ಪ್ರೀತಿಗಾಗಿ ತಹತಹಿಸಿದವರ ಪ್ರತೀಕ- ಅಮೃತ ಪ್ರೀತಮ್!

 

ಅಮೃತ ಪ್ರೀತಮ್ ಪಂಜಾಬಿನ ಓರ್ವ ದೊಡ್ಡ ಕವಯತ್ರಿ, ಕಾದಂಬರೀಗಾರ್ತಿ ಹಾಗೂ ಪ್ರಬಂಧಗಾರ್ತಿ. ಭಾರತ ಹಾಗೂ ಪಾಕಿಸ್ತಾನದಲ್ಲಿ ಸಮಾನ ಪ್ರಮಾಣದ ಓದುಗರನ್ನು ಹೊಂದಿದ್ದ ಆಧುನಿಕ ಪಂಜಾಬಿ ಸಾಹಿತ್ಯದ ಧ್ರುವತಾರೆ. ಪದ್ಮವಿಭೂಷಣ, ಜ್ಞಾನಪೀಠ ಹಾಗೂ ಕೇಂದ್ರಸಾಹಿತ್ಯ ಅಕಾಡೆಮಿಯ ಸದಸ್ಯತ್ವವನ್ನು ಪಡೆದಿದ್ದ ಅಪರೂಪದ ಹೆಣ್ಣುಮಗಳು.

ಅಮೃತ ಪ್ರೀತಮ್, ತನ್ನ ವೈಯುಕ್ತಿಕ ಬದುಕಿನಿಂದ ಹೆಚ್ಚು ಗಮನವನ್ನು ಸೆಳೆದವಳು. ಇಂದಿಗೂ ಸಹಾ ಸಾಹಿತ್ಯ ವಲಯದಲ್ಲಿ ಹೆಚ್ಚು ಚರ್ಚೆಗೆ ಒಳಗಾಗುತ್ತಿರುವಳು. ಬಹುಶಃ ಮುಂದಿನ ದಿನಗಳಲ್ಲಿಯೂ ಈಕೆಯ ಹೆಸರು ಸದಾ ಚರ್ಚೆಯಲ್ಲಿರುತ್ತದೆ.

ಒಂದು ಮೂಲಭೂತ ಪ್ರಶ್ನೆ.

ಬದುಕನ್ನು ನಾವು ಬಯಸಿದಂತೆ ನಡೆಸಬೇಕೋ ಅಥವ ಬಂದಂತೆ ಸ್ವೀಕರಿಸಬೇಕೋ?

ಪಾಲಿಗೆ ಬಂದದ್ದು ಪಂಚಾಮ್ರುತ ಎಂದು ಬಂದ ಬದುಕನ್ನೇ ನಡೆಸುವ ಜನ ನಮ್ಮಲ್ಲಿ ಹೆಚ್ಚು. ಅದುವೇ ಒಳ್ಳೆಯದು ಎಂದು ಬಹಳ ಜನರ ಅಭಿಪ್ರಾಯ. ಸಂಗಾತಿಯು ಹೇಗೇ ಇರಲಿ, ಹೊಂದಿಕೊಂಡು ಹೋಗುವುದರಲ್ಲಿಯೇ ಇದೆ ಭಾರತೀಯ ಸಮಾಜದ ತಿರುಳು.

          ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ವಿದ್ಯಾವಂತರಾಗಿ, ಆರ್ಥಿಕ ಸುಭದ್ರತೆಯನ್ನು ಪಡೆಯುತ್ತಿರುವಂತೆಯೇ ತಮ್ಮ ಬದುಕಿನ ಬಗ್ಗೆಯೂ ಸ್ವತಂತ್ರವಾಗಿ ಆಲೋಚಿಸುತ್ತಿದ್ದಾರೆ. ಅಪ್ಪ-ಅಮ್ಮ ತೋರಿಸಿದ ಗಂಡನ್ನು ಮದುವೆಯಾಗಿ, ಜೀವನಪೂರ್ತಿ ಅವನೊಡನೆ ಬಾಳುವ ಬದುಕನ್ನು ತಿರಸ್ಕರಿಸುತ್ತಿದ್ದಾರೆ. ತಮಗೆ ನೆಚ್ಚಿದವನೊಡನೆ ಬದುಕನ್ನು ಹಂಚಿಕೊಳ್ಳುವುದು (ಲಿವಿಂಗ್ ಟುಗೆದರ್) ಜನಪ್ರಿಯವಾಗುತ್ತಿದೆ. ಯಾರಿಗೂ ಬಂಧನವಿಲ್ಲ. ಒಬ್ಬರು ಮತ್ತೊಬ್ಬರಿಗೆ ಹೊರೆ ಎಮ್ಬ ಭಾವ ಬರುವ ಮೊದಲೇ ಮನವನ್ನು-ಮನೆಯನ್ನು ಬದಲಿಸಿದರಾಯಿತು! ಇಷ್ಟವಿದ್ದರೆ ಏಕಪಾಲಕರಾಗುವುದು ಇಲ್ಲದಿದ್ದರೆ ಮಕ್ಕಳ ಗೊಡವೆಯೇ ಬೇಡ!

          ಮದುವೆಯ ಯಾವ ಗೊಮ್ದಲವೂ ಇಲ್ಲದೇ ಮೆಚ್ಚಿದವನೊಡನೆ ಬಾಳುವುದು ಇಂದಿನ ದಿನಗಳಲ್ಲಿ ಕಷ್ಟವೇನಿಲ್ಲ. ಆದರೆ ಇಂತಹ ಪ್ರಯತ್ನ ೬-೭ ದಶಕಗಲ ಹಿಂದೆ ಕನಸಿನ ಮಾತಾಗಿತ್ತು. ಆದರೆ ಅಮೃತ ಪ್ರೀತಮ್ ತನ್ನ ಕನಸನ್ನು ನನಸಾಗಿಸಿಕೊಂಡ ದಿಟ್ಟ ಮಹಿಳೆ.

ಅಮೃತ ಪ್ರೀತಮ್ ೧೯೩೬ ರಲ್ಲಿ ಪ್ರೀತಮ್ ಸಿಂಗ್ ಎಂಬುವವಳನ್ನು ಮದುವೆಯಾದಳು. ಆದರೆ ಮನಸ್ಸುಗಳು ಕೂಡಿಬರಲಿಲ್ಲ. ಕವಯತ್ರಿಯ ಭಾವ ಬದುಕಿಗೆ ಪ್ರೀತಮ್ ಸಿಂಗ್ ಯಾವ ರೀತಿಯಲ್ಲೂ ಸಾಟಿಯಾಗಿರಲಿಲ್ಲ. ಅಂದಿನ  ದಿನಗಳಲ್ಲಿ ಸಾಹಿ ಲುಧಿಯಾನವಿ ಎಂಬ ಕವಿ ಹೆಚ್ಚು ಹೆಸರನ್ನು ಮಾಡಿದ್ದನು. ಎಡ ಪಂಥೀಯ ಒಲವನ್ನು ಹೊಂದಿದ್ದ ಈತನೆಂದರೆ ಅಮೃತ ಪ್ರೀತಮ್-ಳಿಗೆ ಅಚ್ಚು ಮೆಚ್ಚು. ಈತ-ಈತನ ಕವಿತೆಗಳು ಅಮೃತ ಪ್ರೀತಮ್-ಳನ್ನು ಯಾವ ಪರಿ ಸೆಳೆಯಿತೆಂದರೆ, ಆಕೆ ತನ್ನ ಪತಿ ಪ್ರೀತಮ್ ಸಿಂಗ್-ನನ್ನು ಸದಾ ಕಾಲಕ್ಕೂ ಬಿಟ್ಟು ಸಾಹಿರ್ ಲುಧಿಯಾನವಿ ಹಿಂದೆ ಬರುತ್ತಾಳೆ. ಲುಧಿಯಾನವಿ ಓರ್ವ ಗಂಡು. ಕೇವಲ ಗಂಡು! ಅವನಿಗೆ ಅಮೃತ ಪ್ರೀತಮ್-ಳ ಪ್ರೀತಿ ಹಾಗೂ ಅದಕ್ಕಾಗಿ ಆಕೆ ಮಾಡಿದ ’ತ್ಯಾಗ’ ಲೆಕ್ಕಕ್ಕೆ ಬರಲಿಲ್ಲ. ಆತನು ಮತ್ತೋರ್ವ ಹೆಣ್ಣಿನ ಸಂಗದಲ್ಲಿ ಸುಖ

