ಕರ್ನಾಟಕದ ಪ್ರಸಿದ್ಧ ಸಾಹಿತಿಯೊಬ್ಬರ ಹೊಸ ಪುಸ್ತಕ "ಕವಲು" ಬಿಡುಗಡೆಯಾಗಲಿದೆ ಮತ್ತು ಆ ಪುಸ್ತಕ pseudosecularist ಗಳಿಗೆ ಎಷ್ಟು ಕೆಲಸ ಕೊಡಬಹುದು ಎಂದು ಸಂಪದಿಗರೊಬ್ಬರು ಭವಿಷ್ಯ ಬರೆದಿದ್ದರು. ಎಷ್ಟೇ ಆದರೂ ಕವಡೆ ಮಹಾಶಯರ ನಾಡಲ್ಲವೇ ನಮ್ಮದು? ಭವಿಷ್ಯ ವಾಣಿಗಳಿಗೆ ಕೊರತೆ ಖಂಡಿತಾ ಎಂದಿಗೂ ಇರದು. ಮಂಗಳೂರಿನಿಂದ ಜೆಡ್ಡಾಕ್ಕೆ ಬರುತ್ತಿದ್ದ ಮಿತ್ರರಿಗೆ "ಅತ್ರಿ" ಪುಸ್ತಕದಂಗಡಿಗೆ ಹೋಗಿ ಪುಸ್ತಕ ತರಲು ವಿನಂತಿಸಿದೆ. ಲೇಖಕನ ಹೆಸರು ಕೇಳಿದ ಕೂಡಲೇ ಮಿತ್ರ ಹೇಳಿದ್ದು he is controversial, ಓದಿ ಮನಸ್ಸು ಏಕೆ ಕೆಡಿಸಿಕೊಳ್ಳುತ್ತೀಯ ಎಂದು. ನಾನಂದೆ, ಪೂರ್ವಾಗ್ರಹ ಪೀಡಿತರಾಗಿ ಪುಸ್ತಕ ಓದದೆ judgemental ಆಗೋದು ಬೇಡ, ಸಾಧ್ಯವಾದರೆ ಪುಸ್ತಕ ತೆಗೆದುಕೊಂಡು ಬಾ ಎಂದು ಮತ್ತೊಮ್ಮೆ ವಿನಂತಿಸಿದೆ. ನಾನು ಕನ್ನಡ ಪುಸ್ತಕಗಳ afficionado ಅಂತೂ ಅಲ್ಲ. thomas hardy, D.H.Lawrence, Somerset Maugham, wilkie collins ರಂಥ ಹಳೆ ತಲೆಮಾರಿನ ಬರಹಗಾರರ ಮತ್ತು ಬಹುತೇಕ non-fiction ಪುಸ್ತಕಗಳನ್ನು ಓದುವವನು. "ಕವಲು" ಬರೆದ ಲೇಖಕರ ಬಗ್ಗೆ ದೊಡ್ಡ ಚರ್ಚೆ ನಡೆದಿದ್ದರಿಂದ ಆ ಪುಸ್ತಕದ ಬಗ್ಗೆ ಇನ್ನಷ್ಟು ಆಸಕ್ತಿ ಬೆಳೆಯಿತು.
