ನನ್ನ ಹಿಂದು ಧರ್ಮ - ಜೀವಜಗತ್ತಿನ ಅಲಿಖಿತ ನಿಯಮಗಳು

The expression often used by Mr. Herbert Spencer of the Survival of the Fittest is more accurate. . . .

-Charles Darwin

 There's another way to survive. Mutual trust…and help.

-James Kir

 

ನಮ್ಮ ಭೂಮಿಯ ಮೇಲೆ ಅಸಂಖ್ಯ ಜೀವರಾಶಿಗಳಿವೆ. ಅವನ್ನು ನಾವು ವಿಶಾಲವಾಗಿ ಮೂರು ಗುಂಪುಗಳಲ್ಲಿ ವಿಂಗಡಿಸಬಹುದು. ನಮ್ಮ ಬರಿಗಣ್ಣಿಗೆ ಕಾಣದ ಜೀವಿಗಳು - ಆರ್ಕಿಯ ಮತ್ತು ಬ್ಯಾಕ್ಟೀರಿಯ. ನಮ್ಮ ಬರಿ ಕಣ್ಣಿಗೆ ಕಾಣುವ ಎಲ್ಲ ಜೀವಿಗಳು-ಯೂಕಾರ್ಯ. ಈ ಯೂಕಾರ್ಯದಲ್ಲಿ ಪ್ರಮುಖವಾದ ಸಸ್ಯಗಳು ಹಾಗೂ ಪ್ರಾಣಿಗಳು ಸೇರಿವೆ.

ನಮ್ಮ ಭೂಮಂಡಲದ ಜೀವರಾಶಿಯನ್ನು ವೈಜ್ಞಾನಿಕವಾಗಿ ಮೂರು ಗುಂಪುಗಳಲ್ಲಿ ವಿಂಗಡಿಸಿದ ಮೇಲೆ, ಈ ಎಲ್ಲ ಜೀವರಾಶಿಗಳ ಬದುಕನ್ನು ನಿಯಂತ್ರಿಸುವ ಸಮಾನ ಅಂಶಗಳು ಏನಾದರೂ ಇವೆಯೇ ಎಂದು ಹುಡುಕಲು ಹೊರಟರೆ ಐದು ನಿಯಮಗಳು ಕಂಡು ಬರುತ್ತವೆ. ಈ ನಿಯಮಗಳನ್ನು ಯಾರೂ ಬರೆದಿಟ್ಟಿಲ್ಲ. ಆದರೆ ಈ ಐದು ನಿಯಮಗಳು ಎಲ್ಲ ಜೀವಿಗಳ ಬದುಕನ್ನು ಪತ್ಯಕ್ಷವಾಗಿ-ಪರೋಕ್ಷವಾಗಿ ನಿಯಂತ್ರಿಸುತ್ತವೆ ಎಂಬುದನ್ನು ನಮ್ಮ ಅಧ್ಯಯನದಿಂದ ತಿಳಿದಿದ್ದೇವೆ. ಇವನ್ನು ಜೀವಜಗತ್ತಿನ ಅಲಿಖಿತ ನಿಯಮಗಳು ಎಂದು ಕರೆಯುತ್ತೇವೆ. ಈ ನಿಯಮಗಳಿಗೆ ನಮ್ಮ ಭೂಮಿಯ ಪ್ರತಿಯೊಂದು ಜೀವರಾಶಿಯು, ಅದು ನಮ್ಮ ಬರಿಗಣ್ಣಿಗೆ ಕಾಣದ ಆರ್ಕಿಯವಾಗಲಿ ಅಥವ ನಮ್ಮ ಕಣ್ಣಿಗೆ ಕಾಣುವ ಆಫ್ರಿಕದ ಬೃಹತ್ ಆನೆ ಇಲ್ಲವೇ ನೀರಿನಲ್ಲಿರುವ ನೀಲ ತಿಮಿಂಗಲವಾಗಲಿ, ಎಲ್ಲಕ್ಕೂ ಅನ್ವಯವಾಗುತ್ತವೆ. ಈ ನಿಯಮಗಳು ಮನುಷ್ಯನಿಗೂ ಅನ್ವಯವಾಗುತ್ತವೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ.

೧.     ಜೀವಜಗತ್ತಿನ ಮೊದಲನೆಯ ಅಲಿಖಿತ ನಿಯಮ-ಉತ್ಕೃಷ್ಟ ಸಂತಾನವರ್ಧನೆ:

ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಯು ಸಂತಾನವರ್ಧನೆಯಲ್ಲಿ ತೊಡಗುತ್ತವೆ. ಸಂತಾನವರ್ಧನೆಯಲ್ಲಿ ತೊಡಗುವಂತೆ ನಮ್ಮನ್ನು ಪ್ರೇರೇಪಿಸುವ ಶಕ್ತಿ ಯಾವುದೆಂಬುದು ನಮಗೆ ತಿಳಿದಿಲ್ಲ. ಸಂತಾನವರ್ಧನೆಯಲ್ಲಿ ಪಾಲುಗೊಳ್ಳಬೇಕು ಎಂಬ ಅರಿವು ಹಾಗೂ ಇಚ್ಛೆಯು  ಜನ್ಮದತ್ತವಾಗಿ ನಮ್ಮ ವಂಶವಾಹಿಗಳಲ್ಲಿ ಅಡಕವಾಗಿರುತ್ತದೆ. ಸಂತಾನ ವರ್ಧನಾ ವಯಸ್ಸಿಗೆ ಬರುತ್ತಿದ್ದ ಹಾಗೆ ಜೀವಿಗಳು ಸಂತಾನವರ್ಧನೆಯಲ್ಲಿ ತೊಡಗುತ್ತವೆ. ಸಂತಾನ ವರ್ಧನೆಯ ಮೂಲ ಉದ್ದೇಶ ‘ಉತ್ತಮ ಸಂತಾನ‘ವನ್ನು ಪಡೆಯುವುದಾಗಿರುತ್ತದೆ. ಹಾಗಾಗಿ ಸಾಮಾನ್ಯವಾಗಿ ನಮ್ಮ ಮಕ್ಕಳು ನಮಗಿಂತಲೂ ಬುದ್ಧಿವಂತರಾಗಿರುತ್ತಾರೆ. ಉತ್ತಮ, ಅತ್ಯುತ್ತಮ, ಪರಮೋತ್ತಮ ಸಂತಾನವನ್ನು ಸೃಜಿಸುವುದೇ ಪ್ರಕೃತಿಯ ಏಕೈಕ ಉದ್ದೇಶವಾಗಿರುತ್ತದೆ. ಈ ಉದ್ದೇಶ ಸಾಧನೆಗೆ ಪ್ರಕೃತಿಯು ಎಂತಹ ನಿಷ್ಕರುಣೆಯನ್ನು (ಮನುಷ್ಯರ ಲೆಕ್ಕಾಚಾರದಲ್ಲಿ) ತೋರಲು ಹಿಂಜರಿಯದು.

ಇಂದಿಗೆ ಸುಮಾರು ೧೨೦೦ ಮಿಲಿಯನ್ ವರ್ಷಗಳ ಹಿಂದೆ ಈ ಭೂಮಿಯ ಮೇಲಿದ್ದ ಜೀವಿಗಳಲ್ಲಿ ಗಂಡು-ಹೆಣ್ಣು ಎಂಬಾ ಎರಡು ಲಿಂಗಗಳು ಹುಟ್ಟಿದವು. ಅವು ಲೈಂಗಿಕ ಸಂತಾನವರ್ಧನೆಯಲ್ಲಿ ತೊಡಗಿದವು. ಲೈಂಗಿಕ ಸಂತಾನವರ್ಧನೆಯು ಜೀವ ವೈವಿಧ್ಯಕ್ಕೆ ಅವಕಾಶ ಮಾಡಿಕೊಟ್ಟಿತು. ಜೀವವಿಕಾಸಕ್ಕೆ ಭದ್ರವಾದ ತಳಹದಿಯನ್ನು ಹಾಕಿತು. ನಮ್ಮ ಭೂಮಿಯಲ್ಲಿ ಮನುಷ್ಯನಂತಹ ಬುದ್ಧಿವಂತ ಜೀವಿಯು ಹುಟ್ಟಬೇಕಾದರೆ ಅದಕ್ಕೆ ಮೂಲಕಾರಣ ಲೈಂಗಿಕ ಸಂತಾನವರ್ಧನೆ. ಪ್ರಕೃತಿಯು ತನ್ನ ಜೀವವಿಕಾಸ ಕಾರ್ಯದಲ್ಲಿ ಇಂದಿಗೂ ಮಗ್ನವಾಗಿದೆ ಎಂದು ತಜ್ಞರ ಅನಿಸಿಕೆ. ಇಂದು ಭೂಮಿಯಾದ್ಯಂತ ಇರುವ ಮನುಷ್ಯರನ್ನು ನಾವು ‘ಹೋಮೋ ಸೆಪಿಯನ್ಸ್’ ಎಂದು ಗುರುತಿಸುತ್ತೇವೆ. ನಾವೂ ಸಹಾ ಪ್ರಕೃತಿಯ ಜೀವವಿಕಾಸ ಲೀಲೆಯ ವ್ಯಾಪ್ತಿಯಲ್ಲಿ ಬರುತ್ತಿರುವ ಕಾರಣ, ಈಗ ಇರುವ ಮನುಷ್ಯನಿಗಿಂತಲೂ ಬುದ್ಧಿವಂತನಾದ ‘ಹೋಮೋ ಫ್ಯೂಚರಿಸ” ಎಂಬ ಭವಿಷ್ಯತ್ ಮಾನವ ಉದಯಿಸಲಿದ್ದಾನೆ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಹೋಮೋ ಫ್ಯೂಚರಿಸ್ ಹುಟ್ಟಿದಾಗ ನಾವು ಕ್ರಮೇಣ ನಾಶವಾಗುತ್ತೇವೆ. ಭವಿಷ್ಯತ್ ಮಾನವ ಭೂಮಿಯ ಮೇಲೆ ರಾರಾಜಿಸುತ್ತಾನೆ.

ಪ್ರಕೃತಿಯ ಏಕೈಕ ಉದ್ದೇಶವು ಉತ್ತಮೋತ್ತಮ ಸಂತಾನವನ್ನು ಸೃಜಿಸುವದಷ್ಟೇ ಆಗಿದೆ.

ಅದಕ್ಕಾಗಿ.....

  • ಪ್ರಕೃತಿಯು ಗಂಡಿಗಿಂತ ಹೆಚ್ಚಿನ ಪ್ರಾಮುಖ್ಯತೆ ಹಾಗೂ ಜವಾಬ್ದಾರಿಯನ್ನು ಹೆಣ್ಣಿಗೆ ನೀಡಿದೆ.
  • ಬಹಳಷ್ಟು ಸಂದರ್ಭಗಳಲ್ಲಿ ಗಂಡಿನ ಜವಾಬ್ದಾರಿ ಕೇವಲ ಗರ್ಭ ಕಟ್ಟಲು ಅಗತ್ಯವಾದ ವೀರ್ಯಾಣುವನ್ನು ಪೂರೈಸುವ ಮಟ್ಟಕ್ಕೆ ಮಾತ್ರ ಸೀಮಿತವಾಗಿರುತ್ತದೆ.
  • ಹೆಣ್ಣು ಗರ್ಭವನ್ನು ಹೊತ್ತು, ಸಂತಾನವನ್ನು ಹೆರುತ್ತದೆ. ಅನೇಕ ಹೆಣ್ಣುಗಳು ತಾನು ಹೆತ್ತ ಸಂತಾನದ ಜವಾಬ್ದಾರಿಯನ್ನು ಪರಿಪೂರ್ಣವಾಗಿ ಹೊರುತ್ತದೆ. ಬಹಳಷ್ಟು ಗಂಡುಗಳು ತಾನು ಹೆತ್ತ ಸಂತಾನ ಪಾಲನೆಯ ಜವಾಬ್ದಾರಿಯನ್ನು ಹೊರುವುದೇ ಇಲ್ಲ.
  • ಮನುಷ್ಯರಲ್ಲಿ ತಾಯಿ ಹಾಗೂ ತಾಯ್ತನದ ಮಹತ್ವ ಅದ್ಭುತ! ಮಾನವ ಸಂಬಂಧಗಳಲ್ಲಿಯೇ ತಾಯ್ತನದ ಸಂಬಂಧ ಹಿರಿದು! ಒಬ್ಬ ಮಗ ವೇಶ್ಯೆಯ ಸಹವಾಸಕ್ಕೆ ಬಿದ್ದ! ಆ ವೇಶ್ಯೆ ಹೇಳಿದಳು. “ಹೋಗಿ ನಿನ್ನ ತಾಯಿಯ ಹೃದಯವನ್ನು ಕಿತ್ತು ತಾ. ಮಗ ಬಂದ. ತಾಯಿಯ ಎದೆಯನ್ನು ಬಗೆದು ಮಿಡಿಯುತ್ತಿರುವ ಹೃದಯವನ್ನು ಎತ್ತಿಕೊಂಡು ವೇಶ್ಯೆಯ ಮನೆಯತ್ತ ಓಡಲಾರಂಬಿಸಿದ. ದಾರಿಯಲ್ಲಿ ಎಡವಿ ಬಿದ್ದ. ಆಗ ಅವನ ಕೈಯಲ್ಲಿ ಇನ್ನೂ ಮಿಡಿಯುತ್ತಿದ್ದ ತಾಯಿಯು ಹೃದಯವು ಕೇಳಿತು “ಮಗೂ ನಿನಗೆ ಪೆಟ್ಟಾಗಲಿಲ್ಲ ತಾನೆ!  ಪ್ರತಿಯೋರ್ವ ತಾಯಿಯು ತನ್ನ ಸಂತಾನದ ಯೋಗಕ್ಷೇಮಕ್ಕಾಗಿ ಎಂತಹ ತ್ಯಾಗಕ್ಕಾದರೂ ಸರಿ ಸಿದ್ಧವಾಗಿರುತ್ತಾಳೆ.

 

ಈ ಹಿನ್ನೆಲೆಯಲ್ಲಿ ಮೂರು ಅಂಶಗಳನ್ನು ವಿಚಾರ ಮಾಡೋಣ.

 

೧.      ಬದುಕಿನ ಮೂಲಭೂತ ಉದ್ದೇಶ ಉತ್ತಮ ಸಂತಾನವರ್ಧನೆ ಮಾತ್ರ!

೨.      ಜೀವ ವಿಕಾಸದಲ್ಲಿ ಗಂಡು ನಿಮಿತ್ತ ಮಾತ್ರ

೩.      ಹೆಣ್ಣನ್ನು ಕೂಡಿ ಸಂತಾನವರ್ಧನೆಯಲ್ಲಿ ಪಾಲುಗೊಳ್ಳಲು (ಜೀವ ವಿಕಾಸದಲ್ಲಿ ಪಾಲುಗೊಳ್ಳಲು) ಗಂಡು ಜೀವಿಗಳ ನಡುವೆ ಸದಾ ಸ್ಪರ್ಧೆಯಿರುತ್ತದೆ. ಹೆಣ್ಣು ಜೀವಿಯು ಅತ್ಯುತ್ತಮ ಸಂತಾನ ಹುಟ್ಟಲು ಕಾರಣವಾಗಬಹುದಾದ ಕ್ರೋಮೋಸೋಮುಗಳನ್ನು ಹೊಂದಿರುವ ಗಂಡನ್ನು ಕೂಡಲು ಪ್ರಯತ್ನಿಸಿರುತ್ತದೆ.

