ಈ ಲೇಖನದಲ್ಲಿ ಅಂತರ್ಜಾಲ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದೇನೆ. 'ಸಂಪದದಲ್ಲಿ ಚಿತ್ರ ಸೇರಿಸುವುದು ಹೇಗೆ?' ಎಂಬ ಲೇಖನಕ್ಕೆ ಪೂರಕವಾಗಿ ಈ ಮಾಹಿತಿ. ಈ ಮಾಹಿತಿ ಪ್ರಾಥಮಿಕವಾಗಿದ್ದು ಏನಾದರೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕೇಳಬಹುದು. ಲೇಖನದಲ್ಲಿ ತಪ್ಪಿದಲ್ಲಿ ದಯವಿಟ್ಟು ಗಮನಕ್ಕೆ ತನ್ನಿ. ಮಾಹಿತಿ ಉತ್ತಮಪಡಿಸುವಲ್ಲಿ ಸಲಹೆಗಳಿಗೆ ಸ್ವಾಗತ.

ಎಲ್ಲರಿಗೂ ಗೊತ್ತಿರುವಂತೆ ಅಂತರ್ಜಾಲ  ಗಣಕ ಯಂತ್ರಗಳ ಒಂದು ಬಹು ದೊಡ್ಡ ಜಾಲ. ಈ ಜಾಲಕ್ಕೆ ಸದಸ್ಯನಾಗ ಬಯಸುವ ಗಣಕಯಂತ್ರ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಪರವಾಗಿಲ್ಲ, ಆದರೆ ಅಂತರ್ಜಾಲ ಸಂಪರ್ಕ ಹೊಂದಿರಬೇಕು ಅಷ್ಟೆ. ಅಂತರ್ಜಾಲದಲ್ಲಿ ಸ್ಥಳ ದೂರದ ಸಮಸ್ಯೆಯಿಲ್ಲ. ಎಲ್ಲರೂ ಒಂದೇ ಛಾವಣಿಯ ಕೆಳಗೆ!. ನಿಮ್ಮ ಪಕ್ಕದ ಬಡಾವಣೆಯವನ ಜೊತೆ ಅಂತರ್ಜಾಲದಲ್ಲಿ ಚಾಟ್ ಮಾಡುವುದು ಒಂದೆ..ಆಫ್ರಿಕಾ ಖಂಡದ ಒಂದು ಊರಿನಲ್ಲಿರುವ ಸ್ನೇಹಿತನ ಜೊತೆ ಮಾತನಾಡುವುದು ಒಂದೆ.

ನಿಮ್ಮ ಮನೆಯ ಗಣಕಯಂತ್ರ ಕೂಡ ಈ ಜಾಲದ ಸಂಪರ್ಕ ಹೊಂದಿ, ಸದಸ್ಯನಾಗಲು ಬಯಸಿದ್ದಲ್ಲಿ ನಿಮಗೆ ಬೇಕಾದ್ದದ್ದು :
- ಸ್ಥಿರ ದೂರವಾಣಿ ಸಂಪರ್ಕ
- ನಿಮ್ಮ ಊರಿನಲ್ಲಿ ಅಂತರ್ಜಾಲಕ್ಕೆ ಸಂಪರ್ಕ ಪೂರೈಸುವ ಸಂಸ್ಥೆ (ISP - Internet Service Provider )- ಇಲ್ಲಿ BSNL, Airtel, Reliance, Tata Indicom ಮೊದಲಾದವರ ಸೇವೆ ಲಭ್ಯವಿದೆ. ಇವರು ಬ್ರಾಡಬ್ಯಾಂಡ್ ಸಂಪರ್ಕವನ್ನು ಪೂರೈಸುತ್ತಾರೆ. (ದೊಡ್ಡ ನಗರಗಳಲ್ಲಿ ನಿಸ್ತಂತು ಅಂತರ್ಜಾಲ ಸಂಪರ್ಕ ಲಭ್ಯವಿದೆ)

-  ಕೊನೆಯದಾಗಿ  ಅಂತರ್ಜಾಲ ತಾಣವನ್ನು ನೋಡಲು, ಜಾಲಿಸಲು ಒಂದು ತಂತ್ರಾಂಶ. ಇದನ್ನು ಬ್ರೌಸರ್ ಎನ್ನುತ್ತೇವೆ. Firefox, Opera, Safari, Chrome, Internet Explorer ಮೊದಲಾದವುಗಳು ಈಗ ಪ್ರಚಲಿತವಿರುವ ಬ್ರೌಸರ್ ಗಳು.

