ಬಿಟ್ಟು ಬಿಗುಮಾನವನು, ಜೊತೆಗೂಡೆ ಬಾರೆ ಸಖಿ,

ನಿನಗಾಗಿ ನಾ ತರುವೆ ಸ್ವರ್ಗವನ್ನೇ.

ಭುವಿಯೊಳಗೇನಡಗಿದೆ, ಪಾಪ ಕರ್ಮದ ನಂಟು,

ಕಟ್ಟೆಲೇ ರೆಕ್ಕೆಯನು ಚಂದ್ರನೆಡೆಗೆ.

 

ತೋರುವೆ ನಕ್ಷತ್ರಗಳ, ನೀಡುವೆ ಬಳುವಳಿಯ,

ಮೋಡದ ಮೇಲೊಂದು ಮನೆಯ ಕಟ್ಟಿ.

ಜವರಾಯನೇ ಬರಲಿ, ಇಂದ್ರನೇ ತಲೆದೂಗಲಿ,

ಎಲ್ಲರಿಗೂ ತಿಳಿಸುವೆ ನಾ ತೊಡೆಯ ತಟ್ಟಿ.

 

ಬೇಕಾದ್ದ ನೀ ಬೇಡು, ತಂದುಕೊಡುವೆನು ನಾ ನೋಡು,

ಕಾಣುತಿರು ನೀನೆಂದೂ ಹಗಲುಗನಸು.

ಒಂದು ಓಲೆಗೆ ಯಾಕೆ, ಇಷ್ಟೊಂದು ಒಳಮುನಿಸು?

ತಂದು ತಿನಿಸಲೇ ಬೇಗ ಸಿಹಿಯ ತಿನಿಸು?

 

ಇರುಳು ಕಾಣದ ಊರು, ನಮ್ಮ ಆ ತವರೂರು,

ಬೆಳದಿಂಗಳೇ ಎಂದೆಂದೂ ನಮ್ಮ ಬಾಳು.

"ಬಿಲ್" ಕೇಳುವರಾರು, ಯಾರೂ ನಿನ್ನ ನೋಯಿಸರು,

ಅಂದದ ಕನಸೊಳಗೆ ಓಡುವುದು ನಿನ್ನ ಗೋಳು.

 

ಯಾಕಿನ್ನು ಬಿಡು ಚಿಂತೆ, ನಗು ಒಮ್ಮೆ ನೀ ಕಾಂತೆ,

ನಾ ಕಂಡ ಕನಸದು ಬೇಗ ನನಸಾಗಲೇಂದು.

ನೀ ನಂಬಿ ಬಂದಿರುವೆ, ನಾ ನಿನ್ನ ಅರಿತಿರುವೆ,

ನಗುನಗುತ ಜೊತೆಯಾಗಿ ಹಾರುವ ಎಂದೆಂದೂ.

 

                                                                        ವಸಂತ್