಎಂಬುದನ್ನು ಸೂಚಿಸುತ್ತದೆ.
  • ಹಿಂದುಧರ್ಮವು ಪುರುಷಾರ್ಥಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ನಾಲ್ಕು ಆಶ್ರಮಗಳನ್ನು ರೂಪಿಸಿದೆ. ಬ್ರಹ್ಮಚರ್ಯ, ಗಾರ್ಹಸ್ತ್ಯ, ವಾನಪ್ರಸ್ತ ಹಾಗೂ ಸನ್ಯಾಸ.
  • ಚಾತುರ್ವರ್ಣ ವ್ಯವಸ್ಥೆ ಹಿಂದು ಧರ್ಮಕ್ಕೆ ವಿಶಿಷ್ಠವಾದದ್ದು. ಸಿಂಧುಸರಸ್ವತಿ ನದಿ ಬಯಲಿನ ಜನರಲ್ಲಿ ಚಾತುರ್ವರ್ಣ ವ್ಯವಸ್ಥೆಯಿರಲಿಲ್ಲ. ಒಂದು ಮನೆಯಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ದೈಹಿಕ ಮತ್ತು ಬೌದ್ಧಿಕ ಶಕ್ತಿಸಾಮರ್ಥ್ಯಕ್ಕನುಗುಣವಾಗಿ ಹಾಗೂ ತನ್ನ ಅಭಿರುಚಿಗನುಗುಣವಾಗಿ ವೃತ್ತಿಯನ್ನು ಕೈಗೊಳ್ಳಲು ಅವಕಾಶವಿತ್ತು. ಒಂದು ಮನೆಯಲ್ಲಿ ಇರುವ ತಂದೆ ಪುರೋಹಿತನಾಗಿದ್ದರೆ, ತಾಯಿ ಹಿಟ್ಟನ್ನು ಬೀಸುವ ವೃತ್ತಿಯನ್ನು ಪಾಲಿಸಿದರೆ, ಮಗನು ವೈದ್ಯನಾಗಿರುತ್ತಾನೆ. ಒಂದು ಮನೆಯಲ್ಲಿ ಇರುವಂತಹ ಜನರು ವಿವಿಧ ವೃತ್ತಿಗಳಲ್ಲಿ ತೊಡಗಲು ಅವಕಾಶವಿತ್ತು ಎನ್ನುವುದಕ್ಕೆ ಆಧಾರ ವೇದಗಳಲ್ಲಿಯೇ ದೊರೆಯುತ್ತದೆ.
  • ಋಗ್ವೇದದ ಪುರುಷಸೂಕ್ತದಲ್ಲಿ ಮೊದಲ ಬಾರಿಗೆ ಚಾತುರ್ವರ್ಣದ ಪ್ರಸ್ತಾಪ ಬರುತ್ತದೆ. ನಂತರ ಮನುಸ್ಮೃತಿಯಲ್ಲಿ ಬಲವಾಗಿ ಬೇರುಬಿಡುತ್ತದೆ. ಭಗವದ್ಗೀತೆಯು ‘ಚಾತುವರ್ಣ್ಯಂ ಮಯಾಸೃಜ್ಯಂ ಗುಣ ಕರ್ಮ ವಿಭಾಗಶಃ ಎನ್ನುತ್ತದೆ. ಇಲ್ಲಿ ವ್ಯಕ್ತಿಯ ಗುಣ-ಕರ್ಮಗಳನ್ನು ಆಧಾರವಾಗಿಟ್ಟುಕೊಂಡು ನಾಲ್ಕು ವರ್ಣಗಳನ್ನು ಸೃಜಿಸಿದ್ದೇನೆ ಎಂದು ಕೃಷ್ಣ ಹೇಳುತ್ತಾನೆ. ಇರಬಹುದು. ಆದರೆ ನಂತರದ ದಿನಗಳಲ್ಲಿ ಈ ವರ್ಣಪದ್ಧತಿಯು ಜಾತಿ ವ್ಯವಸ್ಥೆಗೆ, ಅಸ್ಪೃಶ್ಯತೆಗೆ ಅವಕಾಶ ಮಾಡಿಕೊಟ್ಟಿರುವುದು ಸೂರ್ಯನ ಬೆಳಕಿನಷ್ಟೆ ನಿಚ್ಚಳ. ಇದು ಅಮಾನವೀಯ ಎಂಬುದು ನನ್ನ ಸ್ಪಷ್ಟ ನಿಲುವು. ಇದು ಹಿಂದು ಧರ್ಮಕ್ಕೆ ಅಂಟಿರುವ ಕಪ್ಪು ಚುಕ್ಕೆ.

ಹಿಂದು ಎಂದರೆ ಯಾರು?

  • ಹಿಂದು ಎಂದರೆ ಯಾರು ಎಂಬ ಪ್ರಶ್ನೆಯನ್ನು ನನ್ನ ಹಿಂದಿನ ಲೇಖನದಲ್ಲಿ ಪ್ರಸ್ತಾಪಿಸಿರುವದರಿಂದ ಅದರ ಪುನರಾವರ್ತನೆ ಇಲ್ಲಿ ಅನಗತ್ಯ ಎಂದು ನನ್ನ ಭಾವನೆ. ನಮ್ಮ ಕಾನೂನು ಸ್ಪಷ್ಟವಾಗಿ ವೇದ ಉಪನಿಷತ್ತುಗಳನ್ನು ಯಾರೇ ಪರಿಪಾಲಿಸಿದರೂ ಅವರು ಹಿಂದು ಎನ್ನುತ್ತದೆ. ವೇದ ಉಪನಿಷತ್ತುಗಳಲ್ಲಿ ಬರುವ ಋತ-ಸತ್ಯ-ಧರ್ಮಗಳನ್ನು ನೂರಕ್ಕೆ ನೂರರಷ್ಟು ಪಾಲಿಸುವವರು ಬಹುಶಃ ಯಾರೂ ಇಲ್ಲ. ಆದರೆ ಸಾಮಾನ್ಯ ಧರ್ಮ ಹಾಗೂ ಸಂಸ್ಕಾರಗಳನ್ನು, ಹಿಂದು ಧರ್ಮಕ್ಕೆ ಸೇರಿದ ಪ್ರತಿಯೊಬ್ಬರು ಯಥಾಶಕ್ತಿ ಪಾಲಿಸುತ್ತಾರೆ. ಹಾಗಾಗಿ ಆವರು ಹಿಂದು ಎಂದು ಅನಿಸಿಕೊಳ್ಳುತ್ತಾರೆ.
  • ಭಾರತದ ಪರಮೋಚ್ಚ ನ್ಯಾಯಾಲಯವು ಒಬ್ಬ ವ್ಯಕ್ತಿಯನ್ನು ಹಿಂದು ಎಂದು ಕರೆಯಬೇಕಾದರೆ, ಅವನು ಈ ಸಾಮಾನ್ಯ ಧರ್ಮಗಳನ್ನು ಹಾಗೂ ಸಂಸ್ಕಾರಗಳನ್ನು ಪರಿಪಾಲಿಸಿದ್ದಾನೆಯೇ ಎಂಬುದನ್ನು ಪ್ರಶ್ನಿಸುತ್ತದೆ. ಓರ್ವ ಹಿಂದು ವ್ಯಕ್ತಿಯು ಕ್ರೈಸ್ತ ಅಥವ ಇಸ್ಲಾಂ ಧರ್ಮವನ್ನು ಪರಿಪಾಲಿಸುವ ವ್ಯಕ್ತಿಯನ್ನು ಮದುವೆಯಾಗಿದ್ದರೆ, ಅವರಿಗೆ ಹುಟ್ಟುವ ಮಕ್ಕಳು ಯಾವ ಧರ್ಮಕ್ಕೆ ಸೇರಿದವರು ಎಂಬ ಪ್ರಶ್ನೆ ಏಳುತ್ತದೆ. ಅವರು ತಮ್ಮ ಹುಟ್ಟಿನಿಂದ ಯಾವುದೇ ಧರ್ಮಕ್ಕೆ ಸೇರುವುದಿಲ್ಲ. ಹುಟ್ಟಿದ ಮಗುವು ಯಾವ ಧರ್ಮದ ಸಂಸ್ಕಾರಗಳಿಗೆ ಒಳಗಾಗಿ ಬೆಳೆಯುತ್ತಿದೆಯೋ, ಮಗುವು ಆ ಧರ್ಮಕ್ಕೆ ಸೇರುತ್ತದೆ ಎನ್ನುತ್ತದೆ.

