ಆಸ್ತಿಕರ ದಿನಗಳು ವಿಭೂತಿಯಿಂದ ಆರಂಭಗೊಳ್ಳುತ್ತದೆ. ಮುಂಜಾನೆಯೆದ್ದು ಮುಖಮಾರ್ಜನದ ನಂತರದ ಕ್ರಿಯೆಯೇ ಭಸ್ಮ ಧಾರಣೆ, ಆನಂತರ ಮಿಕ್ಕ ಕೆಲಸಗಳು. ನಿತ್ಯ ಹಣೆಗೆ ಬಳಿದುಕೊಳ್ಳಲು ಪಟ್ಟಣದ ಮಂದಿ ಅಂಗಡಿಯಲ್ಲಿ ದೊರಕುವ ಬಿಳಿಯ ಬಣ್ಣದ ವಿಭೂತಿಯುಂಡೆಗೆ ಮೊರೆ ಹೋಗುತ್ತಾರೆ. ಆದರೆ ಹಳ್ಳಿಯಲ್ಲಿನ ಮಂದಿ ಶಾಸ್ತ್ರೀಯ ರೀತಿಯಲ್ಲಿ ಭಸ್ಮ ತಯಾರಿಸುತ್ತಾರೆ. ಮನೆಬಳಕೆಗೆ ಸಾಕಾಗುವ ವಿಭೂತಿಯನ್ನು ಅವರೇ ಸ್ವಂತ ತಯಾರಿಸಿಕೊಳ್ಳುತ್ತಾರೆ.
 ವಿಭೂತಿ ತಯಾರಿಕೆಯು ಸ್ವಲ್ಪ ಕಠಿಣವಾಗಿರುವ ಕೆಲಸ. ಕರು ಹಾಕಿದ ದೇಶಿ ಆಕಳು ಬೆಳಗ್ಗೆ ಮೊದಲು ಹಾಕಿದ ಸಗಣಿಯನ್ನು ಸಂಗ್ರಹಿಸಬೇಕು. ಅದು ಮಕರ ತಿಂಗಳು ಆಗಿರಬೇಕು.  ಬಿಸಿಲಿನಲ್ಲಿ ಬೆರಣಿ ತಟ್ಟಿ ಒಣಗಿಸಬೇಕು. ಒಣಗಿಸುವ ಕ್ರಿಯೆಯಲ್ಲಿ ಒಂದಿನಿತು ವ್ಯತ್ಯಯವಾದರೂ ಹುಳಗಳು ಹುಟ್ಟಿಬಿಡುತ್ತವೆ ಹಾಗಾಗದಂತೆ ಎಚ್ಚರವಹಿಸಬೇಕು. ಹೀಗೆ ಹತ್ತೆಂಟು
ದಿವಸಗಳ ಕಾಲ ಸಂಗ್ರಹಿಸಿ ಒಣಗಿಸಿ ನಂತರ ಭತ್ತದ ಹೊಟ್ಟಿನ ನಡುವೆ ಪುಳ್ಳೆಯನ್ನಿಟ್ಟು  ಸುಡಬೇಕು. ಆನಂತರ ಸುಟ್ಟ ಸಗಣಿ ಪುಳ್ಳೆಯನ್ನು ಭತ್ತದ ಹೊಟ್ಟಿನಿಂದ ಬೇರ್ಪಡಿಸಿ ಸಾಣಿಗೆಯಲ್ಲಿ ಸಾಣಿಸಿ ನೀರಿನಲ್ಲಿ ಕರಡಬೇಕು. ನಂತರ ಪ್ರತಿನಿತ್ಯ ಅದಕ್ಕೆ ಗೋಮೂತ್ರ ಸೇರಿಸಿ ಗುಟಾಯಿಸಿ ಬೂದಿ ಕೆಳಗೆ ಇಳಿದನಂತರ ಬಸಿಯಬೇಕು. ಹೀಗೆ ನಲವತ್ತೆಂಟು ದಿವಸಗಳ ಕೆಲಸದ ನಂತರ ಶಾಸ್ತ್ರೀಯ ರೀತಿಯ ಶುದ್ಧ ಭಸ್ಮ ತಯಾರಾಗುತ್ತದೆ. ಅದನ್ನು ಬಿಸಿಲಿಗೆ ಒಣಹಾಕಿದರೆ  ವಿಭೂತಿ ಹಣೆಗೇರಲು ಸಿದ್ಧ. ಈಗಿನ ಆಧುನಿಕ ಯುಗದಲ್ಲಿ ಇಂತಹ ಕೆಲಸಕ್ಕೆ ಕಾಳಜಿಯಿರುವ ಸಂಖ್ಯೆ ಕಡಿಮೆಯಾದ್ದರಿಂದ ಪೇಟೆಯ ವಿಭೂತಿ ಉಂಡೆಗೆ ಮೊರೆಹೋಗುವವರ ಸಂಖ್ಯೆ ಹೆಚ್ಚಿದೆ. ಇಷ್ಟು ಕಷ್ಟಪಷ್ಟು ವಿಭೂತಿ ತಯಾರಿಸುವುದಕ್ಕಿಂತ ಅಷ್ಟೇ ಗುಣಮಟ್ಟದ ಭಸ್ಮ ಸಿಗುವುದಿದ್ದರೆ ಎಂಬ ಪ್ರಶ್ನೆ ಒಮ್ಮೊಮ್ಮೆ ಕಾಡುತ್ತದೆ. ಹಾಗೆ ಕಾಡಿದಾಗ ಸಿಕ್ಕ  ಉತ್ತರವೇ ’ರಾಮನಗಿಂಡಿಯ’ ಪ್ರಾಕೃತಿಕ ವಿಭೂತಿಯೆಂಬ ಭಸ್ಮ.
