ವರ್ಷ ವರ್ಷಗಳಿಂದ ಎಣಿಸಿ ಗುಣಿಸಿ
ಮುಗಿದವು ಪಕಾಸಿ ಮರ ಮುಟ್ಟುಗಳು
ಹೆಂಚಿನಾ ಸೂರೊಂದು ಇಲ್ಲದಿದ್ದರೆ
ಮುಗಿಯುತ್ತಿತು ನಕ್ಷತ್ರ, ಮುಗಿಲುಗಳು
ಆರಂಭದಲ್ಲಿ ಅತಿಥಿಗಳ ಲೆಕ್ಕ
ಕೋಳು ಹಿಡಿದ ಪಕಾಸಿಯಷ್ಟಿತ್ತು
ದಿನಗಳೆದಂತೆ ಅಭ್ಯಾಗತರ ಲೆಕ್ಕ
ಕೊಳಕು ಹಂಚಿನಾ ಸಂಖ್ಯೆಯಲ್ಲಿತ್ತು
ಬಂದರು ಹೋದರು ಲೆಕ್ಕವಿಲ್ಲದಷ್ಟು
ಬೆರಳು ಮಡಚಿ ಲೆಕ್ಕಮಾಡಲಾಗದಷ್ಟು
ಸುಖ ಹುಡುಕಿ ಬಂದವರಷ್ಟು
ದು:ಖ ಮರೆತು ಹೋದವರಿನ್ನಷ್ಟು
ಹಿಂಡಿದರು ಹಿಪ್ಪೆಮಾಡಿದರು
ಮತ್ತೆ ಸರಿಯಾಗಲಾರದಷ್ಟು
ಅರವತ್ತರ ಮನಸ್ಸು ಸರಿಯಿದ್ದರೂ
ಜನ ಅರಳುಮರಳು ಎನ್ನುವಷ್ಟು
ಸುಖಕ್ಕೇ ಬರಲಿ ದು:ಖಕ್ಕೆ ಬರಲಿ
ಆಕಾಶಕ್ಕೆ ಮುಖ ಮಾಡಿ ಎಣಿಸುವುದಿಷ್ಟು
ಆಸೆಯಿಂದ ಬರಲಿ ನಿರಾಸೆಯಿಂದ ಬರಲಿ
ನಾವು ಜನ್ಮಜನ್ಮಾಂತರದಿಂದ ಪಡೆದಿದ್ದಿಷ್ಟು.
ಪ್ರತಿಕ್ರಿಯೆ (7)