ಭಾರತದಲ್ಲಿರುವ ಎಲ್ಲ ಹಿಂದುಗಳು ವೇದೋಕ್ತ ಹಿಂದು ಧರ್ಮವನ್ನು ಪಾಲಿಸುತ್ತಿದ್ದಾರೆಯೆ?

  • ಹಿಂದುಧರ್ಮವು ರಿಲಿಜನ್ ಅಲ್ಲ, ಅದೊಂದು ಜೀವನಶೈಲಿ ಎಂದು ಹೇಳಿದೆ. ಈ ಜೀವನಶೈಲಿ ಎಂತಹದ್ದು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಈ ಜೀವನಶೈಲಿಯನ್ನು ಇಂದಿನ ಹಿಂದುಗಳು (ಕೇವಲ ಬ್ರಾಹ್ಮಣರಲ್ಲ; ಕ್ಷತ್ರಿಯ, ವೈಶ್ಯ ಹಾಗೂ ಶೂದ್ರರನ್ನು ಒಳಗೊಂಡು) ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದಾರೆ ಎನ್ನುವುದು ಮುಖ್ಯ ವಿಷಯ.
  • ಹಿಂದು ಧರ್ಮವನ್ನು ಪರಿಪಾಲಿಸುವ ಜನರ ಜೀವನಶೈಲಿಯಲ್ಲಿ ಎರಡು ಮುಖ್ಯ ಅಂಶಗಳಿವೆ. ಮೊದಲನೆಯದು ಸಾಮಾನ್ಯಧರ್ಮ. ಎರಡನೆಯದು ಸಂಸ್ಕಾರಗಳು.
  • ಮೊದಲು ಸಾಮಾನ್ಯ ಧರ್ಮಗಳ ಬಗ್ಗೆ ವಿಚಾರ ಮಾಡೋಣ. ಹಿಂದು ಧರ್ಮಕ್ಕೆ ಸೇರಿದ ಪ್ರತಿಯೊಬ್ಬ ವ್ಯಕ್ತಿಯು ಈ ಸಾಮಾನ್ಯ ಧರ್ಮಗಳನ್ನು ಪರಿಪಾಲಿಸಬೇಕು. ಅಹಿಂಸೆ, ಸತ್ಯ, ಅಸ್ತೇಯ (ಕಳ್ಳತನವನ್ನು ಮಾಡದಿರುವುದು), ದಯೆ, ತಿತೀಕ್ಷ (ತಾಳ್ಮೆ), ವಿನಯ, ಇಂದ್ರಿಯ ನಿಗ್ರಹ, ಶಾಂತಿ, ಶೌಚ (ದೇಹ ಸ್ವಚ್ಛತೆ), ತಪಸ್ಸು ಮತ್ತು ಭಕ್ತಿ.
  • ಹಿಂದು ಧರ್ಮಕ್ಕೆ ಸೇರಿದ ಪ್ರತಿಯೊಬ್ಬ ವ್ಯಕ್ತಿಯು ಷೋಡಷ ಸಂಸ್ಕಾರಗಳಿಗೆ ಒಳಗಾಗಬೇಕು. ಒಬ್ಬ ವ್ಯಕ್ತಿ ಹಿಂದು ಎಂದೆನಿಸಿಕೊಳ್ಳಲು ಈ ಸಂಸ್ಕಾರಗಳು ಅಗತ್ಯ. ಒಬ್ಬ ವ್ಯಕ್ತಿಯನ್ನು ಪರಿಶುದ್ಧಗೊಳಿಸಲು, ಸಂಸ್ಕೃತವಂತನನ್ನಾಗಿಸಲು ಈ ೧೬ ಸಂಸ್ಕಾರಗಳು ಬೇಕು. ಇತರ ರಿಲಿಜನ್-ಗಳಲ್ಲಿ ಸಂಸ್ಕಾರಗಳು ಸಾಮಾನ್ಯವಾಗಿ ಶಿಶುಜನನದ ನಂತರ ಆರಂಭವಾಗುತ್ತವೆ. ಹಿಂದು ಧರ್ಮದಲ್ಲಿ ಶಿಶುಜನನವಾಗುವ ಮೊದಲೇ ಅದರ ಸಂಸ್ಕಾರಗಳು ಆರಂಭವಾಗುತ್ತವೆ. ಗರ್ಭಾದಾನ, ಪುಂಸವನ, ಸೀಮಂತೋನ್ನಯನ, ಜಾತಕರ್ಮ, ನಾಮಕರಣ, ನಿಷ್ಕ್ರಮಣ, ಅನ್ನಪ್ರಾಶನ, ಚೂಡಾಕರ್ಮ, ಉಪನಯನ, ಮಹಾನಾಮ್ನಿ, ಮಹಾವ್ರತ, ಉಪನಿಷದ್ವ್ರತ, ಗೋದಾನವ್ರತ, ಸಮಾವರ್ತನ, ವಿವಾಹ ಹಾಗೂ ಅಂತ್ಯೇಷ್ಟಿ. ಇವು ಷೋಡಶ ಸಂಸ್ಕಾರಗಳು.
  • ಇಂದಿನ ದಿನಗಳಲ್ಲಿ ಬ್ರಾಹ್ಮಣರನ್ನು ಒಳಗೊಂಡಂತೆ ಯಾವ ವರ್ಣದವರೂ ಈ ಷೋಡಷ ಸಂಸ್ಕಾರಗಳನ್ನು ಪರಿಪೂರ್ಣವಾಗಿ ಪಾಲಿಸುವುದಿಲ್ಲ. ಆದರೆ ಬಹುಮುಖ್ಯವಾದ ಕೆಲವು ಸಂಸ್ಕಾರಗಳನ್ನು ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಪರಿಪಾಲಿಸುತ್ತಾರೆ. ಬಹುಶಃ ಶೂದ್ರರೂ ಪರಿಪಾಲಿಸುತ್ತಾರೆ ಎಂದು ನನ್ನ ಭಾವನೆ. ಅವು ಜಾತಕರ್ಮ, ನಾಮಕರಣ, ಅನ್ನಪ್ರಾಶನ, ಉಪನಯನ, ವಿವಾಹ ಮತ್ತು ಅಂತ್ಯೇಷ್ಟಿ. ಎಲ್ಲ ಶೂದ್ರರಲ್ಲಿ ನಾಮಕರಣ, ವಿವಾಹ ಹಾಗೂ ಅಂತ್ಯೇಷ್ಟಿ ಸಂಸ್ಕಾರಗಳಾದರೂ ನಡೆಯುತ್ತದೆ ಎಂಬುದು ನನ್ನ ತಿಳಿವಳಿಕೆ.

ಭಾರತದಲ್ಲಿರುವ ಎಲ್ಲರೂ ಹಿಂದುಗಳೆ?