ಕಾಣಲು ಆರಂಭಿಸಿದನು.   ಸಾಹಿರ್ ಲುಧಿಯಾನವಿಯ ಸಮಗ್ರ ಬದುಕನ್ನು ಆವರಿಸಿಕೊಳ್ಳಬಯಸಿದ ಅಮೃತ ಪ್ರೀತಮ್-ಳಿಗೆ ದೊಡ್ಡ ನಿರಾಸೆ. ಆ ಕ್ಷಣವೇ ಸಾಹಿರ್ ಲುಧಿಯಾನವಿಯನ್ನು ಆತನ ಪಾಡಿಗೆ ಬದುಕಲು ಬಿಟ್ಟುಬಿಟ್ಟಳು.

ಅಮೃತ ಪ್ರೀತಮ್, ನಂತರದ ದಿನಗಳಲ್ಲಿ ಇಮ್ರೋಜ್ ಎಂಬ ಕಲಾವಿದನ ಜೊತೆಯಲ್ಲಿ ಬದುಕಲು ಆರಂಭಿಸಿದಳು. ಸುಮಾರು ೪೦ ವರ್ಷಗಳ ಕಾಲದ ಸುದೀರ್ಘ ಬದುಕನ್ನು ಇಮ್ರೋಜನ ಜೊತೆ ಕಳೆದ ಅಮೃತ ಪ್ರೀತಮ್, ಒಂದು ರಾತ್ರಿ ಸದ್ದಿಲ್ಲದ ಹಾಗೆ ನಿದ್ರೆಯಲ್ಲಿ ಕೊನೆಯ ಉಸಿರನ್ನು ಎಳೆದಳು.

ಅಮೃತ ಪ್ರೀತಮ್-ಳ ಬರಹವನ್ನು ಓದಿದರೆ, ಆಕೆ ಬಯಸಿದ ಪ್ರೀತಿ ಆಕೆಗೆ ಎಂದೂ ದೊರೆಯಲಿಲ್ಲ ಎನ್ನುವುದು ತಿಳಿಯುತ್ತದೆ. ಅಮೃತ ಪ್ರೀತಮ್-ನಿಜವಾದ ಪ್ರೀತಿಗಾಗಿ ತಹತಹಿಸಿದ ಜೀವ. ಪ್ರೀತಿಯನ್ನು ಬಯಸಿ, ಆ ಪ್ರೀತಿ ದೊರೆಯದೇ, ಪ್ರೀತಿಯೆನ್ನುವುದು ಸದಾ ಕಾಲಕ್ಕೂ ಮರೀಚಿಕೆಯಾಗಿರುವ ಎಲ್ಲ ಪ್ರೇಮಿಗಳಿಗೆ ಓರ್ವ ಸಂಕೇತ- ಅಮೃತ ಪ್ರೀತಮ್!

 ಅಮೃತ ಪ್ರೀತಮ್-ಮರಣಿಸಿದಾಗ ಈ ಕೆಳಗಿನ ಕವನವನ್ನು ಬರೆದೆ. ಎಲ್ಲಿಯೂ ಪ್ರಕಟಿಸದೇ ಹಾಗೆಯೇ ಇಟ್ಟುಬಿಟ್ಟಿದ್ದೆ. ಹೇಗಿದೆ? ಒಮ್ಮೆ ಓದಿ ತಿಳಿಸಿ.

 

ಶಾಶ್ವತ ಅಮೃತಾ!

ಗೆಳತಿ ನಿನಗೆ ನಮ್ಮ ಅಮೃತಳು ಗೊತ್ತೆ?

ಮೊನ್ನೆ ಮೊನ್ನೆ ತೀರಿ ಹೋದಳು ಅಮೃತ

ಸಾಗರಮಥನದಿ ಹುಟ್ಟಿದಂತಹ ಅಮೃತ

ಗೊತ್ತೆ? ಮೊನ್ನೆ ಮೊನ್ನೆ ತೀರಿಹೋದಳು!