 

೧.     ಉತ್ಕೃಷ್ಟ ಸಂತಾನ:

ಜೀವಜಗತ್ತಿನಲ್ಲಿ ಎಲ್ಲ ಜೀವಿಗಳ ಪ್ರಾಥಮಿಕ ಉದ್ದೇಶ ಉತ್ಕೃಷ್ಟ ಸಂತಾನವನ್ನು ಪಡೆಯುವುದು ಮಾತ್ರವಾಗಿರುತ್ತದೆ ಎಂಬುದನ್ನು ತಿಳಿಯಲು ಕೆಲವು ಉದಾಹರಣೆಗಳನ್ನು ಗಮನಿಸೋಣ.

  • ಬಾಳೆಯ ಗಿಡವನ್ನು ತೆಗೆದುಕೊಳ್ಳಿ.  ಒಂದು ಸಲ ಬಾಳೆಗೊನೆಯನ್ನು ಬಿಟ್ಟಿತೆಂದರೆ, ಅದು ಅದರ ಬಾಳ ಅಂತಿಮ ಗೊನೆಯಾಗಿಬಿಡುತ್ತದೆ.  ಗೊನೆಯೊಡನೆ.  ಅದರ ಕಥೆ ಅಲ್ಲಿಗೇ ಮುಗಿಯುತ್ತದೆ.  ಕಾರಣ ಗೊನೆಯನ್ನು ಬಿಡುವುದರ ಮೂಲಕ ಅದರ ಬಾಳ ಗುರಿ, ಅದರ ಬದುಕಿನ ಉದ್ದೇಶ ಪೂರ್ಣಗೊಂಡಿರುತ್ತದೆ.
  • ಹುಲ್ಲಿನ ಜಾತಿಯ ಭತ್ತ, ಗೋಧಿ, ರಾಗಿ, ಜೋಳ, ಸಜ್ಜೆ, ಕಬ್ಬು, ಬಿದಿರು ಇತ್ಯಾದಿಗಳನ್ನು ಗಮನಿಸಿ. ಒಚಿದು ಸಲ ಇವು ತೆನೆಯನ್ನು ಬಿಟ್ಟರೆ, ಅಲ್ಲಿಗೆ ಅವುಗಳ ಬದುಕಿನ ಉದ್ದೇಶ ಪೂರ್ಣಗೊಳ್ಳುತ್ತದೆ. ೬-೭೦ ವರ್ಷ ಕಾಲ ಬದುಕುವ ಬಿದಿರು, ಬಿದಿರಕ್ಕಿಯನ್ನು ಬಿಟ್ಟಕೂಡಲೇ ಮರಣಿಸುತ್ತದೆ.
  • ಸಾಲ್ಮನಿಡೆ ವಂಶದಲ್ಲಿ ಅನೇಕ ಸಾಲ್ಮನ್ ಮೀನುಗಳಿವೆ. ಸಾಲ್ಮನ್ ಮೀನು ತನ್ನ ಬದುಕನ್ನು ನದಿಯ ಸಿಹಿನೀರಿನಲ್ಲಿ ಹಾಗೂ ಸಮುದ್ರದ ಉಪ್ಪು ನೀರಿನಲ್ಲಿ ಕಳೆಯುತ್ತದೆ. ಹೆಣ್ಣು ಸಾಲ್ಮನ್ ನದಿಯ ಮಣ್ಣನ್ನು ತನ್ನ ಬಾಲದಿಂದ “ಅಗೆದು ೩೦ ಚದರ ಅಡಿಯ ಹಳ್ಳವನ್ನು ಮಾಡುತ್ತದೆ. ಈ ಹಳ್ಳದಲ್ಲಿ ಸುಮಾರು ೫೦೦೦ದವರೆಗೂ ಮೊಟ್ಟೆಗಳನ್ನಿಡುತ್ತದೆ. ಅದೇ ವೇಳೆಗೆ ಗಂಡು ಸಾಲ್ಮನ್ ಅಲ್ಲಿಗೆ ಬಂದು ಮೊಟ್ಟೆಗಳ ಮೇಲೆ ತನ್ನ ವೀರ್ಯವನ್ನು ವಿಸರ್ಜಿಸುತ್ತದೆ. ಹೆಣ್ಣು-ಗಂಡು ಹೀಗೆ ಸುಮಾರು ೭ ಸಲ ಸಂತಾನವರ್ಧನೆಯಲ್ಲಿ ತೊಡಗಿದ ಕೂಡಲೆ ಅವು ಸಾಯುತ್ತವೆ. ಒಂದು ಗೂಡಿನಲ್ಲಿ ಇರುವ ೫೦೦೦ ಮೊಟ್ಟೆಗಳು ೧೦%ರಷ್ಟು ಮೊಟ್ಟೆಗಳು ಪೂರ್ಣಪ್ರಮಾಣದಲ್ಲಿ ಬೆಳೆದು ಸಮುದ್ರದತ್ತ ಸಾಗುತ್ತವೆ. ಸಮುದ್ರದಲ್ಲಿ ಬೆಳೆದು ಸಂತಾನವರ್ಧನಾ ಸಾಮರ್ಥ್ಯವನ್ನು ಗಳಿಸುತ್ತಿರುವಂತೆಯೇ ಸಮುದ್ರವನ್ನು ಬಿಟ್ಟು ನದಿಯ ಕಡೆ ಸಾಗುತ್ತವೆ. ನದಿಯ ಪ್ರವಾಹದ ಎದುರು ಈಜುತ್ತಾ ೧೪೦೦ ಕಿ.ಮೀ. ರಿಗೂ ಹೆಚ್ಚು ದೂರವನ್ನು ಕ್ರಮಿಸಿ, ೭೦೦೦ ಅಡಿಗಳಿಗಿಂತಲೂ ಎತ್ತರ ಏರಿ ತಾನು ಹುಟ್ಟಿದ ಸ್ಥಳಕ್ಕೆ ಬರುತ್ತದೆ. ಸಂತಾನವರ್ಧನಾ ಕಾರ್ಯದಲ್ಲಿ ಪಾಲುಗೊಳ್ಳುತ್ತದೆ ಹಾಗೂ ಸದ್ದಿಲ್ಲದೇ ಸಾಯುತ್ತದೆ.

೨.     ನಿಮಿತ್ತ ಮಾತ್ರ ಗಂಡು:

  • ಗಂಡು ಜೇನು ನೊಣವನ್ನು ನೋಡಿ.  ಸಂತಾನವರ್ಧನೆಗೆ ಸಿದ್ಧವಾದ ರಾಣಿಜೇನು ಮೇಲಕ್ಕೆ ಹಾರುತ್ತದೆ. ಅವುಗಳ ಹಿಂದೆ ಹಲವು ಗಂಡು ಜೇನುನ್ರೊಣಗಳು ಹಾರುತ್ತವೆ. ಅವುಗಳನ್ನು ಒಂದು ಗಂಡು ಜೇನುನೊಣ ರಾಣಿ ಜೇನನ್ನು ಕೂಡುತ್ತದೆ. ವೀರ್ಯದಾನ ಮಾಡುತ್ತದೆ. ನಂತರ ಹೆಣ್ಣಿನಿಂದ ಬೇರ್ಪಡುವ ಭರದಲ್ಲಿ ಅದರ ಶಿಶ್ನಛೇದನವಾಗುತ್ತದೆ. ವೀರ್ಯದಾನ ಮಾಡಿದ ಗಂಡು ಗಗನದಲ್ಲಿಯೇ ಮರಣ ಹೊಂದಿ ಭೂಮಿಗೆ ಬೀಳುತ್ತದೆ.
  • ಚೇಳು ಇಲ್ಲವೇ ಜೇಡನನ್ನು ಗಮನಿಸಿ. ಹೆಣ್ಣು ಗಂಡಿನೊಡನೆ ಕೂಡುತ್ತದೆ. ವೀರ್ಯದಾನವಾದ ಕೂಡಲೇ ಹೆಣ್ಣು ಗಂಡನ್ನು ಕಬಳಿಸುತ್ತದೆ. ಹೀಗೆ ಹೆಣ್ಣು ತನಗೆ ಸಂತಾನಭಾಗ್ಯವನ್ನು ಕರುಣಿಸಿದ ಗಂಡನ್ನು ಏಕೆ ನುಂಗಿ ನೀರುಕುಡಿಯುತ್ತದೆ ಎಂಬುದಕ್ಕೆ ನಿಖರವಾದ ಕಾರಣ ನಮಗೆ ತಿಳಿದಿಲ್ಲ. ಬಹುಶಃ ತನಗೆ ವೀರ್ಯದಾನ ಮಾಡಿದ ಗಂಡು, ಮತ್ತೊಂದು ಹೆಣ್ಣಿಗೂ ವೀರ್ಯದಾನ ಮಾಡಿ, ತನ್ನ ಸಂತಾನಕ್ಕೆ ಪ್ರತಿಸ್ಪರ್ಧಿಗಳು ಹುಟ್ಟುವುದನ್ನು ತಡೆಗಟ್ಟಬೇಕೆಂಬ ಉದ್ದೇಶವಿರಬಹುದೇನೋ!

೩.     ಸ್ಪರ್ಧೆ:

