ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ -- ಭಾಗ ೩೭

(೧೧೧)

     "ಬೇಸಿಗೆಯಲ್ಲವೆ ಈಗ. ಇನ್ನೊಂದು ಗಂಟೆಗೆ ಬೆಳಕು ಹರಡತೊಡಗುತ್ತದೆ" ಎಂದ ಪ್ರಕ್ಷು, ಏನನ್ನೂ ಉದ್ದೇಶಿಸದವನಂತೆ.

"ಮಾತು ಮುಗಿಸಲು ಇದು ಪೀಠಿಕೆಯೆ?" ಎಂದು ಕೇಳಬೇಕೆಂದುಕೊಳ್ಳುವಷ್ಟರಲ್ಲಿ, ಆತನಿಗೆ ಅದು ತಿಳಿದಂತೆ ಹಸನ್ಮುಖಿಯಾದ.

"ಎಲ್ಲದಕ್ಕೂ ಒಂದು ಕೊನೆ ಇರುತ್ತದೆ ಅನ್ನುವುದು ನಮ್ಮ ನಂಬಿಕೆ. ಸುಸ್ತಿನಿಂದಾಗುವ ತೀರ್ಮಾನವಿದು. ಅಥವ ಎಲ್ಲ ತೀರ್ಮಾನಗಳೂ ಸಹ ಸುಸ್ತಾದುದರ ಪರಿಣಾಮವೇ, ಗೊತ್ತೆ? ಒಲಂಪಿಕ್ಸ್ ಗೆಲುವಿನ ಗಡಿ ತಲುಪಿದಾಗ ಗೆದ್ದೆನೆಂಬ ಖುಷಿ ತಾತ್ಕಾಲಿಕವಾದರೆ ಸುಸ್ತು ನಿರಂತರ. ನೀನು ಏನನ್ನೂ ಕೇಳುವ ಸಾಧ್ಯತೆ ಕಾಣುತ್ತಿಲ್ಲ. ಇನ್ನೊಬ್ಬರಿಗೆ ನಿನ್ನ ಬಗ್ಗೆ ಎಲ್ಲವೂ ತಿಳಿದಿದೆ ಎಂದುಕೊಳ್ಳಬೇಡ. ನೀನು ಅನುಮತಿ ನೀಡಿದಷ್ಟೇ ಇತರರು ನಿನ್ನ ಬಗ್ಗೆ ತಿಳಿದುಕೊಳ್ಳುವುದು. ಬರೆಯುವುದು, ಕಲೆಯನ್ನು ಸೃಷ್ಟಿಸುವುದು--ಇವೆಲ್ಲವೂ ಇನ್ನೊಬ್ಬರಿಗೆ ನಿನ್ನ ಬಗ್ಗೆಯೇ ತಿಳುವಳಿಕೆ ನೀಡುವ ಕ್ರಿಯೆ. ಆಶ್ಚರ್ಯವೆಂದರೆ ಬಹುಪಾಲು ಕಲಾವಿದರು ಇನ್ನೊಬ್ಬರಿಂದ ಏನನ್ನೋ ಮುಚ್ಚಿಡುವ ಸಲುವಾಗಿ ಮತ್ತೇನನ್ನೋ ಸೃಷ್ಟಿಸಿ ವೀಕ್ಷಕರನ್ನು ದಾರಿತಪ್ಪಿಸುತ್ತಾರೆ" ಎಂದು ಆತ ಮಾತನಾಡಿದಷ್ಟೂ ನಿಗೂಢವಾಗತೊಡಗಿದ.

     ಪ್ರಕ್ಷು ಮಾತನಾಡುವಾಗ ಮೌನವೇ ಆತನ ಮಾತಿಗೆ ಅತ್ಯುತ್ತಮ ಪ್ರತಿಕ್ರಿಯೆ ಎಂದು ಸುಮ್ಮನಿದ್ದೆ. ಕತ್ತಲು ಮಾಯವಾಗುವ ಮೊದಲ ಸೂಚನೆ ಇನ್ನೂ ದೂರವಿತ್ತು.

     "ಜಸ್ಟ್ ಫಾರ್ ಎ ಚೇಂಜ್. ಏನಾದರೂ ಸಹಜವಾದ ಪ್ರಶ್ನೆಯನ್ನಾದರೂ ಕೇಳು ಅನಿಲ್" ಎಂದನಾತ.

