ಈಗ್ಗೆ ಐದು ವರ್ಷಗಳ ಹಿಂದೆ ಕಂಪ್ಯೂಟರ್ ಹೇಗಿತ್ತು?

 

Intel P4 CPU

Windows 98/XP

256 MB RAM

40 GB Hard Disk

Microsoft Office 2003

 

ಈಗಿನ ಕಂಪ್ಯೂಟರ್ ಗಳು ಹೇಗಿವೆ?

 

Intel I5 series CPU

Windows 7

4 GB RAM

500 GB Hard Disk

Microsoft Office 2010

 

ಈಗ ಐದು ವರ್ಷಗಳ ಹಿಂದೆ ಆ ಕಂಪ್ಯೂಟರ್ ಗಳನ್ನು ಉಪಯೋಗಿಸಿ ಏನು ಮಾಡುತ್ತಿದ್ದೆವು ನೋಡೋಣ :

೧. ಹಾಡು ಕೇಳುವುದು, ಸಿನಿಮಾ ನೋಡುವುದು

೨. ಇಂಟರ್ನೆಟ್ ಬ್ರೌಸಿಂಗ್

೩. ವರ್ಡ್ ಡಾಕುಮೆಂಟ್ ಓದುವುದು/ಬರೆಯುವುದು

೪. ಪಿಡಿಎಫ್ ಡಾಕುಮೆಂಟ್ ಗಳನ್ನು ಓದುವುದು

 

ಇನ್ನು ಈಗಿನ ಕಂಪ್ಯೂಟರ್ ಗಳಲ್ಲಿ ಏನು ಮಾಡುತ್ತೇವೆ? :

೧. ಹಾಡು ಕೇಳುವುದು, ಸಿನಿಮಾ ನೋಡುವುದು

೨. ಇಂಟರ್ನೆಟ್ ಬ್ರೌಸಿಂಗ್

೩. ವರ್ಡ್ ಡಾಕುಮೆಂಟ್ ಓದುವುದು/ಬರೆಯುವುದು

೪. ಪಿಡಿಎಫ್ ಡಾಕುಮೆಂಟ್ ಗಳನ್ನು ಓದುವುದು

 

ಆಗಿನ ಕಂಪ್ಯೂಟರಿನ ಉಪಯೋಗಕ್ಕೂ ಈಗಿನವಕ್ಕೂ ಏನಾದರೂ ವ್ಯತ್ಯಾಸ ಇದೆಯೇ? ಇಲ್ಲ. ಬಹುತೇಕ ಅದೇ ಕೆಲಸ ಈಗಲೂ ಮಾಡುತ್ತಿದ್ದೇವೆ. ಆದರೆ ಹಾರ್ಡ್ ವೇರ್ ಎಷ್ಟೊಂದು ಬದಲಾಗಿದೆ! ಈಗಿನ Intel i5 ಅಂದಿನ Pentium P4 ಗೆ ಹೋಲಿಸಿದರೆ i5 ನ ವೇಗ ಹಲವು ಪಟ್ಟು ಹೆಚ್ಚು. ಇದೇ ಮಾತು RAM ಗೂ ಅನ್ವಯಿಸುತ್ತದೆ. ಹಾಗಿದ್ದಲ್ಲಿ ನಾವು ಕಂಪ್ಯೂಟರನ್ನು ಬಳಸುವುದರಲ್ಲಿ ಯಾವುದೇ ವ್ಯತ್ಯಾಸ ಇಲ್ಲದಿದ್ದರೂ ಈಗಿನ ಅಗಾಧ ಶಕ್ತಿಯ ಹಾರ್ಡ್ ವೇರ್ ಗಳನ್ನು ಯಾಕೆ ಉಪಯೋಗಿಸುತ್ತಿದ್ದೇವೆ?