  • ಪ್ರತಿಯೊಂದು ಗಂಡು ತನ್ನ ವೀರ್ಯವನ್ನು ಹೊತ್ತ ಸಂತಾನವೇ ಹುಟ್ಟಲಿ ಎಂದು ಬಯಸುತ್ತದೆ. ಹಾಗಾಗಿ ಎರಡು ರೀತಿಯಲ್ಲಿ ಹೋರಾಡುತ್ತದೆ. ಮೊದಲನೆಯದು ಮೆಚ್ಚಿದ ಹೆಣ್ಣನ್ನು ಕೂಡಲು ಏನು ಬೇಕಾದರೂ ಮಾಡಲು ಸಿದ್ಧವಾಗುತ್ತದೆ ಹಾಗೂ ಎರಡನೆಯದು ತಾನು ಇಷ್ಟಪಟ್ಟ ಹೆಣ್ಣನ್ನೇ ಬಯಸುವ ಗಂಡುಗಳನ್ನು ಹೇಗಾದರೂ ಸರಿ ಹಿಮ್ಮೆಟ್ಟಿಸಲು ಸಿದ್ಧವಾಗುತ್ತದೆ.
  • ಗಂಡು ನವಿಲನ್ನು ನೋಡಿ. ಹೊರಲಾರದ ದಪ್ಪ ಬಾಲವನ್ನು ಹೊರುತ್ತದೆ. ಇಷ್ಟು ಭಾರದ ಬಾಲವನ್ನು ಹೊತ್ತ ಗಂಡು ನವಿಲು ಸುಲುಭವಾಗಿ ಬೇಟೆಗಾರರಿಗೆ ತುತ್ತಾಗುತ್ತದೆ. ಆದರೂ ತನ್ನ ಜೀವದ ಪರಿವೆಯಿಲ್ಲದೇ ಮೆಚ್ಚಿದ ಹೆಣ್ಣನ್ನು ಕೂಡಲು ಬಯಸುತ್ತದೆ. ಅದಕ್ಕಾಗಿ ವಿಕಾಸ ಪಥದಲ್ಲಿ ಬಾಲವನ್ನು ಕಳೆದುಕೊಳ್ಳದೇ ಇಂದಿನವರೆಗೂ ಉಳಿಸಿಕೊಂಡು ಬಂದಿದೆ. ಯಾವ ಗಂಡು ಸುಂದರವಾದ ಬಾಲವನ್ನು ಹರಡಿ ನರ್ತನ ಮಾಡುತ್ತದೆಯೋ ಅದನ್ನು ಹೆಣ್ಣು ಮೆಚ್ಚುತ್ತದೆ. ಸಂತಾನವರ್ಧನೆಯಲ್ಲಿ ತೊಡಗುತ್ತದೆ.
  • ಸೀಲ್ ಆನೆಯಂತಹ ಬೃಹತ್ ದೇಹವನ್ನು ಹೊಂದಿರುವ ಪ್ರಾಣಿ. ಇದರಲ್ಲಿ ಉತ್ತರೀಯ ಸೀಲ್ (ನಾರ್ದರನ್ ಎಲೆಫೆಂಟ್ ಸೀಲ್) ಹಾಗೂ ದಕ್ಷಿಣೀಯ ಸೀಲ್ (ಸದರ್ನ್ ಎಲೆಫೆಂಟ್ ಸೀಲ್) ಎಂಬ ಎರಡು ಪ್ರಭೇದಗಳಿವೆ. ಇವುಗಳಲ್ಲಿ ಉತ್ತರೀಯ ಸೀಲ್-ಗಳು ಹೆಣ್ಣಿಗಾಗಿ ನಡೆಸುವ ಹೋರಾಟ ಅದ್ಭುತ ಹಾಗೂ ಆಶ್ಚರ್ಯಕರ! ಹೆಣ್ಣಿಗಾಗಿ ಎರಡು ಗಂಡುಗಳ ನಡುವೆ ಉಗ್ರ ಹೋರಾಟ ನಡೆಯುತ್ತದೆ. ಗೆದ್ದ ಗಂಡು ೩೦-೧೦೦ ಹೆಣ್ಣುಗಳ ಅಂತಃಪುರದಲ್ಲಿ ಸುಖವಾಗಿರುತ್ತದೆ. ಸೋತ ಗಂಡು ಆ ವರ್ಷ ಸಂತಾನವರ್ಧನಾ ಕ್ರಿಯೆಯಲ್ಲಿಯೇ ಪಾಲುಗೊಳ್ಳದೇ ಏಕಾಂಗಿಯಾಗಿರುತ್ತದೆ. ದೈಹಿಕ ಶಕ್ತಿಯನ್ನು ಬೆಳೆಸಿಕೊಂಡು ಮುಂದಿನ ವರ್ಷ ಹೆಣ್ಣಿಗಾಗಿ ಹೋರಡುತ್ತದೆ.
  • ಕ್ಯಾಲೋಪ್ಟೆರೆಕ್ಸ್ ಮ್ಯಾಕ್ಯುಲೇಟ (ಡ್ಯಾಮ್ಸೆಲ್ ಫ್ಲೈ) ಎನ್ನುವುದು ಏರೋಪ್ಲೇನ್ ಹುಳ (ಡ್ರಾಗನ್ ಫ್ಲೈ) ದ ಸಮೀಪ ಸಂಬಂಧಿ. ಹೆಣ್ಣು ನೊಣವು ಅಲ್ಪಾವಧಿಯಲ್ಲಿ ಅನೇಕ ಗಂಡುಗಳನ್ನು ಕೂಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ವೀರ್ಯಾಣುಗಳನ್ನು ‘ವೀರ್ಯಬಟ್ಟಲು (ಸ್ಪರ್ಮಥೀಕ) ಎಂಬ ಬಟ್ಟಲಿನಲ್ಲಿ ಸಂಗ್ರಹಿಸಿ ಇಟ್ಟಿರುತ್ತದೆ. ಗಂಡು ನೊಣವು ಎಷ್ಟು ಸ್ವಾರ್ಥಿ ಎನ್ನುವುದನ್ನು ಊಹಿಸಿಕೊಳ್ಳಲೂ ಕಷ್ಟವಾಗುತ್ತದೆ. ಗಂಡಿನ ಶಿಶ್ನದ ಮೇಲೆ ಕೂದಲಿನಂತಹ ರಚನೆಯಿರುತ್ತದೆ. ಜೊತೆಗೆ ಒಂದು ಕೊಕ್ಕೆ ಇರುತ್ತದೆ. ಒಂದು ಹೆಣ್ಣು ಈಗಾಗಲೇ ಬೇರೊಂದು ಗಂಡನ್ನು/ಗಂಡುಗಳನ್ನು ಕೂಡಿ, ಅದರ ವೀರ್ಯವನ್ನು ಧರಿಸಿದ್ದರೆ, ಗಂಡು ಕ್ಯಾಲೋಪ್ಟೆರೆಕ್ಸ್ ತನ್ನ ಕೊಕ್ಕೆಯಿರುವ ಶಿಶ್ನವನ್ನು ಹೆಣ್ಣಿನ ವೀರ್ಯಬಟ್ಟಲಿನಲ್ಲಿ ತೂರಿಸಿ, ಅಲ್ಲಿರುವ ಬೇರೆ ಗಂಡಿನ ಎಲ್ಲ ವೀರ್ಯಾಣುಗಳನ್ನು ಒಂದೊಂದಾಗಿ ಹೆಕ್ಕಿ ತೆಗೆಯುತ್ತದೆ. ಕೂದಲಿನಂತಹ ರಚನೆಯಿಂದ ವೀರ್ಯಬಟ್ಟಲನ್ನು ಶುಭ್ರಗೊಳಿಸುತ್ತದೆ. ಆ ನಂತರ ತನ್ನ ವೀರ್ಯಾಣುಗಳನ್ನು ಅಲ್ಲಿ ಸ್ಖಲಿಸುತ್ತದೆ.
  • ಡುನಾಕ್ (ಪ್ರುನೆಲ್ಲ ಮಾಡ್ಯುಲಾರಿಸ್) ಎಂಬುದು ಒಂದು ಹಕ್ಕಿ. ಹೆಣ್ಣು ಹಕ್ಕಿಯು ಬಹುಪತೀತ್ವವನ್ನು ಪರಿಪಾಲಿಸುತ್ತದೆ. ಗಂಡು ಹಕ್ಕಿ ತಾನು ಮೆಚ್ಚಿದ ಹೆಣ್ಣನ್ನು ಕೂಡುವ ಮೊದಲು ಅದರ ಮಲಯೋನಿಯನ್ನು (ಕ್ಲೋಕ) ಪರೀಕ್ಷಿಸುತ್ತದೆ. ಅಲ್ಲಿ ಗಂಡು ಹಕ್ಕಿಯ ವೀರ್ಯಾಣುಗಳಿದ್ದರೆ, ಅದನ್ನೆಲ್ಲ ಕುಕ್ಕಿ ಕುಕ್ಕಿ ತೆಗೆಯುತ್ತದೆ. ಆನಂತರ ಅದನ್ನು ಕೂಡಿ ತನ್ನ ವೀರ್ಯವನ್ನು ಸ್ಖಲಿಸುತ್ತದೆ. ಹೀಗೆ ಗಂಡುಗಳು ಅನೇಕ ರೀತಿಯ ತಂತ್ರವನ್ನು ಹೂಡುತ್ತವೆ. ಕೆಲವು ಗಂಡುಗಳು ಅಪಾರ ಪ್ರಮಾಣದ ವೀರ್ಯವನ್ನು ಸ್ಖಲಿಸುತ್ತವೆ. ಕೆಲವು ಇತರ ಗಂಡುಗಳಿಗೆ ಕೂಡಲು ಅವಕಾಶ ನೀಡದಂತೆ ದೀರ್ಘಾವಧಿ ಸಂಭೋಗದಲ್ಲಿ ತೊಡಗುತ್ತದೆ. ಕೆಲವು ವೀರ್ಯಸ್ಖಲನವಾದ ನಚಿತರ ಮತ್ತೊಂದು ಗಂಡು ಸಂಭೋಗವನ್ನು ನಡೆಸದಂತೆ ಯೋನಿಬೆಣೆಯನ್ನು (ವಜೈನಲ್ ಪ್ಲಗ್) ಜಡಿಯುತ್ತದೆ. ಇನ್ನು ಕೆಲವು ಗಂಡುಗಳು ವಿಶಿಷ್ಠ ಫೆರಮೋನುಗಳನ್ನು ಉತ್ಪಾದಿಸಿ ಹೆಣ್ಣಿನಲ್ಲಿ ಮತ್ತಷ್ಟು ಗಂಡುಗಳನ್ನು ಕೂಡುವ ಆಸೆಯೇ ಅಳಿಯುವಂತೆ ಮಾಡುತ್ತವೆ.
  • ಸಾಮಾನ್ಯವಾಗಿ ಹೆಣ್ಣುಜೀವಿಗಳು ಬಹುಪತೀತ್ವವನ್ನು ಪರಿಪಾಲಿಸುತ್ತವೆ. ಒಂದು ಹೆಣ್ಣು ಅಲ್ಪಾವಧಿಯಲ್ಲಿ ಅನೇಕ ಗಂಡುಗಳನ್ನು ಕೂಡುವುದು ಅಪರೂಪವೇನಲ್ಲ. ಹಲವು ಗಂಡುಗಳ ವೀರ್ಯಾಣುಗಳು ಒಟ್ಟಿಗೆ ಹೆಣ್ಣಿನ ಜನನಾಂಗದಲ್ಲಿದ್ದಾಗ, ಅಚಿಡಾಣುವಿನೊಡನೆ ಮಿಲನ ಹೊಂದಲು ಅವುಗಳ ನಡುವೆ ಮೆರಥಾನ್ ಸ್ಪರ್ಧೆ ಏರ್ಪಡುತ್ತದೆ. ಈ ಸ್ಪರ್ಧೆಯಲ್ಲಿ ಅತ್ಯಂತ ಶಕ್ತಿಶಾಲಿಯಾದ ವೀಚಿiiಣು ವಿಜಯಿಯಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಅಂಡಾಣುವೂ ಸಹಾ ಸೂಕ್ತ ವೀರ್ಯಾಣುವಿನೊಡನೆ ಮಾತ್ರ ಮಿಲನ ಹೊಂದುವ ಪರಿಸರವನ್ನು ಕಲ್ಪಿಸುತ್ತದೆ ಎನ್ನಲಾಗಿದೆ. ಹೆಣ್ಣು ಸ್ವೀಡಿಶ್ ಮರಳು ಹಲ್ಲಿಯು (ಲ್ಯಾಸೆರ್ಟ ಅಜಿಲಿಸ್) ಅನೇಕ ಗಂಡುಗಳನ್ನು ಕೂಡುತ್ತದೆ. ಹೀಗೆ ಕೂಡುವಾಗ ಅದರ ‘ಅಣ್ಣ-ತಮ್ಮಂದಿರ ಜೊತೆಯಲ್ಲಿಯೂ ಕೂಡುತ್ತದೆ. ಆದರೆ ಅಣ್ಣ-ತಮ್ಮಂದಿರ ವೀರ್ಯಾಣುಗಳು ಸರಿಸುಮಾರು ಏಕರೀತಿಯ ವಂಶವಾಹಿಗಳನ್ನು ಹೊಂದಿರುತ್ತವೆ. ಹಾಗಾಗಿ ಹೆಣ್ಣಿನ ಅಂಡಾಣುವು ಸೋದರ ವೀರ್ಯಾಣುಗಳನ್ನು ತಿರಸ್ಕರಿಸಿ, ಸಂಪೂರ್ಣ ಅಪರಿಚಿತ ಗಂಡಿನ ವೀರ್ಯಾಣುಗಳನ್ನು ಮಾತ್ರ ಸ್ವೀಕರಿಸುತ್ತದೆ.
  • ಈ ಎಲ್ಲ ವಿವರಣೆಯಿಂದ ಉತ್ಕೃಷ್ಟ ಸಂತಾನವನ್ನು ಪಡೆಯಲು ಗಂಡು-ಹೆಣ್ಣುಗಳು ಎಷ್ಟು ಪರದಾಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಜೀವಜಗತ್ತಿನ ಮೊದಲನೆಯ ಅಲಿಖಿತ ನಿಯಮವನ್ನು ‘ಉತ್ಕೃಷ್ಟ ಸಂತಾನವನ್ನು ಪಡೆಯುವುದು ಪ್ರತಿಯೊಂದು ಜೀವಿಯ ಪ್ರಾಥಮಿಕ ಉದ್ದೇಶವಾಗಿರುತ್ತದೆ ಎಂದು ಬರೆಯಬಹುದು.

 

೨.     ಜೀವಜಗತ್ತಿನ ಎರಡನೆಯ ಅಲಿಖಿತ ನಿಯಮ-ಆಹಾರ ಸಂಪಾದನೆ:

ಜೀವಿಗಳಿಗೆ ಹುಟ್ಟಿದ ಕೂಡಲೇ ಸಂತಾನವರ್ಧನಾ ಸಾಮರ್ಥ್ಯ ಬರುವುದಿಲ್ಲ.  ಜೀವಿಗಳು ಒಂದು ನಿರ್ದಿಷ್ಟ ಅವಧಿಯವರೆಗೆ ಬೆಳೆಯಬೇಕಾಗುತ್ತದೆ. ಆನಂತರ ಮಾತ್ರ ಅವು ಸಂತಾನವರ್ಧನೆಯಲ್ಲಿ ಪಾಲುಗೊಳ್ಳಬಲ್ಲವು. 

  • ಕೋಲಿಫ಼ಾರಂ ಬ್ಯಾಕ್ಟೀರಿಯವು ದ್ವಿವಿಭಜನೆಯ (ಬೈನರಿ ಫಿಶನ್) ಮೂಲಕ ಅಲೈಂಗಿಕವಾಗಿ ಸಚಿತಾನವರ್ಧನೆಯನ್ನು ನಡೆಸುತ್ತದೆ. ದ್ವಿವಿಭಜನೆಯ ಮೂಲಕ ಆಗ ತಾನೇ ರೂಪುಗೊಂಡ ಎಳೇ ಬ್ಯಾಕ್ಟೀರಿಯ ೨೦ ನಿಮಿಷಗಳ ಆಹಾರವನ್ನು ಸೇವಿಸಿ ‘ವಯಸ್ಕ ಬ್ಯಾಕ್ಟೀರಿಯವಾಗುತ್ತದೆ. ಸಂತಾನವರ್ಧನಾ ಕಾರ್ಯದಲ್ಲಿ ಪಾಲುಗೊಳ್ಳುತ್ತದೆ.  ಒಂದು ಬ್ಯಾಕ್ಟೀರಿಯ ಒಡೆದು ಎರಡಾಗುತ್ತದೆ.
  • ಮನುಷ್ಯ ಹುಟ್ಟಿದ ೧೩-೧೫ ವರ್ಷಗಳ ನಂತರ ಸಂತಾನ ವರ್ಧನಾ ಸಾಮರ್ಥ್ಯವನ್ನು ಪಡೆಯುತ್ತಾನೆ.
  • ಈ ೨೦ ನಿಮಿಷಗಳವರೆಗೆ ಅಥವಾ ೧೩-೧೫ ವರ್ಷಗಳವರೆಗೆ ಬದುಕಿರಲು ಜೀವಿಗಳಿಗೆ ಆಹಾರ ಬೇಕಾಗುತ್ತದೆ. ಆಹಾರವು ಸಂತಾನವರ್ಧನೆಯನ್ನು ಒಳಗೊಂಡಂತೆ ಬದುಕಿರುವುದಕ್ಕೆ ಅಗತ್ಯವಾದ ಎಲ್ಲ ಜೈವಿಕ ಕಾರ್ಯಗಳು ನಡೆಯಲು ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಜೀವಿಗಳು ಆಹಾರವನ್ನು ಸೇವಿಸಲೇ ಬೇಕಾಗುತ್ತದೆ.
  • ಗಂಡು ಜೀವಿಯು ಇತರ ಗಂಡುಗಳೊಡನೆ ಸ್ಪರ್ಧಿಸಲು ಅಗತ್ಯವಾದ ದೈಹಿಕ ಶಕ್ತಿಯನ್ನು ಗಳಿಸಬೇಕು ಹಾಗೂ ಉತ್ತಮ ಗುಣಮಟ್ಟದ ಸ್ತ್ರೀಆಕರ್ಷಕ ಸಾಮರ್ಥ್ಯವನ್ನು (ಬಣ್ಣ, ರೆಕ್ಕೆ, ಪುಕ್ಕ, ಧ್ವನಿ ಇತ್ಯಾದಿ) ಗಳಿಸಿಕೊಳ್ಳಬೇಕು. ಇವೆಲ್ಲಕ್ಕೂ ಶಕ್ತಿ ಬೇಕು. ಆ ಶಕ್ತಿಯನ್ನು ಪಡೆಯಲು ನಿಯಮಿತವಾಗಿ ಆಹಾರವನ್ನು ಸೇವಿಸಬೇಕು.
  • ಮನುಷ್ಯನಂತಹ ಜೀವಿಗಳಲ್ಲಿ "ಮಾತೃತ್ವ" ಪ್ರಧಾನ ಪಾತ್ರ ವಹಿಸುತ್ತದೆ.  ತಾವು ಹೆತ್ತ ಮಕ್ಕಳನ್ನು ಆರೈಕೆ ಮಾಡಿ, ಅವರು ಬೆಳೆದು ದೊಡ್ಡವರಾಗಿ, ತಮ್ಮ ಬದುಕನ್ನು ತಾವು ಸ್ವತಂತ್ರವಾಗಿ ನಡೆಸುವ ಸಾಮರ್ಥ್ಯವನ್ನು ಪಡೆಯುವವರಿಗೆ, ಹೆತ್ತವರು, ಮಕ್ಕಳ ಜವಾಬ್ದಾರಿ ಮತ್ತು ಯೋಗಕ್ಷೇಮವನ್ನು ಹೊರಬೇಕಾಗುತ್ತದೆ. ಇದಕ್ಕಾಗಿ ಆಹಾರ ಬೇಕಾಗುತ್ತದೆ.
  • ಅಂದರೆ, ಈ ಜಗತ್ತಿನ ಜೀವಿಗಳು, ಉತ್ಕೃಷ್ಟ ಸಂತಾನವನ್ನು ಪಡೆಯಲು ಅಗತ್ಯವಾದ ದೈಹಿಕ ಸಾಮರ್ಥ್ಯವನ್ನು ಗಳಿಸಲು ಹಾಗೂ ತಾನು ಹೆತ್ತ ಸಂತಾನವನ್ನು ರಕ್ಷಿಸಲು ಆಹಾರವನ್ನು ಸಂಪಾದಿಸುತ್ತವೆ ಹಾಗೂ ಸೇವಿಸುತ್ತವೆ ಎಂದಂತಾಯಿತು.  ಹಾಗಾಗಿ ‘ಆಹಾರ ಸಂಪಾದನೆ ಹಾಗೂ ಸೇವನೆಯು ಜೀವಜಗತ್ತಿನ ಎರಡನೆಯ ಅಲಿಖಿತ ನಿಯಮವಾಗಿದೆ ಎಂದು ಹೇಳಬಹುದು.