ಉದ್ಯಮಿಯೊಬ್ಬನ ಸುತ್ತ ಹೆಣೆದ ಈ ಕಥೆ ಮದುವೆ, ಡಿವೋರ್ಸ್, ಇವೆರೆಡರ ಮಧ್ಯೆ ಬರುವ ಕೌಟುಂಬಿಕ ಕೋಲಾಹಲಗಳ ಮಧ್ಯೆ ಸುತ್ತುತ್ತಾ ನಮ್ಮ ಸಂಸ್ಕೃತಿ, ಪಾಶ್ಚಾತ್ಯ ಸಂಸ್ಕ್ರುತಿ ಗಳ ತುಲನೆ ಮಾಡುತ್ತಾ ಸಾಗುತ್ತದೆ. ಪಾಶ್ಚಾತ್ಯರು ತಮಗಿಷ್ಟ ಬಂದಂತೆ ಬದುಕುತ್ತಾರೆ, ಅದು ಅವರಿಗೆ ಬಿಟ್ಟಿದ್ದು, ನಾವು ನಮ್ಮ ಸಂಸ್ಕಾರವನ್ನು ಜೋಪಾನವಾಗಿ ಇಟ್ಟುಕೊಳ್ಳುವುದನ್ನು ಕಲಿಯಬೇಕು. ನಮ್ಮ ತರುಣ ತರುಣಿಯರು ಅಮೆರಿಕೆಯ ಮತ್ತು ಇತರೆ ಪಾಶ್ಚಾತ್ಯ ರಾಷ್ಟ್ರಗಳ ದೂತಾವಾಸಗಳ ಮುಂದೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಸರೀ ರಾತ್ರಿ ಸರತಿಯಲ್ಲಿ ನಿಲ್ಲುವ ಚಿತ್ರಣ ನಾವು ಕಾಣುತ್ತಿಲ್ಲವೇ? ಈ ಕಥೆ ಯಾರಾದರೂ ದ್ವಿತೀಯ ದರ್ಜೆಯ ಲೇಖಕ ಬರೆದಿದ್ದರೆ ಕ್ಷಮಿಸ ಬಹುದಿತ್ತು. ಆದರೆ ಇದನ್ನು ಬರೆದ ವ್ಯಕ್ತಿ ನಾಡಿನ ಹೆಸರಾಂತ, best selling author. ಇನ್ನು ಈ ಕಾದಂಬರಿಗಾಗಿ ತುದಿಗಾಲಿನಲ್ಲಿ ಕಾಯುವ ಕೆಲವರು ನಿರೀಕ್ಷಿಸಿದ್ದು ಮತ್ತೊಂದು "ಲೋಡ್ "ಅಸಹನೆಯ ಬಡಬಡಿಕೆ ತುಂಬಿರಬಹುದು ಈ ಪುಸ್ತಕದಲ್ಲಿ ಎಂದು. ಪಾಪ, ಅಂಥ ವಾಚಕ ವೃಂದಕ್ಕೆ ಹೇಳಲಸಾಧ್ಯವಾದ ನಿರಾಶೆ ಕಾದಿದೆ. ಏಕೆಂದರೆ ಇದರಲ್ಲಿರುವುದು ಎಲ್ಲರೂ ವೈನ್ ಕುಡಿಯುತ್ತಿರುವಾಗ ನಿಂಬೆ ರಸ ಕುಡಿಯುವುದು ಹೇಗೆ, ಮದುವೆಯಾಗದ ಮಗಳ ಮನೆಯಲ್ಲಿ ತೊಟ್ಟು ನೀರನ್ನೂ ಕುಡಿಯಬಾರದು, ಮದುವೆಯಾಗದೆ ಒಟ್ಟಿಗೆ ಇರಬೇಕೆಂದರೆ pre-nuptial agreement ಹೇಗಿರಬೇಕು.......... ಈ ರೀತಿಯ ನುಡಿ ಮುತ್ತುಗಳು.
ನನಗೆ ಮನರಂಜನೆ ನೀಡಿದ ಕೆಲವು ಸಾಲುಗಳು ಕೆಳಗಿನವು.
"ಉರುಳಿಸಿ ಕೊಂಡರು, ಆಕ್ರಮಿಸಿದರು........ ಅವರು ಲಗ್ಗೆ ಹಾಕಿದರು". (ಪು. ೬೮) ಈ ವಾಕ್ಯ ಓದಿ ಘಜನಿ, ಘೋರಿ, ಅಲಾವುದ್ದೀನ್ ಖಿಲ್ಜಿ ಬಗ್ಗೆ ಬರೆದರೋ ಎಂದು ಕಿವಿಗಳನ್ನು ನಿಮಿರಿಸಬೇಡಿ. ಇದು ಸ್ತ್ರೀಯರ ನಡುವಿನ ಸಲಿಂಗ ಕಾಮವನ್ನು ವರ್ಣಿಸಿದ ರೀತಿ.