 

ಯಾಕೆಂದರೆ :

 

೧. ಹಾರ್ಡ್ ವೇರ್ ಕಂಪೆನಿಗಳ ತಿಜೋರಿ ಭರ್ತಿ ಮಾಡಲು

೨. ಮೈಕ್ರೋಸಾಫ್ಟ್ ನಂತಹ ದೈತ್ಯರನ್ನು ಸಾಕಲು

೩. ಕಂಪ್ಯೂಟರ್ ವೈರಸ್ ಗಳನ್ನು ಬಿಟ್ಟು, ಅದರ ನಿವಾರಣೆಗೆ ಸಾಫ್ಟ್ ವೇರ್ ಮಾರುವ ಕಂಪೆನಿಗಳ ತಿಜೋರಿ ತುಂಬಿಸಲು

೪. ಅತಿ ಕಡಿಮೆ ಬೆಲೆಯಲ್ಲಿ ಈಗಿನ ಎಲ್ಲಾ ಕೆಲಸಗಳನ್ನೂ ಮಾಡಬಲ್ಲ ಕಂಪ್ಯೂಟರ್ ಗಳನ್ನು ತಯಾರಿಸಬಹುದು ಎಂದು ಗೊತ್ತಿಲ್ಲದಿರುವುದರಿಂದ

 

ಈಗ ಪ್ರತಿಯೊಂದನ್ನೂ ವಿವರವಾಗಿ ನೋಡೋಣ.

 

೧. ಹಾರ್ಡ್ ವೇರ್ ಕಂಪೆನಿಗಳ ತಿಜೋರಿ ಭರ್ತಿ ಮಾಡಲು :

ಐದು ವರ್ಷ ಹಿಂದೆ ಇದ್ದ ಪರಿಸ್ಥಿತಿ ಈಗ ಇಲ್ಲ. Pentium 4 ಗುಣಮಟ್ಟದ ಚಿಪ್ಪುಗಳನ್ನು ಈಗ ಅತಿ ಕಡಿಮೆ ಬೆಲೆಗೆ, ಅತಿ ಕಡಿಮೆ ವಿದ್ಯುತ್ ಬಳಸುವಂತೆ ತಯಾರಿಸಬಹುದು. ಆದರೆ ಕಂಪೆನಿಗಳು ಇದನ್ನು ಮಾಡಲು ತಯಾರಿಲ್ಲ. ಅವುಗಳ ಉದ್ದೇಶವೇನಿದ್ದರೂ ಹೆಚ್ಚು ಹೆಚ್ಚು ಮಾರಾಟ, ದುಡ್ಡು ಮಾಡುವುದು. ಅದಕ್ಕೇ ಅತಿ ಹೆಚ್ಚು ಸಾಮರ್ಥ್ಯವಿರುವ ಚಿಪ್ಪುಗಳನ್ನು ತಯಾರು ಮಾಡಿ ಅದರ ಬೆಲೆ ಮೊದಲಿನದಕ್ಕಿಂತ ತುಸು ಹೆಚ್ಚೇ ಇರುವಂತೆ ನೋಡಿಕೊಳ್ಳುತ್ತವೆ. ಆದರೆ ಅದಕ್ಕೆ ಗ್ರಾಹಕರನ್ನು ಮರುಳುಗೊಳಿಸಬೇಕಲ್ಲ? ಆಗ ಸಹಾಯಕ್ಕೆ ಬರುವುದು ಸಾಫ್ಟ್ ವೇರ್ ಕಂಪೆನಿಗಳು.

 

೨. ಮೈಕ್ರೋಸಾಫ್ಟ್ ನಂತಹ ದೈತ್ಯರನ್ನು ಸಾಕಲು :