 

೩.     ಜೀವಜಗತ್ತಿನ ಮೂರನೆಯ ಅಲಿಖಿತ ನಿಯಮ: ಪರಸ್ಪರ ಅವಲಂಬನೆ:

ನಮ್ಮ ಭೂಮಂಡಲದಲ್ಲಿ ಬದುಕಿರುವ ಜೀವಿಗಳು ತಾವು ಬದುಕಲು ಇತರ ಜೀವಿಗಳನ್ನು ಪ್ರತ್ಯಕ್ಷವಾಗಿ ಅಥವ ಪರೋಕ್ಷವಾಗಿ ಅವಲಂಭಿಸಿರುತ್ತವೆ. ಅವಲಂಬನೆ ಅನಿವಾರ್ಯ. ಅದನ್ನು ಗಮನಿಸೋಣ.

  • ಹಸಿರು ಸಸ್ಯಗಳು ತಮ್ಮ ಹಸಿರು ಭಾಗಗಳಲ್ಲಿ ಹರಿತ್ತನ್ನು (ಕ್ಲೋರೋಫಿಲ್) ಪಡೆದಿರುತ್ತವೆ.  ವಾತಾವರಣದಿಂದ ಕಾರ್ಬನ್ ಡೈ ಆಕ್ಸೈಡ್, ನೆಲದಿಂದ ನೀರು, ಲವಣ, ಖನಿಜಾದಿಗಳನ್ನು ಹೀರುತ್ತವೆ.  ಸೂರ್ಯನ ಬೆಳಕಿನ ಉಪಸ್ಥಿತಿಯಲ್ಲಿ, ದ್ಯುತಿಸಂಶ್ಲೇಷಣೆ (ಫೋಟೋಸಿಂಥೆಸಿಸ್) ಯನ್ನು ನಡೆಸಿ ಗ್ಲೂಕೋಸ್ ರೂಪದ ಆಹಾರವನ್ನು ಸೃಜಿಸುತ್ತವೆ. ಸ್ವತಂತ್ರ ಬದುಕನ್ನು ನಡೆಸುತ್ತವೆ.
  • ಈ ಸಸ್ಯಗಳನ್ನು, ಸಸ್ಯಾಹಾರಿ ಪ್ರಾಣಿಗಳು ತಿನ್ನುತ್ತವೆ. 
  • ಸಸ್ಯಾಹಾರಿ ಪ್ರಾಣಿಗಳನ್ನು ಮಾಂಸಾಹಾರಿ ಪ್ರಾಣಿಗಳು ತಿನ್ನುತ್ತವೆ. 
  • ಸಸ್ಯಗಳು, ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳು ಉಸಿರಾಡಿ ಬಿಟ್ಟ ಕಾರ್ಬನ್ ಡೈ ಅಕ್ಸೈಡ್ ವಾತಾವರಣವನ್ನು ಸೇರುತ್ತದೆ.  ಈ ಕಾರ್ಬನ್ ಡೈ ಅಕ್ಸೈಡನ್ನು ಸಸ್ಯಗಳು ಆಹಾರ ಸಂಶ್ಲೇಷಣೆಗಾಗಿ ಬಳಸಿಕೊಳ್ಳುತ್ತವೆ.
  • ಸಸ್ಯಗಳು, ಸಸ್ಯಾಹಾರಿ ಪ್ರಾಣಿಗಳು ಹಾಗೂ ಮಂಸಾಹಾರಿ ಪ್ರಾಣಿಗಳು ಸತ್ತಾಗ, ಅವುಗಳ ದೇಹ ಮಣ್ಣಿನಲ್ಲಿ ಬಿದ್ದು ಕೊಳೆಯುತ್ತವೆ.  ಕೊಳೆಯುವಿಕೆಗೆ ಕಾರಣ ವಿವಿಧ ಬ್ಯಾಕ್ಟೀರಿಯ.  ಇವು ಪ್ರಕೃತಿಯಲ್ಲಿರುವ ಸಾವಯವ ವಸ್ತುಗಳನ್ನು ತಿಂದು ಬದುಕುತ್ತವೆ.  ಉಳಿದ ತ್ಯಾಜ್ಯ ವಸ್ತುಗಳನ್ನು ಮಣ್ಣಿನಲ್ಲಿ ಬೆರೆಸುತ್ತವೆ.  ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ.  ಫಲವತ್ತಾಗಿರುವ ಮಣ್ಣಿನಲ್ಲಿ ಸಸ್ಯಗಳು ಸೊಂಪಾಗಿ ಬೆಳೆಯುತ್ತವೆ.
  • ಹೀಗೆ ಜೀವಜಗತ್ತಿನಲ್ಲಿ ಬರುವ ಜೀವಿಗಳು ತಮಗರಿವಿಲ್ಲದೆಯೇ ಬದುಕಲು ಇತರ ಜೀವಿಗಳನ್ನು ಆಶ್ರಯಿಸುತ್ತವೆ. ಕೆಲವು ಜೀವಿಗಳಂತೂ ತಾವು ಬದುಕಲು ಇತರ ಜೀವಿಗಳನ್ನು ನೇರವಾಗಿ ಆಶ್ರಯಿಸುತ್ತವೆ. ಕೆಲವು ಉದಾಹರಣೆಗಳನ್ನು ಗಮನಿಸೋಣ.
  • ಕಲ್ಲು ಹೂವು (ಲೈಕೆನ್ಸ್) ನಮಗೆಲ್ಲ ಪರಿಚಿತವಾದ ಜೀವಿ. ಕಲ್ಲುಬಂಡೆಗಳ ಮೇಲೆ, ಮರದ ತೊಗಟೆಯ ಮೇಲೆ ನಸುಹಸಿರು ಬಣ್ಣದಲ್ಲಿ ಎಲೆಯಹಾಗೆ ಅಗಲವಾಗಿ ಬೆಳೆಯುವ ಕಲ್ಲುಹೂವನ್ನು ನಾವು ಮಸಾಲೆ ಪದಾರ್ಥವಾಗಿಯೂ ಬಳಸುತ್ತೇವೆ. ವಾಸ್ತವದಲ್ಲಿ ಕಲ್ಲುಹೂವೆನ್ನುವುದು ಎರಡು ಜೀವಿಗಳ ಸಮೂಹ ರಚನೆ.  ಆಸ್ಕೋಮೈಸೀಟಸ್ (೯೫%) ಅಥವ ಬೆಸಿಡೋಮೈಸೀಟಸ್ ಗುಂಪಿಗೆ ಸೇರಿದ ಶಿಲೀಂಧ್ರ ಹಾಗೂ ನೀಲ-ಹಸಿರು ಶೈವಲಗಳ (ಬ್ಲೂ-ಗ್ರೀನ್ ಆಲ್ಗೆ) ಗಳು ಒಟ್ಟಿಗೆ ಕೂಡುಜೀವನವನ್ನು (ಸಿಂಬಯೋಸಿಸ್) ನಡೆಸುತ್ತವೆ. ನಮ್ಮ ಕಣ್ಣಿಗೆ ಕಾಣುವ ಕಲ್ಲುಹೂವಿನ ಭಾಗವು ಶಿಲೀಂಧ್ರವಾಗಿರುತ್ತದೆ. ಇದರ ಒಡಲಿನಲ್ಲಿ ಶೈವಲವು ವಾಸಿಸುತ್ತದೆ. ಈ ಶೈವಲವನ್ನು ನಾವು ಸೂಕ್ಷ್ಮದರ್ಶಕದಡಿಯಲ್ಲಿ ಮಾತ್ರ ನೋಡಬಹುದು. ಶಿಲೀಂಧ್ರವು ತಾನು ಬೆಳೆಯುತ್ತಿರುವ ಕಲ್ಲು ಅಥವ ಅಥವ ಮರದ ತೊಗಟೆಯಲ್ಲಿ ತನ್ನ ಒಡಲನ್ನು ಇಳಿಬಿಟ್ಟು ಅಲ್ಲಿಂದ ನೀರು, ಲವಣ, ಖನಿಜಾದಿಗಳನ್ನು ಹೀರಿ ಶೈವಲಕ್ಕೆ ಪೂರೈಸುತ್ತದೆ. ಶೈವಲವು ಹಸಿರಾಗಿರುವ ಕಾರಣ ದ್ಯುತಿಸಂಶ್ಲೇಷಣೆಯ ಮೂಲಕ ಆಹಾರವನ್ನು ಸೃಜಿಸುತ್ತದೆ. ಶಿಲೀಂಧ್ರಕ್ಕೆ ನೀಡುತ್ತದೆ. ಹೀಗೆ ಎರಡು ಜೀವಿಗಳು ಪರಸ್ಪರ ಸಹಕಾರದಿಂದ ಆಹಾರವನ್ನು ಸಿದ್ಧಪಡಿಸಿಕೊಂಡು ಬದುಕನ್ನು ನಡೆಸುತ್ತವೆ.
  • ಭೂಮಿಯ ಮೇಲೆ ಹೂವು ಬಿಡುವ ಸಸ್ಯಗಳು ಜೇನುಹುಳದ ಸಖ್ಯವನ್ನು ಬಯಸಿದವು. ಜೇನುಹುಳುಗಳಿಗಾಗಿ ಮಧುರವಾದ ಮಕರಂದವನ್ನು ನೀಡಿದವು. ಬದಲಿಗೆ ಜೇನುಹುಳವು ಪರಾಗವನ್ನು ಒಂದು ಹೂವಿನಿಂದ ಮತ್ತೊಂದು ಹೂವಿಗೆ ವರ್ಗಾಯಿಸಿ ಉತ್ಕೃಷ್ಟ ಸಂತಾನ ರೂಪುಗೊಳ್ಳಲು ನೆರವಾದವು. ಹಾಗೆಯೇ ಈ ಗಿಡಗಳು ಸಿಹಿ ಸಿಹಿಯಾದ ಹಣ್ಣನ್ನು ಬಿಡಲಾರಂಬಿಸಿದವು. ಹಣ್ಣನ್ನು ತಿಂದ ಹಕ್ಕಿಗಳು ಹಾಗೂ ಮನುಷ್ಯನನ್ನು ಒಳಗೊಂಡಂತೆ ಇತರ ಪ್ರಾಣಿಗಳು ಬೀಜಪ್ರಸಾರದಲ್ಲಿ ಸಹಾಯ ಮಾಡಿದವು. ಸಸ್ಯ ಸಂತಾನದ ಬೆಳವಿಗೆ ನೆರವಾದವು.
  • ಮನುಷ್ಯನು ಹಸು, ಕುರಿ, ಮೇಕೆ, ಎಮ್ಮೆ ಮುಂತಾದ ಸಸ್ಯಾಹಾರಿ ಪ್ರಾಣಿಗಳನ್ನು ಸಾಕಲಾರಂಬಿಸಿ ಅವುಗಳಿಗೆ ಮಾಂಸಾಹಾರಿ ಪ್ರಾಣಿಗಳಿಂದ ರಕ್ಷಣೆಯನ್ನು ನೀಡಿದನು. ಅವು ಮನುಷ್ಯನಿಗೆ ಹಾಲನ್ನು ನೀಡಿದವು. ಇಂತಹ ಚರ್ಯೆ ಜೀವಜಗತ್ತಿನಲ್ಲಿಯೂ ಕಾಣಬಹುದು. ಫಾರ್ಮಿಕ ಮಸ್ಕ ಎಂಬುದು ಒಂದು ಇರುವೆ. ಈ ಇರುವೆಗಳು ‘ಹಾಲಿಗಾಗಿ ಹಸುಗಳನ್ನು ಸಾಕಿಕೊಳ್ಳುತ್ತವೆ‘. ಇದು ಲೈಸಿನಾಯ್ಡ್ ಗುಂಪಿನ ಚಿಟ್ಟೆಯ ಕಂಬಳಿಹುಳುವನ್ನು ಸಾಕುತ್ತದೆ. ಅದರ ರಕ್ಷಣೆಯ ಭಾರವನ್ನು ಹೊರುತ್ತದೆ. ಕಂಬಳಿ ಹುಳುವನ್ನು ತಿನ್ನಲು ಬರುವ ಕಣಜಾದಿಗಳೊಡನೆ ಹೋರಾಡಿ ಕಂಬಳಿಹುಳುವನ್ನು ಕಾಪಾಡುತ್ತದೆ. ಬದಲಿಗೆ ಕಂಬಳಿಹುಳುವು ಜೇನಿನಂತಹ ಮಧುರ ಸ್ರಾವವನ್ನು ತನ್ನ ಒಡಲಿನಿಂದ ಸ್ರವಿಸುತ್ತದೆ. ಇದನ್ನು ಇರುವೆ ಸೇವಿಸುತ್ತದೆ.

೪.     ಜೀವಜಗತ್ತಿನ ನಾಲ್ಕನೆಯ ಅಲಿಖಿತ ನಿಯಮ-ಈ ಭೂಮಿಯಲ್ಲಿ ಬದುಕಲು ಬೇಟೆಯಾಡಬೇಕು ಇಲ್ಲವೇ ಬೇಟೆಯಾಗಬೇಕು:

ಈ ಭೂಮಿಯ ಮೇಲೆ ಬದುಕಿರುವ ಜೀವಿಗಳು ತಮ್ಮ ಅಸ್ತಿತ್ವಕ್ಕಾಗಿ ಬೇಟೆಯಾಡಬೇಕು.  ಇಲ್ಲವೇ ಶಕ್ತಿಶಾಲಿಯಾದ ಮತ್ತೊಂದು ಜೀವಿಗೆ ಬೇಟೆಯಾಗಬೇಕು.  ಕೊಂದು ತಿನ್ನುವುದೇ ಈ ಭೂಮಿಯ ನ್ಯಾಯ. ಎಲ್ಲ ಜೀವಿಗಳು ಪಾಲಿಸುವ ಪರಮಸತ್ಯ. 

