ಸಾವಿನ ಮನೆಯಲಿ ಸಾಯದವರು

 

ಸತ್ತವನ ಹೆಸರೆತ್ತಿ ಕರೆವರೆ ಜನ!!

ಇಲ್ಲ ಅದು ಶವ ಅದು ಹೆಣ

ಹೂತು ಬಿಡಬೇಕು ಸುಡಬೇಕು ಇಡಲಾದೀತೆ

ಕೊಳೆತು ನಾತ ಬಂದೀತು;

ಗಂಡನೋ ಹೆಂಡತಿಯೊ

ಸತ್ತ ಮೇಲೆ ಶವ ತಮ್ಮದಲ್ಲ

ಎಂದವರೆ ಎಲ್ಲ;

ಇದೇ ಜಾಯಮಾನ

ಇದೇ ಸತ್ಯ ಇದರಲ್ಲಿ ತಪ್ಪಿಲ್ಲ

ಸತ್ತವರೊಡನೆ ಸಾಯಲಾದೀತೆ

ಶಿವ ನಿರುವರೆಗೆ ಶರೀರ ಸವೆಯದೆ ಹೋದೀತೆ.

 

ಆದರೂ ನಾಟಕೀಯ ವಾದೀತು ಸಾವಿನ ಮನೆ;

ಸತ್ತವರ ಸುತ್ತಲು ಕುಳಿತು

ಹೊತ್ತಿಸಿ ಹಲವು ದೀಪಗಳ

ಅತ್ತವರಲ್ಲಿ ಹಲವರು ನಾಟಕೀಯವಾಗೆ ಕಂಡರು;

ಊರು ಮನೆಯ ಸಾವೆಂದು ಬರಬೇಕಾಗಿ ಬಂದವರು;

ಸೂತಕ ಪಾತಕವೆಂದು ಬಂದ ಬಂಧುಗಳು;

ಎಲ್ಲರೂ ನೋಡುವರ ಕಣ್ಣಿಗೆ

ನಡೆದಾರು ಅತ್ತಾರು

ನೆಪಕೆ ನಾಲ್ಕು ನುಡಿದಾರು

ಆದರೂ ಅಳಲಿಲ್ಲ  ಯಾರೂ ನಿಜ.

 

ಕೆಲವರ ಮೊಗದಲ್ಲಿ ಕಂಡು ಕಾಣದ ಮಂದಹಾಸ;

ಸತ್ತನೆಂಬ ಸೇಡಿನವಗೆ ಸವಿಯಾದ ಔತಣ;

ನಾಟಕೀಯವು ನಟರಾಜನ ಮುಂದೆ

ಸ್ವಲ್ಪ ದಿನ ಮುಂದೆ ತನ್ನ ಸರದಿಯೆಂದೇ ಮರೆತು.

 

ಅಗೋ ಅಲ್ಲಿ ಅಳಿಲೊಂದು ಮೌನ ತಾಳಿದೆ;

ಒಡೆಯನ ಅಗಲಿಕೆ ತಿಳಿದಂತಿದೆ;

ಸಾಕಿದವನ ಸಾವ ಸಾರಲು ಇದು ಮೂಕಪ್ರಾಣಿ;

ಮುಖ ನೋಡಲೆಂದರೆ ಒಳಗೆ ಜನ ಜಂಗುಳಿ;

ಇಷ್ಟಕ್ಕೂ ಇದರ ಕಣ್ಣಿನಿಂದ ಬಿದ್ದ ಒಂದು ಹನಿ

ಕೃತಜ್ಙತೆಯ ಕಣ್ಣೀರೆಸಾಕಾಯ್ತು

ಸತ್ತವನ ಸಾರ್ಥಕತೆಗೆ...