ಮೂಲೆಗುಂಪಾಗುತ್ತಿರುವ ಹಳ್ಳಿ ಹಬ್ಬಗಳು:
ಪ್ರತಿ ವರ್ಷದ ಗಣೇಶ ಚತುರ್ಥಿಯ ಪೂಜೆಯ ನಂತರ ಮದ್ಯಾಹ್ನದ ಮೇಲೆ ಊರಿನ ಮಕ್ಕಳೆಲ್ಲರೂ ಗುಂಪು ಗುಂಪಾಗಿ ಗಣಪತಿ ಹಾಗೂ ಗಣಪತಿ ಮಂಟಪವನ್ನು ನೋಡಲು ಎಲ್ಲರ ಮನೆಗೂ ಹೋಗುವ ರೂಢಿ ಮಲೆನಾಡಿನ ನಮ್ಮೂರಿನಲ್ಲಿ ಹಿಂದಿನಿಂದಲೂ ಬಂದ ರೂಢಿ. ನಾವು ಚಿಕ್ಕವರಿಇಂದಿನ ಗಣೇಶ ಮಂಟಪದ್ದಾಗ ಗಣಪತಿ ನೋಡಲು ಹೋಗುವುದೇ ಒಂದು ಸಂಭ್ರಮ. ಹೆಚ್ಚು ಹೆಚ್ಚು ಗಣಪತಿ, ಪೆಂಡಾಲ್ ಗಳನ್ನು ನೋಡುವುದು, ತಲವಾಟ ಮಂಕಾಳೆಯವರ ಮನೆಯಲ್ಲಿ ತಿರುಗುವ ಮಂಟಪ, ಹಿರೇಮನೆ ಮೃತ್ಯುಂಜಯನ ಮನೆಯಲ್ಲಿ ರಾಕೆಟ್ ಮಂಟಪ ಮಾಡಿದ್ದಾರೆ. ಹಿರೇಮನೆ ಬ್ಯಾಗಡಿ ಪಾಲರ ಮನೆಯಲ್ಲಿ ಚಿಕ್ಕಮಗಳೂರಿನಿಂದ ಗಣಪತಿ ತಂದಿದ್ದಾರೆ, ಮಹಾಬಲ ಭಟ್ಟರಮನೆಯಲ್ಲಿ ಮಂಕಾಳೆ ಯಿಂದ ಗಣಪತಿ ತಂದಿದ್ದಾರೆ ಇತ್ಯಾದಿಯಾಗಿ ಯಾರ ಯಾರ ಮನೆಗಳಲ್ಲಿ ಯಾವ್ಯಾವ ರೀತಿಯ ಅಲಂಕಾರ ಮಾಡಿದ್ದಾರೆ, ಗಣಪತಿ ಎಲ್ಲಿಂದ ತಂದಿದ್ದಾರೆ ಎಲ್ಲ ವಿವರಗಳನ್ನೊಳಗೊಂಡ ವಿವರಣೆ ನೀಡುವುದೆಂದರೆ ಎಲ್ಲಿಲ್ಲದ ಹಿಗ್ಗು. ಹೀಗೆ ಚೌತಿ ಮತ್ತು ಪಂಚಮಿ ದಿನಗಳೆರಡೂ ದಿನಗಳಲ್ಲಿ ಸುತ್ತಮುತ್ತಲಿನ ಹಿರೇಮನೆ, ತಲವಾಟ, ಬಚ್ಚಗಾರು ಕೊರಲಗುಂಡಿ ಮುಂತಾದ ಎಲ್ಲಾ ಊರುಗಳನ್ನು ಸುತ್ತಿದ್ದೂ ಇದೆ.

 ಆ ಕಾಲದಲ್ಲಿ ಸಾಗರದ ಶ್ರೀ ಟ್ರೇಡರ್ಸ್ ನವರ ಮನೆಯಲ್ಲಿ ಬೆಳಗಾಂ ನಿಂದ ಗಣಪತಿ ತರುತ್ತಿದ್ದುದು ಬಹಳ ವಿಶೇಷ.  ಅದನ್ನು ನೋಡಬೇಕೆಂಬ ತವಕ ನೋಡಿದವರಿಗೆ ಗಣಪತಿ ನೋಡಿದ ಪುಳಕ ಇರುತ್ತಿತ್ತು.