"ಅವನು ಇಂಗ್ಲಿಷ್ ಬಳಸಿರುವುದನ್ನು ವಚನ ಮುಚ್ಚಲು. ಅ ದೃಷ್ಟಿಯಿಂದ ಇಂಗ್ಲಿಷ್ ಜಾಣ ಭಾಷೆ ಎಂದು ಅಭಿಮಾನ ಮೂಡಿತು". (ಪು. ೧೧೬)
ಮೇಲಿನ ಮಾತು ದಿವಂಗತ ರಾಷ್ಟ್ರಪತಿ ಗ್ಯಾನಿ ಜೇಲ್ ಸಿಂಗರ ಮಾತನ್ನು ನೆನಪಿಗೆ ತಂದಿತು. ರಾಷ್ಟ್ರ ಪತಿಗಳಾಗಿದ್ದ ಅವರಿಗೆ ಇಂಗ್ಲಿಷ್ ಸರಿಯಾಗಿ ಬರುತ್ತಿರಲಿಲ್ಲ. ಇಂಗ್ಲಿಷ್ ಮರ್ಯಾದೆಯಿಲ್ಲದ ಭಾಷೆ, ಎಲ್ಲರನ್ನೂ ಏಕವಚನದಲ್ಲೇ ಸಂಬೋಧಿಸಬೇಕು ಆ ಭಾಷೆಯಲ್ಲಿ ಎಂದು ಕೋಪವನ್ನು ತೋಡಿ ಕೊಂಡಿದ್ದರು.
"ಎಡವಟ್ಟು, ಖಾಲಿ. ಇವೆರಡೂ ಒಂದೇ ಘಟನೆಯ ಎರಡು ಮುಖಗಳು" ( ಪು. ೧೫೧)
"ಪಶ್ಚಿಮ ದೇಶದ ಗಂಡಸಾಗಿದ್ದರೆ ಹೊಡೆದು ಚಚ್ಚುತ್ತಿದ್ದ, ಭಾರತೀಯನಾದ ನಾನು ಎಷ್ಟಾದರೂ ಸಪ್ಪೆ, ಕೈ ಎತ್ತುಕ್ಕೆ ಆಗ್ತಿರಲಿಲ್ಲ" (ಪು. ೧೫೬)
ಎಡವಟ್ಟಿ ರುವುದು ಮೇಲಿನ ಸಾಲಿನಲ್ಲಿ. ರಟ್ಟೆಯಲ್ಲಿ ಕಸುವು ಇರುವ, ಹೆಣ್ಣಿನ ಬೆಲೆ ಏನೆಂದು ಅರಿಯದ ಯಾವುದೇ ದೇಶದ ಮುಠಾಳನೂ ಸ್ತ್ರೀಯನ್ನು ಮಣಿಸಲು ಅಳವಡಿಸಿಕೊಳ್ಳುವ ತಂತ್ರವೇ ಚಚ್ಚುವುದು. ನನ್ನನ್ನು ಕೇಳಿದರೆ ನಮ್ಮ ರೆಕಾರ್ಡ್ ಈ ವಿಷಯದಲ್ಲಿ ಸ್ವಲ್ಪ ಖರಾಬೇ. "ನಚಿಕೇತ" (ಕತೆಯ ಪಾತ್ರ) ಮದುವೆ ಮಾಡಿಕೊಂಡಿದ್ದು ವಿಚ್ಚೇದಿತ ವಿದೇಶೀ ಹೆಣ್ಣನ್ನು, ಅವಳ ಕೈ ಎತ್ತಬೇಕೆಂದರೆ ನೂರು ಸಲ ಆಲೋಚಿಸಬೇಕು. wife battery (battery ಅಂದರೆ ಚಚ್ಚುವುದು) ಅಂತ ಹೇಳಿ ಜೀವನ ಪೂರ್ತಿ ಪಂಜರದಲ್ಲೇ ಕಳೆಯಬೇಕಾಗುತ್ತದೆ. ಭಾರತೀಯ ನಾರಿಯಾದರೆ ಪೆಟ್ಟು, ಒದೆತ ತಿಂದು ರಾತ್ರಿಗೆ ತಿಳಿ ಸಾರನ್ನ ಮಾಡಿ "ಪಿರೀತಿಯಿಂದ" ತಂದಿಡುತ್ತಾಳೆ. ನಮ್ಮಲ್ಲಿ "ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ" ತಾನೇ?
quotable quotes ಕೆಳಗಿನ ಎರಡು ಸಾಲುಗಳು.