  • ಇಲ್ಲ.
  •  ಭಾರತದಲ್ಲಿ ಮುಸ್ಲೀಮರು ಹಾಗೂ ಕ್ರೈಸ್ತರು ಇದ್ದಾರೆ. ಜೈನ, ಬೌದ್ಧ, ಸಿಖ್ಖ್ ಧರ್ಮಗಳನ್ನು ಇಂಡಿಯನ್ ರಿಲಿಜನ್-ಗಳ ವ್ಯಾಪ್ತಿಯಲ್ಲಿ ಬರುತ್ತವೆಯಾದರೂ ಅವು ತಮ್ಮದೇ ಆದ ಅಸ್ತಿತ್ವವನ್ನು ಹೊಂದಿರುವ ಧರ್ಮಗಳು. ಹಿಂದು ಎನ್ನುವ ಪದವ್ಯಾಪ್ತಿಯಲ್ಲಿ ಬರುವುದಿಲ್ಲ.
  • ಮೇಲಿನ ಐದು ರಿಲಿಜನ್-ಗಳನ್ನು ಬಿಟ್ಟರೆ ಉಳಿದವರು ಈ ದೇಶದಲ್ಲಿ ಭಾರತ ಸಂವಿಧಾನವು ಗುರುತಿಸಿರುವ ಹಾಗೆ ಶೆಡ್ಯೂಲ್ಡ್ ಕ್ಯಾಸ್ಟ್ (೧೬%) ಮತ್ತು ಶೆಡ್ಯೂಲ್ಡ್ ಟ್ರೈಬ್ (೮%) ಜನರಿದ್ದಾರೆ. ಶೆಡ್ಯೂಲ್ಡ್ ಕಾಸ್ಟ್ ಜನರನ್ನು ದಲಿತರೆಂದು ಹಾಗೂ ಶೆಡ್ಯೂಲ್ಡ್ ಟ್ರೈಬ್ ಜನರನ್ನು ಆದಿವಾಸಿಗಳೆಂದು ಪರ್ಯಾಯ ಹೆಸರಿನಿಂದ ಕರೆಯುವುದುಂಟು.
  •  ದಲಿತರು ಹಿಂದುಗಳು. ಚಾತುರ್ವಣದವರಿಂದ ತುಳಿತಕ್ಕೆ ಒಳಗಾದವರು. ಅವಮಾನಿತರದವರು. ಇದರಲ್ಲಿ ಯಾವುದೇ ಅನುಮಾನವಿಲ್ಲ. ಹಿಂದು ಧರ್ಮದಲ್ಲಿ ಅವಮಾನಿತರಾಗಿ ಬಾಳುವುದಕ್ಕಿಂತ ಸ್ವಾಭಿಮಾನದಿಂದ ಬದುಕನ್ನು ನಡೆಸಲು ದಲಿತರು ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಬೌದ್ಧ ಧರ್ಮವನ್ನು ಸೇರಿದ್ದು ಒಂದು ಐತಿಹಾಸಿಕ ಸತ್ಯ. ಇಂದಿಗೂ ಸಹಾ ಆಗಾಗ್ಗೆ ದಲಿತರು ಬೌದ್ಧ ಧರ್ಮವನ್ನು ಸೇರುವುದನ್ನು ನಾವು ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ.
  • ೨೦೦೧ ರ ಜನಗಣತಿಯ ಅನ್ವಯ ೮% ರಷ್ಟಿರುವ ಆದಿವಾಸಿಗಳು ಹಿಂದುಗಳೇ ಎನ್ನುವ ಪ್ರಶ್ನೆ ಏಳುತ್ತದೆ. ಶೆಡ್ಯೂಲ್ಡ್ ಟ್ರೈಬ್ ನಿಖರವಾಗಿ ೬೪೫ ಆದಿವಾಸಿಗಳನ್ನು ಗುರುತಿಸುತ್ತದೆ. ಮುಖ್ಯವಾದ ಕೆಲವು ಆದಿವಾಸಿಗಳನ್ನು ಇಲ್ಲಿ ಸ್ಮರಿಸಬಹುದು.  ಸಂತಾಲರು, ಗೊಂಡರು, ಚೆಂಚುಗಳು, ಚಕ್ಮ, ಕುಕಿ, ಬೋಡೊ, ಬಂಜಾರ, ಕುಣಬಿ, ಭಿಲ್ಲರು, ಹಕ್ಕಿಪಿಕ್ಕಿ, ಹಸಲರು, ಇರುಳರು, ಜೇನು ಕುರುಬರು, ಕಾಡು ಕುರುಬರು, ಕುಡಿಯರು, ಸಿದ್ಧಿಗಳು, ತೋಡರು ಇತ್ಯಾದಿ.
  • ಈ ಮೂಲವಾಸಿಗಳು ಕರ್ನಾಟಕ, ಕೇರಳ, ಒರಿಸ್ಸ, ಮಧ್ಯಪ್ರದೇಶ, ಛತ್ತೀಸ್ ಘಡ, ರಾಜಸ್ತಾನ, ಗುಜರಾತ್, ಮಹಾರಾಷ್ಟ್ರ್ತ, ಆಂಧ್ರಪ್ರದೇಶ, ಬಿಹಾರ, ಝಾರ್ಖಂಡ್, ಪಶ್ಚಿಮ ಬಂಗಾಳ, ಮಿಜ಼ೋರಾಮ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹರಡಿದ್ದಾರೆ.
  • ಎಲ್ಲ ಆದಿವಾಸಿಗಳು ಹಿಂದುಗಳಲ್ಲ. ಅನೇಕ ಆದಿವಾಸಿಗಳು ತಮ್ಮದೇ ಆದ ದೇವರು, ಒಳ್ಳೆಯ ಶಕ್ತಿಗಳು, ದುಷ್ಟ ಶಕ್ತಿಗಳು, ನಂಬಿಕೆಗಳು, ಆಚರಣೆಗಳು, ಸಂಪ್ರದಾಯಗಳನ್ನು ಹೊಂದಿದ್ದಾರೆ. ಇವೆಲ್ಲವನ್ನು ಇಲ್ಲಿ ವಿಸ್ತೃತವಾಗಿ ಚರ್ಚಿಸುವುದು ಅಸಾಧ್ಯ.

ಹಿಂದು ಧರ್ಮದಲ್ಲಿರುವ ಕಪ್ಪು ಚುಕ್ಕೆಗಳು:

  • ಹಿಂದು ಧರ್ಮ ಎಷ್ಟೇ ಪ್ರಾಚೀನವಾಗಿರಲಿ, ಹಿರಿದಾಗಿರಲಿ, ಉದಾತ್ತವಾಗಿರಲಿ ಅದರಲ್ಲೂ ಕಪ್ಪುಚುಕ್ಕೆಗಳಿವೆ.
  • ಮೊದಲನೆಯದು ವರ್ಣಪದ್ಧತಿ. ವರ್ಣಪದ್ಧತಿಯ ಉಗಮಕ್ಕೆ ಏನೇ ಕಾರಣವಿರಲಿ, ಅದು ಇಂದಿನ ಜಾತಿ ವ್ಯವಸ್ಥೆಗೆ ತಳಪಾಯವಾಗಿದೆ. ಜಾತಿ ಪದ್ಧತಿ ಒಂದು ಕ್ರೂರ ವ್ಯವಸ್ಥೆ. ಇದರೊಡನೆ ತಳುಕು ಹಾಕಿಕೊಂಡಿರುವ ಅಸ್ಪೃಶ್ಯತೆ ಅಮಾನವೀಯ.
  • ವೇದಕಾಲದಲ್ಲಿ ಸ್ತ್ರೀ-ಪುರುಷರಿಗೆ ಸಮಾನ ಅವಕಾಶವಿತ್ತು. ಹೆಣ್ಣು ಮಕ್ಕಳಿಗೂ ಷೋಡಷ ಸಂಸ್ಕಾರಗಳನ್ನು ನಡೆಸುತ್ತಿದ್ದರು. ಅವರು ಯಜ್ಞೋಪವೀತವನ್ನು ಧರಿಸುತ್ತಿದ್ದರು. ಸಂಧ್ಯಾವಂದನಾದಿಗಳಲ್ಲಿ ಪಾಲುಗೊಳ್ಳುತ್ತಿದ್ದರು. ಯಜ್ಞಯಾಗಾದಿಗಳನ್ನು ಮಾಡುತ್ತಿದ್ದರು. ಗುರುಕುಲಗಳನ್ನು ನಡೆಸುತ್ತಿದ್ದರು. ಮಂತ್ರದ್ರಷ್ಟಾರರಾಗುತ್ತಿದ್ದರು. ಇವೆಲ್ಲಕ್ಕೂ ಆಧಾರ ವೇದಗಳಲ್ಲಿ ದೊರೆಯುತ್ತದೆ. ಮುಂದಿನ ದಿನಗಳಲ್ಲಿ ಸ್ತ್ರೀ ತನ್ನ ಎಲ್ಲ ಅವಕಾಶಗಳಲ್ಲಿ ಕ್ರಮೇಣ ಕಳೆದುಕೊಳ್ಳುತ್ತಾಳೆ. ಕೇವಲ ಭೋಗವಸ್ತುವಾಗಿಬಿಡುತ್ತಾಳೆ. ಪುರುಷನಿಗೆ ಅದರಲ್ಲಿಯೂ ಬ್ರಾಹ್ಮಣ ಪುರುಷನಿಗೆ ಸರಿಸಮನಾಗಿ ನಿಲ್ಲುವ ಅವಕಾಶವನ್ನು ಕಳೆದುಕೊಳ್ಳುತ್ತಾಳೆ. ಸಂಸ್ಕೃತ ಭಾಷೆಯನ್ನು ಪುರುಷರು ಅದರಲ್ಲಿಯೂ ಬ್ರಾಹ್ಮಣ-ಕ್ಷತ್ರಿಯನಂತಹ ಪುರುಷರು ಮಾತ್ರ ಆಡಬೇಕಂತೆ. ಕಾಲೀದಾಸನ ಅಭಿಜ್ಞಾನ ಶಾಕುಂತಲವನ್ನು ನೋಡಿ. ದುಶ್ಯಂತ, ಕಣ್ವ ಮುಂತಾದವರು ಸಂಸ್ಕೃತ ಭಾಷೆಯಲ್ಲಿ ಮಾತನಾಡಿದರೆ, ಶಾಕುಂತಲೆಯಂತಹ ಸ್ತ್ರೀ ಪಾತ್ರಗಳು ಪ್ರಾಕೃತದಲ್ಲಿ ಮಾತನಾಡುತ್ತವೆ. 
  • ಹಿಂದು ಧರ್ಮದಲ್ಲಿ ಪುರೋಹಿತಶಾಹಿ ವರ್ಗವು ನಿರಂಕುಶವಾಗಿ ವರ್ತಿಸುವುದನ್ನು ನೋಡಬಹುದು.
  • ವೇದಕಾಲದಲ್ಲಿ ಒಬ್ಬ ವ್ಯಕ್ತಿ ತನ್ನ ಬುದ್ಧಿಶಕ್ತಿ ಹಾಗೂ ಅಭಿರುಚಿಯನ್ನು ಆಧರಿಸಿ ವೃತ್ತಿಯನ್ನು ನಡೆಸಲು ಅವಕಾಶವಿತ್ತು. ಪುರುಷಸೂಕ್ತಕಾಲದ ನಂತರ ಜಾತಿ ಹಾಗೂ ವೃತ್ತಿಗೆ ಬಲವಾದ ಗಂಟು ಬಿತ್ತು. ಕಮ್ಮಾರನ ಮಗ ಕಮ್ಮಾರನಾಗುವ ಅನಿವಾರ್ಯತೆ ಉಂಟಾಯಿತು. ಶಂಭೂಕ ಎನ್ನುವ ಶೂದ್ರನು ಸಶರೀರಿಯಾಗಿ ಸ್ವರ್ಗಕ್ಕೆ ಹೋಗುವ ಇಚ್ಛೆಯಿಂದ ತಪಸ್ಸು ಮಾಡುವುದು ರಾಮನಿಗೆ, ರಾಮನ ಕಾಲದ ಪುರೋಹಿತ ವರ್ಗಕ್ಕೆ ಪಥ್ಯವಾಗಲಿಲ್ಲ. ಶಂಭೂಕನನ್ನು ರಾಮ ಕೊಲ್ಲುತ್ತಾನೆ. ಮನುಸ್ಮೃತಿ ಮುಂತಾದ ಗ್ರಂಥಗಳಲ್ಲಿ ವೇದವನ್ನು ಕಲಿಯಬಯಸುವವರನ್ನು ಬಿಡಿ, ವೇದವನ್ನು ಕೇಳುವ ಶೂದ್ರರಿಗೆ ಯಾವ ರೀತಿಯ ಕಠಿಣ ಶಿಕ್ಷೆಗಳನ್ನು ನೀಡುತ್ತಿದ್ದರು ಎಂಬುದರ ವಿವರಣೆಯಿದೆ. ಇದು ವ್ಯಕ್ತಿ ಸ್ವಾತಂತ್ರ್ಯದ ನೇರ ಹರಣ. ಒಬ್ಬ ವ್ಯಕ್ತಿ ತನ್ನ ಬುದ್ಧಿಶಕ್ತಿ ಹಾಗೂ ಅಭಿರುಚಿಗೆ ಅನುಗುಣವಾಗಿ ವಿದ್ಯೆಯನ್ನು ಕಲಿಯುವ ಅವಕಾಶವನ್ನು ಕಳೆದುಕೊಂಡದ್ದು ಒಂದು ದೊಡ್ಡ ದುರಂತ.
  • ವೇದಕಾಲದ ಭಾಷೆ ಪ್ರಾಚೀನ ಸಂಸ್ಕೃತ. ನಂತರ ಸಂಸ್ಕೃತ ಪರಿಷ್ಕಾರಕ್ಕೆ ಒಳಗಾಗಿ ಇಂದಿನ ರೂಪವನ್ನು ತಳೆಯಿತು. ಎಲ್ಲ ಅರಿವು ಸಂಸ್ಕೃತದಲ್ಲಿತ್ತು. ಸಂಸ್ಕೃತವನ್ನು ಕಲಿಯುವ ಅವಕಾಶ ದ್ವಿಜರಿಗೆ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ಮಾತ್ರವಿತ್ತು. ಅರಿವು ಸಂಸ್ಕೃತದಲ್ಲಿ ಮಾತ್ರ ಸಂಗ್ರಹವಾಯಿತು. ಶೂದ್ರರಿಗೆ ಅರಿವನ್ನು ಗಳಿಸುವ ಅವಕಾಶವೇ ದೊರೆಯಲಿಲ್ಲ. ಗಳಿಸುವ ಸಾಧ್ಯತೆಯೇ ಇರಲಿಲ್ಲ. ಹಾಗಾಗಿ ಪುರೋಹಿತರು ಏನು ಹೇಳುತ್ತಾರೋ ಅದನ್ನು ಕಣ್ಣು ಮುಚ್ಚಿ ಪರಿಪಾಲಿಸಬೇಕಾಗುವ ದುರ್ಬರ ಸ್ಥಿತಿ ಉಂಟಾಯಿತು.
