
ಮಧ್ಯಾಹ್ನ ದ ಊಟಯ ಸಮಯ ಹತ್ತಿರ ಬಂದಾಗ ಅಮ್ಮ ನ ಬಳಿ "ಇವತ್ತು ಎಂತ ಆಸೆ(ಪದಾರ್ಥ) " ಅಂತ ಕೇಳುವುದು ನಿತ್ಯದ ಸಂಪ್ರದಾಯ. ಆವಾಗ ಅಮ್ಮ "ಅದರಿಂದ ನೆಂಟರು ಅದರಿಂದ ಇಷ್ಟರು" ಅಂತ ಹೇಳಿದರೆ ಯಾವುದೋ ಕಾಡು ಸೊಪ್ಪಿನ ತಂಬುಳಿ ಹಾಗೂ ಗೊಜ್ಜು ಅಂತ ಅರ್ಥ. ಅಯ್ಯ ಅದಕ್ಕೆ ಹಾಗೇಕೆ ಹೇಳಬೇಕು ಅಂತ ನಿಮ್ಮ ಪ್ರಶ್ನೆಯಾದರೆ ಉತ್ತರ ಹೀಗಿದೆ. ಸೊಪ್ಪಿನ ಗೊಜ್ಜು ಬೀಸಿದ ಒರಳನ್ನು ತೊಳೆಯುತ್ತಾರೆ ತೊಳೆದ ನೀರು ತಂಬುಳಿಯಾಗಿ ಮಾರ್ಪಡುತ್ತದೆ. ಅದರ ರುಚಿಯ ಬಲ್ಲವನೇ ಬಲ್ಲ. ಈ ಮಳೆಗಾಲ ಬಂತೆಂದರೆ ನಿತ್ಯ ಮನೆಯಲ್ಲಿ ಕಾಡುಸೊಪ್ಪಿನದೇ ಪದಾರ್ಥಗಳು. ಬಿದಿರಿನ ಮೊಳಕೆಯಿಂದ ಪ್ರಾರಂಭವಾಗಿ ಚೊಗಟೆ, ಎಲವರುಗ,ಚಿತ್ರಮೂಲ, ಗೋಳಿ, ಬಸಳೆ, ನೆಲಮಾವು, ಮುಂತಾದ ನೆಲಸೊಪ್ಪಿನಿಂದ ಆರಂಭವಾಗಿ ಮರದ ಕೆಸದ ತನಕ ಸಾಗಿ ನಿಲ್ಲುತ್ತದೆ. ಇವು ರೋಗನಿರೋಧಕವಂತೆ ಆರೋಗ್ಯದ ಮೂಟೆಯಂತೆ ಎಂಬ ಅಂತೆಕಂತೆಗಳು ಈಗಿನ ಕಾಲದ ಡೈಲಾಗ್ ಗಳಾದರೂ ಅಂದಿನ ಕಾಲದಲ್ಲಿ ವ್ಯಾಪಕ ಮಳೆಯಿಂದಾಗಿ ಪೇಟೆ ತರಕಾರಿ ತರಲು ಆಗದ್ದರಿಂದಾಗಿ ಆರ್ಥಿಕ ಹಿಂಜರಿತವಿದ್ದ ಪರಿಣಾಮವಾಗಿ ಮಲೆನಾಡಿನಲ್ಲಿ ಈ ಸೊಪ್ಪುಸದೆಗಳು ಪದಾರ್ಥವಾಗಿ ಬಳಕೆಗೆ ಬಂದಿವೆ. ಇವತ್ತಿನ ಸಾಂಬಾರು ಪದಾರ್ಥಗಳು ಆ ಕಾಲದ ಸೊಪ್ಪಿನ ಗೊಜ್ಜುಗಳ ಜತೆ ಸೇರಿ ವಿಶಿಷ್ಠ ಅದ್ಭುತ ರುಚಿಯನ್ನು ತಂದೊಡ್ಡಿವೆ.
ಇವತ್ತು ಎಲೆವುರುಗ (ಎಲವರಿಗೆ) ಸೊಪ್ಪಿನ ಗೊಜ್ಜು ಮತ್ತು ತಂಬಳಿ. ರಸ್ತೆ ಬದಿಯಲ್ಲಿ ಜೂನ್ ತಿಂಗಳ ನಂತರ ತನ್ನಷ್ಟಕ್ಕೆ ಹುಟ್ಟುವ ಈ ಗಿಡ ಈಗ ಬಲಿತು ನಿಂತಿದೆ. ಅದರ ಎಲೆಯನ್ನು ಕೊಯ್ದು ಹುರಿದು ಅದಕ್ಕೆ ಜೀರಿಗೆ ಕಾಳುಮೆಣಸು ಕೊಬ್ಬರಿ ಸೇರಿಸಿ ಗೊಜ್ಜು ಹಾಗೂ ಒಳ್ಳು ತೊಳೆದ ನೀರಿಗೆ ಬೆಲ್ಲ ಹಾಕಿ ಒಂದು ಒಗ್ಗರಣೆ ಹಾಕಿ ತಂಬುಳಿ ಸಿದ್ಧವಾಗಿದೆ. ಇನ್ನೂ ಇಳಿಸುವುದೊಂದೇ ಬಾಕಿ. ಪುರುಸೊತ್ತು ಇದ್ದರೆ ನೀವು ಬನ್ನಿರಲ್ಲ. ಬಾರಿಸೋಣ, ಆರೋಗ್ಯವಾಗಿರೋಣ, ಅದೊಂದಿದ್ದರೆ ಸಂಪತ್ತು ಇದ್ದಂತೆಯಂತೆ. ಹಾಗೆ ಹೇಳುವುದು ಕೇವಲ ಆರೋಗ್ಯವೊಂದಿದ್ದು ಸಂಪತ್ತು ಇಲ್ಲದಿರುವ ಜನ ಅಂತ ಹೇಳುವುದು ತೀರಾ ಕುಹಕವಲ್ಲದಿದ್ದರೂ ತೀರಾ ಸುಳ್ಳಂತೂ ಅಲ್ಲ. ಹ್ಯಾಪಿ ಊಟ.
ಪ್ರತಿಕ್ರಿಯೆ (2)