     "ಅಂತಹವು ಸಾವಿರವಿದ್ದಾವೆ. ಕೆ.ಜಿ.ಸುಬ್ರಹ್ಮಣ್ಯನ್ ಅಲ್ಲಿ ಕಾಣುವ ಕಪ್ಪು-ಬಿಳುಪಿನ ಭಿತ್ತಿಚಿತ್ರವನ್ನು ಪುನರ್ ರಚನೆ ಮಾಡಿದ್ದು ಏಕಿರಬಹುದು ಹೇಳು ನೋಡುವ?" ಎಂದೆ. (೧೯೮೯ರ ಸುಮಾರಿಗೆ ಅದು ಡಿಸೈನ್ ಡಿಪಾರ್ಟ್‍-ಮೆಂಟಿನ ಮೇಲೆ ಸೃಷ್ಟಿಸಲಾಗಿತ್ತು. ಆಗ ಕೆ.ಜಿ.ಎಸ್‍ರಿಗೆ ಸುಮಾರು ೬೫ ವರ್ಷ. ಈಗ ಅದನ್ನು ಪುನರ್-ಚಿತ್ರಿಸುವಾಗ ಅವರಿಗೆ ೮೬. ಕಪ್ಪುಬಿಳುಪಿನಲ್ಲಿ ಚಿತ್ರಿಸುವವರು ಕಡಿಮೆ. ಪ್ಯಾಬ್ಲೋ ಪಿಕಾಸೋನ "ಗಾರ್ನಿಕ" ಅಂತಹದ್ದು. ತಾನು ಬಾಲ್ಯವನ್ನು ಕಳೆದ ಸ್ಪೇನಿನ ಅದೇ ಹೆಸರಿನ ಊರು ಬಾಂಬ್ ಸಿಡಿತದಿಂದ ನಾಶವಾದಾಗ, ಅದನ್ನು ಕೇಳಿ, ಫ್ರಾನ್ಸಿನಲ್ಲಿದ್ದ ಪಿಕಾಸೊ ಸೃಷ್ಟಿಸಿದ ಬೃಹತ್ ಕೃತಿ ’ಗಾರ್ನಿಕ’.)

     "ಇಂಟರೆಸ್ಟಿಂಗ್. ಮೊದಲಿದ್ದ ವರ್ಣವಿನ್ಯಾಸವನ್ನೇ ಅನುಸರಿಸಿದರೂ ಈ ಭಿತ್ತಿಚಿತ್ರದಲ್ಲಿದ್ದ ದೃಶ್ಯಗಳೆಲ್ಲ ಬದಲಾಗಿವೆ. ವ್ಯಾತ್ಯಾಸವನ್ನೇನಾದರೂ ಗಮನಿಸಿದೆಯ?"

    "ಹೌದು. ಕೆಲವು ಆಕಾರಗಳಿಗೆ ಹೆಚ್ಚಿನ ಜೋಡಿಕಣ್ಗಳಿವೆ. ಅಂದರೆ ಇಂದಿನ ಛಾಯಾಚಿತ್ರಣ, ಹೊಸಮಾಧ್ಯಮದ ಕಲೆಯ ಆಕ್ರಾಮಿಕ ಇರುವಿಕೆಯನ್ನು ಅಷ್ಟು ಸೂಕ್ಷ್ಮವಾಗಿ ನಿರುಕಿಸಿದವರಿಲ್ಲವೇನೋ--ಕೇವಲ ಒಂದು ಜೋಡಿಕಣ್ಗಳ ಅಳವಡಿಕೆಯಿಂದ. ಅದಕ್ಕೆ ಮತ್ತೊಂದು ಅರ್ಥವಿದೆ. ಇಪ್ಪತ್ತು ವರ್ಷದಲ್ಲಿ, ಅಥವ ಎರಡು ದಶಕದಲ್ಲಿ, ಅಥವ ಎರಡು ಶತಮಾನಗಳು ಭೇಟಿಮಾಡುವ ಹಂತದಲ್ಲಿ ಆಗಿರುವ ಬದಲಾವಣೆಯು ಒಂದು ಹೆಚ್ಚಿನ ಜೋಡ ಕಣ್ಗಳನ್ನು ಕೊಟ್ಟಂತೆ ಎಂದು ಭಾವಿಸಬಹುದು."

    "ಹ್ಞಾಂ, ನೀನು ವೃತ್ತಿಪರ ಕಲಾವಿಮರ್ಶಕ ಎಂಬ ನಿರೂಪಣೆಯಿದು," ಎಂದು ಪ್ರಕ್ಷು ನಗತೊಡಗಿದ. ಆದರೆ ಆತನ ಮಾತು-ನಗುವಿನಲ್ಲಿ ಒಂದು ತೀವ್ರತೆ, ಶೀಘ್ರತೆ ಬರತೊಡಗಿತು. ಏನನ್ನೋ ಹೇಳಬೇಕು, ಆದಷ್ಟೂ ಬೇಗ ಹೇಳಬೇಕು ಎನ್ನುವ ಮುಖಭಾವ ಮೊಡತೊಡಗಿತು.