ಆ ಗಣೇಶನ ವಿಗ್ರಹ ಜಲವರ್ಣದ ವಿಗ್ರಹವಾಗಿದ್ದಲ್ಲದೇ (ಆಗ ನಮ್ಮೂರುಗಳಲ್ಲಿ ತೈಲವರ್ಣವನ್ನು ಮಾತ್ರಾ  ವಿಗ್ರಹಗಳಿಗೆ ಬಳಿಯುತ್ತಿದ್ದರು) ನಾವು ಹೇಳಿದ ಭಂಗಿ ಅಥವಾ ತೋರಿಸಿದ ಚಿತ್ರದ ಭಂಗಿಯಲ್ಲಿಯೇ ಮೂರ್ತಿಗಳನ್ನು ನಿರ್ಮಿಸಿ ಕೊಡುತ್ತಿದ್ದರು. ಅಬ್ರಕದ ಲೇಪದಿಂದ ವಿಗ್ರಹಕ್ಕೆ ಮುತ್ತಿನ ಮಣಿಗಳಂತೆ  ಹೊಳಪು ನೀಡುತ್ತಿದ್ದರು. ಕೆಲವು ಪೌರಾಣಿಕ ಹಿನ್ನೆಲೆಯ ಸನ್ನಿವೇಶ ಸೃಷ್ಟಿಸುವ ಬೊಂಬೆಗಳನ್ನೂ ಗಣೇಶ ವಿಗ್ರಹದೊಡನೆ ಕೊಡುತ್ತಿದ್ದರು. ನಾನಂತೂ ಈ ವಿಗ್ರಹ ನೋಡಿದ್ದು ನನ್ನ ಕಾಲೇಜು ದಿನಗಳಲ್ಲಿಯೇ ಸರಿ.
ಇತ್ತೀಚಿನ ದಿನಗಳಲ್ಲಿ ಎಲ್ಲಡೆಯೂ ಸಾರ್ವಜನಿಕ ಗಣೇಶೋತ್ಸವಗಳಲ್ಲಿ  ಸನ್ನಿವೇಶ ಸೃಷ್ಟಿಯ ಗಣಪತಿ ಪೆಂಡಾಲ್ ಗಳು ಸಾಮಾನ್ಯ ವಾಗಿದೆ. ಹಾಗೇ ಜಲವರ್ಣ, ಪರ್ಲಕಲರ್ ಎಲ್ಲವುಗಳನ್ನೂ ಸ್ಥಳೀಯವಾಗಿ ಅನೇಕರು ಮಾಡುತ್ತಿದ್ದಾರೆ. ಹಾಗಾಗಿ ಬೆಳಗಾಂ ಗಣಪತಿ ಇತ್ಯಾದಿ ಹೆಗ್ಗಳಿಕೆ ಇಲ್ಲವಾಗಿದೆ.

ಇಂದಿನ ಬಹು ವೆಚ್ಚದ ವಿಜೃಂಭಣೆಯ ಸಾರ್ವಜನಿಕ ಗಣೇಶೋತ್ಸವಗಳಿಂದಾಗಿ ಹಳ್ಳಿ ಹಳ್ಳಿಗಳಲ್ಲಿನ ಮನೆಗಳ ಗಣೇಶೋತ್ಸವ ಸಹ ತನ್ನ ಮೆರಗನ್ನು ಕಳೆದುಕೊಳ್ಳುತ್ತಿದೆ. ಹಳ್ಳಿಗಳಲ್ಲಿನ ಅವಿಭಕ್ತ ಕುಟುಂಬಗಳ ಕೊರತೆ, ಚಿಕ್ಕ ಸಂಸಾರ ಸುಖ ಸಂಸಾರ, ರೈತಾಪಿ ಬದುಕಿನಿಂದ ಬೇಸತ್ತ ಹಳ್ಳಿಗಳಲ್ಲಿನ ಯುವ ಪೀಳಿಗೆಗಳ ಪಟ್ಟಣದ ಕಡೆಗಿನ ವಲಸೆ ಯಿಂದಾಗಿ ಮನೆ ಮನೆಗಳಲ್ಲಿಯ ಹಬ್ಬದ ವೈಭವ ಕಣ್ಮರೆಯಾಗುತ್ತಿದೆ. ವೃದ್ಧಾಶ್ರಮಗಳಂತಾಗಿರುವ  ಹಳ್ಳಿಗಳಲ್ಲಿ ಹಬ್ಬ ಕೇವಲ ಆಚರಣೆಗೆ ಮಾತ್ರಾ ಉಳಿದುಕೊಂಡಿದೆ. ಮೊದಲಿನ ಶೃಂಗಾರ ಇಲ್ಲ, ವೈಭವ ಉಹುಂ, ಶ್ರದ್ಧೆ ಯಾವುದನ್ನೂ ಕೇಳಬೇಡಿ. ಎಲ್ಲವೂ ನೀರಸ ನೀರಸ ವಾಗಿ ಬಂದಷ್ಟೆ ತಣ್ಣಗೆ ಮುಗಿದಿರುತ್ತದೆ.

ಹಳ್ಳಿಗಳಲ್ಲಿನ ಮಧ್ಯಮ ವರ್ಗದವರ ಮನೆಗಳಲ್ಲಿ ಇಂದಿನ ಹಬ್ಬ ಹಿಂದಿನ ಹಬ್ಬದ ಪಳಯುಳಿಕೆಗಳಂತೆ ಕಂಡುಬರುತ್ತಿರುವುದು ಸಾಮಾನ್ಯವಾಗಿದೆ. ಇದು ಹಳ್ಳಿ ಬದುಕಿನ ಒಂದು ಪುಟ್ಟ ನೋಟ ಅಷ್ಟೆ.