  • ಕೋಗಿಲೆಯನ್ನು ಗಮನಿಸಿ. ಕೋಗಿಲೆಯಲ್ಲಿ ಗೂಡನ್ನು ಕಟ್ಟುವಂತೆ ಪ್ರಚೋದಿಸುವ ವಂಶವಾಹಿಯಿರುವುದಿಲ್ಲ. ಹಾಗಾಗಿ ಗಂಡು-ಹೆಣ್ಣು ಕೋಗಿಲೆಗಳು ಒಟ್ಟಿಗೆ ಸೇರಿ ಕಾಗೆಯ ಕಣ್ಣಿಗೆ ಮಣ್ಣೆರಚಿ ತಮ್ಮ ಮೊಟ್ಟೆಯನ್ನು ಕಾಗೆಯ ಗೂಡಿನೊಳಗೆ ಇಡುತ್ತವೆ. ಮೊದಲು ಗಂಡು ಕೋಗಿಲೆ ಬಂದು ಕಾಗೆಯನ್ನು ಕೆಣಕುತ್ತದೆ. ಅದನ್ನು ಕಾಗೆಯು ಅಟ್ಟಿಸಿಕೊಂಡು ಹೋಗುತ್ತದೆ. ಆಗ ಹೆಣ್ಣು ಕೋಗಿಲೆಯು ಬಂದು ಕಾಗೆಯ ಗೂಡಿನಲ್ಲಿ ತನ್ನ ಮೊಟ್ಟೆಯನ್ನು ಇಟ್ಟು ಹೋಗಿಬಿಡುತ್ತದೆ. ಕಾಗೆಯು ತನ್ನ ಮೊಟ್ಟೆಗಳ ಜೊತೆಯಲ್ಲಿ ಕೋಗಿಲೆಯ ಮೊಟ್ಟೆಗೂ ಶಾಖವನ್ನು ನೀಡಿ ಮರಿಗಳನ್ನಾಗಿ ಮಾಡುತ್ತದೆ. ಕೋಗಿಲೆಯ ಮರಿಯು ಕಾಗೆಯ ಮರಿಗಿಂತ ತುಸು ದೊಡ್ಡದಿರುತ್ತದೆ. ಶಕ್ತಿಶಾಲಿಯಾಗಿರುತ್ತದೆ. ಹೆಚ್ಚು ಆಕ್ರಮಣಶೀಲತೆಯನ್ನು ತೋರುತ್ತದೆ. ಗೂಡಿನಲ್ಲಿರುವ ಕಾಗೆಯ ಮರಿಯನ್ನು ಗೂಡಿನಿಂದ ಕೆಳಕ್ಕೆ ನೂಕಿ ಕಾಗೆ ತರುವ ಆಹಾರವನ್ನು ತಾನು ಮೊದಲು ಕಬಳಿಸಿ ಬದುಕಲು ಹೋರಾಟ ನಡೆಸುತ್ತದೆ.
  • ಮನುಷ್ಯನು ತಾನು ಬದುಕಲು ಹೇಗೆ ಮೋಸ, ವಂಚನೆ, ಸುಳ್ಳು, ಅನ್ಯಾಯ ಎಲ್ಲವನ್ನು ಮಾಡುತ್ತಾನೆ ಎನ್ನುವುದು ನಮಗೆಲ್ಲ ತಿಳಿದ ವಿಷಯ. ದರೋಡೆ, ಸುಲಿಗೆ, ಕೊಳ್ಳೆ, ಕೊಲೆ ಎಲ್ಲವನ್ನು ಮಾಡಲು ಹಿಂದೆಗೆಯುವುದಿಲ್ಲ. ತನ್ನ ಧರ್ಮವನ್ನು ಎತ್ತಿ ಹಿಡಿಯಲು ಎಲ್ಲ ರೀತಿಯ ಜ಼ಿಹಾದ್-ಗಳನ್ನು ಮಾಡುತ್ತಾನೆ. ಕಾಡು ಜಗತ್ತಿನಷ್ಟು ನೇರವಾಗಿರುವುದಿಲ್ಲ ನಾಡ ಜಗತ್ತಿನ ಬೇಟೆ.  ಬಹಳ ಸೂಕ್ಷ್ಮವಾಗಿರುತ್ತದೆ.
  • ಈ ಭೂಮಿಯಲ್ಲಿ ಜೀವಿಗಳು ಬದುಕಲು ತಮ್ಮ ದೈಹಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತವೆ. ಆನಂತರ ನಾನಾ ರೀತಿಯ ಉಪಾಯಗಳಿಂದ ಎದುರಾಳಿಗಳನ್ನು ಮೋಸಗೊಳಿಸುತ್ತವೆ. ಶತ್ರುಗಳಿಂದ ತಪ್ಪಿಸಿಕೊಳ್ಳುತ್ತವೆ. ಅಸ್ತಿತ್ವದ ಪ್ರಶ್ನೆ ಬಂದಾಗ ಕರುಣೆ ಎಂಬ ಶಬ್ಧಕ್ಕೆ ಸ್ಥಾನವಿರುವುದಿಲ್ಲ. ಬದುಕಲು ಬೇಟೆಯಾಡಬೇಕು ಇಲ್ಲವೇ ಬೇಟೆಯಾಗಬೇಕು-ಇದು ಜೀವಜಗತ್ತಿನ ನಾಲ್ಕನೆಯ ಅಲಿಖಿತ ನಿಯಮ.

 

೫.     ಜೀವಜಗತ್ತಿನ ಐದನೆಯ ಅಲಿಖಿತ ನಿಯಮ- ಬಲಶಾಲಿಯಾದದ್ದು ಬದುಕುತ್ತದೆ. ದುರ್ಬಲವಾದದ್ದು ಅಳಿಯುತ್ತದೆ.

  • ಪ್ರೇಮ ಹಾಗೂ ಯುದ್ಧದಲ್ಲಿ ಎಲ್ಲ ರೀತಿಯ ಹೋರಾಟಕ್ಕೆ ಮಾನ್ಯತೆಯಿದೆ. ಹಾಗಾಗಿ ಬದುಕಿನ ಯುದ್ಧದಲ್ಲಿ ಜೀವಿಗಳು ದೈಹಿಕ ಶಕ್ತಿಯನ್ನು ಅವಲಂಬಿಸುವುದರ ಜೊತೆತೆ, ನಾನಾ ರೀತಿಯ ತಂತ್ರಗಳನ್ನು ಅನುಸರಿಸುತ್ತವೆ. ಶತ್ರುಗಳನ್ನು ಸೋಲಿಸುತ್ತವೆ. ತಮ್ಮನ್ನು ರಕ್ಷಿಸಿಕೊಳ್ಳುತ್ತವೆ.
  • ಹೆಣ್ಣು ಚಿಂಪಾಂಜ಼ಿಯು ಅನೇಕ ಗಂಡು ಚಿಂಪಾಂಜ಼ಿಯನ್ನು ಕೂಡುತ್ತದೆ. ಮೊದಲು ವೀರ್ಯದಾನ ಮಾಡಿದ ಚಿಂಪಾಂಜ಼ಿಯ ವೀರ್ಯದಲ್ಲಿ ೯೯% ವೀರ್ಯಾಣುಗಳು ಕಾಮಿಕಾಜ಼ಿ ವೀರ್ಯಾಣುಗಳು. ಅಂದರೆ ಇತರ ಗಂಡುಗಳ ವೀರ್ಯಾಣುಗಳನ್ನು ತಡೆಗಟ್ಟುವುದಕ್ಕಾಗಿ ನಿಯೋಜಿತಗೊಂಡಂತಹವು. ೧% ವೀರ್ಯಾಣುಗಳು ಮಾತ್ರ ಸುರಕ್ಷಿತವಾಗಿ ಅಂಡಾಣುವಿನೊಡನೆ ಸಂಯೋಗ ಹೊಂದಲು ಧಾವಿಸುತ್ತವೆ. ೯೯% ವೀರ್ಯಾಣುಗಳಲ್ಲಿ ಟೈಪ್-ಎ ವೀರ್ಯಾಣುಗಳು, ಇತರ ಗಂಡುಗಳ ವೀರ್ಯಾಣುಗಳ ಪ್ರವೇಶವನ್ನು ನಿರ್ಬಂಧಿಸಲು ಪ್ರಯತ್ನಿಸುತ್ತವೆ. ಟೈಪ್-ಬಿ ವೀರ್ಯಾಣುಗಳು ಇತರ ಗಂಡುಗಳ ವೀರ್ಯಾಣುಗಳ ಮೇಲೆ ಆಕ್ರಮಣ ಮಾಡಿ ಅವನ್ನು ನಿಗ್ರಹಿಸಲು ಪ್ರಯತ್ನಿಸುತ್ತವೆ. ಹೆಣ್ಣು ಚಿಂಪಾಂಜ಼ಿಗಳ ಯೋನಿಯಲ್ಲಿ ವೀರ್ಯಾಣು ಸಮರ ಅನಿವಾರ್ಯ.  ಹಾಗಾಗಿ ಗಂಡು ಚಿಂಪಾಂಜ಼ಿಯು ದೊಡ್ಡ ವೃಷಣಗಳನ್ನು ಹೊಂದಿದ್ದು, ಹೆಚ್ಚು ಹೆಚ್ಚು ವೀರ್ಯವನ್ನು ಉತ್ಪಾದಿಸುತ್ತದೆ.
  • ಸಸ್ಯಾಹಾರಿಯಾದ ಜಿಂಕೆಯು ಚಿರತೆಯಿಂದ ತನ್ನನ್ನು ಉಳಿಸಿಕೊಳ್ಳಲು ವೇಗವಾಗಿ ಚಿರತೆಗೆ ಜಿಂಕೆಯೇ ಆಹಾರ. ಜಿಂಕೆಯು ತನ್ನ ಗರಿಷ್ಠ ಮಿತಿಯ ಓಟವನ್ನು ದೀರ್ಘಕಾಲ ಕಾದಿಟ್ಟುಕೊಳ್ಳಬಲ್ಲುದು. ಚಿರತೆಯು ಜಿಂಕೆಯನ್ನು ಬೇಟೆಯಾಡಬೇಕಾದರೆ, ಜಿಂಕೆಗಿಂತ ಹೆಚ್ಚು ವೇಗವಾಗಿ ಓಡಬೇಕಾಗುತ್ತದೆ.  ಪ್ರಕೃತಿಯು ಚಿರತೆಗೆ ಜಿಂಕೆಗಿಂತ ವೇಗದಲ್ಲಿ ಓಡುವ ಸಾಮರ್ಥ್ಯವನ್ನು ನೀಡಿದೆ.  ಆದರೆ ಚಿರತೆ ತನ್ನ ಗರಿಷ್ಟ ವೇಗವನ್ನು ಹೆಚ್ಚು ಕಾಲ ಕಾದಿಟ್ಟುಕೊಳ್ಳಲಾರದು.  ಗರಿಷ್ಠ ೫-೧೦ ನಿಮಿಷಗಳ ಮಾತ್ರ ಕಾದಿಟ್ಟುಕೊಳ್ಳಬಹುದು. ಹಾಗಾಗಿ ಆ ೫-೧೦ ನಿಮಿಷಗಳಲ್ಲಿ ಯಾವ ಪ್ರಾಣಿಯು ತನ್ನ ಶಕ್ತಿ ಹಾಗೂ ತಂತ್ರಗಳನ್ನು ಯಶಸ್ವಿಯಾಗಿ ಬಳಸುತ್ತದೋ, ಅದು ಮಾತ್ರ ಬದುಕುತ್ತದೆ. 
  • ಈ ಜಗತ್ತು ಒಂದು ರಣರಂಗ.  ಯಾವಾಗ ಈ ಭೂಮಿಯ ಮೇಲೆ ಜೀವರಾಶಿ  ಹುಟ್ಟಿತೋ ಆ ಕ್ಷಣದಲ್ಲಿಯೇ ಇದು ಒಂದು ರಣರಂಗವಾಗಿ ಮಾರ್ಪಟ್ಟಿತು.  ಇಲ್ಲಿ ವರ್ಷದ ೩೬೫ ದಿವಸಗಳು, ದಿವಸದ ೨೪ ಗಂಟೆಗಳು, ಗಂಟೆಯ ೬೦ ನಿಮಿಷಗಳು, ನಿಮಿಷದ ೬೦ ಸೆಕೆಂಡುಗಳು ಕುರುಕ್ಷೇತ್ರಗಳು ನಡೆಯುತ್ತಲೇ ಇರುತ್ತವೆ.
  •  ನಮ್ಮ ಬದುಕನ್ನು ವಿಚಾರ ಮಾಡೋಣ. ಮನುಷ್ಯರಾದ ನಾವು ಬದುಕಲು ಹೋರಾಟವನ್ನು ನಡೆಸುತ್ತಿರುತ್ತೇವೆ.  ನಾವು ಮೂರು ರೀತಿಯಲ್ಲಿ ಹೋರಾಟವನ್ನು ನಡೆಸಬೇಕಾಗುತ್ತದೆ.

೧. ಹುಲಿ, ಸಿಂಹ, ಚಿರತೆ ಮುಂತಾದ ಹಿಂಸ್ರ ಪಶುಗಳು,

೨. ನಮ್ಮ ಬರಿಗಣ್ಣಿಗೆ ಕಾಣದ ಬ್ಯಾಕ್ಟೀರಿಯ, ವೈರಸ್ಸು, ಶಿಲೀಂಧ್ರ ಮುಂತಾದ ಅದೃಶ್ಯ ಲೋಕದ ಅಗೋಚರ ಜೀವಿಗಳು.

೩. ನಮ್ಮಂತಹ ಇತರ ಮನುಷ್ಯರು.

 

೧. ನಮಗಿಂತ ಶಕ್ತಿಶಾಲಿಯಾದ ಪ್ರಾಣಿಗಳು ಅಸಂಖ್ಯ ಇವೆ. 

  • ಈ ಹಿಂಸ್ರಪಶುಗಳು ಕಾಡುಗಳಲ್ಲಿರುತ್ತವೆ.  ಇಂದಿಗೆ ೧೦,೦೦೦ ವರ್ಷಗಳ ಹಿಂದೆ ವಾಸವಾಗಿದ್ದ ನಮ್ಮ ಪೂರ್ವಜರು ಯಾವ ಕ್ಷಣದಲ್ಲಿ ಬೇಕಾದರೂ ಈ ಕಾಡು ಪ್ರಾಣಿಗಳಿಗೆ ಆಹಾರವಾಗಬಹುದಿತ್ತು. ಹಾಗಾಗಿ ಅವರ ಜೀವಕ್ಕೆ ಯಾವಾಗಲೂ ಭಯವಿರುತ್ತಿತ್ತು. ಸದಾ ಅವರು ಒತ್ತಡದ ಬದುಕನ್ನು ನಡೆಸಬೇಕಾಗಿತ್ತು.
  • ಮಾನವನು ನಾಗರೀಕನಾದನು. ಕಾಡನ್ನು ಕಡಿದು ನಾಡನ್ನು ಕಟ್ಟಿದನು. ಇಂದು ಕಾಡುಗಳು ಬಹುಪಾಲು ನಾಶವಾಗಿವೆ.  ಹಿಂದೆ ಇದ್ದಷ್ಟು ಕಾಡು ಪ್ರಾಣಿಗಳು ಇಂದಿಲ್ಲ.  ಇರುವ ಕೆಲವು ಪ್ರಾಣಿಗಳನ್ನು ಅಭಯಾರಣ್ಯಗಳಲ್ಲಿ ನಾವೇ ಸುರಕ್ಷಿತವಾಗಿ ಸಂರಕ್ಷಿಸಿದ್ದೇವೆ. ಸಾಮಾನ್ಯ ಮನುಷ್ಯರಾದ ನಾವು ನಮ್ಮ ದೈನಂದಿನ ಬದುಕಿನಲ್ಲಿ ಕಾಡಿಗೆ ಹೋಗುವುದಿಲ್ಲ.  ಕಾಡಿಗೆ ಹೋಗಬೇಕಾದ ಕೆಲವೇ ಜನರು ಸಹಾ ಆಧುನಿಕ ಆಯುಧ ಸಮೇತ ಹೋಗುತ್ತಾರೆ. ಅವು ಹತ್ತಿರ ಬರುವಷ್ಟರಲ್ಲಿ ಸುಟ್ಟು ಕೊಲ್ಲುತ್ತಾರೆ. ಹಾಗಾಗಿ ಒಂದಾನೊಂದು ಕಾಲದಲ್ಲಿ ನಾವು ಕಾಡು ಪ್ರಾಣಿಗಳಿಗೆ ಸುಲುಭವಾಗಿ ಬಲಿಯಾಗುತ್ತಿದ್ದೆವು. ಇಂದು ಹಾಗಾಗುತ್ತಿಲ್ಲ. ಇಂದು ಎಲ್ಲಾ ಹಿಂಸ್ರ ಪಶುಗಳನ್ನು ನಾವು ನಮ್ಮ ಬುದ್ಧಿ ಶಕ್ತಿಯಿಂದ ಹತೋಟಿಯಲ್ಲಿ ಇಟ್ಟುಕೊಂಡಿದ್ದೇವೆ.
  • ಹಾಗಾಗಿ ೧೦,೦೦೦ ವರ್ಷಗಳ ಹಿಂದೆ ಇದ್ದ ಕಾಡು ಮನುಷ್ಯನು ಅನುಭವಿಸಿದಂತಹ ಜೀವ ಭಯ ಒತ್ತಡವನ್ನು ಇಂದು ನಾವು ಅನುಭವಿಸುತ್ತಿಲ್ಲ. ನಮ್ಮ ಒತ್ತಡ ಧಾರಣ ಶಕ್ತಿ ಹೆಚ್ಚಿದೆ. ಇಂದು ಕಾಡು ಪ್ರಾಣಿಗಳು ನಮ್ಮ ಸ್ಪರ್ಧಿಗಳಾಗಿಲ್ಲ.  ನಮ್ಮ ಅಳಿವು-ಉಳಿವಿನ ಹೋರಾಟದಲ್ಲಿ ಕಾಡು ಪ್ರಾಣಿಗಳ ಪಾತ್ರ ಗೌಣವಾಗಿದೆ.