 ಉತ್ತರ ಕನ್ನಡ ಜಿಲ್ಲೆಯ ಕುಮುಟಾದಿಂದ  ಹೊನ್ನಾವರಕ್ಕೆ ಸಾಗುವ ಮಾರ್ಗದಲ್ಲಿ ಕುಮುಟಾದಿಂದ ೬ ಕಿಲೋಮೀಟರ್ ದೂರದಲ್ಲಿ ಬತ್ತಗೇರಿ ಎಂಬ ಊರು ಸಿಗುತ್ತದೆ. ಅಲ್ಲಿಂದ ಒಂದು ಕಿಲೋಮೀಟರ್ ದೂರದಲ್ಲಿ ರಾಮನಗಿಂಡಿ ಎಂಬ ಶಿಲ್ಪಿಗಳ ಊರು ಇದೆ. ಸಮುದ್ರದ ತಟದಲ್ಲಿರುವ ಈ ಊರು ಶಿಲಾಮೂರ್ತಿ ತಯಾರಿಕರಿಂದಲೂ ಪ್ರಖ್ಯಾತಿ ಪಡೆದಿದೆ. ಈ  ರಾಮನಗಿಂಡಿಯತ್ತ  ಹೋಗುವ ಇಳಿಜಾರಿನ ರಸ್ತೆಯ ಪಕ್ಕದಲ್ಲಿ ನೆಲ ಅಗೆದರೆ ನಿಮಗೆ ಶುದ್ಧ ಭಸ್ಮ ಸಿಗುತ್ತದೆ. ಕಾಲದಿಂದಲೂ ದೂರದೂರಿನ ಹಲವಾರು ಜನ ಇಲ್ಲಿಗೆ ಬಂದು ನೆಲ ಅಗೆದು ಭಸ್ಮವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಹಾಗೆ ನೆಲದಡಿಯಲ್ಲಿ  ಶುಧ್ದ ಭಸ್ಮ ಸಿಗುವ ವಿಷಯಕೆ ಸ್ಥಳೀಯರು ಹೇಳುವಂತೆ, ರಾಮಾಯಣದ ಕಾಲದಲ್ಲಿ ಋಷಿಮುನಿಗಳು ನೆಲಸಿದ್ದ ಜಾಗವಂತೆ ಇದು. ಅಂದಿನ ಕಾಲದಲ್ಲಿ ಮಹಾಯಾಗಗಳು ಇಲ್ಲಿ ನಡೆದಿದ್ದವಂತೆ, ಸ್ವತಃ ರಾಮಲಕ್ಷ್ಮಣರು ಖುದ್ದು ಇಲ್ಲಿ ನಡೆಯುವ ಯಾಗಗಳಲ್ಲಿ ಪಾಲ್ಗೊಂಡಿದ್ದರಂತೆ.  ಆ ಯಾಗದ ಭಸ್ಮ ನೆಲದಡಿಯಲ್ಲಿ ಹುದುಗಿರುವುದರಿಂದ ಹಾಗೆ ಸಿಗುತ್ತಿದೆ ಎನ್ನುತ್ತಾರೆ. ಪುರಾಣ ಕತೆಗಳನ್ನು ನಂಬದ ಮಂದಿಯ ಪ್ರಕಾರ ಅದು ಒಣಗಿದ ಜೇಡಿಮಣ್ಣಿನ ತರಹದ್ದು ಹಾಗಾಗಿ  ಭಸ್ಮದ ತರಹ ಇದೆ ಎನ್ನುತ್ತಾರೆ. ಕಾರಣ ಕಾರಣೀಭೂತ ಘಟನೆ ಏನೇ ಇರಲಿ ವಿಭೂತಿಯಷ್ಟೇ ಸ್ವಚ್ಛ ಭಸ್ಮದಂತಹ ಮಣ್ಣು ಸಿಗುವುದು ನಿಜ ಮತ್ತು ದೂರದೂರಿನಿಂದ ಜನರು ಬಂದು ಅದನ್ನು ಒಯ್ಯುವುದೂ ಅಷ್ಟೇ ನಿಜ. ಆಸ್ತಿಕರ ಪಾಲಿಗೆ ಪವಿತ್ರ ಭಸ್ಮ ನೀಡುವ ಜಾಗ ’ರಾಮನಗಿಂಡಿ’ ಎಂಬುದಂತೂ ಅಪ್ಪಟ ಸತ್ಯ. ಅತಿ ಬಳಕೆ ಮಾಡದಿದ್ದರೆ ಶಾಶ್ವತ ಪ್ರಕೃತಿ ವೈಚಿತ್ರದ ಜಾಗವಾಗಿ ಉಳಿಯುತ್ತದೆ.

(ಇಂದಿನ ವಿಜಯ ಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)