ಐದು ವರ್ಷದ ಹಿಂದಿನ ಮೈಕ್ರೋಸೋಫ್ಟ್ ವಿಂಡೋಸ್ ಗೂ ಈಗಿನ ವಿಂಡೋಸ್ ಗೂ ಏನು ವ್ಯತ್ಯಾಸ? ಕೇವಲ ಸಣ್ಣ ಪುಟ್ಟ Features ಗಳು, ಹಾಗೂ ನೋಟ. ಅದು ಬಿಟ್ಟು ಬೇರೇನಾದರೂ ಉಪಯೋಗಗಳಿವೆಯೇ? ಕಂಪ್ಯೂಟರ್ ತ್ವರಿತವಾಗಿದೆಯೇ? ಖಂಡಿತಾ ಇಲ್ಲ. ವಿಸ್ತಾ ಅಂತೂ ಹಳೇ ಕಾಲದ ಕಂಪ್ಯೂಟರ್ ಗಿಂತ ಕೆಟ್ಟದಾಗಿತ್ತು. ಇರಲಿ, ವಿಂಡೋಸ್ ಜೊತೆ ಬೇರೆ ಯಾವುದಾದರೂ ಸಾಫ್ಟ್ ವೇರ್ ಹೊಸತಾಗಿ ಬಂದಿದೆಯೇ? ಇಲ್ಲ. ಅದೇ ಯಾತಕ್ಕೂ ಬಾರದ ಪೆಯಿಂಟ್, ಉಪ್ಯೋಗವಿಲ್ಲದ ನೋಟ್ ಪಾಡ್ ಅಷ್ಟೆ. ಜಿಪ್ ಮಾಡಲು, ಪಿಡಿಎಫ್ ಓದಲು, ಕಡತಗಲನ್ನು ಓದಲು, ಎಲ್ಲವಕ್ಕೂ ಹೊಸದಾಗಿ ಹಾಕಬೇಕು. ಸುಲಭದಲ್ಲಿ ಹೇಳುವುದಿದ್ದರೆ ಹೊಸ ಬಾಟಲಿಯಲ್ಲಿ ಹಳೇ ವೈನು. ಇದಕ್ಕಾಗೆ ಅಲ್ಲವೇ ಅವರು ಪ್ರತಿ ವರ್ಷ ಹೊಸ ಲೈಸೆನ್ಸು ಕೊಟ್ಟು ದುಡ್ಡು ಕಿಸಿದುಕೊಳ್ಳುವುದು?

 

ಈ ಜಡಭರಿತ ವಿಂಡೋಸ್ ನ ಬೆಲೆ ಗೊತ್ತಾಗುವುದು ಅದು ಬೇಡುವ ಹಾರ್ಡ್ ವೇರ್ ಅನ್ನು ನೋಡಿದಾಗ. ವಿಂಡೋಸ್ ವಿಸ್ತಾ ಚಾಲನೆ ಆಗಬೇಕಿದ್ದರೆ 2 GB RAM ಬೇಕೇ ಬೇಕು. ಅದೇ Win 98 ಗೆ 128 MB RAM ಸಾಕಿತ್ತು. ಇನ್ನು ಪ್ರಾಸೆಸರ್. Pentium 4 ಮೇಲೆ ವಿಸ್ತಾ ಹಾಕಿದರೆ ಅಷ್ಟೇ. ನಿದ್ದೆಯಿಂದ ಎದ್ದಂತೆ ವರ್ತಿಸಬಹುದು ಕಂಪ್ಯೂಟರ್. ಇನ್ನು ಎರಡು ಕೋರ್ ಗಳಿರುವ ಪ್ರಾಸೆಸರ್ ಇದ್ದರೆ ಮಾತ್ರ ವಿಸ್ತಾ ವನ್ನು ಉಪಯೋಗಿಸುವ ಮಟ್ಟಕ್ಕೆ ತರಬಹುದು. ಈ ಹಾರ್ಡ್ ವೇರ್ ಗಳಿಗೆ ಬೆಲೆ ತೆರುವವನು ಯಾರು? ಗ್ರಾಹಕನೇ ಅಲ್ಲವೇ? ಯಾವ ಉಪಯೋಗಕ್ಕೆ ಈ ಬೆಲೆ ತೆರಬೇಕು ಆತ?

 

 

೩. ಕಂಪ್ಯೂಟರ್ ವೈರಸ್ ಗಳನ್ನು ಬಿಟ್ಟು, ಅದರ ನಿವಾರಣೆಗೆ ಸಾಫ್ಟ್ ವೇರ್ ಮಾರುವ ಕಂಪೆನಿಗಳ ತಿಜೋರಿ ತುಂಬಿಸಲು :