"ಕೊಡುವುದೇ ಪಡೆಯುವ ಮೂಲ ಮಾರ್ಗ" (ಪು.೧೫೨)
"ಗೃಹವನ್ನು ಅಣಿಗೊಳಿಸುವಾಗ ಇರುವಷ್ಟೇ ಕೆಲಸವು ಖಾಲಿ ಮಾಡುವಾಗಲೂ ಇರುತ್ತದೆ". (ಪು. ೨೦೩)
ಕೆಲವು ಕಡೆ ಲೇಖಕರು ಹೆಚ್ಚಾಗಿ ಪ್ರಚಲಿತವಿಲ್ಲದ ಅಂಗ್ಲ ಭಾಷೆಯ ಪದಗಳನ್ನೂ ಬಳಸಿದ್ದಾರೆ. ಅಂಥ ಒಂದು ಪದ "ಹೂವರ್". ಹೂವರ್ ಎಂದರೆ ವ್ಯಾಕ್ಯೂಮ್ ಮಾಡೋದು ಎಂದು. ಹೂವರ್ ಒಂದು ಕಂಪೆನಿಯ ಹೆಸರು, ನಮ್ಮಲ್ಲಿ ಯಾವುದೇ ರೀತಿಯ ಬಟ್ಟೆ ಒಗೆಯುವ ಪುಡಿಗೆ "ಸರ್ಫ್" ಎಂತಲೂ. ಕಬ್ಬಿಣದ ಬೀರುಗಳೆಲ್ಲಾ ಗೋದ್ರೆಜ್ ಬೀರು ಎಂತಲೂ, ಯಾವುದು ಕಂಪೆನಿ ತಯಾರು ಮಾಡಿದರೂ ಹಲ್ಲುಜ್ಜುವ ಕ್ರೀಂ ಗೆ ಕೋಲ್ಗೆಟ್ ಎಂದೂ ನಾವು generalize ಮಾಡಿ ಹೇಳುವಂತೆ ಅಲ್ಲಿ ಹೂವರ್ ಎನ್ನುತ್ತಾರೆ ಯಾವುದೇ vaccum machine ಗೆ. ಹೋಟೆಲಿನ ವಿಶಾಲವಾದ ರೂಮಿಗೆ ಲೇಖಕ ಸ್ವೀಟ್ ಎಂದು ಕರೆದಿದ್ದಾರೆ. ಒಂದು ಫ್ಲಾಟ್ ನಂಥ ವಿಶಾಲವಾದ, ಸುಸಜ್ಜಿತ ಹೋಟೆಲ್ಲಿನ ರೂಮಿಗೆ "ಸ್ವೀಟ್" ಎನ್ನುತ್ತಾರೆ, ಸ್ವೀಟ್ ಎಂದಾಗ ಅದರ ಸ್ಪೆಲ್ಲಿಂಗ್ sweet ಅಲ್ಲ, ಬದಲಿಗೆ suite ಎಂದು.
