ಆತ್ಮೀಯ ಎಂ+ಎಂ+ಎಂ=ಎಸ್, 

ನೀನು ಪ್ರತಿ ಸಲ "ನಾ ನಿನ್ನ ಪ್ರೀತಿಸ್ತಿದ್ದೀನಿ" ಅಂತ ಹೇಳಿದರೆ ನನ್ನ ಕಿವಿಯಲ್ಲಿ, ಅಪ್ಪನಿಗೆ ನನ್ನ ತಾತ ಕೊಟ್ಟ ಅಲಾರ್ಮ್ (ಹಳೆ ಕಾಲದ್ದು, ಅಲಾರ್ಮ್ ಹೊಡೆದರೆ ಸಾಕು ಪೂರ್ತಿ ನಮ್ಮ ಕಾಲೋನಿ ನಮ್ಮನೆಗೆ ಹಿಡಿ ಶಾಪ ಹಾಕುತ್ತೆ) ರಿಂಗಣಿಸಲು ಪ್ರಾರಂಭಿಸುತ್ತದೆ. ನನ್ನ ಮನಸಿನಲ್ಲೇನೋ ನಿನ್ನ ಬಗ್ಗೆ ಅನುಕಂಪ, ಸಹಾನುಭೂತಿ, ಕರುಣೆ ಹುಟ್ಟಿ ಬರುತ್ತೆ. 

ಯಾಕಾದರೂ ನಿನಗೆ ಈ ಪ್ರೀತಿ ಹುಚ್ಚು ಹಿಡಿತು ಅಂತ ಮನಸ್ಸು ಕೆಡುತ್ತೆ.

ನಿನಗೆಷ್ಟು ತಿಳಿ ಹೇಳಿದರು ಕೆಳಲೋಲ್ಲೆ, ಒಬ್ಬ ಗೆಳೆಯನಾಗಿ ನೀ ನನಗೆ ತುಂಬಾ ಇಷ್ಟ. ಈ ಗೆಳೆತನದ ಸಂಬಂಧಕ್ಕಿಂತ ಬೇರೆ ಯಾವುದೇ ರಿಲೇಶನ್ ನಿನ್ನ ಜೊತೆ ನನಗೆ ಇಷ್ಟವಿಲ್ಲ ಕಣೋ. ಪ್ಲೀಸ್ ಅರ್ಥ ಮಾಡ್ಕೋ.... 

 

ಗೆಳತಿಯರೆಲ್ಲಾ, ಅವನೆಷ್ಟು ನಿನ್ನನ್ನ ಪ್ರೀತಿಸ್ತಾನೆ ಕಣೆ, ನಿನ್ಯಾಕೆ ಅವನನ್ನ ಅರ್ಥ ಮಾಡ್ಕೋಳೋದಿಲ್ಲ, ನೋಡೋಕು ಲಕ್ಷಣವಾಗಿದ್ದಾನೆ, ಸುಮ್ನೆ ಓಕೆ ಅನ್ನೇ, ನಿಮ್ಮಿಬ್ಬರದು ಸೂಪರ್ ಜೋಡಿಯಾಗುತ್ತೆ. ಅದ್ಯಾಕೆ ಪ್ರೇಸ್ಟಿಜ್ ತೋರಿಸ್ತಿಯ, ಅಂತ ಕೆಣಕುವಾಗ ಒಂದ್ಚುರು ಸಿಟ್ಟು ಬರಲ್ಲ, ಬದಲಾಗಿ ನಗು ಬರುತ್ತೆ. ಇಲ್ಲೇ ನಿನ್ನ ಮೇಲೆ ಕರುಣೆ ಹುಟ್ಟುತ್ತೆ ಕಣೋ.

  

ಅಲ್ಲ ಕಣೋ ಗೆಳತಿಯಾಗಿ ನಿನ್ನ ಜೊತೆ ಮಾತಾಡ್ತೀನಿ ಹೊರತು, ನಿನ್ನ ಪ್ರೆಯಸಿಯಾಗೋ ಮನಸ್ಸು ಇಲ್ವೆ ಇಲ್ಲಾ, ತಿಳಿತಾ ನಿನಗೆ.....

ಹೇಳಿದ್ದಕ್ಕೆಲ್ಲ ಗೊಣಾಡಿಸಬೇಡ, ನಿಂಗೊತ್ತು ನಂಗೆ ಸಿಟ್ಟು ಬರುತ್ತೆ. ಲೇ ಕೋತಿ....

 

ಏನಕ್ಕೋ ನನ್ನ ಪ್ರೀತಿಸ್ತಿಯ? ಅಂದ್ರೆ ನಿನ್ನ ಹಳ್ಳಿ ಭಾಷೆ ತುಂಬಾ ಇಷ್ಟ ಅಂತಿಯ, ಆಯ್ತು ಲೇ ಮಂಗ್ಯ ನಿನಗೋಸ್ಕರ ನನಗಿಂತ ಚೆನ್ನಾಗಿ ಹಳ್ಳಿ ಭಾಷೆ ಮಾತಾಡೋ ಹುಡ್ಗಿನ ನೋಡಿಕೊಡ್ತೀನಿ ಅವಳಿಗೆ ಹೇಳು ಇದೆಲ್ಲಾ ಅಂದ್ರೆ, ಹೋಗೆಲೇ ಅವ್ಳು ನಿನಾಗಿರಬೇಕಲ್ಲ ಅಂತ ಒದರಾಡ್ತಿಯ......