ಅಂತರ್ಜಾಲದಲ್ಲಿ ಇರುವ ತಾಣವೊಂದನ್ನು ಒಂದು ಮ್ಯಾಗಜಿನ್ನಿಗೊ ಅಥವಾ ಮಾಹಿತಿ ಪುಸ್ತಕಕ್ಕೊ ಹೋಲಿಸಬಹುದು. ಪ್ರತಿಯೊಂದು ತಾಣಕ್ಕೂ ತನ್ನದೇ ಆದ ಪ್ರತ್ಯೇಕ ಹೆಸರಿರುತ್ತದೆ. ಅಂತರ್ಜಾಲದಲ್ಲಿ ಯಾವತ್ತು ಒಂದೇ ಹೆಸರಿನ ಎರಡು ತಾಣಗಳಿರುವುದಿಲ್ಲ. ಆದ್ದರಿಂದ ಇಲ್ಲಿ ತಪ್ಪು ವಿಳಾಸದ ಗೊಂದಲಕ್ಕೆ ಅವಕಾಶವಿಲ್ಲ. ಇಲ್ಲಿ ತಾಣಗಳ ಹೆಸರುಗಳನ್ನು ಗೊಂದಲವಿಲ್ಲದಂತೆ ನಿರ್ವಹಿಸುವ ಕೆಲಸವನ್ನು ICANN ಎಂಬ ಸಂಸ್ಥೆ ಮಾಡುತ್ತದೆ.

ಅಂತರ್ಜಾಲದ ಸದಸ್ಯನಾಗಿ, ತಾಣವೊಂದನ್ನು ಹೊಂದಿರುವ ಗಣಕಯಂತ್ರವನ್ನು ಸರ್ವರ ಎಂದು ಕರೆಯುತ್ತಾರೆ. ತಾಣವಿರುವ ಸರ್ವರಗಳು ದಿನದ 24ಗಂಟೆಯೂ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಅಂತರ್ಜಾಲದಲ್ಲಿ ಒಂದು ತಾಣದ ಹೆಸರನ್ನು domain name ಎಂದು ಮತ್ತು ಆ ತಾಣದಲ್ಲಿ ಇರಬಹುದಾದ ಮಾಹಿತಿಯ ಸ್ಥಳವನ್ನು ಸೂಚಿಸುವ ವಿಳಾಸವನ್ನು URL (Uniform Resource Locator) ಎಂದು ಕರೆಯುತ್ತಾರೆ.ಉದಾಹರಣೆಗೆ ಸಂಪದದ domain ಹೆಸರು  --> "http://www.sampada.net" ಮತ್ತು ಸಂಪದದಲ್ಲಿ ನಿಮ್ಮ ಬ್ಲಾಗ್ ಇರುವ / ಬೇರೆ ಏನಾದರೂ ಲೇಖನ,ಚಿತ್ರಗಳು ಇರುವ ಜಾಗದ ವಿಳಾಸವನ್ನು ಅದರ URL ಎಂದು ಕರೆಯಬಹುದು.

 

 