  • ಈ ದುರ್ಬರ ಪರಿಸ್ಥಿತಿಯು ಇಂದಿಗೂ ಹಾಗೆಯೇ ಮುಂದುವರೆಯುತ್ತಿತ್ತೇನೋ! ಮ್ಯಾಕ್ಸ್ ಮುಲ್ಲರ್ ಎಂಬ ಜರ್ಮನ್ ಪಂಡಿತ ವೇದಗಳನ್ನು ಜರ್ಮನ್ ಹಾಗೂ ಇಂಗ್ಲೀಷ್ ಭಾಷೆಗಳಿಗೆ ಅನುವಾದವಾದಿಸಿದನು. ಆಗ ಬ್ರಾಹ್ಮಣರಲ್ಲದ ಹಿಂದುಗಳು ವೇದಗಳಲ್ಲಿ ಏನಿದೆ ಎಂಬುದನ್ನು ಮೊದಲ ಬಾರಿಗೆ ತಿಳಿದುಕೊಳ್ಳಲು ಸಾಧ್ಯವಾಯಿತು.
  • ಮ್ಯಾಕ್ಸ್ ಮುಲ್ಲರ್ ನಮಗೆ ಉಪಕಾರವನ್ನು ಮಾಡಿದ ಎಂದು ಮೇಲು ನೋಟಕ್ಕೆ ಕಾಣುತ್ತದೆ. ಆದರೆ ಆತನು ಹಾಗೂ ಆತನಂತಹವರು ಹಿಂದು ಧರ್ಮವನ್ನು ರಿಲಿಜನ್ ಮಟ್ಟಕ್ಕೆ ಇಳಿಸಿಬಿಟ್ಟರು. ಹಿಂದು ಧರ್ಮವನ್ನು ಕ್ರೈಸ್ತ ಧರ್ಮದ ಮಟ್ಟದಲ್ಲಿ ತುಲನೆ ಮಾಡಲಾರಂಭಿಸಿದರು. ಎಲ್ಲವನ್ನು ತಮ್ಮ ಹಿನ್ನೆಲೆಯಲ್ಲಿ ನೋಡಲಾರಂಭಿಸಿದರು.
  • ಭಾರತೀಯರೂ ಸಹಾ ಮ್ಯಾಕ್ಸ್ ಮುಲ್ಲರ್ ಮುಂತಾದವರು ಹೇಳಿದ ರೀತಿಯಲ್ಲಿಯೇ ಚಿಂತಿಸಲಾರಂಭಿಸಿದರು. ಸ್ವತಂತ್ರವಾಗಿ ಹುಟ್ಟಿ ಬೆಳೆದ ಹಿಂದು ಧರ್ಮವನ್ನು, ಸ್ವತಂತ್ರವಾಗಿಯೇ ಆಲೋಚಿಸಬೇಕಿತ್ತು. ಈವತ್ತಿಗೂ ಸಹಾ ನಮ್ಮಲ್ಲಿ ಬಹುಪಾಲು ಜನರು ಎರವಲು ಅರಿವಿನ ಹಿನ್ನೆಲೆಯಲ್ಲಿ ಹಿಂದು ಧರ್ಮವನ್ನು ವಿಶ್ಲೇಷಿಸುತ್ತಾ ಹೋಗುತ್ತಾರೆ. ಇದು ನಮ್ಮ ದುರಂತ. ಸಂಸ್ಕೃತವನ್ನು ಕಲಿತು ವೇದಗಳಲ್ಲಿ ಏನಿದೆ, ಉಪನಿಷತ್ತುಗಳು ಏನು ಹೇಳುತ್ತವೆ ಎಂದು ಸ್ವತಂತ್ರವಾಗಿ ಚಿಂತಿಸುವ ಪ್ರಯತ್ನವನ್ನು ಮಾಡುತ್ತಿಲ್ಲ. ಸಂಸ್ಕೃತದ ಯಾವುದೇ ಗ್ರಂಥವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ನಾವು ಅವುಗಳ ಇಂಗ್ಲೀಷ್ ಅನುವಾದಗಳನ್ನು ನೋಡುತ್ತೇನೆ. ಕೆಲವು ಅನುವಾದಗಳು ಇತ್ತೀಚಿನ ದಿನಗಳಲ್ಲಿ ಹಿಂದಿಯಲ್ಲಿ ದೊರೆಯುತ್ತವೆ ಎನ್ನುವುದು ನಿಜ. ಆದರೂ ಸಹಾ, ನಾವೂ ಸಂಸ್ಕೃತ ಮೂಲವನ್ನು ಓದಿಯೇ ಅರ್ಥ ಮಾಡಿಕೊಳ್ಳುವುದು ಸೂಕ್ತ.
  • ನಮ್ಮಲ್ಲಿ ಬಹಳಷ್ಟು ಜನರು ಸಂಸ್ಕೃತವು ‘ಬೊಮ್ಮನ್ ಭಾಷೆ, ಅದನ್ನೇನು ಕಲಿಯುವುದು ಎಂದು ಉಛಾಯಿಸುವುದುಂಟು. ಸಂಸ್ಕೃತವನ್ನು ಒಂದು ಶ್ರೀಮಂತ ಭಾಷೆ (ಕಂಪ್ಯೂಟರ್ ಲಾಜಿಕ್ಕಿಗೆ ಸಂಸ್ಕೃತವು ಹೇಳಿ ಮಾಡಿಸಿದಂತಹ ಭಾಷೆ.) ಎನ್ನುವ ದೃಷ್ಟಿಯಿಂದಲಾದರೂ ಕಲಿಯಬೇಕಾಗುತ್ತದೆ. ನಾನೂ ಸಂಸ್ಕೃತವನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ. ಆದರೆ ಶಾಸ್ತ್ರೀಯವಾಗಿ ಗುರುಮುಖೇನ ಕಲಿಯಲು ಆಗಲಿಲ್ಲವಲ್ಲ ಎಂಬ ವ್ಯಥೆಯಿದೆ.
  • ಬ್ರಾಹ್ಮಣರು ಕೇವಲ ಮನುಷ್ಯರು. ಜೀವಜಗತ್ತಿನ ಅಲಿಖಿತ ನಿಯಮಗಳಿಗೆ ಒಳಗಾಗಿರುವವರು. ಹಾಗಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಅಂದು ಲಭ್ಯವಿದ್ದ ಅರಿವನ್ನು ಕೇವಲ ಸಂಸ್ಕೃತದಲ್ಲಿ ಮಾತ್ರ ಉಳಿಸಿಕೊಂಡರು. ಸಂಸ್ಕೃತದಲ್ಲಿದ್ದ ಅರಿವನ್ನು ಇತರರು ಕಲಿಯದಂತೆ ನೋಡಿಕೊಂಡರು.

