ಸಂಪದ ಓದುಗರಿಗಾಗಿ ಕೊಕ್ ಕಥಾವಳಿ!

  • ಕೊಕ್ ಕಥಾವಳಿಯ ಮೊದಲ ಅಧ್ಯಾಯವನ್ನು ನಾನು ಬರಿದಿದ್ದೇನೆ.
  • ಕೊಕ್ ಕಥಾವಳಿಯ ಎರಡನೆಯ ಅಧ್ಯಾಯವನ್ನು ಅಸು ಹೆಗ್ಡೆ ಬರೆಯಬೇಕೆಂದು ಕೊಕ್ ನೀಡಿದ್ದೇನೆ.
  • ಅಸು ಹೆಗ್ಡೆ ತಮಗೆ ಇಷ್ಟವಾದ ಸಂಪದಿಗರಿಗೆ ಮೂರನೆಯ ಅಧ್ಯಾಯವನ್ನು ಬರೆಯುವಂತೆ ಕೊಕ್ ನೀಡಬೇಕು.
  • ಮೂರನೆಯ ಅಧ್ಯಾಯದವರು ನಾಲ್ಕನೆಯ ಅಧ್ಯಾಯವನ್ನು ಬರೆಯುವಂತೆ ತಮಗೆ ಸರಿ ಕಂಡ ಸಂಪದಿಗರಿಗೆ ಕೊಕ್ ನೀಡಬಹುದು.

ಕೊಕ್ ಕಥಾವಳಿಗೆ ನಿಯಮಗಳಿವೆ. 

  • ನಾನು ನೀಡಿರುವ ಕಥೆಯ ಜಾಡನ್ನು ಹಿಡಿದೇ ಕಥೆಯನ್ನು ಮುಂದುವರೆಸಬೇಕು.  
  • ಮುಂದಿನ ಕಥೆಯನ್ನು ಕಲ್ಪಿಸಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ಕೊಕ್ ಪಡೆದ ಕಥೆಗಾರರಿಗೆ ಉಂಟು. 
  • ಕೊಕ್ ಪಡೆದವರು ತಮ್ಮ ಅಧ್ಯಾಯವನ್ನು ಸುಮಾರು ೫೦೦ ಪದಗಳಲ್ಲಿ ಬರೆಯಬೇಕು.
  • ಅಧ್ಯಾಯದ ಅಂತ್ಯ ಕುತೂಹಲವನ್ನು ಹುಟ್ಟಿಸುವಂತಿದ್ದು, ಮುಂದಿನ ಕಥೆ ಹೇಗೆ ಸಾಗಬಹುದು ಎಂಬ ಊಹೆ-ಕಾತುರ ಸಂಪದಿಗರಲ್ಲಿ ಹುಟ್ಟುವಂತಿರಬೇಕು.
  • ಕೊಕ್ ಪಡೆದ ಕಥೆಗಾರರು ತಮ್ಮ ಅಧ್ಯಾಯವನ್ನು ಬರೆದು ಕಳುಹಿಸಲು ಕೇವಲ ೪೮ ಗಂಟೆ ಮಾತ್ರ ಕಾಲಾವಕಾಶ. ಹೆಚ್ಚಿನ ಸಮಯ ತೆಗೆದುಕೊಂಡರೆ ಓದುಗರ ಉತ್ಸಾಹಕ್ಕೆ ಭಂಗವಾಗಬಹುದು.
  • ಕೊಕ್ ಕಥಾವಳಿಯನ್ನು ಸಾಮಾನ್ಯವಾಗಿ ೧೨ ಅಧ್ಯಾಯಗಳಿಗೆ ಮುಗಿಸುವುದು ವಾಡಿಕೆ. ಆದರೆ ಸಮರ್ಥವಾಗಿ ಕಥೆಯನ್ನು ಹೆಣೆಯಬಲ್ಲ ಕಥೆಗಾರರು ಇರುವವರಿಗೂ  ಕೊಕ್ ಕೊಡುತ್ತಾ ಹೋಗಬಹುದು. ಆದರೆ ಕೊನೆಯಲ್ಲಿ ಎಲ್ಲ ಅಧ್ಯಾಯಗಳನ್ನು ಓದಿದರೆ, ಅದು ಒಬ್ಬರು ಬರೆದ ಕಾದಂಬರಿಯೇನೋ ಎಂಬಂತೆ ಸುಸಂಬದ್ಧವಾಗಿರಬೇಕು.
  • ಕೊಕ್ ಕಥಾವಳಿ ಕನ್ನಡಕ್ಕೆ ಹೊಸದಲ್ಲ! ಇಂತಹ ಪ್ರಯೋಗಗಳನ್ನು ಹಲವರು, ಹಲವು ಸಲ ಮಾಡಿರುವರು. ತುಷಾರ ಪತ್ರಿಕೆಯು ಇಂತಹ ಕೊಕ್ ಕಥಾವಳಿಯ ಪ್ರಯೋಗಗಳನ್ನು ಸಾಕಷ್ಟು ಸಲ ಮಾಡಿದೆ! ಈಗ ಸಂಪದಿಗರಿಗೊಂದು ಅವಕಾಶ!