(೧೧೨)

     ಆತನೊಂದಿಗೆ ಮಾತನಾಡುತ್ತಿದ್ದಂತೆಯೇ ಒಂದು ವಿಚಿತ್ರ ನಡೆಯಿತು. ಶಿಲ್ಪವೊಂದನ್ನು ಕಂಪ್ಯೂಟರ್ ಸ್ಕ್ರೀನಿನ ಅಡೋಬ್ ಫೋಟೋಶಾಪಿನಲ್ಲಿರಿಸಿ, ಮೌಸಿನ ಪಾಯಿಂಟರಿನಿಂದ ಅದರ ಮೇಲೆಲ್ಲ ಚಲಿಸಿದಂತೆಲ್ಲ, ಬೃಹದಾಕಾರದ ಶಿಲ್ಪದ ಮೇಲು, ಕೆಳಗು, ಎಡ-ಬಲಗಳನ್ನೆಲ್ಲ ಕುಂತಲ್ಲೇ ತಿರುಗಿಸಿ ನೋಡಬಹುದಲ್ಲ ಹಾಗೆ ಕಾಣತೊಡಗಿದ ಪ್ರಕ್ಷುಬ್ಧ! ಪಕ್ಕಾ ಫಿಲ್ಮಿ ಶೈಲಿಯಲ್ಲಿ, ಕ್ಯಾಮರ ಪ್ಯಾನ್ ಆದಂತೆ, ಕ್ಲೋಸಪ್ ಲಾಂಗ್-ಶಾಟ್‍ಗಳಲ್ಲಿ ಚಲಿಸಿದಾಗ ಎದುರಿನ ದೃಶ್ಯ ಪರಿವರ್ತನೆಗೊಳ್ಳುವಂತೆ, ಆತ ಕಾಣತೊಡಗಿದ.

     "ಪ್ರಕ್ಷು. ಮತ್ತೆ ಶುರುವಾಯಿತಲ್ಲ ನಿನ್ನ ಮೆಸ್‍ಮರಿಸಂ," ಎಂದು ಪ್ರತಿಭಟಿಸಿದೆ.

     ಆತ ನಗತೊಡಗಿದ, "ನಾನಲ್ಲ, ಇದನ್ನು ಹಿಡಿತದಲ್ಲಿರಿಸಿಕೊಂಡಿರುವುದು, ಮಾರ್ಪಾಡು ಮಾಡುತ್ತಿರುವುದು ನೀನೇ. ನಿನ್ನ ಇಚ್ಛೆಯಂತೆ ನಾನು ನಿನಗೆ ಗೋಚರಿಸುತ್ತಿದ್ದೇನೆ ಅಷ್ಟೇ. ಜೊತೆಗೆ ನಿನ್ನಯ ಊಟ, ನಿದ್ರೆಯಲ್ಲಿ ವ್ಯತ್ಯಯವಾಗಿರುವುದೂ ಇದಕ್ಕೆ ಕಾರಣ. ನಿನ್ನ ಹೊಟ್ಟೆ, ಕಣ್ಣು ಹಾಗೂ ಮಿದುಳು ನಿನ್ನ ಮೋಕ್ಷಕ್ಕೆ ದಾರಿ" ಎಂದ.

     "ನೀನು ಮಾತನಾಡುವ ಶೈಲಿಯಿಂದಾಗಿ ನಿನ್ನನ್ನು ಪ್ರಕ್ಷುಬ್ದ ಎಂದು ಕರೆವುದಕ್ಕಿಂತಲೂ ’ಮೋಕ್ಷದ’ ಎಂದ ಕರೆವುದು ಲೇಸು" ಎಂದೆ.

     "ಆಗಲಿ ಬಿಡಪ್ಪ. ನಿನ್ನ ಅಂತಿಮ ಪ್ರಶ್ನೆಗೆ ಉತ್ತರಿಸುವ ಅಂತಿಮ ಕ್ಷಣ ಬಂದಿದೆ," ಎಂದು ಮುಂದೆ ಮಾತನಾಡುವ ಮುನ್ನ ಪ್ರಕ್ಷು ಗಂಭೀರನಾಗಿ ಕಣ್ಣುಮುಚ್ಚಿಕೊಂಡ.

     ಒಂದತ್ತು ಕ್ಷಣಗಳ ನಂತರ ಕಣ್ತೆರೆದ. ಆತ ಮಾತನಾಡತೊಡಗಿದಾಗ ಆತನ ಧ್ವನಿ ಕೆಟ್ಟ ಮೈಕಿನಿಂದ ಹೊರಡುವಂತೆ, ಅಕೋಸ್ಟಿಕ್ಸ್ ಇಲ್ಲದಂತಹ ಕೋಣೆಯಲ್ಲಿ ಹೊರಡುವಂತೆ, ಕೋಳಿಯ ಕತ್ತು ಹಿಸುಕುವಾಗಿನ ಗೊರಗೊರ ಸದ್ದಿನಂತೆ, ದೈವವಾಣಿಯಂತೆ--ಇತ್ಯಾದಿಯಾಗಿ ಕೇಳಿಸತೊಡಗಿ, ನಾನು ನಗತೊಡಗಿ ನಂತರ ಸಾವರಿಸಿಕೊಂಡೆ. ಆತ ಹೇಳುವುದನ್ನು ಗಂಭೀರವಾಗಿ ಕೇಳಬೇಕು ಎಂದುಕೊಂಡಾಕ್ಷಣ ಆತನ ಶಾರೀರ ಸಹಜವಾಗಿಬಿಟ್ಟಿತು. ಆತ ಹೇಳಿದ್ದು ಇದುಃ