ಲಿನಕ್ಸ್ ಗೆ ವೈರಸ್ ಬರುವುದಿಲ್ಲ. ಅಥವಾ ಕಡಿಮೆ. ಯಾಕೆಂದು ಯೋಚಿಸಿದ್ದೀರಾ? ಲಿನಕ್ಸ್ secure ಅನ್ನುವುದು ಒಂದು ಕಾರಣ. ಆದರೆ ಅದೊಂದೇ ಕಾರಣವಲ್ಲ. ಮನುಷ್ಯರೇ ಬರೆದ ಲಿನಕ್ಸ್ ಗೆ ವೈರಸ್ ಬರೆಯುವುದು ಮನುಷ್ಯರಿಗೆ ಅಸಾಧ್ಯವೇ? ಅಲ್ಲ. ಅದಕ್ಕೆ ಕಾರಣ ಬೇರೆ ಇದೆ. ಲಿನಕ್ಸ್ ಗೆ ಸಾಫ್ಟ್ ವೇರ್ ಬರೆದರೆ ದುಡ್ಡು ಸಿಗುವುದಿಲ್ಲ. ಅದನ್ನು ಮುಕ್ತ ತಂತ್ರಾಂಶ ಅನ್ನುತ್ತಾರೆ. ಹಾಗಾಗಿ ಅಲ್ಲಿ ವೈರಸ್ ನಿರೋಧಕ ತಂತ್ರಾಂಶ ಬರೆದರೆ ಯಾವ ಕಂಪೆನಿಗೂ ದುಡ್ಡು ಸಿಗದು. ಅದಕ್ಕೇ ಆ ಕಂಪೆನಿಗಳು ವೈರಸ್ ಬರೆಯುವ ಕೆಲಸಕ್ಕೂ ಕೈ ಹಾಕಿಲ್ಲ! ಇಂತಹ ಲೂಟಿಕೋರ ಕಂಪೆನಿಗಳಿಗೂ ನಾವು ದುಡ್ಡು ಕೊಡುತ್ತೇವೆ.  

 

೪. ಅತಿ ಕಡಿಮೆ ಬೆಲೆಯಲ್ಲಿ ಈಗಿನ ಎಲ್ಲಾ ಕೆಲಸಗಳನ್ನೂ ಮಾಡಬಲ್ಲ ಕಂಪ್ಯೂಟರ್ ಗಳನ್ನು ತಯಾರಿಸಬಹುದು ಎಂದು ಗೊತ್ತಿಲ್ಲದಿರುವುದರಿಂದ :

ಕೆಳಗಿನ ಸವಲತ್ತುಗಳಿರುವ ಕಂಪ್ಯೂಟರ್ ನಿಂದ ಈಗ ನಾವು ಮಾಡುವ ಎಲ್ಲಾ ಕೆಲಸಗಳನ್ನೂ ಮಾಡಬಹುದು :

1 GHz dual core cheap processor 

512 MB RAM

Linux Operating System (Ex: Ubuntu)

40 GB Hard Disk (Separate disk for data)

 

ಆದರೆ ವಿಶೇಷವೆಂದರೆ ಈ ಥರದ ಕಂಪ್ಯೂಟರ್ ಗಳು ಮಾರ್ಕೆಟ್ ನಲ್ಲಿ ಸುಲಭವಾಗಿ ದೊರಕದು. ಹಾಗೂ ಇವುಗಳ ಬಗ್ಗೆ ಸಾಮಾನ್ಯರಿಗೆ ಗೊತ್ತೇ ಇಲ್ಲ. ಅಷ್ಟು ಮೋಡಿ ಮಾಡಿವೆ ಟಿವಿ ಜಾಹೀರಾತುಗಳು!

 

ಇನ್ನು ಕಂಪ್ಯೂಟರ್ ಗೇಮ್ ಗಳ ಬಗ್ಗೆ ನೀವು ಕೇಳಬಹುದು. ಇದೊಂದು ವಿಷಯದಲ್ಲಿ ಅಗಾಧ ಬೆಳವಣಿಗೆಗಳಾಗಿವೆ ಹಾಗೂ ಈ ಹೊಸ ಮಾಡೆಲ್ಲುಗಳು ಹವ್ಯಾಸಿ ಗೇಮರ್ ಗಳಿಗೆ ಹೆಚ್ಚು ಉಪಯೋಗಕ್ಕೆ ಬರುತ್ತವೆ. ಆದರೆ ಇದಕ್ಕೆ ಪ್ರಾಸೆಸರ್ ವೇಗ ಮುಖ್ಯವಲ್ಲ. ವೇಗದ ಗ್ರಾಫಿಕ್ಸ್ ಪ್ರಾಸೆಸರ್ ಇದ್ದರೆ ಸಾಮಾನ್ಯ ಕಂಪ್ಯೂಟರ್ ನಲ್ಲೂ ಅವುಗಳನ್ನು ಚಾಲೂ ಮಾಡಬಹುದು. ಅದೂ ಅಲ್ಲದೆ ಜನಸಾಮಾನ್ಯರು, ಮಕ್ಕಳು ಆಡುವ ಸಣ್ಣ ಪುಟ್ಟ ಆಟಗಳಿಗೆ ದುಬಾರಿ ವೆಚ್ಚದ ಗ್ರಾಫಿಕ್ಸ್ ಬೇಕಿಲ್ಲ. ಮದರ್ ಬೋರ್ಡ್ ನಲ್ಲಿ ಬರುವ Integrated Graphics ಗಳೇ ಸಾಕು.