            ಒಂದು ಬೋನಸ್ ಸುದ್ಧಿ! ಕೊಕ್ ಕಥಾವಳಿ ಪೂರ್ಣವಾದ ನಂತರ, ಈ ಕಾದಂಬರಿಗೆ ಸೂಕ್ತವಾದ ಹೆಸರನ್ನು ನೀಡಿದ ಮೂವರಿಗೆ ”ಥಟ್ ಅಂತ ಹೇಳಿ” ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ! ಕಾದಂಬರೀ ಶೀರ್ಷಿಕೆಯನ್ನು ಆಯ್ಕೆ ಮಾಡುವ ತೀರ್ಪುಗಾರರ ಹೆಸರು ಸಧ್ಯಕ್ಕೆ ಗುಟ್ ಗುಟ್ಟು!

 

-       ಡಾ.ನಾ.ಸೋಮೇಶ್ವರ

ಕೊಕ್ ಕಥಾವಳಿ-೧

 

ಶವದ ಮನೆ!

ಹೌದು. ಪ್ರತಿಯೊಂದು ಆಸ್ಪತ್ರೆಗಳಲ್ಲಿ ಒಂದು ಶವದ ಮನೆ ಇರುತ್ತದೆ. ಹಾಗೆಯೇ ದುಗ್ಗಲಾಪುರದ ಸರ್ಕಾರೀ ಆಸ್ಪತ್ರೆಯಲ್ಲಿಯೂ ಒಂದು ಶವದ ಮನೆಯಿದೆ. ಶವದ ಮನೆಯಲ್ಲಿ ಶವಗಳನ್ನಲ್ಲದೆ ಬೇರೆ ಏನನ್ನು ತಾನೆ ಇಡಲು ಸಾಧ್ಯ? ಸಾಮಾನ್ಯವಾಗಿ ವಾರಸುದಾರರಿಲ್ಲದ  ಅನಾಥ ಶವಗಳನ್ನು ಶವದ ಮನೆಯಲ್ಲಿ ಇಡುವುದುಂಟು. ಕೆಲವು ಸಲ ದೊಡ್ಡ ಅಪಘಾತಗಳಾಗಿಯೋ, ಕಳ್ಳಬಟ್ಟಿಯನ್ನು ಕುಡಿದೋ ಇಲ್ಲವೇ ಹೊಡೆದಾಟದಲ್ಲಿ ಸತ್ತವರು ಸಾಕಷ್ಟಿದ್ದಾಗ ಎಲ್ಲ ಶವಗಳನ್ನು ಒಟ್ಟಿಗೆ ಇಲ್ಲಿಯೇ ಇಡುವುದುಂಟು. ಹೊಡೆದಾಟದಲ್ಲಿ ಎರಡೂ ಕಡೆಯವರ ಶವಗಳನ್ನು ಒಂದೇ ಶವದ ಮನೆಯಲ್ಲಿ ಇಡುವ ಕಾರಣ, ವಾರಸುದಾರರು ತಮ್ಮ ತಮ್ಮ ಶವಗಳನ್ನು ತೆಗೆದುಕೊಂಡು ಹೋಗುವಾಗಲೂ ಸಣ್ಣ ಪುಟ್ಟ ಜಗಳಗಳಾಗುವುದುಂಟು.