     "ಅಂತಿಮ ಉತ್ತರ ಎಂಬುದು ಇದೆ. ಅದೇ ಉತ್ತರ ಇಲ್ಲದಿರುವುದು! ಇವೆರಡೂ ಭಿನ್ನವೆಂದುಕೊಂಡರೆ ನೀನು ತಪ್ಪಿದೆ ಎಂದರ್ಥ. ಹುಡುಕುವುದು, ಒಂದೆಡೆಯಿಂದ ಮತ್ತೊಂದೆಡೆಗೆ ಹೋಗುವುದು ’ಕಾರ್ಯಕಾರಣ’ಸಂಬಂಧದ ನಂಬಿಕೆಯಿಂದ ಹುಟ್ಟಿದ್ದು. ಇದನ್ನು ದಾಟುವುದನ್ನೇ ಅಂತಿಮ ಉತ್ತರ ಎನ್ನುವುದು. ಹುಡುಕತೊಡಗಿದ ಕೂಡಲೆ ಗಮ್ಯ ತಪ್ಪುತ್ತದೆ. ಹುಡುಕುವುದನ್ನು ನಿಲ್ಲಿಸಿದರೆ ನೈತಿಕತೆಯ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇದೊಂತರ ಕೋಳಿ ಮೊದಲ, ಮೊಟ್ಟೆ ಮೊದಲ ಎಂಬ ಪ್ರಶ್ನೆಯಂತೆ--ಇದೊಂದು ಪ್ಯಾರಡಾಕ್ಸ್. ವಿಟ್‍ಗೆನ್‍ಸ್ಟೆನ್ ಇದನ್ನು ವಿವರಿಸಿದ್ದಾನೆ. ಹುಡುಕಾಟದ ಪ್ರಭಾವದಿಂದ ಕಲೆ ಸೃಷ್ಟಿಗೊಳ್ಳುತ್ತದೆ. ಹುಡುಕಾಟದ ಪ್ರಯತ್ನಗಳು ಕಲಾಕೃತಿಯಲ್ಲಿ ದಾಖಲಾಗಿರುತ್ತದೆ, ಸಿಡಿಯಲ್ಲಿ ಹಾಡುಗಳು ರೆಕಾರ್ಡ್ ಆದಂತೆ. ಆಗಿನ ಕಾಲಕ್ಕೇ ಅರಿಸ್ಟಾಟಲ್ ಇದನ್ನು ಅರಿತಿದ್ದ. ಆದರೆ ಕಲಾವಿದ ಅದನ್ನೆಲ್ಲ ನೆನಪಿಟ್ಟುಕೊಳ್ಳಲಾಗುವುದಿಲ್ಲ. ಏಕೆಂದರೆ ಪ್ರಜ್ಞೆ ಮತ್ತು ಅಂತರ್-ಪ್ರಜ್ಞೆಯ ಮೊತ್ತವದು. ನಿಜವಾದ ವಿಮರ್ಶಕ ಅದನ್ನು ಹೆಕ್ಕಿತೆಗೆವಾಗ ತನ್ನ ಹುಡುಕಾಟವನ್ನೂ ಅದರಲ್ಲಿ ಬೆರೆಸಿಬಿಡುತ್ತಾನೆ. ದೇವಸ್ಥಾನಗಳು, ದೆವ್ವಪೀಡಿತ ಬಂಗಲೆಗಳು ನಮ್ಮಲ್ಲಿ ಆಲೌಕಿಕ ಅನುಭವ ನೀಡುವುದು ಏಕೆಂದರೆ ಅವುಗಳಲ್ಲಿ ಮೊದಲೇ ದಾಖಲಾಗಿರುವ ಎಲ್ಲರ, ಎಲ್ಲ ಅನುಭವಗಳೊಂದಿಗೆ ನಮ್ಮ ನಿರೀಕ್ಷೆಗಳು ಘರ್ಷಣೆಗಿಳಿವುದರಿಂದ. ಮೋಕ್ಷ ಪಡೆದೆವು ಎಂದುಕೊಂಡ ಎಷ್ಟೋ ಮಂದಿಯನ್ನು ನೀನು ಭೇಟಿಯಾಗಿರಬಹುದು. ಅಂತಹವರು ಅದನ್ನು ದೂರದಿಂದ ನೋಡಿರುತ್ತಾರೆಯೇ ಹೊರತು ಹೊಂದಿರುವುದಿಲ್ಲ. ಯು.ಜಿ.ಕೃಷ್ಣಮೊರ್ತಿಯು ಜಿಡ್ಡು ಕೃಷ್ಣಮೋರ್ತಿಯ ಬಗ್ಗೆ ಇದೇ ಅಪವಾದವನ್ನು ಹೆಕ್ಕಿತೆಗೆದಿದ್ದಾರೆ ತಮ್ಮ ಸಂದರ್ಶನವೊಂದರಲ್ಲಿ. ಮೊದಲಿಗೆ ಇಂತಹ ಹುಡುಕಾಟದಿಂದ ಹುಟ್ಟುವ ನೋವು, ಆ ನಂತರ ಹುಡುಕಾಟ ನಿಲ್ಲಿಸುವುದರಿಂದ ಹುಟ್ಟುವ ನೋವು ಮತ್ತು ನೈತಿಕತೆಯ ಬಾಧೆಯ ನೋವು--ಇವುಗಳನ್ನು ನಿಲ್ಲಿಸುವುದೇ ಅರಿವು ಎಂಬಂತೆ ಬುದ್ಧನ ಮಾತುಗಳನ್ನು ತಿರುಚಲಾಗಿದೆ. ಅದೆಲ್ಲ ಒಪ್ಪ ಆಶಾವಾದಿಯ ಮಾತುಗಳನ್ನು ಅದನ್ನರಿಯದ ನಿರಾಶಾವಾದದ ವ್ಯಾಖ್ಯೆಯಷ್ಟೇ. ಎಲ್ಲರೂ ಹಾಕಿಕೊಟ್ಟ ದಾರಿಗಳನ್ನು ಸವೆಸಿ, ಸವೆಸಿ, ನಿನ್ನದೇ ದಾರಿಹುಡುಕಿಕೋ ಎಂದರೆ ಗಾಭರಿಯಾಗಿಬಿಡುತ್ತಾನೆ ಮಾನವ. ಇಲ್ಲದ ಸಮಸ್ಯೆಗಳನ್ನು ಇದೆ ಎಂದು ಭಾವಿಸಿ, ಇಲ್ಲದ ಪರಿಹಾರವನ್ನು ಸೃಷ್ಟಿಸಿ ಕಂಡುಹಿಡಿದುಬಿಟ್ಟೆ ಎಂದುಕೊಳ್ಳುವುದೇ ಕಲಾಚಟುವಟಿಕೆ. ಕಲೆಯನ್ನು ಸೃಷ್ಟಿಸಲು ಸಾಕಷ್ಟು ಮುಗ್ಧತೆಯ ಅವಶ್ಯಕತೆ ಇದೆ. ಇದೇ ಸಂದರ್ಭದಲ್ಲಿ, ತಾನೆಷ್ಟೂ ಕ್ರಿಯಾತ್ಮಕ,ಅಸಲಿ, ಒರಿಜಿನಲ್ ಎಂದು ಕಲಾವಿದರೆಲ್ಲ ಸಂದರ್ಶನಗಳಲ್ಲಿ ಬೊಗಳೆ ಬಿಡುವುದರ ಮಜವೇ ಬೇರೆ, ಬಿಡು. ಕಂಡು ಅನುಭವಿಸಿದ್ದರೂ ಅದನ್ನು ಪ್ರಕಟಿಸದ ವಿನಯ ಮತ್ತು ಮೌನದಲ್ಲಿದೆ ಮೋಕ್ಷ. ಅದರ ವಿರುದ್ಧ ಭಾವವೇ ನಾನು," ಎಂದು ಬಡಬಡಿಸುತ್ತಲೇ ಪ್ರಕ್ಷುಬ್ಧ ಎದ್ದು ಕ್ಯಾಂಟೀನಿನ ಆ ಕಡೆಗೆ ಓಡಿದ.