ಹಿಂದು ಧರ್ಮ ಸದಾ ಹರಿಯುತ್ತಿರುವ ನೀರು:

  • ಹಿಂದು ಧರ್ಮವು ಸದಾ ಅಗ್ನಿಪರೀಕ್ಷೆಗೆ ಒಳಗಾಗುತ್ತಲೇ ಬಂದಿದೆ. ಹಿಂದು ಧರ್ಮವನ್ನು ಟೀಕಿಸುವವರು ಹಿಂದೂ ಇದ್ದರು. ಇಂದಿಗೂ ಇದ್ದಾರೆ. ಮುಂದೆಯೂ ಇರುತ್ತಾರೆ. ಈ ಅಗ್ನಿಪರೀಕ್ಷೆಯು ಹಿಂದು ಧರ್ಮದ ಒಳಗಡೆಯೇ ಇದ್ದವರಿಂದಲೂ ನಡೆಯಿತು. ಹೊರಗಡೆಯವರಿಂದಲೂ ನಡೆಯಿತು. ಇದಕ್ಕೆ ಪುರಾವೆಯಾಗಿ ಹಿಂದು ಧರ್ಮ ಬೆಳೆದುಬಂದ ದಾರಿಯ ಪಕ್ಷಿನೋಟವನ್ನು ನೋಡಬಹುದು.
  • ವೇದಗಳ ಕಾಲದಲ್ಲಿ ಅತ್ಯಂತ ಸರಳ, ನಿಖರ ಹಾಗೂ ನೇರ ಬದುಕನ್ನು ನಡೆಸುತ್ತಿದ್ದ ಸಿಂಧೂ-ಸರಸ್ವತಿ ನದಿ ತೀರದ ಜನರ ಬದುಕು ಬ್ರಾಹ್ಮಣಗಳ ಕಾಲಕ್ಕೆ ಕೇವಲ ಯಜ್ಞ-ಬಲಿಗಳ ಮಟ್ಟಕ್ಕೆ ಇಳಿಯಿತು.
  • ಯಜ್ಞ-ಬಲಿಯನ್ನು ಸಾಮಾನ್ಯ ಜನರನ್ನು ಬಿಡಿ, ಅನೇಕ ಹಿಂದುಗಳು ಪುರಸ್ಕರಿಸಲಿಲ್ಲ. ಹಾಗಾಗಿ ಅವರು ಆತ್ಮ-ಪರಮಾತ್ಮಗಳ ಬಗ್ಗೆ ಹೇಳಿದರು. ನಮ್ಮ ಬ್ರಹ್ಮಾಂಡವು ಯಾವ ಮೂಲವಸ್ತುಗಳಿಂದ ನಿರ್ಮಿತವಾಗಿದೆಯೋ, ಆ ಮೂಲವಸ್ತುಗಳಿಂದಲೇ ನಮ್ಮ ದೇಹವೂ ನಿರ್ಮಿತವಾಗಿದೆ. ನಮ್ಮ ದೇಹದ ಕೆಲಸ ಕಾರ್ಯಗಳು ಯಾವ ಶಕ್ತಿಯಿಂದ ನಡೆಯುತ್ತವೆಯೋ (ಆತ್ಮ), ಅಂತಹುದೇ ಶಕ್ತಿಯಿಂದ ಈ ಬ್ರಹ್ಮಾಂಡದ ವ್ಯಾಪಾರಗಳು ನಡೆಯುತ್ತವೆ ಎಂದರು (ಪರಮಾತ್ಮ). ಅಂದರೆ ನಾವು ಬೇರೆಯಲ್ಲ. ಬ್ರಹ್ಮಾಂಡವನ್ನು ನಡೆಸುವ ಶಕ್ತಿಯು ಬೇರೆಯಲ್ಲ. ಎರಡೂ ಒಂದೇ ಎಂದು ಸಾರಿದರು. ಅಹಂ ಬ್ರಹ್ಮಾಸ್ಮಿ ಎಂದರು.
  • ನಿರಾಕಾರ ಪರಬ್ರಹ್ಮನನ್ನು ಕಲ್ಪಿಸಿಕೊಂಡು ಚಿಂತಿಸುವುದು ಓರ್ವ ಸಾಮಾನ್ಯ ಮನುಷ್ಯನಿಗೆ ಅಸಾಧ್ಯ. ಹಾಗಾಗಿ ಭಗವದ್ಗೀತೆಯ ಕಾಲಕ್ಕೆ (ಭಗವದ್ಗೀತೆಯನ್ನು ಕೃಷ್ಣ ರಚಿಸಿದ, ಮಹಾಭಾರತದ ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಬೋಧಿಸಿದ ಎಂಬುದು ಸಾಂಪ್ರದಾಯಿಕ ನಂಬಿಕೆ. ಬಹುಶಃ ಹಾಗೆ ಆಗಿರಲಾರದು ಎಂಬುದು ನನ್ನ ತರ್ಕ. ಹಲವು ಋಷಿಗಳು ಭಗವದ್ಗೀತೆಯನ್ನು ರಚಿಸಿದ್ದು, ಅವರು ಅದನ್ನು ಕೃಷ್ಣನಿಗೆ ಆರೋಪಿಸಿರಬಹುದು) ಹಿಂದು ಧರ್ಮ ಪರಿಷ್ಕಾರವಾಯಿತು. ಕೃಷ್ಣನು ಮೋಕ್ಷವನ್ನು ಪಡೆಯಲು ಜ್ಞಾನಮಾರ್ಗವು ಇರುವ ಹಾಗೆ, ಕರ್ಮಮಾರ್ಗವಿದೆ, ಭಕ್ತಿಮಾರ್ಗವಿದೆ ಎಂದು ಮೂರು ವಿಧಾನಗಳನ್ನು ಸಮೀಕರಿಸಿದನು. ಮೂರರಲ್ಲಿ ಯಾವ ಮಾರ್ಗವನ್ನು ಬೇಕಾದರೂ ಅನುಸರಿಸಬಹುದು ಎಂದನು. ಜನಸಾಮಾನ್ಯರು ತಮ್ಮ ಬುದ್ಧಿಶಕ್ತಿ ಹಾಗೂ ತಿಳಿವಳಿಕೆಗೆ ಅನುಗುಣವಾಗಿ ಈ ಮೂರು ಮಾರ್ಗಗಳಲ್ಲಿ ತಮಗೆ ಸೂಕ್ತವಾದದ್ದನ್ನು ಪರಿಪಾಲಿಸಲು ಆರಂಭಿಸಿದರು.
  • ಹಿಂದು ಧರ್ಮದ ಪರಿಷ್ಕಾರವು ಮಹಾವೀರ ಹಾಗೂ ಬುದ್ಧರ ಮೂಲಕವೂ ನಡೆಯಿತು. ಇವರು ಹಿಂದು ಧರ್ಮದಲ್ಲಿ ಸಂಕೀರ್ಣ ಪ್ರಕಲ್ಪನೆಗಳನ್ನು ತಿರಸ್ಕರಿಸಿದರು. ಮುಖ್ಯವಾಗಿ ದೇವರು ಎಂಬ ಪ್ರಕಲ್ಪನೆಯನ್ನು ನಿರಾಕರಿಸಿದರು. ಪ್ರತಿಯೊಬ್ಬ ಮನುಷ್ಯನು ಪರಿಪಾಲಿಸಬೇಕಾದ ಸರಳ ಸೂತ್ರಗಳನ್ನು ಪ್ರತಿಪಾದಿಸಿದರು. ಉದಾ: ಆಸೆಯೇ ದುಃಖಕ್ಕೆ ಮೂಲ ಎಂದನು ಬುದ್ಧ ಭಗವಾನ್. ಜೈನ ಧರ್ಮವು ಅಹಿಂಸೆಯನ್ನು ಪ್ರತಿಪಾದಿಸಿತು. ಇವು ನಿಜಕ್ಕೂ ಆಕರ್ಶಕವಾಗಿತ್ತು. ಅಲ್ಲಿಯವರೆಗೂ ಮಾಂಸ, ಮೀನನ್ನು ತಿನ್ನುತ್ತಿದ್ದ ಬ್ರಾಹ್ಮಣರು, ಜೈನಧರ್ಮಗಳ ಹಿನ್ನೆಲೆಯಲ್ಲಿ ಪರಿಪೂರ್ಣ ಸಸ್ಯಾಹಾರಿಗಳಾದರು. ಜೈನ-ಬೌದ್ಧ ಧರ್ಮದ ಬೋಧನೆಗಳು ಹಿಂದುಗಳ ಮೇಲೆ ಅಪಾರ ಪ್ರಭಾವ ಬೀರಿತು. ಈ ಎರಡು ಧರ್ಮಗಳು ಎಷ್ಟು ಶಕ್ತಿಶಾಲಿಗಳಾಗಿದ್ದವು ಎಂದರೆ, ಹಿಂದುಧರ್ಮವು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಮಟ್ಟಕ್ಕೆ ಬಂದಿತು.