ಅಂತರ್ಜಾಲದ ನೋಟ - ಒಂದು ಸರಳ ಚಿತ್ರದ ಮೂಲಕ

ನಿಮ್ಮ ಚಿತ್ರವನ್ನು ಪಿಕಾಸಾದ ನಿಮ್ಮ ಖಾತೆಯಲ್ಲಿ ಸೇರಿಸಿದ್ದೀರಿ. ಈಗ ನಿಮಗೆ ಆ ಚಿತ್ರವನ್ನು ಸಂಪದದಲ್ಲಿರುವ ನಿಮ್ಮ ಲೇಖನದಲ್ಲಿ ಸೇರಿಸಬೇಕಾಗಿದೆ. ನೀವು ಮಾಡಬೇಕಾದದ್ದಿಷ್ಟೆ ಪಿಕಾಸಾದ ಸರ್ವರನಲ್ಲಿ ನಿಮ್ಮ ಚಿತ್ರವಿರುವ ಜಾಗದ ಕೊಂಡಿ ಅಂದರೆ URL ಅನ್ನು ನಿಮ್ಮ ಲೇಖನದಲ್ಲಿ ಸೇರಿಸುವುದು. ಅಂದರೆ ಯಾರಾದರೂ ಓದುಗರು ನಿಮ್ಮ ಲೇಖನ ತೆರೆದರೆ, ಲೇಖನದಲ್ಲಿರುವ ನಿಮ್ಮ ಚಿತ್ರದ ವಿಳಾಸವನ್ನು ನೋಡಿದ ಸಂಪದದ ಸರ್ವರ ಪಿಕಾಸಾ ಸರ್ವರನ್ನು ಸಂಪರ್ಕಿಸಿ ಆ ಚಿತ್ರ ನಿಮ್ಮ ಲೇಖನದಲ್ಲಿ ಬರುವಂತೆ ಮಾಡುತ್ತದೆ. ನೀವು ಕೊಟ್ಟ ಕೊಂಡಿ/URL ತಪ್ಪಾಗಿದಿದ್ದರೆ, ಚಿತ್ರ ತೋರಿಸಲು ಮತ್ತೇನಾದರು ಬ್ರೌಸರ್ ಸಂಬಂದಿತ, ತಾಣ ಸಂಬಂದಿತ ತೊಂದರೆಯಿದ್ದಲ್ಲಿ ' X ' ಚಿಹ್ನೆ ಕಾಣುತ್ತದೆ.

 

ಚಿತ್ರದ ಕೊಂಡಿಯನ್ನು ಪಡೆಯುವುದು ಹೇಗೆ?

- ಫೈರಪಾಕ್ಸಲ್ಲಾದರೆ ಚಿತ್ರದ ಮೇಲೆ right click ಮಾಡಿ, ಬಂದ ಮೆನುದಲ್ಲಿ copy image location ಮೇಲೆ ಕ್ಲಿಕ್ ಮಾಡಿ.

-ಒಪೆರಾದಲ್ಲಾದರೆ ಚಿತ್ರದ ಮೇಲೆ right click ಮಾಡಿ, ಬಂದ ಮೆನುದಲ್ಲಿ copy image address ಮೇಲೆ  ಕ್ಲಿಕ್ ಮಾಡಿ.

- ಇಂಟರನೆಟ್ ಎಕ್ಸಪ್ಲೊರರ್ ನಲ್ಲಾದರೆ right click ಮಾಡಿ, ಬಂದ ಮೆನುದಲ್ಲಿ properties ಮೇಲೆ ಕ್ಲಿಕ್ ಮಾಡಿ. ಅಲ್ಲಿ ಸಿಗುವ address(URL) ನ್ನು ಕಾಪಿ ಮಾಡಿಕೊಳ್ಳಿ.

ಹೀಗೆ ಕಾಪಿ ಮಾಡಿಕೊಂಡ ಕೊಂಡಿಯನ್ನು ಸಂಪದದ ನಿಮ್ಮ ಲೇಖನಗಳಲ್ಲಿ ಬಳಸಿ. ಲೇಖನಗಳಲ್ಲಿ ಕೊಂಡಿ ಸೇರಿಸುವ ಬಗ್ಗೆ ಈ ಮೊದಲಿನ ಲೇಖನಗಳಲ್ಲಿ ಚಿತ್ರ ಸಹಿತ ಮಾಹಿತಿಯಿದೆ.

ಮಾಹಿತಿ ಸಂಪದದಲ್ಲಿ ಚಿತ್ರ ಸೇರಿಸುವುದು ಹೇಗೆ? - ಭಾಗ 1

ಮಾಹಿತಿ ಸಂಪದದಲ್ಲಿ ಚಿತ್ರ ಸೇರಿಸುವುದು ಹೇಗೆ? - ಭಾಗ 2

 

ಗಮನಿಸಿ: ಪಿಕಾಸಾ, ಪ್ಲಿಕಾರ್ ಗಳಲ್ಲಿ ನಿಮ್ಮ ಚಿತ್ರಗಳನ್ನು ಸೇರಿಸಲು, ಅಲ್ಲಿಯ ಸೌಲಭ್ಯಗಳನ್ನು ಬಳಸಲು ಆ ತಾಣದಲ್ಲಿ ಖಾತೆ ಹೊಂದಿರಬೇಕು.