     ಹತ್ತು ಗಜ ದೂರದಿಂದ ಕೂಗಿ ಹೇಳಿದ, "ನೀನಾಗಿ ಹುಡುಕಿಬಂದಿದ್ದರಿಂದ ನಾನು ನಿನಗೆ ಸಿಗಲಿಲ್ಲ. ನಾನಾಗಿ ಇಚ್ಛಿಸಿದ್ದರಿಂದ ನಿನ್ನನ್ನೊಮ್ಮೆ ಭೇಟಿ ಮಾಡಿದೆ ಅಷ್ಟೇ. ಅಷ್ಟಿತ್ತು ನಿನ್ನ ಹುಡುಕಾಟದ ಗೊಂದಲ. ಮತ್ತೆ ನನ್ನನ್ನು ಪತ್ತೆಹಚ್ಚುವ ಪ್ರಯತ್ನ ಮಾಡಬೇಡ," ಎಂಬುದು ಕ್ಷೀಣವಾಗಿ ಕೇಳಿತು. ಪ್ರಕ್ಷು ಕ್ಯಾಂಟೀನಿನ ಹಿಂದಿನಿಂದ, ಕಲಾಇತಿಹಾಸ ವಿಭಾಗದ ಎರಡನೇ ಮಹಡಿ ಹತ್ತಿ ಹೋಗುತ್ತಿದ್ದುದು, ಆತನ ದೇಹದ ಹೊರರೇಖೆಯ ಚಲನೆಯಿಂದ ನನಗೆ ಅರಿವಾಯಿತು, ಏನಾಗುತ್ತಿದೆ ಎಂದು ನಾನು ಪೂರ್ಣವಾಗಿ ಗ್ರಹಿಸುವ ಮುನ್ನವೇ!