೨. ನಮ್ಮ ಬರಿಗಣ್ಣಿಗೆ ಕಾಣದ ಅದೃಶ್ಯ ಲೋಕದ ಜೀವಿಗಳು ಅಪಾರ. 

  •  ನಾವು ಬ್ಯಾಕ್ಟೀರಿಯಾ, ವೈರಸ್, ಶಿಲೀಂದ್ರಗಳು, ಏಕಾಣುಜೀವಿಗಳು,  ಕ್ಲಮೈಡಿಯೇ, ರಿಕೆಟ್ಸಿಯೆ ಇತ್ಯಾದಿಗಳನ್ನು ಸೂಕ್ಷ್ಮಜೀವಿಗಳು ಎಂದು ಗುರುತಿಸುತ್ತೇವೆ.  ಇವೂ ಸಹಾ ಜೀವಜಗತ್ತಿನ ಅಲಿಖಿತ ನಿಯಮಗಳಿಗೆ ಬದ್ಧವಾಗಿರುವಂತಹ ಜೀವಿಗಳು. 
  • ಈ ಜೀವಿಗಳಿಗೆ ಆಹಾರ ನಾವು. 
  • ನಮ್ಮ ದೇಹದಲ್ಲಿರುವ ಪೋಷಕಾಂಶಗಳನ್ನು ತಿಂದು ತನ್ನ ಸಂಸಾರವನ್ನು ವರ್ಧಿಸುವ ಮೂಲಭೂತ ಇಚ್ಛೆ, ಈ ಎಲ್ಲಾ ಸೂಕ್ಷ್ಮ ಜೀವಿಗಳಲ್ಲಿ ಇರುತ್ತದೆ.
  • ರೋಗಕಾರಕ ಸೂಕ್ಷ್ಮಜೀವಿಗಳು ನಮ್ಮ ದೇಹದಲ್ಲಿ ವರ್ಧಿಸುವಾಗ ನಮಗೆ ನಾನಾ ರೀತಿಯ ರೋಗಗಳು ಬರುತ್ತವೆ. ವರ್ಧನೆಯು ಮಿತಿಮೀರಿದಾಗ ಸಾವು ಸಂಭವಿಸುತ್ತದೆ.
  • ಕೆಲವು ರೋಗಗಳು ಪಿಡುಗು ರೂಪವನ್ನು ತಳೆಯುವುದುಂಟು. ಒಂದು ಸಲ ಪ್ಲೇಗು ಬಂದಿತೆಂದರೆ ಹಳ್ಳಿಗೆ ಹಳ್ಳಿಯೇ ನಿರ್ನಾಮವಾಗುತ್ತಿದ್ದುದನ್ನು ನಾವು ಇತಿಹಾಸದಲ್ಲಿ ನೋಡಿದ್ದೇವೆ.  ಹಾಗಾಗಿ ರೋಗಕಾರಕ ಸೂಕ್ಷ್ಮ ಜೀವಿಗಳು ಹಾಗೂ ಮನುಷ್ಯರ ನಡುವೆ ನಡೆಯುತ್ತಿದ್ದ ಈ ಅನಾದಿ ಕುರುಕ್ಷೇತ್ರದಲ್ಲಿ ಬಹಳಷ್ಟು ಸಲ ಸೂಕ್ಷ್ಮಜೀವಿಗಳೇ ವಿಜಯವನ್ನು ಸಾಧಿಸುತ್ತಿದ್ದವು. ಆದರೆ ಮನುಷ್ಯ ತನ್ನ ಬುದ್ದಿ ಶಕ್ತಿಯಿಂದ ರೋಗಕಾರಕ ಸೂಕ್ಷ್ಮಜೀವಿಗಳನ್ನು ನಿಯಂತ್ರಿಸಲು ನಾನಾ ತಂತ್ರಗಳನ್ನು ರೂಪಿಸಿದ್ದಾನೆ. ಅವುಗಳಲ್ಲಿ ಲಸಿಕೆ ಮುಖ್ಯವಾದದ್ದು.  ಹಾಗೆಯೇ ಪ್ರತಿಜೈವಿಕ ಔಷಧಿಗಳನ್ನು ರೂಪಿಸಿದ್ದಾನೆ.  ಇಂದು ಪ್ಲೇಗು ಬಂದರೆ ಯಾರೂ ಸಾಯುವುದಿಲ್ಲ.  ಪ್ಲೇಗು ಬಂದ ವ್ಯಕ್ತಿ ಸಕಾಲದಲ್ಲಿ ಔಷಧವನ್ನು ತೆಗೆದುಕೊಂಡರೆ, ಅವನು ಬದುಕುವ ಸಾಧ್ಯತೆಯು ನೂರಕ್ಕೆ ನೂರರಷ್ಟು ಇರುತ್ತದೆ.
  • ಹಿಂಸ್ರ ಪಶುಗಳನ್ನು ಹತೋಟಿಯಲ್ಲಿ ಇಟ್ಟುಕೊಂಡ ಹಾಗೆ, ರೋಗಕಾರಕ ಸೂಕ್ಷ್ಮಜೀವಿಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಮನುಷ್ಯನಿಗೆ ಸಾಧ್ಯವಾಗಿಲ್ಲ ಎಂಬ ಮಾತು ಸತ್ಯ.  ವಿಸ್ತೃತ ಲಸಿಕೆಯನ್ನು ನೀಡಿ, ಸಿಡುಬು ವೈರಸ್ಸನ್ನು  ನಿರ್ನಾಮ ಮಾಡಿದೆ ಎಂದು ಮನುಷ್ಯ ಬೀಗುತ್ತಿರುವಂತೆಯೇ, ಅವನಿಗೆ ಸವಾಲು ಹಾಕುವಂತಹ ಹಲವು ಸೂಕ್ಷ್ಮ ಕ್ರಿಮಿಗಳು ಉದಯಿಸಿವೆ.  ಉದಾಹರಣೆಗೆ ಎಚ್.ಐ.ವಿ, ಸಾರ್ಸ್ ವೈರಸ್, ಇಬೋಲಾ ವೈರಸ್ ಇತ್ಯಾದಿ.  ಕ್ಷಯದಂತಹ ರೋಗಕಾರಕ ಸೂಕ್ಷ್ಮಜೀವಿಯು, ಔಷಧ ನಿರೋಧಕತೆ ಎಂಬ ಹೊಸ ಕವಚವನ್ನು ಧರಿಸಿ, ಮನುಷ್ಯನ ಸಾಮರ್ಥ್ಯಕ್ಕೆ ಸವಾಲು ಹಾಕುತ್ತಿದೆ.  ಇಂತಹ ಜೀವಿಗಳನ್ನು ನಿರ್ನಾಮ ಮಾಡಲು ಮನುಷ್ಯನಿಗೆ ಸಾಧ್ಯವಾಗುತ್ತಿಲ್ಲ.  ಹಾಗಾಗಿ ಇಂದು ಮನುಷ್ಯ ಬರಿಗಣ್ಣಿಗೆ ಕಾಣದ ಈ ರೋಗಕಾರಕಗಳೊಡನೆ ಹೋರಾಟವನ್ನು ನಡೆಸಿದ್ದಾನೆ.  ತನ್ನ ಉಳಿವಿಗಾಗಿ ಈ ಹೋರಾಟದಲ್ಲಿ ಅವನು ಅನಿವಾರ್ಯವಾಗಿ ಬಾಗಿಯಾಗಲೇಬೇಕಾಗುತ್ತದೆ.
  •  ಸೂಕ್ಷ್ಮಜೀವಿಗಳು ಹಾಗೂ ಮನುಷ್ಯರ ನಡುವಿನ ಹೋರಾಟ ಇಂದು ನಿನ್ನೆಯದಲ್ಲ.  ಅನಾದಿಕಾಲದ್ದು. ಇದು ಯುಗಯುಗಗಳ ಹೋರಾಟ. ಈ ನಿರಂತರ ಯುದ್ಧದಲ್ಲಿ ಬಹಳಷ್ಟು ಸಲ ವಿಜಯ ಸೂಕ್ಷ್ಮಜೀವಿಗಳಿಗೆ ದೊರೆತಿವೆ.  ಇಂದಿಗೆ ೫೦-೬೦ ವರ್ಷಗಳ ಹಿಂದೆ, ಒಂದು ಸಲ ಪ್ಲೇಗು ಬಂದಿತೆಂದರೆ ಊರಿಗೆ ಊರೇ ನಾಶವಾಗಿಬಿಡುತ್ತಿತ್ತು.
  • ಇಂದು ಪ್ರತಿಕ್ಷಣ ನಮ್ಮ ಒಡಲಿನಲ್ಲಿ ಹಲವು ಕುರುಕ್ಷೇತ್ರ ಯುದ್ಧಗಳು ಏಕ ಕಾಲದಲ್ಲಿ ನಡೆಯುತ್ತಿರುತ್ತವೆ. ರೋಗಕಾರಕ ಸೂಕ್ಷ್ಮ ಜೀವಿಗಳು ನಮ್ಮ ದೇಹದಲ್ಲಿ ಬೀಡು ಬಿಡಲು ಪ್ರಯತ್ನವನ್ನು ಮಾಡುತ್ತಿದ್ದರೆ, ಮಾನವ ದೇಹದ ಮಿಲಿಟರಿ ಪಡೆಯು (ವಿನಾವಣಾ ವ್ಯೂಹ) ಅವನ್ನು ನಿಗ್ರಹಿಸಲು ಹೋರಾಡುತ್ತಿರುತ್ತದೆ.  ಈ ಹೋರಾಟ ತೀವ್ರ ಸ್ವರೂಪದಲ್ಲಿ ನಡೆಯುವಾಗ, ಅದು ಒತ್ತಡಕ್ಕೆ ಕಾರಣವಾಗಬಹುದು.  ಅತಿ ಒತ್ತಡಕ್ಕೆ ಸಿಲುಕಿದ ಮನುಷ್ಯನಲ್ಲಿ, ಒತ್ತಡ ಧಾರಣ ಶಕ್ತಿ ಕುಗ್ಗಿ, ಸೋಂಕು ನಿರೋಧಕ ಶಕ್ತಿ ಕಡಮೆಯಾಗುವುದರಿಂದ ರೋಗಕಾರಕಗಳ ಕೈ ಮೇಲಾಗಬಹುದು.  ಇದೂ ಸಹಾ ಒತ್ತಡ ಹೆಚ್ಚಲು ಕಾರಣವಾಗುತ್ತದೆ.

೩.  ಸಹ ಮಾನವ:  ಇಂದು ಮನುಷ್ಯನ ಒತ್ತಡಕ್ಕೆ ಕಾರಣವಾಗಿರುವ ಮೂರನೆಯ ಜೀವಿ ಎಂದರೆ ಸ್ವಯಂ ಮನುಷ್ಯನೇ!