            ಶವದ ಮನೆಯ ವಾರಸುದಾರ ದುಂಡಪ್ಪ. ಆದರೆ ಅವನು ಯಾವತ್ತೂ ದುಂಡಗಿರಲಿಲ್ಲ. ಏಕೆಂದರೆ ಅವನು ತಾನಾಯಿತು...ತನ್ನ ಗುಂಡಾಯಿತು! ಎಲ್ಲರೂ ಅವನನ್ನು ಗುಂಡಪ್ಪ ಎಂದೇ ಕರೆಯುತ್ತಾರೆ. ಏಕೆ ಹಾಗೆ ಕರೆಯುತ್ತಾರೆ ಎನ್ನುವುದಕ್ಕೆ ನೀವು ಕಾರಣವನ್ನು ತಿಳಿದುಕೊಳ್ಳಬೇಕಾದರೆ, ಒಮ್ಮೆ ನೀವು ಶವದಮನೆಯನ್ನು ನೋಡಬೇಕು. ಇದು ದುಗ್ಗಲಾಪುರ ಆಸ್ಪತ್ರೆಯ ಶವದಮನೆ! ಇಲ್ಲೇನು ಹವಾನಿಯಂತ್ರಿತ ಕೊಠಡಿಗಳಿರುತ್ತವೆ ಶವಗಳನ್ನು ತಣ್ಣಗಿಡೋದಕ್ಕೆ ಅಂತ ತಿಳಿದಿದ್ದೀರ?   ಅಲ್ಲಿರುವ ವಾಸನೆಯನ್ನು ಒಂದೇ ಒಂದೆ ಕ್ಷಣ ನೀವು ನಿಮ್ಮ ನಾಸಿಕಾರಂಧ್ರದ್ವಯದಲ್ಲಿ ಹೀರಿಕೊಂಡರೆ ಸಾಕು, ಅದು ನೇರವಾಗಿ ನಿಮ್ಮ ಬ್ರಹ್ಮರಂಧ್ರಕ್ಕೇ ಏರಿಬಿಡುತ್ತದೆ. ಇಂದು ತಿಂದದ್ದು ಮಾತ್ರವಲ್ಲ, ನಿನ್ನೆ ತಿಂದದ್ದೂ ಸಹಾ ಒಮ್ಮೆಲೆ ವಯಕ್ ಎಂದು ಹೊರಬಂದು, ಕಣ್ಣ ಕತ್ತಲೆಗಟ್ಟಿ ನೀವು ಧರಾಶಾಯಿಯಾಗುವುದು ಖಂಡಿತ! ಪಾಪ ದುಂಡಪ್ಪನಿಗೂ ಹೀಗೆ ಆಗುತ್ತಿತ್ತು ಮೊದ ಮೊದಲು! ಆದರೆ ಯಾವಾಗ ಅವನು ಹಗಲಿರುಳು ಭಗವಂತನನ್ನು ಆವಾಹನೆ ಮಾಡಲು ಕಲಿತುಕೊಂಡನೋ, ಭಗವಂತನ ಕೃಪೆ! ದೇವರು ದೊಡ್ಡವನು!! ಹೇಗೋ ಕೆಲಸ ಮಾಡಿಕೊಂಡು ಹೋಗುತ್ತಿದ್ದಾನೆ ಇಲ್ಲಿ! ನೀವು ಭಗವದ್ಭಕ್ತರಿರದಿದ್ದಲ್ಲಿ ಶವದಮನೆಯ ಕಡೆಗೂ ಬರಬೇಡಿ. ಅದಕ್ಕೆ ಬಹಳಷ್ಟು ಜನರು ದುಂಡಪ್ಪನ ಕೈಗೆ ಎರಡು ದೊಡ್ಡ ನೋಟುಗಳನ್ನು ಇಟ್ಟುಬಿಟ್ಟರೆ ಸಾಕು, ಅವನೇ ಶವವನ್ನು ಬಿಳಿಯ ಚಾದರದಲ್ಲಿ ಹೊದಿಸಿ, ಅದರ ಮೇಲೆಲ್ಲ ನೀಲಗಿರಿ ತೈಲವನ್ನು ಸುರಿದು ತಾನೇ ಜಟಕಾಗಾಡಿಯಲ್ಲಿ ಅಥವ ನೀವು ತಂದಿರಬಹುದಾದ ವಾಹನದಲ್ಲಿ ಶವವನ್ನು ಇಟ್ಟುಬಿಡುತ್ತಾನೆ.