ಅವಳದ್ದು ಎಂತಹ ದುರಂತ ಬಾಳು ಗೆಳತಿ

ಬದುಕಿನುದ್ದಕ್ಕೂ ಪ್ರೀತಿಗಾಗಿ ಹಲುಬಿದಳು

ಮೆಚ್ಚಿದವನು ಎದುರಿಗಿರಲು ತಲೆಯನೆತ್ತಿ,

ಮುಖವನ್ನು ನೋಡಲಾಗದೆ ಮೌನವಾದಳು

ಮನದೊಳಗೆ ಮೂಡಿದ ಮಧುರ ಭಾವಗಳ

ತುಟಿಯ ಮೇಲೆ ತರಲಾರದೆ ಮಿಡುಕಿದಳು

ಲೇಖನಿಯ ಎದೆಯ ಭಾವ ಬಟ್ಟಲಲ್ಲಿ ಅದ್ದಿ

ಬಾನ ತುಂಬಾ ಪ್ರೀತಿ ಚಿತ್ರವನು ಬರೆದಳು

ಹೆಣ್ಣ ಹೃದಯದಲ್ಲಿ ಹೆಪ್ಪುಗಟ್ಟಿದ ನೋವನ್ನು

ಅನುಭವಿಸಿದಳು, ಅಕ್ಷರಗಳಲ್ಲಿ ಕರಗಿಸಿದಳು

ಕಣ್ಣಹನಿಗಳು ಪಾವನ ಗಂಗೆಯಾಗಿ ಹರಿಯಿತು

ನೊಂದವರ ತಣಿಸಿ, ತಾ ಬೆಂಕಿಯಲ್ಲಿ ನಿಂದಳು

ಗೆಳತಿ, ಅಮೃತ ತನ್ನ ತಾನು ವಂಚಿಸಿಕೊಳ್ಳಲಿಲ್ಲ

ತನ್ನ ಮನದ ಭಾವಗಳನೆಂದಿಗು ಮುಚ್ಚಿಡಲಿಲ್ಲ

ಜಗದ ರೀತಿ ರಿವಾಜುಗಳಿಗೆ ಸೊಪ್ಪ ಹಾಕಲಿಲ್ಲ

ಮದುವೆ ಆದರೂ ತನ್ನ ಪ್ರೀತಿಯ ಬಚ್ಚಿಡಲಿಲ್ಲ

ಸಾಯುವ ಕೊನೆಯ ಘಳಿಗೆಯವರೆಗೆ ನೆನೆದಳು

ತನ್ನ ಪ್ರೀತಿಗಾಗಿ ಹಲುಬಿದಳು, ಪ್ರಾರ್ಥಿಸಿದಳು

ಜಗವೇ! ಪ್ರೀತಿಸಿದವರನೆಂದಿಗೂ ವಂಚಿಸಬೇಡ

ಪ್ರೀತಿಸಿದವರನು ಅಂತರ ಪಿಶಾಚಿಗಳಾಗಿಸಬೇಡ

ಜಗದಲಿ ಪ್ರೀತಿಯೇ ಸತ್ಯ, ನಿತ್ಯ, ಮಿಕ್ಕವೆಲ್ಲ ಮಿಥ್ಯ

ನೆನಪಿಡು, ಪ್ರೀತಿಸಿದವರಿಗೆ ಪ್ರೀತಿಯಿಂದ ಮೋಕ್ಷ,

ಮೊನ್ನೆ ಮೊನ್ನೆಯಷ್ಟೇ ತೀರಿಹೋದಳಲ್ಲ ಅಮೃತ

ಗೆಳತಿ, ನಾ ಅಮೃತಳಾಗಬಾರದಲ್ಲವೆ ನಿರೀಕ್ಷಿಸುತ?

 

-ಡಾ.ನಾ.ಸೋಮೇಶ್ವರ

www.yakshaprashne.org

http://www.apnaorg.com/articles/razarumi-1/2005111300030101.jpg