  • ಒಬ್ಬ ಮನುಷ್ಯನು ತಾನು ಬದುಕಲು ಹೇಗೆ ಹಿಂಸ್ರ ಪಶುಗಳೊಡನೆ ಹಾಗೂ ರೋಗಕಾರಕ ಸೂಕ್ಷ್ಮಜೀವಿಗಳೊಡನೆ ಹೋರಾಟವನ್ನು ಮಾಡಬೇಕಾಗಿದೆಯೋ, ಹಾಗೆಯೇ ತನ್ನಂತಹ ಇತರ ಮನುಷ್ಯರೊಡನೆಯೂ ಹೋರಾಟವನ್ನು ಮಾಡಬೇಕಾಗಿದೆ. ಸಹ ಮಾನವನೊಡನೆ ನಡೆಸುವ ಹೋರಾಟ,  ಉಳಿದ ಎರಡು ಜೀವಿಗಳೊಡನೆ ನಡೆಸುವ ಹೋರಾಟಕ್ಕಿಂತ ಗಂಭೀರವಾದದ್ದು ಹಾಗೂ ಅಪಾಯಕಾರಿಯಾದದ್ದು. ಉಳಿವುಗಾಗಿ ಮನುಷ್ಯ ಹಾಗೂ ಮನುಷ್ಯನ ನಡುವೆ ನಡೆಯುವ ಹೋರಾಟವನ್ನು ನಾವು ‘ಮಾನವ ಇತಿಹಾಸ‘ ಎಂದು ಕರೆಯುತ್ತೇವೆ. 
  • ಜೀವಜಗತ್ತಿನ ನಾಲ್ಕು ಹಾಗೂ ಐದನೆಯ ಅಲಿಖಿತ ನಿಯಮಗಳು ಮನುಷ್ಯರ ವಿಷಯದಲ್ಲಿ ಪರಿಪೂರ್ಣ ರೂಪವನ್ನು ತಳೆದಿವೆ. ಜೀವ ಜಗತ್ತಿನ ಯಾವುದೇ ಜೀವಿಗೆ ಅನ್ವಯವಾಗದಂತಹ ಪ್ರಮಾಣದಲ್ಲಿ ಇವನ ಮೇಲೆ ಆಕ್ರಮಣ ಮಾಡುತ್ತಿವೆ. ಇಂದು, ಅಸ್ಥಿತ್ವಕ್ಕಾಗಿ ನಡೆಯುವ ಹೋರಾಟ, ಮಾನವನ ಒತ್ತಡಕ್ಕೆ ಬಹು ಮುಖ್ಯವಾದ ಕಾರಣಾವಾಗಿದೆ.  ಈ ಅಸ್ಥಿತ್ವ ಹೋರಾಟದ (ಈ ಅಸ್ಥಿತ್ವ ಹೋರಾಟವನ್ನು ಇನ್ನು ಮುಂದೆ ಬರೀ ‘ಹೋರಾಟ‘ ಎಂಬ ಶಬ್ದದಿಂದ ಸೂಚಿಸೋಣ) ನಾನಾ ಮುಖಗಳ ಸ್ಥೂಲ ಪರಿಚಯವನ್ನು ಈಗ ನೋಡೋಣ.
  • ಇಂದಿನ ಮನುಷ್ಯನ ವೈಜ್ಞಾನಿಕ ನಾಮಧೇಯ ‘ಹೋಮೋ ಸೆಪಿಯನ್ಸ್‘.  ಇವನ ಸಮಕಾಲೀನ ನಿಯಾಂದರ್‌ತಾಲ್ ಮಾನವ.  ಇವನು ಮನುಷ್ಯನಷ್ಟು ಬುದ್ಧಿವಂತನಲ್ಲ.  ಹಾಗಾಗಿ ಇಂದಿನ ಮನುಷ್ಯನು ನಿಯಾಂದರ್‌ತಾಲ್ ಮನುಷ್ಯನೊಡನೆ ಹೋರಾಡಿ ಅವನನ್ನು ನಿರ್ನಾಮ ಮಾಡಿದನು. ಅವನ ಪ್ರದೇಶವನ್ನು ಆಕ್ರಮಿಸಿಕೊಂಡನು. ಅಲ್ಲಿ ದೊರೆಯುತ್ತಿರುವ ನೈಸರ್ಗಿಕ ಸಂಪತ್ತನ್ನು ಬಳಸಿಕೊಂಡನು!  ತಾನು ಬೆಳೆದನು! ತನ್ನ ವಂಶವನ್ನು ಬೆಳೆಸಿದನು!!
  • ಹೋಮೋ ಸೆಪಿಯನ್ಸ್‌ಗಳಲ್ಲಿ ಭೌಗೋಳಿಕ ಪ್ರದೇಶಗಳನ್ನಾಧರಿಸಿ ಕಕೇಶಿಯನ್ನರು, ನೀಗ್ರೋಗಳು, ಮಂಗೋಲಾಯ್ಡ್‌ಗಳು, ಆಸ್ಟ್ರಲಾಯ್ಡ್‌ಗಳು ಎಂಬ ವಂಶಗಳನ್ನು (ರೇಸ್) ಗುರುತಿಸಬಹುದು.  ಈ ವಂಶಗಳು ರೂಪುಗೊಳ್ಳಲು ಆಯಾ ಭೌಗೋಳಿಕ ಅಂಶಗಳು ಕಾರಣವಾಗಿರುತ್ತವೆ.  ಈ ವಂಶದ ಜನರು, ಆಹಾರಕ್ಕಾಗಿ ಅಲೆದಾಡುತ್ತಾ, ಒಬ್ಬರ ಪ್ರದೇಶದಲ್ಲಿ ಮತ್ತೊಬ್ಬರು ಬಂದಾಗ, ಅವರ ನಡುವೆ ಉಳಿವಿಗಾಗಿ ಹೋರಾಟ (ಜಗಳ/ಯುದ್ಧ) ನಡೆಯುತ್ತದೆ.  ಹೀಗೆ ನಡೆದಿದೆ.  ನಡೆಯುತ್ತಿದೆ.  ಮುಂದೆಯೂ ನಡೆಯುತ್ತದೆ.
  • ಚರ್ಮದ ಬಣ್ಣ ಶ್ರೇಷ್ಟ-ಕನಿಷ್ಟ ಎಂಬ ತಾರತಮ್ಯವನ್ನು ಉಂಟು ಮಾಡುವುದನ್ನು ನಾವು ನೋಡಿದ್ದೇವೆ. ಬಿಳಿ ತೊಗಲಿನವರಿಗೆ ತಾವು ಶ್ರೇಷ್ಟ ಎಂಬ ಭ್ರಮೆ. ಕಂದು-ಕಪ್ಪುತೊಗಲಿನವರನ್ನು ಹೇಗೆ ತುಳಿಯುತ್ತಾ ಬಂದರು ಎಂಬುದನ್ನು ಇತಿಹಾಸದಲ್ಲಿ ನೋಡಿದ್ದೇವೆ. ಇಂದು ಮದುವೆಯಾಗ ಹೊರಡುವ ಗಂಡು/ಹೆಣ್ಣು ತನ್ನ ಸಂಗಾತಿ ಬೆಳ್ಳಗಿರಬೇಕು ಎಂದು ನಿರೀಕ್ಷಿಸುತ್ತಾನೆ. ಬೆಳ್ಳಗಿರುವ ಹುಡುಗ ಅಥವ ಹುಡುಗಿ ಮನಮೆಚ್ಚಿ ಕಪ್ಪಗಿರುವ ಹುಡುಗಿ ಅಥವ ಹುಡುಗನನ್ನು ಮದುವೆಯಾಗುವುದು ವಿರಳ.
  • ಕಕೇಶಿಯನ್ನರನ್ನು ಉದಾಹರಣೆಗೆ ತೆಗೆದುಕೊಳ್ಳೋಣ. ಇವರು ಬೆಳ್ಳಗಿರುವ ಜನ. ಎತ್ತರಕ್ಕಿದ್ದರು. ಇವರ ಕೂದಲು ಹೊಂಬಣ್ಣಕ್ಕಿತ್ತು ಎನ್ನಲಾಗಿದೆ. ಮಧ್ಯ ಏಷ್ಯಾ ಖಂಡದಲ್ಲಿದ್ದ ಈ ಜನ, ಆಹಾರವನ್ನು ಅರಸಿಕೊಂಡು ಪಶ್ಚಿಮವಾಗಿ ವಲಸೆ ಹೊರಟರು. ಒಂದು ಗುಂಪು ಯೂರೋಪ್ ಖಂಡವನ್ನು ಪ್ರವೇಶಿಸಿತು.  ಒಂದು ಭಾರತ ಉಪಖಂಡದತ್ತ ಸಾಗಿತು.  ಮೂರನೆಯ ಗುಂಪು ಕವಲು ರಸ್ತೆಯಲ್ಲಿ (ಇಂದಿನ ಇರಾನ್ ಪ್ರದೇಶ) ಉಳಿಯಿತು. ಈ ಕಕೇಶಿಯನ್ನರನ್ನು, ಅವರು ನೆಲೆಸಿದ ಪ್ರದೇಶಗಳನ್ನು ಆಧರಿಸಿ, ಬ್ರಿಟೀಷರು, ಜರ್ಮನ್ನರು, ಫ್ರೆಂಚರು, ಡಚ್ಚರು, ಇರಾನಿಯನ್ನರು, ಗ್ರೀಕರು ಎಂದೆಲ್ಲಾ ಕಾಲಕ್ರಮೇಣ ಗುರುತಿಸಿದರು. ವಿವಿಧ ಪ್ರದೇಶಗಳಲ್ಲಿದ್ದ ಕಕೇಶಿಯನ್ನರ ನಡುವೆಯೇ, ಅವರವರ ಉಳಿವಿಗಾಗಿ ಹೋರಾಟ ನಡೆದಿರುವುದನ್ನು ಇತಿಹಾಸದಲ್ಲಿ ನೋಡಬಹುದು.  ಬ್ರಿಟೀಷರು ಹಾಗೂ ಫ್ರೆಂಚರ ನಡುವಿನ ಶೀತಲ ಯುದ್ಧ ಇಂದೂ ನಡೆಯುತ್ತಿದೆ.  ಇಂತಹ ಹೋರಾಟಗಳಲ್ಲಿ ‘ಶಾಶ್ವತ ವಿಜಯ‘ (ನಿಯಾಂದರ್‌ತಾಲ್ ಮಾನವನಲ್ಲಿ ಆದಂತೆ) ಎನ್ನುವುದಿಲ್ಲ.  ತಾತ್ಕಾಲಿಕ ಸೋಲು-ಗೆಲುವುಗಳು ಆಗುತ್ತಿರುತ್ತವೆ.
  • ಭಾರತ ಉಪಖಂಡವನ್ನು ಪ್ರವೇಶಿಸಿದ ಆರ್ಯರು ಒಂದು ಗುಂಪಿನವರಾಗಿದ್ದರು.  ಇವರಲ್ಲಿ ಬುದ್ಧಿಶಕ್ತಿಯನ್ನು ನಂಬಿದವರು ಬ್ರಾಹ್ಮಣರಾದರೆ, ತೋಳ್ಬಲವನ್ನು ನಂಬಿದವರು ಕ್ಷತ್ರಿಯರಾದರು. ಇವೆರಡು ಸಾಮರ್ಥ್ಯ ಇಲ್ಲದವರು ಶೂದ್ರರಾದರು. ಈ ಆರ್ಯರು ಸ್ಥಳೀಯ ದ್ರಾವಿಡರನ್ನು ಸೋಲಿಸಿದಾಗ, ಶೂದ್ರರಾಗಿದ್ದ ಆರ್ಯರು ‘ವೈಶ್ಯ’ರು ಎಂಬ ಹೊಸ ವರ್ಗವನ್ನು ರೂಪಿಸಿಕೊಂಡು, ದ್ರಾವಿಡರನ್ನು ಶೂದ್ರರನ್ನಾಗಿಸಿದರು. ಮಾನವ ಇತಿಹಾಸದಲ್ಲಿ ಹಿಂದೆಂದು ಕಾಣದಂತಹ ವರ್ಣ ಪದ್ಧತಿಯನ್ನು ಜಾರಿಗೆ ತಂದರು. ಇದು ಇಂದಿಗೂ ಜಾರಿಯಲ್ಲಿದೆ. ಶೋಷಣೆಯ ಗರಿಷ್ಠ ಮಟ್ಟದ ಕುರುಹು ವರ್ಣ ಪದ್ಧತಿ. ಇತಿಹಾಸ ತಜ್ಞರು ಹಾಗೂ ಸಮಾಜಶಾಸ್ತ್ರಜ್ಞರು ವರ್ಣ ಪದ್ಧತಿಗೆ ಏನೇ ವಿವರಣೆಯನ್ನು ಕೊಡಲಿ, ವೈಜ್ಞಾನಿಕವಾಗಿಯಂತೂ ಇದು ನಾಲ್ಕು ಹಾಗೂ ಐದನೆಯ ಅಲಿಖಿತ ನಿಯಮದ ಫಲವಾಗಿದೆ.
  • ಶೂದ್ರಾತಿ ಶೂದ್ರರೆನಿಸಿಕೊಂಡಿರುವ ಹರಿಜನರಲ್ಲಿಯೂ ಎಡಗೈನವರು ಹಾಗೂ ಬಲಗೈನವರು ಎಂದು ಭೇದಗಳಿವೆ.  ಬಲಿಷ್ಠರಾದ ಬಲಗೈನವರು ಶ್ರೇಷ್ಟರೆನಿಸಿಕೊಂಡು, ಎಡಗೈನವರನ್ನು ಶೋಷಿಸುತ್ತಿದ್ದಾರೆ.  ತಮ್ಮ ಉಳಿವಿಗಾಗಿ ಬಲಗೈ ಹರಿಜನರು ಅನಿವಾರ್ಯವಾಗಿ ಎಡಗೈ ಹರಿಜನರನ್ನು ತುಳಿಯಬೇಕಾಗಿದೆ.
  • ಮನುಷ್ಯರಲ್ಲಿ ಉಳಿವಿಗಾಗಿ ಶ್ರೇಷ್ಠತೆಯು ಪ್ರಧಾನ ಪಾತ್ರ ವಹಿಸುತ್ತದೆ. ಚಾತುರ್ವರ್ಣದಲ್ಲಿ ಬ್ರಾಹ್ಮಣರು ಸರ್ವಶ್ರೇಷ್ಠರು.  ಶ್ರೇಷ್ಟತ್ವಕ್ಕಾಗಿ ಬ್ರಾಹ್ಮಣ-ಕ್ಷತ್ರಿಯರಲ್ಲಿ ನಡೆದ ತಿಕ್ಕಾಟವನ್ನು ವೇದಗಳಲ್ಲಿ ಕಾಣಬಹುದು.
  • ವಂಶ, ಪ್ರಾದೇಶಿಕತೆ, ವರ್ಣಗಳ ಜೊತೆ ಭಾಷೆಯೂ ಸಹಾ, ಮಾನವನ ಉಳಿವಿಗಾಗಿ ನಡೆಯುವ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.   ಸಂಸ್ಕೃತ ಭಾಷೆಯು  ಪ್ರಾಚೀನ ಭಾರತದ ಪ್ರಾದೇಶಿಕ ಭಾಷೆಗಳನ್ನೆಲ್ಲ ತುಳಿದು ಪ್ರವರ್ಧಮಾನಕ್ಕೆ ಬಂದಿತು.  ಬ್ರಿಟೀಷರೊಡನೆ ಬಂದ ಇಂಗ್ಲೀಷ್ ಭಾಷೆಯು ಸಂಸ್ಕೃತದ ಶ್ರೇಷ್ಟತ್ವಕ್ಕೆ ಸವಾಲನ್ನು ಹಾಕಿತು.  ಭಾರತದಲ್ಲಿ ಪ್ರಜಾ ಪ್ರಭುತ್ವದ ಆಗಮನದೊಡನೆ ಸಂಸ್ಕೃತ ಭಾಷೆಗೆ ಮರಣಾಂತಕ ಪೆಟ್ಟು ಬಿದ್ದಿತು. ರಾಷ್ಟ್ರಭಾಷೆಯಾಗುವ ಸ್ಥಾನದಿಂದ ಚ್ಯುತವಾಯಿತು.  ಹಿಂದಿ ಮೆರೆಯಿತು.
  • ಇಂದು ನಾವು ಇಂಗ್ಲೀಷ್ ಹಾಗೂ ಕನ್ನಡದ ನಡುವೆ ನಡೆಯುವ ಹೋರಾಟವನ್ನು ನೋಡುತ್ತಿದ್ದೇವೆ.  ಇಂದು ಎಲ್ಲಿ ನೋಡಿದರೂ ಇಂಗ್ಲೀಷ್ ಮಾಧ್ಯಮದ ಶಾಲೆಗಳು.  ಕನ್ನಡ ಭಾಷೆಗೆ ಕರ್ನಾಟಕದಲ್ಲಿ ಸ್ಥಾನವಿಲ್ಲ.  ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಲು ಇಂದಿಗೂ ನಮಗಾಗಿಲ್ಲ.  ಇಂಗ್ಲೀಷಿನಲ್ಲಿ ಪುಸ್ತಕ ಬರೆಯುತ್ತಾನೆ, ಭಾಷಣ ಮಾಡುತ್ತಾನೆ ಎಂದರೆ ಅವನು ಶ್ರೇಷ್ಠ ಸಾಹಿತಿ.  ಕನ್ನಡದಲ್ಲಿ ಬರೆಯುವವರೆಂದರೆ ಮೂಗು ಮುರಿಯುವವರೇ ಹೆಚ್ಚು. ಕನ್ನಡವು ಅಳಿಯುತ್ತಿರುವ ಭಾಷೆಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದೆ. ಹಾಗಾಗಿ ಮುಂದಾನೊಂದು ಕಾಲದಲ್ಲಿ ಕನ್ನಡವು ಒಂದು ಪಳೆಯುಳಿಕೆಯ ಭಾಷೆಯಾಗಲಿದೆ ಎಂಬ ಭೀತಿ ಕೆಲವರನ್ನಾದರೂ ಕಾಡುತ್ತಿದೆ.  ತನ್ನ ಉಳಿವಿಗಾಗಿ ಕನ್ನಡ ಅಗತ್ಯ ಹೋರಾಟವನ್ನು ಮಾಡುವುದೆ ಎಂಬುದು ನಮ್ಮ ಮುಂದಿರುವ ಯಕ್ಷಪ್ರಶ್ನೆ.
  • ವಿಚಿತ್ರವೆಂದರೆ ಒಂದೇ ಭಾಷೆಯಲ್ಲಿಯೂ ಸಹಾ ಉಳಿವಿಗಾಗಿ ಹೋರಾಟ ನಡೆಯುವುದುಂಟು.  ಉದಾಹರಣೆಗೆ ಕನ್ನಡವನ್ನು ಗಮನಿಸೋಣ. ಬರಹದ ಕನ್ನಡಕ್ಕೆ ಸಮೀಪವಾಗಿರುವ ಮೈಸೂರು ಕನ್ನಡವನ್ನು ಪರಿಷ್ಕೃತ ಹಾಗೂ ಶ್ರೇಷ್ಠ ಕನ್ನಡ ಎಂದು ಕೆಲವರು ಭಾವಿಸಿರುವರು. ಮಂಗಳೂರು ಕನ್ನಡ, ಹುಬ್ಬಳ್ಳಿ ಕನ್ನಡ, ದಾವಣಗೆರೆ ಕನ್ನಡ, ಹವ್ಯಕ ಕನ್ನಡ ಇತ್ಯಾದಿಗಳನ್ನು ಕನ್ನಡದ ಉಪಭಾಷೆಗಳೆಂದು ಕರೆಯುವರು. ಈ ಉಪಭಾಷೆಗಳನ್ನು ಆಡುವವರು ಬರೆಯುವಾಗ ಬರಹದ ಕನ್ನಡವನ್ನೇ ಬಳಸುವರು. ತಮ್ಮ ಪ್ರಾದೇಶಿಕ ಸೊಗಡಿನ ಭಾಷೆಯನ್ನು ವ್ಯವಹಾರದಲ್ಲಿ ಬಳಸುವುದು ಕಡಿಮೆ. ಸಾಹಿತ್ಯದಲ್ಲಿ ಸ್ವಲ್ಪಮಟ್ಟಿಗಾದರೂ ಪ್ರಾದೇಶಿಕ ಭಾಷೆಯು ಜೀವವನ್ನು ಉಳಿಸಿಕೊಂಡಿರುವುದು ಸಂತಸದ ಸಂಗತಿ. ಜ್ಞಾನಪೀಠ ಪ್ರಶಸ್ತಿ ವಿಜೇತ ಶ್ರೀಶಿವರಾಮ ಕಾರಂತರನ್ನು  ಒಮ್ಮೆ ಪ್ರಶ್ನೆ ಕೇಳಿದರು. ಸರ್, ನೀವು ಕೊಟ ಪ್ರದೇಶದಲ್ಲಿ ಬಳಕೆಯಾಗುವ ಕನ್ನಡವನ್ನೇ ಬಳಸಿ ಏಕೆ ಕಾದಂಬರಿಯನ್ನು ಬರೆಯಲಿಲ್ಲ? ಆಗ ಕಾರಂತರು ನಾನು ಕೊಟ ಪ್ರದೇಶದ ಕನ್ನಡವನ್ನು ಬಳಸಿ ಕಾದಂಬರಿಯನ್ನು ಬರೆದಿದ್ದರೆ, ಅದನ್ನು ಕೇವಲ ಕೋಟ ಪ್ರದೇಶದ ಕನ್ನಡಿಗರು ಮಾತ್ರ ಓದುತ್ತಿದ್ದರು. ನನ್ನ ಕಾದಂಬರಿಯನ್ನು ಸಮಸ್ತ ಕನ್ನಡಿಗರು ಓದಬೇಕು. ಹಾಗಾಗಿ ಎಲ್ಲರಿಗೂ ತಿಳಿಯುವ ಶಿಷ್ಟ ಕನ್ನಡದಲ್ಲಿ ಬರೆದೆ ಎಂದರು. ಸೂಕ್ಷ್ಮವಾಗಿ ಗಮನಿಸಿದರೆ ಪ್ರಾದೇಶಿಕ ಕನ್ನಡಗಳಲ್ಲಿಯೂ ಉಳಿವಿಗಾಗಿ ಹೋರಾಟ ನಡೆಯುವುದನ್ನು ನಾವು ಗಮನಿಸಬಹುದು.
  • ಕುಟುಂಬದಲ್ಲಿಯೂ ಉಳಿವಿಗಾಗಿ ಹೋರಾಟ ನಡೆಯುತ್ತದೆ.  ಬಹುಶಃ ತಾಯಿಯನ್ನು ಬಿಟ್ಟರೆ, ಉಳಿದವರೆಲ್ಲಾ, ತಾವು ಉಳಿಯಲು ಇತರರನ್ನು ‘ಬಲಿ’ ತೆಗೆದುಕೊಳ್ಳಲು ಹಿಂಜರಿಯದಿರುವುದನ್ನು ನಾವು ಕಾಣಬಹುದು.
  • ಉಳಿವಿಗಾಗಿ ಗಂಡು ಹಾಗೂ ಹೆಣ್ಣಿನ ನಡುವೆ ಹೋರಾಟ ನಡೆದಿರುವುದನ್ನು ಇತಿಹಾಸದಾದ್ಯಂತ ನಾವು ಕಾಣುತ್ತಿದ್ದೇವೆ.  ಆದಿಯಲ್ಲಿ ಮಾತೃಪ್ರಧಾನ ಸಮಾಜವಿದ್ದು ಹೆಣ್ಣೇ ಯಜಮಾನಿಯಾಗಿದ್ದಳು.  ಈಗ ಜಗತ್ತಿನಲ್ಲಿ ಬಹುಪಾಲು ಸಮಾಜಗಳು ಪುರುಷ ಪ್ರಧಾನ ಸಮಾಜಗಳಾಗಿವೆ.  ಪುರುಷ ಹೆಣ್ಣಿನ ಮೇಲೆ ನಡೆಸುತ್ತಿರುವ ದೌರ್ಜನ್ಯ ಹಾಗೂ ಶೋಷಣೆ ಒಂದು ದೊಡ್ಡ ಗ್ರಂಥವಾದೀತು.  ಗಂಡು ತನ್ನ ಉಳಿವಿಗಾಗಿ ಸದಾ ಹೆಣ್ಣನ್ನು ಮೆಟ್ಟಿ ನಿಲ್ಲಲು ಪ್ರಯತ್ನಿಸುತ್ತಿರುತ್ತಾನೆ.
  • ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ಸಹಾ ತಮ್ಮ ಉಳಿವಿಗಾಗಿ ಹೋರಾಟ ನಡೆಸಲು ಮನ ಮಾಡಿದ್ದಾರೆ.  ಆದರೆ ಅದು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆಯೇನೋ ಎಂದನಿಸುತ್ತಿದೆ.
  • ಮನುಷ್ಯ ಸಂಘ ಜೀವಿಯಾಗಿರುವ ಕಾರಣ, ನಾಗರೀಕತೆಯನ್ನು ರೂಪಿಸಿಕೊಂಡಿರುವ ಕಾರಣ, ಹೊಟ್ಟೆ ಪಾಡಿಗಾಗಿ ಒಂದು ಉದ್ಯೋಗವನ್ನು ಮಾಡಬೇಕಾಗಿದೆ.  ಉದ್ಯೋಗ ರಂಗ ಕ್ಷುದ್ರ ಸ್ಪರ್ಧೆಯ ಕ್ಷೇತ್ರವಾಗಿರುತ್ತದೆ. ಅಲ್ಲಿ ಗಂಡು ಗಂಡುಗಳ ನಡುವೆ ಉಳಿವಿಗಾಗಿ ಹೋರಾಟ ನಡೆಯುತ್ತಿರುತ್ತದೆ.  ಈ ಹೋರಾಟ ಉಂಟು ಮಾಡುವ ಒತ್ತಡ ಅಸಹನೀಯ.
  • ಉದ್ಯೋಗರಂಗದಲ್ಲಿ ‘ಪುರುಷರಿಗಾಗಿಯೇ ಮೀಸಲಿದ್ದ ಕ್ಷೇತ್ರಗಳು‘ ಕೆಲವು ಇದ್ದವು.  ಸಾಮಾನ್ಯವಾಗಿ ಹೆಣ್ಣು ಮಕ್ಕಳು ಈ ಉದ್ಯೋಗಗಳನ್ನು ಮಾಡಲು ಮುಂದೆ ಬರುತ್ತಿರಲಿಲ್ಲ.  ಉದಾ: ಸೈನಿಕ, ವಿಮಾನ ಚಾಲಕ, ಆಟೋ ಡ್ರೈವರ್, ಬಸ್ ಡ್ರೈವರ್, ಬಸ್ ಕಂಡಕ್ಟರ್, ಮೆಕ್ಯಾನಿಕ್, ಪುರೋಹಿತ, ಸರ್ಜನ್,  ಎಲೆಕ್ಟ್ರಿಶಿಯನ್ ಇತ್ಯಾದಿ.  ಈಗ ಈ ಕ್ಷೇತ್ರಗಳಲ್ಲಿ ಮಹಿಳೆಯರು ಕೆಲಸ ಮಾಡಲು ಹಿಂಜರಿಯುತ್ತಿಲ್ಲ.  ಹಾಗಾಗಿ ಗಂಡಸರಿಗೆ ಹೊಸ ಆತಂಕ ಶುರುವಾಗಿದೆ. ಸ್ಪರ್ಧೆ ತೀವ್ರವಾಗುತ್ತಿದೆ.
  • ಈ ಎಲ್ಲ ಅರಿವಿನ ಹಿನ್ನೆಲೆಯಲ್ಲಿ, ನಾವು ಎರಡು ಮುಖ್ಯವಾದ ಅಂಶಗಳನ್ನು ಗಮನಿಸಬಹುದಾಗಿದೆ.  ಆ ಎರಡು ಅಂಶಗಳನ್ನು ಈ ಕೆಳಕಂಡಂತೆ ಸಂಗ್ರಹಿಸಬಹುದು.