            ಸಾವಂತ್ರಿಯ ಹೆಣ ನಿನ್ನೆಯಿಂದ ಕೊಳೆಯುತ್ತಾ ಇದೆ. ಆಕೆ ಬಾಣಂತಿ. ರುದ್ರಗೌಡನ ಸೊಸೆ. ಶರಣಬಸಪ್ಪನ ಮಗಳು. ಊರ ಎರಡು ಪಕ್ಷಗಳ ಮುಖಂಡರು. ರಾಜಕೀಯದಲ್ಲಿ ಸದಾ ಜಿದ್ದಿಗೆ ಬಿದ್ದವರು. ಅದು ಹೇಗೋ ಶರಣಬಸಪ್ಪನ ಮಗಳು ಸಾವಂತ್ರಿಗೂ ರುದ್ರಗೌಡನ ಮಗ ಡಿ.ಆರ್.ಎಸ್.ಗೌಡ ಉರೂಫ್ ದುಗ್ಗಲಾಪುರ ರುದ್ರಗೌಡ ಸಾದೇಗೌಡನಿಗೂ ಪ್ರೀತಿ ಪ್ರೇಮ ಅಂತ ಶುರುವಾಗಿ ಅದು ಮದುವೆಯಲ್ಲಿ ಪರ್ಯಾವಸಾನವಾಗಿತ್ತು. ನಿನ್ನೆ ಸಾವಂತ್ರಿಯ ಸೀರೆಗೆ ಬೆಂಕಿ ಹೊತ್ತಿಕೊಂಡಿತು. ಆಕೆಯನ್ನು ಆಸ್ಪತ್ರೆಗೆ ಕರೆತಂದಾಗ ೭೮% ಬರ್ನ್ಸ್ ಎಂದು ವೈದ್ಯರು ಹೇಳಿದರು. ದುಗ್ಗಲಾಪುರ ಆಸ್ಪತ್ರೆಯಲ್ಲಿ ೨೦% ಸುಟ್ಟಗಾಯದೊಡನೆ ಬರುವ ಜನರು ಬದುಕುವುದಿಲ್ಲ ಎಂಬ ಪ್ರತೀತಿಯಿರುವಾಗ, ೭೮% ಸುಟ್ಟಗಾಯ ಇರುವ ಸಾವಂತ್ರಿ ಬದುಕಿದರೆ ಅದು ಆಸ್ಪತ್ರೆಗೆ ಕೆಟ್ಟ ಹೆಸರು ತಂದೀತಲ್ಲವೆ! ಸಾವಂತ್ರಿ ಸತ್ತಿದ್ದಳು.

ಪೋಲೀಸರು ರುದ್ರಗೌಡ, ಆತನ ಹೆಂಡತಿ ಹಾಗೂ ಇದ್ದ ಒಬ್ಬಳೇ ಮಗಳನ್ನು ಜೈಲಿಗೆ ಹಾಕಿದ್ದರು. ರುದ್ರಗೌಡ ಅಧಿಕಾರದಲ್ಲಿ ಇರಲಿಲ್ಲ. ಶರಣಬಸಪ್ಪ ಪಂಚಾಯತಿ ಪ್ರೆಸಿಡೆಂಟ್ ಆಗಿದ್ದ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಬೆಂಗಳೂರಿಗೆ ಬರುವವರಿದ್ದರು. ಹಾಗಾಗಿ ಮುಂದಿನ ಎಂ.ಎಲ್.ಎ ಆಗಬೇಕು ಎಂದು ಬಯಸಿದ್ದ ಶರಣಬಸಪ್ಪ ಬೆಂಗಳೂರಲ್ಲಿ ಠಿಕಾಣಿ ಹೂಡಿದ್ದನು. ಅವನ ಜೊತೆಯಲ್ಲಿ ಮಗನೂ ಇದ್ದನು. ಹೆಂಡತಿ ಮತ್ತು ಸೊಸೆ ಮಾತ್ರ ದುಗ್ಗಲಾಪುರದಲ್ಲಿ ಉಳಿದಿದ್ದರು. ಶರಣಬಸಪ್ಪನಿಗೆ ಮಗಳ ಮೇಲೆ ಮಮಕಾರ ಉಳಿದಿರಲಿಲ್ಲ. ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಳು ಅಲ್ಲವೆ! ಸತ್ತದ್ದು ಒಳ್ಳೆದಾಯಿತು ಮುಂಡೆ ಎಂದು ಬೈದುಕೊಂಡರು. ಬೀಗರ ರಕ್ತವನ್ನು ಜೈಲಿನ ಸೊಳ್ಳೆಗಳಿಗೆ ಉಣಿಸುವಂತೆ ಪೋಲೀಸ್ ಇನ್ಸ್ಪೆಕ್ಟರ್ ಮೇಲೆ ಪ್ರಭಾವ ಬೀರಿದ್ದರು.

