ಇದರ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬೇಕೆಂಬ ಆಸೆ ಬಹಳ ದಿನಗಳಿಂದ ಕಾಡುತ್ತಿತ್ತು. ಅದಕ್ಕೆ ಮನೋ ವೈದ್ಯರ ಮಿತ್ರರಿಂದ ಕೆಲವು ಕಾರಣಗಳು ಸಿಕ್ಕಿದೆಯಾದರೂ ಸಂಪದದಲ್ಲಿ ಮತ್ತಷ್ಟು ವಿಷಯಗಳು ದೊರೆಯಬಹುದೆಂಬ ಭರವಸೆ ಇದೆ. ಕೆಲವು ದೇವಸ್ಥಾನಗಳಲ್ಲಿ ದೆವ್ವಗಳನ್ನು ಬಿಡಿಸುವಂತಹ ಕಾರ್ಯ ನಡೆಯುತ್ತಲೇ ಇರುತ್ತದೆ. ದೆವ್ವ ಬಂದಿದೆ ಎಂದು ಹುಚ್ಚುಚ್ಚಾಗಿ ಆಡುವವರ ಮೇಲೆ ಬೂದಿ ಎರುಚುವುದು, ಬೇವಿನ ಸೊಪ್ಪಿನಲ್ಲಿ ಹೊಡೆಯುವುದು, ಕೊಡಗಟ್ಟಲೆ ತಣ್ಣೀರು ಹಾಕುವುದು ನಡೆಯುತ್ತಿರುತ್ತದೆ. ಆದರೆ ಅದೇ ಸಮಯದಲ್ಲಿ ದೇವಸ್ಥಾನದ ಆವರಣದಲ್ಲೇ ಇದ್ದಂತಹ ಕೆಲವರು ಕೂಡ ಈ ತರಹ ಸನ್ನಿಗೆ ತಕ್ಷಣವೇ ಒಳಗಾಗಿ ಅವರ ಹುಚ್ಚಾಟಗಳು ಆರಂಭವಾಗಿರುತ್ತದೆ. ಮತ್ತದೇ ಅದೇ ರೀತಿ ಅವರಿಗೆ ಹೊಡೆಯುವುದು, ಬಡೆಯುವುದು. ಇದು ಆ ಸಂದರ್ಭದಲ್ಲಿ ಸಂಬಂಧ ಪಟ್ಟ ವ್ಯಕ್ತಿಗೇ ಏನೂ ಗೊತ್ತಾಗದೇ ಹೋದರೂ ನಂತರ ನಡೆದ ಕ್ರಿಯೆಯಿಂದ ಮನನೊಂದಿರುವುದು ಕೇಳಿದ್ದೇನೆ. ದೆವ್ವಗಳು ಇದೆಯೆಂದಾದರೂ ಅದರ ಬಗ್ಗೆ ಪೂರಕ ಮಾಹಿತಿಯಂತೂ ನನ್ನ ಬಳಿ ಇಲ್ಲ. ಎಲ್ಲೋ ಕೆಲವೊಂದು ಕೇಸುಗಳಲ್ಲಿ. ತಮ್ಮ ಪೂರ್ವಜರ ಹೆಸರುಗಳನ್ನು ಹೇಳುವ ಮೂಲಕ, ಅವರ ಆಸೆಗಳನ್ನು ಬಹಿರಂಗ ಪಡಿಸುವ ಮೂಲಕ ಅಚ್ಚರಿ ಮೂಡಿಸಿರುವುದಂತೂ ಸತ್ಯವಾಗಿದೆ.