ಈ ಕಾದಂಬರಿ ಬರೆದ ಲೇಖಕನ ವೆಬ್ ತಾಣಕ್ಕೆ ಭೇಟಿ ಕೊಟ್ಟಾಗ ಲೇಖಕ ಬರೆದ ಪುಸ್ತಕಗಳನ್ನೂ, ದೊರೆತ ಬಿರುದು ಬಾವಲಿಗಳನ್ನೂ, ಡಿಗ್ರೀಗಳನ್ನೂ ನೋಡಿದಾಗ ಅಂಥ ಲೇಖನಿಯಿಂದ ಈ ರೀತಿಯ ಕಾದಂಬರಿಯೇ ಹೊರಹೊಮ್ಮಿದ್ದು ಎಂದೆನ್ನಿಸಿದರೆ ಪ್ರಮಾದವಾಗಲಾರದು. ಯಾವುದೇ ಹೊಸ ಸಂಗತಿ ಹೊತ್ತು ತರದ ಈ ಪುಸ್ತಕ, ಹೇಳ ಹೊರಟಿರುವುದು ನಮ್ಮದೇ ಎಷ್ಟು ಶ್ರೇಷ್ಠ ಎಂದು. ಅಮೇರಿಕ ಮತ್ತು ಪಾಶ್ಚಾತ್ಯ ರಾಷ್ಟ್ರಗಳನ್ನು ಕಂಡ, ಅಲ್ಲಿ ನೆಲೆಸಿದ ಎಲ್ಲರಿಗೂ ತಿಳಿದದ್ದೇ ಅಲ್ಲಿನ ರೀತಿ ರಿವಾಜುಗಳು. ಅಲ್ಲಿನ ಬದುಕುವ ರೀತಿಯನ್ನು ಮತ್ತು ನಮ್ಮ ಬದುಕಿನ ಶೈಲಿಯನ್ನು ತುಲನೆ ಮಾಡಿದವರು dime a dozen. ಒಂದಿಷ್ಟು ಕಾದಂಬರಿಗಳು ಪ್ರಸಿದ್ದಿ ಪಡೆದು ಸಾಕಷ್ಟು ಹಣವನ್ನೂ ಸಂಪಾದನೆ ಮಾಡಿ, ಬರೆದವರ ಹೆಸರು ಮನೆ ಮಾತಾದಾಗ ಏನು ಬರೆದರೂ ನಡೆಯುತ್ತದೆ ಎನ್ನುವ ನೀತಿ ಅಳವಡಿಸಿಕೊಂಡು ಬರೆದ ಕಾದಂಬರಿ ಕವಲು ಎಂದರೆ ತಪ್ಪಾಗಲಾರದೇನೋ. ಶತಕಗಳ ಮೇಲೆ ಶತಕ ಬಾರಿಸಿದ ತೆಂಡೂಲ್ಕರ್ ನ ಎಲ್ಲಾ ಶತಗಳೂ ಅಮೋಘವೇನಲ್ಲವಲ್ಲ? ಅವನ ಹಲವು ಶತಕಗಳು ಆತನ ಶತಕಗಳ ಮೊತ್ತವನ್ನು ಹೆಚ್ಚಿಸಿತೆ ಹೊರತು ಭಾರತಕ್ಕೆ ಲಾಭವನ್ನೇನೂ ತರಲಿಲ್ಲ.
ಈ ಪುಸ್ತಕವನ್ನ ವಿಮರ್ಶಿಸಲು ಎಲ್. ಬಸವರಾಜು ಅವರಾಗಲಿ, U.R. ಅನಂತ ಮೂರ್ತಿಗಳಾಗಲಿ ಬರುವಂಥ scenario ಈ ಪುಸ್ತಕದಲ್ಲಿ ಇಲ್ಲ. ಇದರಲ್ಲಿ ನಿರ್ದಿಷ್ಟ ಸಮುದಾಯದವರನ್ನು ತೆಗಳುವ ಮಸಾಲೆ ಇಲ್ಲ ಎಂದು ಗುಸು ಗುಸು ಆರಂಭವಾಗುತ್ತಲೇ ಈ ಪುಸ್ತಕ ಪುಸ್ತಕದಂಗಡಿಗಳಿಂದ ಕವಲೊಡೆದು ರದ್ದಿ ಲಾಟ್ ಗೆ ಸೇರಬಹುದು.
ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಫುಟ್ಪಾಥ್ ನಲ್ಲಿ ಕೊರೆಯುವ ಚಳಿಗೆ ಗಡ ಗಡ ನಡುಗುತ್ತಾ ಮುದುಡಿ ಮಲಗಿದ ವೃದ್ಧನಿಗೆ ೨೫೦ ರೂಪಾಯಿ (ಪುಸ್ತಕದ ಬೆಲೆ) ಕೊಟ್ಟು ಒಂದು ಕಂಬಳಿ ಕೊಡಿಸಿದರೆ ಅವನ ಕಣ್ಣುಗಳಲ್ಲಿ ಕಾಣುವ ಕೃತಜ್ಞತಾ, ಧನ್ಯತಾ ಭಾವವನ್ನು ಸ್ವಲ್ಪ ದಿನಗಳಾದರೂ ಆಸ್ವಾದಿಸಬಹುದು ಎಂದು ನನ್ನ ವೈಯಕ್ತಿಕ ಅನಿಸಿಕೆ.
ಪ್ರತಿಕ್ರಿಯೆ (13)