ದುಗ್ಗಲಾಪುರದ ಡಾಕ್ಟರ್ ಪೋಸ್ಟ್ ಮಾರ್ಟಮ್ ಮಾಡಿದ ಶಾಸ್ತ್ರವನ್ನು ಮುಗಿಸಿದ್ದರು. ಪೋಲಿಸಿನವರು ಹಾಗೂ ಡಾಕ್ಟರು ಬಹಳ ಹೊತ್ತುನ್ ಗುಸು ಗುಸು ಮಾತನಾಡುವುದನ್ನು ದುಂಡಪ್ಪ ನೋಡಿದ್ದ. ಆಗಾಗ್ಗೆ ಹೀಗಾಗುವುದುಂಟು. ಯಾರಾದರೂ ಶ್ರೀಮಂತರ ಕಡೆಯವರು ಹೀಗೆ ಮರ್ಡರ್ ಕೇಸಲ್ಲಿ ಸಿಕ್ಕಿ ಹಾಕಿಕೊಂಡುಬಿಟ್ಟರೆ, ಪೋಲಿಸಿನವರಿಗೂ ಡಾಕ್ಟರಿಗೂ ಹಬ್ಬ! ಆಗ ದುಂಡಪ್ಪನ ಕೈಗೆ ಎರಡಲ್ಲ ಐದೈದು ದೊಡ್ಡನೋಟು ಬೀಳುವುದುಂಟು. ಆದರೆ ಸಾವಂತ್ರಿಯ ವಿಷಯದಲ್ಲಿ ದೊಡ್ಡನೋಟು ತನಗೆ ಸಿಗುವ ಬಗ್ಗೆ ಅನುಮಾನವಾಗಿತ್ತು ದುಂಡಪ್ಪನಿಗೆ. ಅವನ ಒಳಮನಸ್ಸು ತೀರಾ ಎಚ್ಚರಿಕೆಯಿಂದ ಇರುವಂತೆ ಹೇಳುತಿತ್ತು.  ಶರಣಬಸಪ್ಪ ಅವನಿಗೆ ದೂರದ ಸಂಬಂಧಿಗಳು ಆಗಿದ್ದರು.

 -------

ಭರಮಾಚಾರಿಯು ಕೊಳ್ಳೆಗಾಲದ ಕಡೆಯವನು ಎಂದು ಜನರು ಮಾತನಾಡಿಕೊಳ್ಳುವುದುಂಟು. ಅವನು ನಿಜಕ್ಕೂ ಏನು ಕೆಲಸ ಮಾಡುತ್ತಾನೆ ಎಂದು ಯಾರಿಗೂ ಗೊತ್ತಿಲ್ಲ. ಅವನು ಯಾರ ಜೊತೆಯಲ್ಲಿಯೂ ಮಾತನಾಡುವುದೂ ಇಲ್ಲ. ಜನರೂ ಸಹಾ ಅವನೊಡನೆ ಮಾತನಾಡಲು ಹೆದರುತ್ತಾರೆ. ಆರು ಅಡಿಯ ಕಡಪಾಕಲ್ಲಿನಂತಹ ಮನುಷ್ಯ. ಕಣ್ಣು ಯಾವಾಗಲೂ ಕೆಂಡದ ಉಂಡೆಗಳು. ದೊಡ್ಡ ಪೊದೆಮೀಸೆ. ತೋಳಿನಲ್ಲಿ ಬೆಳ್ಳಿ ಕಡಗ. ಹಣೆಯ ಮೇಲೆ ದೊಡ್ಡ ಕುಂಕುಮ. ಅವನು ವಾಮಾಚಾರದಲ್ಲಿ ತೊಡಗಿದ್ದಾನೆ ಎಂದು ಜನರು ಭಾವಿಸಿದ್ದರು. ಅವನ ಶಕ್ತಿ ಸಾಮರ್ಥ್ಯಗಳ ಮೇಲೆ ಇಲ್ಲ ಸಲ್ಲದ ಕಥೆಗಳು ಹುಟ್ಟಿಕೊಂಡಿದ್ದವು. ಭರಮಾಚಾರಿ ವಾಮಾಚಾರದ ಅಂತಿಮ ಹಂತಕ್ಕೆ ಬಂದಿದ್ದಾನಂತೆ, ಅವನಿಗೆ ಬಾಣಂತಿಯ ಶವ ಮಾತ್ರ ಬೇಕಿದೆಯಂತೆ, ಶವವನ್ನು ಪೂಜೆ ಮಾಡಿ, ಬಾಣಂತಿಯ ಕೈಯ ಮೂಳೆಯನ್ನು ತೆಗೆದುಕೊಂಡುಬಿಟ್ಟರೆ ಅವನನ್ನು ಸೋಲಿಸುವವರು ಯಾರೂ ಇರುವುದಿಲ್ಲವಂತೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು.