(೧೧೩)

ಈ ರಾತ್ರಿಯುದ್ದಕ್ಕೂ ನಡೆದ ಸರ್ರಿಯಲ್ ಘಟನೆಗಳು ೧೯೯೨ರಲ್ಲಿ ನಡೆದಿದ್ದಲ್ಲಿ ನಾನು ಹೇಗೆ ಪ್ರತಿಕ್ರಿಯಿಸುತ್ತಿದ್ದೇನೋ ಕಾಣೆ. ಈಗ ಮಾತ್ರ ಆದುದೆಲ್ಲವನ್ನೂ ಹಾಗೆಯೇ ಸ್ವೀಕರಿಸುವ ಧೈರ್ಯ ಮಾಡಿದೆ. ಪ್ರಕ್ಷುಬ್ಧ ಕಲಾಇತಿಹಾಸದ ವಿಭಾಗದ ಒಳಹೊಕ್ಕ ನಂತರ, ಎರಡು ನಿಮಿಷ ಹಾಗೇ ಕುಳಿತಿದ್ದೆ, ಹುಡುಗರ ಹಾಸ್ಟೆಲ್ಲಿನ ಕಡೆ ಮುಖಮಾಡಿ. ಬೆಳಗಾಗುವ ಸ್ಲೋಮೋಷನ್ ಪ್ರಕ್ರಿಯೆ ಅದಾಗಲೇ ಆರಂಭಗೊಂಡಿತ್ತು. ಆದರೂ ಮರಗಿಡಕಟ್ಟಡಗಳ ಹೊರರೇಖೆಗಳು ಕಂಡಂತೆ ಅವುಗಳ ಮೇಲಿನ ವಿವರಗಳು ಕಾಣುತ್ತಿರಲಿಲ್ಲ.

     ಅಷ್ಟರಲ್ಲಿ ಯಾರೋ ಸೈಕಲ್ ತುಳಿಯುತ್ತ ಬರುತ್ತಿರುವ ಸದ್ದು ಕೇಳಿತು. ಹಿಂದಿರುಗಿ ಕೆ.ಜಿ.ಎಸ್‍ರ ಕಪ್ಪುಬಿಳುಪಿನ ಭಿತ್ತಿ ಇದ್ದ ಡಿಸೈಜ್ ವಿಭಾಗದೆಡೆ ಕಣ್ಣು ಹಾಯಿಸಿದೆ. ಕತ್ತಲಲ್ಲಿ ಬರುತ್ತಿದ್ದುದು ಹೆಣ್ಣೋ ಗಂಡೋ ಎಂದು ತಿಳಿಯದಾಯಿತು. ಏಕೆಂದರೆ ಗಂಡಸರೂ ಸಹ ಶಾಲೊಂದನ್ನು ಹೊದ್ದು ಹೆಣ್ಣಿನಂತೆ ಕಾಣುವ ಸಾಧ್ಯತೆ ಇತ್ತು. ಸೀದ ಸೈಕಲ್ ಸವಾರ ಬಂದು ನನ್ನ ಸಮೀಪನಿಂತು ನನ್ನನ್ನೇ ದಿಟ್ಟಿಸಿ ನೋಡಿತು. ಕ್ಯಾಂಟೀನಿನ ಹುಡುಗರು ಆ ಚಲನವಲನಗಳಿಗೆ ಸ್ವಲ್ಪ ಮಿಸುಕಾಡಿದಂತೆ ಮಾಡಿ, ತಲೆ ಎತ್ತಿ ನನ್ನತ್ತ ನೋಡಿ, ಮಗ್ಗಲು ಬದಲಿಸಿ ಮಲಗಿಬಿಟ್ಟರು.