  • ಶಂಕರಾಚಾರ್ಯರು ಬೇರನ್ನು ಕಳೆದುಕೊಳ್ಳುತ್ತಿದ್ದ ಹಿಂದುಧರ್ಮಕ್ಕೆ ಭದ್ರವಾದ ಬುನಾದಿಯನ್ನು ಹಾಕಿದರು. ಆನಂತರ ಬಂದ ರಾಮಾನುಜ, ಮಧ್ವರು ಹಿಂದುಧರ್ಮವನ್ನು ಸ್ಥಿರಗೊಳಿಸಿದರು.
  • ಮುಸ್ಲೀಮರ ಆಕ್ರಮಣ ನಡೆಯಿತು. ಹಿಂದುಧರ್ಮವು ಇಸ್ಲಾಂ ಧರ್ಮದ ಹೊಡೆತಕ್ಕೆ ತತ್ತರಿಸಿತು. ಕತ್ತಿಯ ಮೊನೆಯಲ್ಲಿ ಅಸಂಖ್ಯ ಹಿಂದುಗಳ ಮಾತಾಂತರ ನಡೆಯಿತು.
  • ೧೨ನೆಯ ಶತಮಾನದಲ್ಲಿ ಬಸವಣ್ಣನು ಹುಟ್ಟಿದನು. ಜಡ್ಡುಗಟ್ಟಿದ್ದ ಹಿಂದುಧರ್ಮ ಹಾಗೂ ಅದರಲ್ಲಿ ಭದ್ರವಾಗಿ ಬೇರು ಬಿಟ್ಟಿದ್ದ ಪುರೋಹಿತಶಾಹಿಯನ್ನು ಧಿಕ್ಕರಿಸಿದನು. ಬಸವಣ್ಣನ ಪ್ರಯತ್ನವನ್ನು ಮತ್ತೇ ಪುರೋಹಿತಶಾಹಿಗಳು ಹೇಗೆ ಧ್ವಂಸ ಮಾಡಿದರು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಬಸವಣ್ಣನ ಕಾಲದಲ್ಲಿ ರೂಪುಗೊಂಡ ವಚನ ಸಾಹಿತ್ಯವು ಶ್ರೀಸಾಮಾನ್ಯನ ಬದುಕಿಗೆ ಅಗತ್ಯವಾದ ಮಾರ್ಗದರ್ಶನವನ್ನು ಅತ್ಯಂತ ಸರಳವಾಗಿ, ಎಲ್ಲರಿಗೂ ತಿಳಿಯುವಂತಹ ಅಚ್ಚ ಕನ್ನಡದಲ್ಲಿ ನೀಡಿತು. ಇದು ಒಂದು ದೊಡ್ಡ ಕ್ರಾಂತೀಕಾರಕ ಬೆಳವಣಿಗೆ. ಹಿಂದು ಧರ್ಮ-ಸಂಸ್ಕೃತಭಾಷೆಯಲ್ಲಿ ಹೂತುಹೋಗಿದ್ದ ಕಾರಣ, ಜನಸಾಮನ್ಯರು ವಚನಗಳನ್ನು ಮುಕ್ತ ಹೃದಯದಿಂದ ಸ್ವಾಗತಿಸಿದರು.
  • ಪುರಂದರದಾಸರು ಹಾಗೂ ದಾಸಪರಂಪರೆಯು ಭಕ್ತಿಮಾರ್ಗಕ್ಕೆ ಭದ್ರವಾದ ಬುನಾದಿಯನ್ನು ಹಾಕಿತು. ಭಕ್ತಿಮಾರ್ಗವು ಆಳವಾಗಿ ಬೇರುಬಿಡಲು ಸಹಾಯವಾಯಿತು. ಇದೇ ವೇಳೆಗೆ ಭಾರತದ ವಿವಿಧ ಭಾಗಗಳಲ್ಲಿ ಭಕ್ತಿಮಾರ್ಗ ಹೆಚ್ಚು ಜನರನ್ನು ಆಕರ್ಷಿಸಿತು. ತುಲಸೀದಾಸ್, ಕಬೀರ್, ಮೀರಾ, ತುಕಾರಾಮ್, ಜ್ಞಾನೇಶ್ವರ್ ಮುಂತಾದವರು ತಮ್ಮ ರಚನೆ-ಹಾಡುಗಾರಿಕೆಯ ಮೂಲಕ ಹಿಂದು ಧರ್ಮಕ್ಕೆ ಹೊಸ ಆಯಾಮವನ್ನು ನೀಡಿದರು.
  • ಬ್ರಿಟೀಷರು ಭಾರತದಲ್ಲಿದ್ದ ಹಿಂದು-ಮುಸ್ಲೀಮರನ್ನು ಒಡೆದು ಆಳಲು ಹುನ್ನಾರವನ್ನು ಹೂಡಿದರು. ಸದ್ದಿಲ್ಲದಂತೆ ಕ್ರಿಶ್ಚಿಯಾನಿಟಿಯನ್ನು ಬಿತ್ತಿ ಬೆಳೆದರು (ಕ್ರಿಶ್ಚಿಯಾನಿಟಿಯು ಕ್ರಿಸ್ತನ ಮರಣ ಹೊಂದಿದ ಕೇಲವೇ ವರ್ಷಗಳಲ್ಲಿ, ಆತನ ೧೨ ಶಿಷ್ಯರಲ್ಲಿ ಒಬ್ಬನಾಗಿದ್ದ ಡೌಟಿಂಗ್ ಥಾಮಸ್ ಎಂದು ಪ್ರಸಿದ್ಧನಾಗಿದ್ದ ಸೈಂಟ್ ಥಾಮಸನ ಮೂಲಕ ಭಾರತದ ಕೊಡಂಗಲ್ಲೂರಿನಲ್ಲಿ ಹೆಜ್ಜೆಯಿಟ್ಟಿತು. ಈತ ಕ್ರಿ.ಶ.೫೨ರಲ್ಲಿ ಮೊದಲ ಚರ್ಚನ್ನು ಕಟ್ಟುತ್ತಾನೆ) ಈ ಹಿನ್ನೆಲೆಯಲ್ಲಿ ಹಿಂದು ಧರ್ಮದ ಪರಿಷ್ಕಾರವಾಗಬೇಕಾಯಿತು. ಅನೇಕ ಅರ್ಥಹೀನ ಆಚರಣೆಗಳನ್ನು ರಾಜಾರಾಮ ಮೋಹನ್ ರಾಯ್, ದಯಾನಂದ ಸರಸ್ವತಿ, ಮಹಾದೇವ ಗೋವಿಂದ ರಾನಡೆ, ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಮುಂತಾದವರು ನಿಲ್ಲಿಸಿದರು. ಆರ್ಯಸಮಾಜವು ಹಿಂದು ಧರ್ಮವನ್ನು ಪರಿಷ್ಕರಿಸಿತು.
  • ಹಿಂದು ಧರ್ಮವು ಇನ್ನೂ ಪರಿಷ್ಕಾರವಾಗಬೇಕಿದೆ. ಇದು ನನ್ನ ಸ್ಪಷ್ಟ ನಿಲುವು. ಇದನ್ನು ನನ್ನ ಹಿಂದಿನ ಲೇಖನದಲ್ಲಿಯೂ ಹೇಳಿದ್ದೇನೆ.