೧. ಇಂದು ಮನುಷ್ಯ-ಮನುಷ್ಯರ ನಡುವೆ ಬದುಕಲು ಹೋರಾಟ ತೀವ್ರವಾಗಿ ನಡೆಯುತ್ತಿದೆ.

೨. ವಂಶ, ವರ್ಣ, ಜಾತಿ, ಭಾಷೆ, ಲಿಂಗ, ದೇಶ, ರಾಜ್ಯ, ಪ್ರಾದೇಶಿಕತೆ, ಗುಂಪುಗಾರಿಕೆ  ಇತ್ಯಾದಿಗಳೆಲ್ಲ ಉಳಿವಿಗಾಗಿ ಮಾನವ ಗುಂಪುಗಳು ರೂಪಿಸಿಕೊಂಡಿರುವ ಹೋರಾಟ ತಂತ್ರಗಳಾಗಿವೆ. 

ಇಂದು ಬದುಕಲು ಮನುಷ್ಯನೂ ಮೂರು ರೀತಿಯ ಜೀವಿಗಳೊಡನೆ ಹೋರಾಟವನ್ನು ನಡೆಸಬೇಕಾಗಿದೆ ಎಂದು ಆರಂಭದಲ್ಲಿ ವಿಚಾರ ಮಾಡಿದೆವಲ್ಲವೇ!  ವಾಸ್ತವವಾಗಿ ಮೊದಲ ಗುಂಪಿನ ಜೀವಿಗಳು (ಹಿಂಸ್ರ ಪಶುಗಳು) ಇಂದು ಒಂದು ಸಮಸ್ಯೆಯೇ ಆಗಿಲ್ಲ.  ಎರಡನೆಯ ಗುಂಪಿನ ಜೀವಿಗಳು (ರೋಗ ಕಾರಕ ಸೂಕ್ಷ್ಮಜೀವಿಗಳನ್ನು) ಸಾಕಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗಿದೆ.  ನಿಜವಾಗಿ ಇಂದು ಹೋರಾಟ ನಡೆಯುತ್ತಿರುವುದು ಮೂರನೆಯ ಗುಂಪಿನ ಜೀವಿಗಳ ನಡುವೆ!  ಅಂದರೆ ಮನುಷ್ಯ ಹಾಗೂ ಮನುಷ್ಯನ ನಡುವೆ! 

ಈ ಹೋರಾಟಗಳು, ಸ್ವಯಂ ಮನುಷ್ಯ ಹಾಗೂ ಮನುಷ್ಯ ಪ್ರಭೇದದ ಅಳಿವು-ಉಳಿವುಗಳನ್ನು ನಿರ್ಧರಿಸಲಿವೆ. ಇದು ಒತ್ತಡದ ಯುಗ. ಪ್ರತಿಯೊಬ್ಬರು ಸಹಾ ಒತ್ತಡದ ಬದುಕನ್ನು ನಡಸಲೇಬೇಕಾದ ಅನಿವಾರ್ಯತೆಯುಂಟಾಗಿದೆ.  ನಮಗೆ ಇಷ್ಟವಿರಲಿ ಅಥವಾ ಇಲ್ಲದಿರಲಿ, ಒತ್ತಡ ಚದುರಂಗದಲ್ಲಿ ನಾವು ಒಂದು ಕಾಯಿ ಅಷ್ಟೆ! ಪರಮಾಣು ಯುದ್ಧದ ಹಿನ್ನೆಲೆಯಲ್ಲಿ ಆಲೋಚಿಸಿದರೆ, ಬಲಶಾಲಿಯ ಉಳಿವಿಗಾಗಿ ಎಂತಹ ಹೋರಾಟ ಭವಿಷ್ಯದಲ್ಲಿ ನಡೆಯಲಿದೆ ಎಂಬ ಭೀತಿ ನಮ್ಮನ್ನು ಆವರಿಸುತ್ತದೆ.

 

(ಈ ಲೇಖನಕ್ಕೆ ಆಧಾರ ಚಾರ್ಲ್ಸ್ ಡಾರ್ವಿನ್ ಮುಂತಾದ ಚಿಂತಕ ಶ್ರೇಷ್ಟರ ಬರಹಗಳು)

 

---೦---

 

-ಡಾ.ನಾ.ಸೋಮೇಶ್ವರ

www.yakshaprashne.org

http://globalconditions.files.wordpress.com/2007/04/ftsharks_800x600.jpg