 

ಹೀಗೆ ಯಾವುದೇ ಕೋನದಿಂದ ನೋಡಿದರೂ ಜನಸಾಮಾನ್ಯರಿಗೆ ಉಪಯೋಗಕ್ಕೆ ಬರುವ ಕಂಪ್ಯೂಟರ್ ಗಳನ್ನು ನನ್ನ ಅಂದಾಜಿನಲ್ಲಿ ಹೆಚ್ಚು ಕಮ್ಮಿ ರೂಪಾಯಿ ೧೫,೦೦೦ ಕ್ಕೆ ತಯಾರಿಸಬಹುದು. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಂಪ್ಯೂಟರ್ ಗಳ ಬೆಲೆ ಇದರ ದುಪ್ಪಟ್ಟಾಗುತ್ತದೆ. 

 

ವಿದೇಶಗಳಲ್ಲಿ ಈ ನಿಟ್ಟಿನಲ್ಲಿ ಕೆಲವೊಂದು ಕಂಪೆನಿಗಳು ಕೆಲಸ ಮಾಡಿವೆ. ಅವುಗಳಲ್ಲಿ One Laptop Per Child ಎನ್ನುವ ಪ್ರಾಜೆಕ್ಟ್ ಕೂಡ ಒಂದು. ಹಾಗೆಯೇ Fit PC, Linutop, eMachines ಮುಂತಾದ ಕಂಪೆನಿಗಳು ಕೆಲವೊಂದು ಕಂಪ್ಯೂಟರ್ ಗಳನ್ನು ಮಾರುಕಟ್ಟೆಗೆ ತಂದಿವೆ. ಆದರೆ ಇಂತಹ ಕಂಪ್ಯೂಟರ್ ಗಳ ತಯಾರಿಕೆಗೆ ಇರುವ ಅಡ್ಡಿ ಎಂದರೆ ಜನರ ಅಜ್ನಾನ, ದುಂದು ವೆಚ್ಚ ಮಾಡುವ ಹವ್ಯಾಸ, ಸೂಕ್ತ ಹಾರ್ಡ್ ವೇರ್ ಗಳ ಅಲಭ್ಯತೆ ಹಾಗೂ ಕಂಪೆನಿಗಳ ಜಾಹೀರಾತುಗಳು. ಅಂದ ಹಾಗೆ ನಮ್ಮ ಸರಕಾರದ ಶಿಕ್ಷಣ ಮಂತ್ರಿ ಕಪಿಲ್ ಸಿಬಲ್ ಕನಸಿನ ಕೂಸಾದ "$35 Tablet" (1500 ರೂಪಾಯಿಯ ಸಣ್ಣ ಕಲಿಕಾ ಕಂಪ್ಯುಟರ್ ಸ್ಲೇಟು) ಕೂಡ ಭರವಸೆ ಮೂಡಿಸುವಂತಿದೆ. ಇದು ಈಗಾಗಲೇ ಪ್ರಪಂಚದಾದ್ಯಂತ ಸುದ್ದಿ ಮಾಡಿದೆ. ಎಷ್ಟೋ ಜನ ಇದು ಸಾಧ್ಯವೇ ಅಂತ ಮೂಗಿನ ಮೇಲೆ ಬೆರಳಿಟ್ಟು ನೋಡುತ್ತಿದ್ದಾರೆ! ನಮ್ಮ ವಿಜ್ನಾನಿಗಳೇನೂ ಕಡಿಮೆ ಇಲ್ಲ ಅಲ್ಲವೇ??