            ಸಾವಂತ್ರಿ ಸತ್ತದ್ದಕ್ಕೆ ಭರಮಾಚಾರಿಯೇ ಕಾರಣ ಎಂದು ಎಲ್ಲರೂ ಮುಚ್ಚಿದ ಬಾಗಿಲುಗಳ ಹಿಂದೆ ಮಾತನಾಡಿಕೊಳ್ಳುತ್ತಿದ್ದರು. ರುದ್ರಗೌಡ ಹಾಗೂ ಶರಣಬಸಪ್ಪನ ಮನೆತನಗಳು ಸದಾ ಎಣ್ಣೆ ಸೀಗೇಕಾಯಿ. ನಿಜ. ಆದರೆ ಅವರ ಮಕ್ಕಳು ಈ ವಂಶಪಾರಂಪರ್ಯ ದ್ವೇಶವನ್ನು ಕೊನೆಗಾಣಿಸಬೇಕು ಎಂದು ಮದುವೆಯಾಗಿದ್ದರು. ಬೆಂಗಳೂರಲ್ಲಿ ಓದಿಕೊಂಡಿದ್ದ ಅವರು ಪ್ರಗತಿಪರ ವಿಚಾರವನ್ನು ಮೈಗೂಡಿಸಿಕೊಂಡಿದ್ದರು. ಅಂದುಕೊಂಡದ್ದನ್ನು ಮಾಡಿ ತೋರಿಸಿದ್ದರು. ಹಾಗಿರುವಾಗ ಸಾವಂತ್ರಿ ಬೆಂಕಿಗೆ ತುತ್ತಾಗುವುದು ಅಂದರೆ! ರುದ್ರಗೌಡನ ಕಡೆಯವರು ಮದುವೆಯ ನಂತರ ಮೆತ್ತಗಾಗಿದ್ದರು. ಹಿಂದಿನ ಡೌಲು-ಜರ್ಬು ಈಗಿರಲಿಲ್ಲ. ಹಾಗಾಗಿ ಅವರು ಸಾವಂತ್ರಿಗೆ ಬೆಂಕಿ ಹಚ್ಚಿರುವ ಸಾಧ್ಯತೆ ಕಡಿಮೆ ಎಂದು ಊರವರು ಮಾತ್ರವಲ್ಲ ಪೋಲಿಸ್ ಪೇದೆಗಳೂ ಮಾತನಾಡಿಕೊಳ್ಳುತ್ತಿದ್ದರು.

            ಸಾವಂತ್ರಿ ಸತ್ತು ಎರಡು ದಿನವಾಗಿತ್ತು.

            ಸಂಜೆಯ ಮಬ್ಬುಗತ್ತಲು ಆವರಿಸುತ್ತಿತ್ತು. ಭರಮಾಚಾರಿ ೧೦ ದೊಡ್ಡ ನೋಟುಗಳನ್ನು ತನ್ನ ಪಂಚೆಯ ಒಳಗೆ ಇದ್ದ ನಿಕ್ಕರ್ ಜೇಬಿನಲ್ಲಿ ಇಟ್ಟುಕೊಂಡನು. ಅಲ್ಲಿಂದ ನೇರವಾಗಿ ದುಗ್ಗಲಾಪುರದ ಆಸ್ಪತ್ರೆಯ ಶವದಮನೆಯ ಕಡೆಗೆ ಹೆಜ್ಜೆ ಹಾಕಿದನು.

 

------

ಅಸು ಹೆಗ್ಡೆಗೆ ಕೊಕ್..