ಆ ವ್ಯಕ್ತಿ ತನ್ನ ತಲೆಯ ಮೇಲೆನ ಶಾಲನ್ನು ಸರಿಸಿ ನನ್ನೆಡೆ ನೋಡಿತು. "ಅನಿಲ್ ದಾ!!" ಎಂದಳಾಕೆ. ಹೌದು ಎಂದೆ. "ಗುರ್ತು ಸಿಗಲಿಲ್ಲವೆ, ನಾನು ಅನುಶ್ರೀ ಕುಮಾರಿ ಸಾಹು!" ಎಂದಳು. ಓಹ್, ಎಂದು ಆಕೆಯ ಪರಿಚಯದ ಪೂರ್ಣ ಚಿತ್ರವನ್ನು ಡೌನ್‍ಲೋಡ್ ಮಾಡತೊಡಗಿದೆ, ಮನಸ್ಸಿನಲ್ಲೇ. ಕಡಿಮೆ ಸ್ಮೃತಿ ಇರುವ ಗಣಕಯಂತ್ರದಲ್ಲಿ ಚಿತ್ರವೊಂದ ಕ್ರಮೇಣ, ನಿಧಾನಗತಿಯಲ್ಲಿ ಮೊಡಿಬರುವಂತೆ ಆಕೆಯ ಗುರ್ತು ಹತ್ತಿತು.

"ಅನುಶ್ರೀ. ನನಗೆ ಎರಡು ವರ್ಷ ಜ್ಯೂನಿಯರ್ ಆಗಿದ್ದೆಯಲ್ಲ, ಆಗ, ಇಲ್ಲೇ ಓದುವಾಗ?" ಎಂದು ಕೇಳಿದೆ.

"ಹೌದು ಅನಿಲ್ ದಾ", ಎಂದಾಕೆ ತನ್ನದೇ ಪರಿಚಯವನ್ನು ಸಂಪೂರ್ಣವಾಗಿ ತಿಳಿಹೇಳಿದಳು, "ನಾನೂ ಕಲಾ ಇತಿಹಾಸ ವಿಭಾದಗಲ್ಲೇ ಇದ್ದೆ, ಡಿಗ್ರಿಯಲ್ಲಿ. ನೀನಾಗ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದೆ. ಪ್ರಕ್ಷುಬ್ ದಾನ ಗರ್ಲ್‌ಫ್ರೆಂಡ್ ನಾನು, ನೆನಪಾಯಿತೆ?" ಎಂದು ಕೇಳಿದಳು. ಜೋರಾಗಿ ನಗತೊಡಗಿದೆ ನಾನು, "ಗೊತ್ತಾಯಿತು ಬಿಡು. ಕಂಗ್ರಾಜುಲೇಷನ್. ನೀನಿನ್ನೂ ಬದುಕಿದ್ದೀಯ. ನೀನು ಆತ್ಮಹತ್ಯೆ ಮಾಡಿಕೊಂಡೆ ಎಂಬ ರೂಮರ್ ಆಗಲೇ, ೧೯೯೫ರ ಸುಮಾರಿಗೇ ಹರಡಿತ್ತು. ಆದರೆ, ನನ್ನ ಗಣಿತದ ಪ್ರಕಾರ ಸುಮಾರು ನಾಲ್ಕು ಮಂದಿ ಗೆಳೆಯರು, ಸುದ್ದಿಯ ಪ್ರಕಾರ ಸತ್ತಿದ್ದವರು ಬದುಕಿದ್ದಾರೆ, ಮತ್ತು ಒಂದಿಬ್ಬರನ್ನು ನೆನ್ನೆಮೊನ್ನೆ ಭೇಟಿಯೊ ಮಾಡಿದೆ", ಎಂದೆ. ಆಕೆ ಮಂದಹಾಸ ಬೀರಿದಳು.

    ಉಭಯಕುಶಲೋಪರಿಯೆಲ್ಲ ಮುಗಿಯಿತು. ಆಕೆ ಶಾಂತಿನಿಕೇತನದಲ್ಲೇ ತಂದೆತಾಯಿಯರೊಂದಿಗೆ ವಾಸಿಸುತ್ತಿದ್ದಾಳೆ. ಮನೆಯ ಮೊದಲ ಮಹಡಿಯಲ್ಲಿ ಸ್ಟುಡಿಯೋ ಮಾಡಿಕೊಂಡಿದ್ದಾಳೆ. ಗ್ರಾಫಿಕ್ ಕಲಿತರೂ ಪೈಂಟಿಂಗ್ ಮಾಡುತ್ತಿದ್ದಾಳೆ. ಪ್ರದರ್ಶನಗಳು, ತನ್ನ ಕಲಾಕೃತಿಗಳ ಮಾರಾಟ ಸುಸೂತ್ರವಾಗಿ ಆಗುತ್ತಿದೆ. ಆಕೆ ನೆಮ್ಮದಿಯಾಗಿದ್ದಾಳೆ. ಇಷ್ಟು ತಿಳಿದುಬಂದಿತು ಆಕೆಯೊಂದಿಗಿನ ಚುಟುಕು ಮಾತುಕತೆಯಲ್ಲಿ. ಅನುಶ್ರೀ ಕಲಾಇತಿಹಾಸ ವಿಭಾಗದತ್ತಲೇ ನೋಡುತ್ತಿದ್ದಳು,