ಲೇ ನಿನ್ನ ತಲೇಲಿ ಸಗಣಿ ತುಂಬಿಕೊಂಡಿದ್ಯಾ, ಅರ್ಥ ಆಗಂಗಿಲ್ಲ ಎನಲೇ ದನಾ ಅಂದ್ರೆ, ಥ್ಯಾಂಕ್ಸ್ ಕಣೆ, ಎಷ್ಟೊಂದು ಚೆನ್ನಾಗಿ ನನ್ನ ಅರ್ಥ ಮಾಡ್ಕೊಂಡಿದ್ದಿಯ ಅಂತ ಹಲ್ಲು ಕಿರಿತಿಯಾ, 

 

ಇತ್ತಿತ್ತಲಾಗಿ ೪ ದಿನಾ ನೀ ನನಗೆ ಕಾಣದೆ ಇದ್ದಾಗ ಅದೇ ಡಿ.ಎಂ.ಆರ್.ಸಿ, ಇದ್ದಾಳಲ್ಲ ಅವಳಲ್ಲಿ ಕೇಳಿದ್ರೆ , ಆಯ್ತಾ ನಿಂಗು ಶುರು ಆಯ್ತೆ ಅಲ್ವಾ, ೪ ದಿನ ಅವನನ್ನ ಬಿಟ್ಟು ಇರೋದಕ್ಕೆ ಆಗ್ತಾ ಇಲ್ಲಾ ಕಣೆ ನಿಂಗೆ ಅಂತ ನಗ್ತಿರ್ಬೇಕಾದ್ರೆ, ನನಗೆ ನಗು ತಡಿಲೆ ಇಲ್ಲಾ ಕಣೋ, ನಗು ಯಾಕಂತಿಯಾ ಅದೇ ನಾವಿಟ್ಟ ಅವಳ ಹೆಸರು. (ಡಿ- ಡೊಂಕಿ, ಎಂ-ಮಂಕಿ, ಆರ್- ರ್ರ್ಯಾಟ್, ಸಿ- ಕ್ಯಾಟ್) 

 

ಇಲ್ಲಾ ಕಣೆ ಅವನಿಗೆ ಆಕ್ಸಿಡೆಂಟ್ ಆಗಿದೆ ಅಂತ ಬಿ.ಸಿ, ಹೇಳಿದ ಮೇಲೇನೆ ಗೊತ್ತಾಗಿದ್ದು ಕಾಲು ಮುರಿದುಕೊಂಡು ಆಸ್ಪತ್ರೆಲೀ ಬಿದ್ದಿದ್ದಿಯಾ ಅಂತ,

ನಾ, ನೋಡೋಕ್ಕೂ ಬರಲಿಲ್ಲ, ಕಾಲ್ ಮಾಡಲಿಲ್ಲ, ಎಟ್ ಲೀಸ್ಟ್ ಒಂದು ಎಸ್ ಎಂ ಎಸ್ ಆದರು ಕಳಿಸಬಾರದ, ಕಟುಕಿ, ನೋಡು ನಾನು ಒದರಾಡ್ತಾ ಇದ್ದರೂ ಎಷ್ಟೊಂದು ನಗ್ತಿದ್ದಿಯಾ, ನೀನು ಕಟುಕಿನೇ ಕಣೆ ಅಂತ ಒದರಾಡ್ತಾ ಇದ್ರು ನಾನು ನಗ್ತಾನೆ ಇದ್ದೆ ಕಣೋ.

 

