ಆ ಹಾಡು ಹಕ್ಕಿ ಹಾಡುತ್ತಿದ್ದರೆ, ಅದಕ್ಕೆ ಈಗ ೭೨ ವರ್ಷ ವಯಸ್ಸಾಗಿರುತ್ತಿತ್ತು. ಆಗಿನ ಕಾಲದ ಯುವ ಪ್ರೇಮಿಗಳಿಗಾಗಿ ಬಹುತೇಕ ಯುಗಳ ಗೀತೆಗಳನ್ನು ಮತ್ತು ವಿರಹ ಗೀತೆಗಳನ್ನು ಕೊಡುಗೆಯಾಗಿ ಕೊಟ್ಟ ಆ ಹಕ್ಕಿ ಇಂದು ಮೂಕವಾಗಿದೆ.
ಒಂದು ಕಾಲದಲ್ಲಿ ಸಂಗೀತ ಕ್ಷೇತ್ರದ ಅನಭಿಷಿಕ್ತ ದೊರೆಯಾಗಿ ಮೆರೆದ ಆ ಹಾಡು ಹಕ್ಕಿ, ಅಭಾಸ್ ಕುಮಾರ್ ಗಂಗೂಲಿ, ಒಬ್ಬ ಕೋರಸ್ ಗಾಯಕನಾಗಿ ಬಾಂಬೆ ಟಾಕೀಸ್ನಲ್ಲಿ ಕೆಲಸಕ್ಕೆ ಸೇರಿದ ಈ ಹಕ್ಕಿಯ ಮೊದಲ ಹಾಡು, ೧೯೪೮ ರಲ್ಲಿ ತೆರೆಗೆ ಬಂದ ಜಿದ್ದಿ ಚಿತ್ರದ "ಮರನೇ ಕಿ ದುವಾಯೇ ಕ್ಯು ಮಾಂಗು" ಹಾಡು. ನಂತರ, ಈ ಹಾಡು ಹಕ್ಕಿ ಮತ್ತೆ ತಿರುಗಿ ನೋಡಲೇ ಇಲ್ಲ.
     ಮೊದಲಿಗೆ ನಾಯಕನಾಗಿ ನಟಿಸಿದ ಚಿತ್ರ, ೧೯೫೧ರಲ್ಲಿ ತೆರೆ ಕಂಡ "ಆಂದೋಲನ್", ತನ್ನ ಅಣ್ಣನ ಮೂಲಕ, ನಾಯಕನಾಗಿ ಅನೇಕ ಅವಕಾಶಗಳು ಬಂತಾದರೂ, ಈ ಹಕ್ಕಿಗೆ ನಟನೆಯ ಬದಲು ಗಾಯನದಲ್ಲಿ ಆಸಕ್ತಿ ಬಹಳವಾಗಿತ್ತು. ಆದರೆ ಅಣ್ಣನಿಗೆ, ತನ್ನ ಸಹೋದರನೂ ತನ್ನಂತೆಯೇ ನಾಯಕನಾಗಲಿ ಎಂಬ ಹಂಬಲ. ಅದರಿಂದಾಗಿ, "ನ್ಯೂ ಡೆಲ್ಲಿ", "ನೌಕರಿ ","ಮುಸಾಫಿರ್", " ಆಶಾ", "ಚಲ್ತಿ ಕಾ ನಾಮ್ ಗಾಡಿ", "ಹಾಫ್ ಟಿಕೆಟ್ ", "ಪಡೋಸನ್ " ಇನ್ನಿತರ ಹಲವು ಚಿತ್ರಗಳಲ್ಲಿ ನಾಯಕನಾಗಿ ನಟನೆ.