"ಬೆಳಿಗ್ಗೆ ಇಷ್ಟು ಬೇಗ ಇಲ್ಲಿ ಬರುವ ಅವಶ್ಯಕತೆ ಏನಿತ್ತು ಅನಿಲ್ ದಾ? ನೀವು ಮೌಲ್ಯಮಾಪನ ಮಾಡಬೇಕಿರುವುದು ಹತ್ತು ಗಂಟೆಗಲ್ಲವೆ?" ಆಕೆಯ ಧ್ವನಿಯಲ್ಲಿ ಆತಂಕ ಮತ್ತು ಎಚ್ಚರಿಕೆಯ ಧ್ವನಿಯಿತ್ತು.

"ಇಲ್ಲ, ಹೀಗೇ, ಸುಮ್ಮನೆ...." ಏನು ಹೇಳಬೇಕೆಂದು ತಿಳಿಯಲಿಲ್ಲ. ಪ್ರಕ್ಷುಬ್ ದ ಮತ್ತು ಈಕೆ ಜೊತೆಯಲ್ಲಿ ಓಡಾಡುತ್ತಿದ್ದುದು ನನಗೆ ತಿಳಿದಿತ್ತು. ಈಗ ಜೊತೆಯಲ್ಲಿದ್ದಾರೋ ಇಲ್ಲವೋ ತಿಳಿಯಲಿಲ್ಲ. ಮೋಕ್ಷದಂತಹ ಅದ್ಭುತ ಗಂಭೀರ ಪರಿಕಲ್ಪನೆಗಳ ಬಗ್ಗೆ ಮಾತನಾಡುವ ಪ್ರಕ್ಷುವಿಗೂ, ಪಕ್ಕಾ ಮೆಟೀರಿಯಲಿಸ್ಟಿಕ್ ಆದ ಅನುಶ್ರೀಗೂ ಹೊಂದಾಣಿಕೆ ಹೇಗಾಯಿತು ಎಂದು ತಿಳಿಯದು, ಇವರಿಬ್ಬರೂ ಜೊತೆಯಲ್ಲಿದ್ದಾರೋ ಇಲ್ಲವೋ ಎಂದೂ ತಿಳಿಯದೆ, ಪ್ರಕ್ಷುವಿನೊಂದಿಗೆ ರಾತ್ರಿಯೆಲ್ಲ ಮಾತನಾಡಿದ್ದು ಹೇಳಲೋ ಬೇಡವೋ ಎಂದುಕೊಳ್ಳುತ್ತಿದ್ದೆ.

ಆಕೆಯೇ ಮಾತು ಮುಂದುವರೆಸಿದಳು, "ಪ್ರಕ್ಷು ಸಿಕ್ಕಿದ್ದನೆ ನೆನ್ನೆ ರಾತ್ರಿ?"

ಹೌದು ಎಂದೆ. "ರಾತ್ರಿಯೆಲ್ಲ ಮಾತನಾಡುತ್ತ ಕುಳಿತಿದ್ದಿರ?" ಹೌದು ಎಂದೆ.

"ವಾಚ್‍ಮನ್ ಏನೂ ಹೇಳಲಿಲ್ಲವೆ ನಿನಗೆ?" ಎಂದಳು. ಸ್ವಲ್ಪ ಗಾಭರಿಯಾದೆ.

ಆಕೆಯೇ ಮುಂದುವರೆಸಿದಳು, "ಅನಿಲ್ ದಾ. ಈ ಪ್ರಕ್ಷು ಯಾವಾಗಲೂ ಹೀಗೆಯೇ. ಪ್ರಕ್ಷು ಬದುಕಿಲ್ಲ. ಆತ ಸತ್ತು ಹತ್ತು ವರ್ಷಗಳಷ್ಟಾಯಿತು. ಆದರೆ ಅದು ತಿಳಿಯದ ನಿಮ್ಮಂತಹ ಅತಿಥಿಗಳು ಇಲ್ಲಿಗೆ ಬಂದಾಗ, ಅಪ್ಪಿತಪ್ಪಿ ಕಲಾಭವನದ ರಾತ್ರಿಯ ನೀರವತೆಯನ್ನು ಸವಿಯಲು ಬಂದಾಗ ಮಾತಿಗೆ ಸಿಕ್ಕುವ ಒಂದೇ ಆಕಾರ ಪ್ರಕ್ಷುವೆ" ಎಂದಳು.

ನಾನು ನಗತೊಡಗಿದೆ. //