ಆದ್ರೆ ಒಂದು ವಿಷಯ ನಿನಗೆ ಕೊನೆಗೂ ಹೇಳಲೇ ಇಲ್ಲಾ ಕಣೋ, ನೀನು ದವಾಖಾನೆಲಿ ಇದ್ದೀಯ ಅಂತ ಗೊತ್ತಾದದ್ದೇ ನನಗೆ ಊಟಾನು ರುಚಿಸಲಿಲ್ಲ ಕಣೋ, ಅವತ್ತು ರಾತ್ರಿ ಪೂರ್ತಿ ನನ್ನ ತಲೆದಿಂಬು ಹಸಿಯಾದದ್ದು ಯಾರು ನೋಡಲೇ ಇಲ್ಲಾ, ನನ್ನ ಡ್ರಾಫ್ಟ್ ಮೆಸೇಜ್ ಚೆಕ್ ಮಾಡಿದ್ರೆ ಅದ್ರಲ್ಲಿ ಎಷ್ಟೊಂದು ಗೆಟ್ ವೆಲ್ ಸೂನ್, ಮಿಸ್ ಯು ಫ್ರೆಂಡ್ ಮೆಸೇಜ್ ಗಳಿವೆ ಗೊತ್ತಾಗುತ್ತಿತ್ತು. ರಾತ್ರಿ ಅಪ್ಪನ "ಶುಭ ರಾತ್ರಿ" ಕೇಳದೆ ನಾನೆಂದು ಮಲಗಿದವಳಲ್ಲ,ಹುಟ್ಟಿನಿಂದ ನನ್ನಪ್ಪನ ಒಂದು ಕಾಲ್ ಮಿಸ್ ಮಾಡದ ನನಗೆ ಆವತ್ತು ಬೆಳಿಗ್ಗೆ ಎದ್ದು ಸೆಲ್ ಚೆಕ್ ಮಾಡಿದಾಗ ಪೂರ್ತಿ ೧೮ ಮಿಸ್ ಕಾಲ್. ಗಡಿಬಿಡಿಯಲ್ಲಿ ಅಪ್ಪನಿಗೆ ಫೋನ್ ಮಾಡಿದರೆ, ಅಪ್ಪ ಅದಾಗಲೇ ಬೆಂಗಳೂರಿನ ಬಸ್ ಏರಿಯಾಗಿತ್ತು.

 

ನೀನು ಅವತ್ತು ಒದರಾಡ್ತಾ ಇದ್ದರು ನಾನು ನಗ್ತಾ ಇದ್ದೆ ಅಲ್ಲಾ, ಆದ್ರೆ ನನ್ನ ಕಣ್ಣ ಅಂಚಿನ ನೀರು ನೆಲ ಸೇರಿದ್ದು ನೀನು ನೋಡಲೇ ಇಲ್ಲಾ. 

 

ನೀನು ತಿರುಗಿ ಬಂದಾಗಲಿಂದ ಗೆಳತಿಯರೆಲ್ಲಾ ಕಾಡಿಸ್ತಾ ಇದ್ರು, ನೋಡೇ ಅವನು ಬಂದಿದ್ದಾನೆ , ಇನ್ನು ರಾತ್ರಿ ನಿನಗೆ ನಿದ್ದೇನೆ ಬರಂಗಿಲ್ಲ, ಬರೆದಿಟ್ಕೋ, ಅಂತ ಹೇಳಿ ದಿನಾ ಪೂರ್ತಿ ನೆತ್ತಿ ತಿಂತಾನೆ ಇದ್ರು, ಆದ್ರೆ ನಿಜ ಹೇಳ್ತಿನೀ ಮಂಗ್ಯ, ಅವತ್ತಲಿಂದ ಇವತ್ತನವರೆಗೂ ಅರ್ಧ ತಾಸು ಜಾಸ್ತಿನೇ ಮಲಗ್ತಾ ಇದ್ದಿನೀ.

 

ನಿನ್ನೆ ನೀನು ಹೇಳಿದ್ದನ್ನ ಕೇಳಿದ ಮೇಲೆ ನನಗ್ಯಾಕೋ ಇದನ್ನ ಹೇಳ್ಬೇಕು ಅನ್ನಿಸ್ತು.

 

ಲೇ, ಇಲ್ಲಾ ಕಣೇ, ನೀನು ನನಗೆ ಸೂಟ್ ಆಗಂಗಿಲ್ಲ, ನನ್ನವಳಿಗಿರಬೇಕಾದ ಒಂದು ಗುಣಾ ನಿನ್ನಲಿಲ್ಲ, ನೀನು ತುಂಬಾ ಒಳ್ಳೆ ಫ್ರೆಂಡ್ ಕಣೇ, ನಾನೇ ತಲೆ ಕೆಟ್ಟವನು ಸುಮ್ನೆ ನಿನ್ನನ್ನ ಪ್ರೀತಿ ಪ್ರೀತಿ ಅಂತ ಕಾಡ್ತಾ ಇದ್ದೆ. ಒಂದು ಹುಡುಗ ಹುಡುಗಿ ಬೆಸ್ಟ್ ಫ್ರೆಂಡ್ ಆಗೇ ಇರಲಾರರು ಅಂತ ತಿಳಿದಿದ್ದ ನನಗೆ, ಫ್ರೆಂಡ್ ಆಗಿ ಇರಬಹುದು ಅಂತ ತೋರಿಸಿಕೊಟ್ಟವಳು ನೀನು. ಆದರೆ ಬೆಸ್ಟ್ ಫ್ರೆಂಡ್ ಆಗಿ ಇರಬೇಕಾದರೆ ಆ ಹುಡುಗಿ ನೀನೆ ಆಗಿರಬೇಕು ಅಂತ ನಾನು ತಿಳಿದುಕೊಂಡೆ. ಥ್ಯಾಂಕ್ಸ್ ಕೋತಿ ಅಂದಾಗ........  ಮೊದಲ ಸಲ ನಿನ್ನ ಜೊತೆ ಮನಸ್ಸಿನಿಂದ ನಕ್ಕೆ ಕಣೋ ಮಂಗ್ಯಾ..............

 

 

-ಅಶ್ವಿನಿ