    ಈ ಹಾಡು ಹಕ್ಕಿಗೆ breakthrough ನೀಡಿದ ಕೀರ್ತಿ, ಶ್ರೀಯುತ ಎಸ. ಡಿ. ಬರ್ಮನ್ರಿಗೆ ಸಲ್ಲುತ್ತದೆ. ದೇವ್ ಆನಂದ್ ರ ಚಿತ್ರಗಳಲ್ಲಿ ಮೊದಲಿಗೆ ಹಾಡಲು ಶುರು ಮಾಡಿದ ಈ ಹಕ್ಕಿ ಮುಂದೆ, ಅಮಿತಾಭ್ ಬಚ್ಚನ್, ಧರ್ಮೇಂದ್ರ, ರಾಜೇಶ್ ಖನ್ನ, ಜಿತೇಂದ್ರ, ಸಂಜೀವ್ ಕುಮಾರ್, ಮಿಥುನ್ ಚಕ್ರವರ್ತಿ, ಅನಿಲ್ ಕಪೂರ್ ಹೀಗೆ, ಈಗಿನ ಪೀಳಿಗೆಯ ನಾಯಕರಿಗೂ  ಹಾಡಿದ್ದಾರೆ.  ಈ ಹಾಡು ಹಕ್ಕಿಯ ಹಾಡುಗಳು ಎಷ್ಟು ಜನಪ್ರಿಯವಾಗಿವೆ ಎಂದರೆ, ಇಂದಿಗೂ ಆ ಹಾಡುಗಳು ಆಕಾಶವಾಣಿಯಲ್ಲಿ, ರೇಡಿಯೋನಲ್ಲಿ ಬಹಳಷ್ಟು ಬಾರಿ ಪ್ರಸಾರಗೊಂಡ ಗೀತೆಗಳಾಗಿವೆ. ಇವರ ಗೀತೆಗಳಲ್ಲಿ ಬಹಳ ಜನಪ್ರಿಯವಾದವು, " ಕುಚ್ ತೋ ಲೋಗ್ ಕಹೇಂಗೆ", "ಚಿಂಗಾರಿ", "ಪಲ್ ಪಲ್ ದಿಲ್ ಕೆ ಪಾಸ್","ಹಮೆ ತುಮ್ಸೆ ಪ್ಯಾರ್"
"ಮೇರಿ ಭೀಗಿ ಭೀಗಿ ಸಿ","ಸಪನೋ ಕಿ ರಾಣಿ", "ಚಲ್ತೆ ಚಲ್ತೆ" ಹೀಗೆ ಅಸಂಖ್ಯ ಹಾಡುಗಳು.
  ೧೯೬೦ರಲ್ಲಿ ಮಧುಬಾಲ ರನ್ನು ಮದುವೆಯಾದ ಇವರು ಇಸ್ಲಾಂ ಧರ್ಮಕ್ಕೆ ಪರಿವರ್ತನೆ ಹೊಂದಿ, ಅಬ್ದುಲ್ ಕರೀಂ ಎಂಬ ಹೆಸರು ಪಡೆದರು. ಹೃಷಿಕೇಶ್ ಮುಖರ್ಜಿಯವರ "ಆನಂದ್" ಚಿತ್ರಕ್ಕಾಗಿ ಇವರು ಮತ್ತು ಮಹಮೂದ್ ರನ್ನು ಗುರುತಿಸಲಾಗಿತ್ತು ಆದರೆ ಸಣ್ಣದೊಂದು ತಪ್ಪಿನಿಂದಾಗಿ ಈ ಚಿತ್ರ ಅವರ ಕೈಬಿಟ್ಟು ಹೋಯಿತು. ನಂತರ ಬಂದ ಅಮಿತಾಭ್ ಮತ್ತು ರಾಜೇಶ್ ಖನ್ನ ಬಹಳಷ್ಟು ಯಶಸ್ಸು, ಹಣ ಗಳಿಸಿದರು. ಇಷ್ಟೆಲ್ಲಾ ಖ್ಯಾತಿ ಗಳಿಸಿದ ಈ ಆಭಾಸ್ ಕುಮಾರ್ ಗಂಗೂಲಿ, ಅಬ್ದುಲ್ ಕರೀಂ ಅರ್ಥಾತ್ ನಮ್ಮೆಲ್ಲರ ಪ್ರೀತಿಯ ಹಾಡು ಹಕ್ಕಿ ಕಿಶೋರ್ದಾ, ೧೯೮೭ರಲ್ಲಿ ನಮ್ಮನ್ನೆಲ್ಲ ಬಿಟ್ಟು ಅಗಲಿತು. ಆದರೂ ಈ ಹಾಡು ಹಕ್ಕಿಯ ಹಾಡುಗಳು ಇಂದಿಗೂ ನಮ್ಮ ನಾಲಿಗೆಯ ಮೇಲೆ ನಲಿದಾಡುತ್ತಾ, ಈ ಹಕ್ಕಿಯನ್ನು ಜೀವಂತವಾಗಿಸಿದೆ. ಈ ಹಕ್ಕಿಯ ಜನ್ಮದಿನದ ನೆನಪಿಗಾಗಿ ನಮ್ಮೆಲ್ಲರ ಹೃದಯಪೂರ್ವಕ ಶ್ರದ್ಧಾಂಜಲಿ ಸಲ್ಲಿಸೋಣವೇ...