ದುರ್ಗಾ ಶಕ್ತಿ ಎಂಬ ಚಿತ್ರದಲ್ಲಿ ಶೃತಿ ನರ್ತಿಸಿರುವ "ಓಂ ಶಕ್ತಿ, ಶ್ರೀ ಶಕ್ತಿ" ಗೀತೆಯನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೀರಾ. ದುರ್ಗಾಮಾತೆ ಮುಂದೆ ಬೇವಿನ ಸೊಪ್ಪಿನ ಮೂಲಕ ಸಮೂಹ ನೃತ್ಯ ಮಾಡುವುದನ್ನು ಎಲ್ಲರೂ ನೋಡಿರುತ್ತೇವೆ. ಈ ಗೀತೆಯನ್ನು ಸಾಮಾನ್ಯವಾಗಿ ಕಾಲೇಜಿನಲ್ಲಿ ನೃತ್ತಿಸಲು ಆರಂಭಿಸಿದರೆ. ಕಡೇ ಘಳಿಗೆಯಲ್ಲಿ ತಲೆ ತಿರುಗಿ ಬೀಳುವುದು. ಇಲ್ಲಾ ದೇವರು ಮೈ ಮೇಲೆ ಬಂದಂತೆ ಆಡುವುದನ್ನು ಹಲವು ಬಾರಿ ನೋಡಿದ್ದೇನೆ. ಒಮ್ಮೆ ಕಾಲೇಜೊಂದರ ಎನ್.ಎಸ್.ಎಸ್ ಶಿಬಿರದಲ್ಲಿ ಹೆಣ್ಣು ಮಕ್ಕಳು ಈ ಗೀತೆಗೆ ನೃತ್ಯ ಮಾಡಿ ದೇವರು ಬಂದಂತೆ ಆಡುವುದಲ್ಲದೆ, ಅವರ ಮುಖ ಚಹರೆಯೇ ಬದಲಾಗಿತ್ತು. ಅವರೆಲ್ಲರನ್ನೂ ರಾತ್ರೋ ರಾತ್ರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಗ್ರಾಮದವರು ಇದು ಮಾರಮ್ಮ ಮೈ ಮೇಲೆ ಬಂದಿರುವುದು ಎಂದು ಮಾರನೆಯ ದಿನ ದೇವಸ್ಥಾನದ ಮುಂದೆ ಆ ಹೆಣ್ಣು ಮಕ್ಕಳಿಗೆ ಬೇವಿನ ಸೊಪ್ಪ ಹಾಕಿ, ತಲೆ ಮೇಲೆ ನೀರು ಹುಯ್ದು. ಅಂದು ಆ ಹೆಣ್ಣು ಮಕ್ಕಳನ್ನು ಅದೇ ದೇವಸ್ಥಾನದಲ್ಲೇ ಮಲಗಿಸಿದ್ದರು. ಆದರೆ ಅವರ ಜೊತೆಯೇ ನೃತ್ಯ ಮಾಡಿದ ನಂದಿನಿ ಎಂಬ ಹುಡುಗಿ ಆರಾಮಾಗಿಯೇ ಇದ್ದಳು. ಇನ್ನು ಅವಳಿಗೂ ಹಿಂಸೆ ನೀಡುತ್ತಾರೆ ಎನ್ನುವ ಕಾರಣಕ್ಕೆ ಅಲ್ಲಿಂದ ತಕ್ಷಣವೇ ಆಕೆಯನ್ನು ಖುದ್ದಾಗಿ ಮನೆಗೆ ತಲುಪಿಸಿ ಬಂದಿದ್ದೆ.

ಒಂದು ಕುರಿ ಹೋದೆಡೆ ಎಲ್ಲಾ ಕುರಿಗಳು ಹೋದಂತೆ, ದೇವರು/ ದೆವ್ವ ಎಂದು ಬಂದಾಗ ಈ ಕುರಿಗಳು ಹಿಂಡು ನೆನಪಾಗುತ್ತದೆ. ಇದು ಕೇವಲ ದೇವರರು/ದೆವ್ವಕ್ಕೆ ಮಾತ್ರ ಸೀಮಿತವಾಗದೆ. ಗಲಾಟೆ ನಡೆಯಬೇಕಾದರೂ ಪ್ರಚೋದನೆಯಾಗುವುದು ಕೂಡ ಸಮೂಹ ಸನ್ನಿಯೇ. ಮನೆಯಲ್ಲಿ ಒಬ್ಬರಿಗೆ ಜ್ವರ ಬಂದಾಗ ಎಲ್ಲರಿಗೂ ಜ್ವರ ಬಂದಂತೆ ಭಾಸವಾಗುವುದು, ಪಕ್ಕದೋನು ವಾಂತಿ ಮಾಡಿದರೆ ತಕ್ಷಣವೇ ತಮಗೂ ಬಂದಂತೆ ಆಗುವುದು, ಒಬ್ಬರ ಆಕಳಿಗೆ ಮತ್ತಿತರರಿಗೆ ವರ್ಗಾವರಣೆಯಾಗುವುದು ಇದು ಸಮೂಹ ಸನ್ನಿಯೇ. ಇದರ ಬಗ್ಗೆ ಮನೋ ವೈದ್ಯರನ್ನು ಪ್ರಶ್ನಿಸಿದಾಗ. ಚಂಚಲ ಬುದ್ದಿ ಇರುವವರಿಗೆ, ಸಾಕಷ್ಟು ಮನ ನೊಂದವರಿಗೆ ಹಾಗೇ ಮನಸ್ಸು ದುರ್ಬಲವಾಗಿದ್ದರೆ ಅಂತವರು ತಕ್ಷಣವೇ ಸಮೂಹ ಸನ್ನಿಗೆ ಒಳ ಪಡುತ್ತಾರೆ ಎನ್ನುತ್ತಾರೆ. ಆದರೆ ಇದರ ಬಗ್ಗೆ ಮತ್ತಷ್ಟು ತಿಳಿಯಬೇಕೆಂಬ ಕುತೂಹಲವಿದೆ. ನಿಮಗೇನಾದರೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ತಿಳಿಸಿ....