ಹಿಂದು ಧರ್ಮದ ಪರಿಷ್ಕಾರ ಸಾಧ್ಯವೆ?

  • ಸಾಧ್ಯ.
  • ಸ್ವಾಮಿ ವಿವೇಕಾನಂದರು ಪ್ರತಿಯೊಬ್ಬ ಹಿಂದುವು ‘ಕಬ್ಬಿಣದಂತಹ ಸ್ನಾಯು, ಉಕ್ಕಿನಂತಹ ನರಗಳನ್ನು ಬೆಳೆಸಿಕೊಳ್ಳಲು ಕರೆಯಿತ್ತರು. ಇದನ್ನು ಎಲ್ಲ ಹಿಂದುಗಳು ಮೊದಲು ಮಾಡಬೇಕು.
  • ಹಿಂದು ಧರ್ಮದಲ್ಲಿರುವ ಆಚಾರ-ವಿಚಾರಗಳನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಬೇಕು. ಮಾನವೀಯತೆಯ ಹಿನ್ನೆಲೆಯಲ್ಲಿ, ಹಿತ-ಮಿತ ಪ್ರಮಾಣದ, ಎಲ್ಲರಿಗೂ ಅರ್ಥವಾಗುವಂತಹ ಹಾಗೂ ಪರಿಪಾಲಿಸಲು ಸಾಧ್ಯವಾಗುವಂತಹ ಮಾರ್ಗದರ್ಶನಗಳನ್ನು ರೂಪಿಸಬೇಕು. ಮುಖ್ಯವಾಗಿ ಸಾಮಾನ್ಯ ಧರ್ಮ ಹಾಗೂ ಸಂಸ್ಕಾರಗಳಲ್ಲಿ ಆಗಬೇಕು. ಅವನ್ನು ಪ್ರತಿಯೊಬ್ಬ ಹಿಂದು ಪಾಲಿಸುವಂತಿರಬೇಕು. ಈ ಕಾರ್ಯವನ್ನು ಸಮಸ್ತ ಮಠಾಧೀಶರು, ಸಂಸ್ಕೃತ ಪಂಡಿತರು ಹಾಗೂ ಹಿಂದು ನಾಯಕರು ಒಟ್ಟಿಗೆ ಸೇರಿ ಮಾಡಬೇಕು. ಇಂದು ಲಭ್ಯವಿರುವ ಮಾಧ್ಯಮಗಳನ್ನು ಬಳಸಿಕೊಂಡು, ನವ ಹಿಂದು ಧರ್ಮವನ್ನು ಪ್ರಚಾರಕ್ಕೆ ತರಬೇಕು.
  • ಭಾರತ ಸರ್ಕಾರವು ಯಾವ ವ್ಯಕ್ತಿಯು, ಯಾವ ಉದ್ಯೋಗವನ್ನು ಬೇಕಾದರೂ ಮಾಡಬಹುದು ಎನ್ನುತ್ತದೆ. ಹಾಗಾಗಿ ವೃತ್ತಿ ಆಧಾರಿತ ಜಾತಿ ಪದ್ಧತಿಯು ಇಂದು ಅಸ್ತಿತ್ವದಲ್ಲಿಲ್ಲ. ಆದರೆ ಜಾತಿ ಪದ್ಧತಿಯು ಇಂದಿಗೂ ಜೀವಂತವಾಗಿದೆ. ಗ್ರಾಮಾಂತರ ಭಾರತದಲ್ಲಿ ಅಸ್ಪೃಶ್ಯತೆಯು ಇಂದಿಗೂ ತಾಂಡವವಾಡುತ್ತಿದೆ. ಜಾತಿ ಪದ್ಧತಿಯನ್ನು ಬಿಡಬೇಕು. ಈ ದಿಶೆಯಲ್ಲಿ ಪ್ರತಿಯೊಬ್ಬ ಹಿಂದುವು ಮನಮಾಡಬೇಕು. ಇದು ಕಾನೂನಿನಿಂದ ನಡೆಯುವಂತಹದ್ದಲ್ಲ. ಪ್ರತಿಯೋರ್ವ ಹಿಂದುವಿನ ಮನಸ್ಸಿನಲ್ಲಿ ಹುಟ್ಟಿ ಅರಳಬೇಕು.
  • ಹಿಂದುಧರ್ಮದಲ್ಲಿ ತುಳಿತಕ್ಕೆ ಒಳಗಾಗಿರುವ ದಲಿತರಿಗೆ ಸಾಮಾಜಿಕ ಸ್ಥಾನಮಾನಗಳನ್ನು ನೀಡಬೇಕು. ಇದೂ ಸಹಾ ಕಾನೂನಿಂದ ನಡೆಯುವಂತಹದ್ದಲ್ಲ. ಪ್ರತಿಯೊಬ್ಬ ಹಿಂದುವಿನ ಮನದಲ್ಲಿ ಹುಟ್ಟಬೇಕಾದಂತಹದ್ದು.
  • ಹಿಂದು ಧರ್ಮದ ಭದ್ರ ನೆಲೆ ಕುಟುಂಬ. ಕೌಟುಂಬಿಕ ವ್ಯವಸ್ಥೆ ಇಂದು ಛಿದ್ರವಾಗುತ್ತಿದೆ. ಇದನ್ನು ಬಲಪಡಿಸಬೇಕು. ಹಿರಿಯರಿಗೆ/ವೃದ್ಧರಿಗೆ ಗೌರವಯುತವಾದ ಬದುಕನ್ನು ನಡೆಸಲು ಅವಕಾಶವನ್ನು ಮಾಡಿಕೊಡಬೇಕು.
  • ನನ್ನ ಲೇಖನಕ್ಕೆ ನನ್ನ ಹಿಂದು ಧರ್ಮ ಎಂಬ ಶೀರ್ಷಿಕೆಯನ್ನು ನೀಡಿರುವುದನ್ನು ದಯವಿಟ್ಟು ಗಮನಿಸಿ. ನಾನು ಹಿಂದು ಧರ್ಮವನ್ನು ಹೇಗೆ ಅರ್ಥ ಮಾಡಿಕೊಂಡಿದ್ದೇನೆ ಎಂಬುದನ್ನು ಆಧರಿಸಿ ನನ್ನ ಹಿಂದು ಧರ್ಮ ಎಂದು ಬರೆದಿದ್ದೇನೆ. 
  • ನನ್ನ ವಿಚಾರಗಳು ತೀರಾ ಎಳಸು ಎಂದಾದಲ್ಲಿ, ಪ್ರಬುದ್ಧ ವಿಚಾರಗಳು ಹೇಗಿರುತ್ತವೆ ಎಂಬುದನ್ನು ತಿಳಿದವರು ಹೇಳಲಿ. ಕಲಿತುಕೊಳ್ಳಲು ನಾನು ಸಿದ್ಧನಿದ್ದೇನೆ.
  • ಮುಂದಿನ ದಿನಗಳಲ್ಲಿ ಹಿಂದು ಧರ್ಮವನ್ನು ಪರಿಷ್ಕರಿಸಿ, ಅದರಲ್ಲಿ ಮತ್ತಷ್ಟು ಮಾನವೀಯತೆಯನ್ನು ತುಂಬುವ ಮಹಾನುಭಾವರು ಬಂದೇ ಬರುತ್ತಾರೆ ಎನ್ನುವ ನಂಬಿಕೆಯೊಡನೆ ಈ ಲೇಖನವನ್ನು ಮುಗಿಸುತ್ತಿದ್ದೇನೆ.

 

--------------

 

ಮುಂದಿನ ಭಾಗ: ಜೀವಜಗತ್ತಿನ ಅಲಿಖಿತ ನಿಯಮಗಳು

 

-ಡಾ.ನಾ.ಸೋಮೇಶ್ವರ

www.yakshaprashne.org

http://www.fotoblur.com/imgs/0/0/0/0/0/7/1/697.jpg