ಕುಮಾರವ್ಯಾಸ ಭಾರತವು ಕಾವ್ಯಪ್ರೇಮಿಗಳಿಗೆ ರಸದೌತಣ..
ಕವಿಯೇ ಹೇಳಿಕೊಂಡಂತೆ ಕಾವ್ಯಕೆ ಗುರು.
ಅದರಲ್ಲಾವುದಿಲ್ಲ?
ಅರಸುಗಳು ಬಯಸಿದರೆ ಅವರಿಗೆ ಅತ್ಯಂತ ಪ್ರಿಯವಾದ ವೀರರಸವಲ್ಲಿದೆ.ವೇದಜ್ಞರಾದ ದ್ವಿಜರೋದಿದರೆ ಚತುರ್ವೇದಗಳ ಸಾರವನ್ನೇ ಅಲ್ಲಿ ಹೀರಿಬಿಡಬಹುದು.ವಿರಕ್ತರಾದ ಯೋಗಿಗಳು ನಮಗಲ್ಲೇನಿದೆ?ಎಂದು ಮೂಗು ಮುರಿಯುವಂತಿಲ್ಲ.ಅವರ ವಿರಕ್ತಿಯನ್ನು ಹೆಚ್ಚಿಸಿ ಆತ್ಮತತ್ವಕ್ಕೊಯ್ಯಬಲ್ಲ ವೇದಾಂತ ತತ್ವ ವಿಚಾರಗಳ ರಾಶಿಯೇ ಇಲ್ಲಿದೆ.ಇನ್ನು ಮಂತ್ರಿಗಳಿಗೆ ರಾಷ್ಟ್ರ ರಕ್ಷಣೆಗೆ ಬೇಕಾದ ಬೌದ್ಧಿಕ ಪ್ರಖರತೆಯನ್ನು ಹೆಚ್ಚಿಸಿಕೊಳ್ಳಬಹುದಾದ ರಾಜಕೀಯ ಚಾಣಾಕ್ಷತೆಗಳು ಇಲ್ಲಿ ಅಸಂಖ್ಯವಾಗಿವೆ.ಶೃಂಗಾರ ಲೋಲರಾದ ವಿರಹಿಗಳಿಗೆ ವಿಭಾವಾನುಭಾವ ಸ್ಥಾಯೀಸಂಚಾರೀಯುಕ್ತ ಶೃಂಗಾರರಸ ಪ್ರವಾಹವೇ ಇಲ್ಲಿದೆ.ವಿದ್ಯಾಸಮುದ್ರವನ್ನು ಪಾನಮಾಡಿದ ವಿದ್ವನ್ಮಣಿಗಳಿಗೆ ಅನನ್ಯಾತಿಶಯ, ರೂಪಕಾದ್ಯಲಂಕಾರಗಳ ವರ್ಣನೆಗಳು ಹೇರಳವಾಗಿದೆ.
"ಅಡುಮುಟ್ಟದ ಸೊಪ್ಪಿಲ್ಲ" ಎಂಬಂತೆ ಕುಮಾರವ್ಯಾಸನು ಸ್ಪರ್ಶಿಸದವಿಷಯಗಳಿಲ್ಲವಾದ್ದರಿಂದ ಕಾವ್ಯಕೆ ಗುರು ಎಂದು ಹೇಳಿಕೊಂಡರೆ ಅದರಲ್ಲಿ ಅತಿಶಯೋಕ್ತಿಯೇನಿದೆ.ಸಂಸ್ಕೃತ ಮಹಾಭಾರತದ ಕರ್ತೃಗಳಾದ ವ್ಯಾಸರೂ ಸಹ ತಮ್ಮ ಭಾರತದ ಬಗೆಗೆ "ಯದ್ ಇಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ ಕ್ವಚಿತ್"(ಇಲ್ಲಿರುವುದನ್ನು ಉಳಿದ ಗ್ರಂಥಗಳಲ್ಲಿ ಕಾಣಬಹುದು.ಆದರೆ ಇಲ್ಲಿಲ್ಲದಿರುವುದು ಇನ್ನೆಲ್ಲೂ ಕಾಣಸಿಗಲಾರದು)ಎನ್ನುತ್ತಾರೆ."ವ್ಯಾಸೋಚ್ಚಿಷ್ಟಂ ಜಗತ್ಸರ್ವಮ್"(ಎಲ್ಲವೂ ವ್ಯಾಸರು ತಿಂದು ಬಿಟ್ಟಿದ್ದು ಅರ್ಥಾತ್ ಅವರು ಬರೆದು ಬಿಟ್ಟಿದ್ದು ಎನ್ನುವ ವಾಣಿ ಪ್ರಸಿದ್ಧವಾಗಿಯೇ ಇದೆ. ಅಂತೆಯೇ ಕುಮಾರವ್ಯಾಸನದು.ಅವನು ಎಷ್ಟು ಕವಿಗಳಿಗಾಧಾರವಾಗಿಲ್ಲ?
ಕುಮಾರವ್ಯಾಸಭಾರತದ ದ್ರೌಪದೀ ಸ್ವಯಂವರ ಪ್ರಕರಣದ ಇನ್ನೊಂದು ಭಾಮಿನಿಯನ್ನು ನೋಡೋಣ:-
ರಾಜಸೂಯದ ಕರ್ತೃವೋಲ್ ಜಿತ
ರಾಜಮಂಡಲವಾಯ್ತು ಮುಖವಿದು
ರಾಜರಾಜನಪೋಲ್ದುದಲಕಾವೇಷ್ಟಿತತ್ವದಲಿ
ರಾಜನುದ್ಯಾನದವೊಲಾಸ್ಯ ಸ
ರೋಜವಾಯ್ತುತಮಾಲ ಪತ್ರವಿ
ರಾಜಿತವು ಜನಮೇಜಯ ಕ್ಷಿತಿಪಾಲ ಕೇಳೆಂದ
"ರಾಜಸೂಯದ ಕರ್ತೃವೋಲ್ ಜಿತ
ರಾಜಮಂಡಲವಾಯ್ತು "
ಎಂದರೆ
ರಾಜಸೂಯಯಾಗವನ್ನು ಮಾಡಬೇಕಾದರೆ, ಮೊದಲು ಚತುರ್ದಿಕ್ಕುಗಳಲ್ಲಿರುವ ರಾಜರುಗಳನ್ನು ಗೆದ್ದು ಜಯಭೇರಿ ಮೊಳಗಿಸಿ ಅವರಿಂದ ಕಪ್ಪ ಕಾಣಿಕೆಗಳನ್ನು ಪಡೆದ ನಂತರವೇ ರಾಜಸೂಯ ಯಾಗವನ್ನು ಮಾಡಬೇಕು.ಇದು ಕ್ಷತ್ರಿಯರಿಗೆ ಮಾತ್ರ ಮೀಸಲಾದ ಯಾಗ.ಅವರಲ್ಲೂ ಸಾಮಾನ್ಯ ರಾಜರಿಗೆ ಇದು ಸಾಧ್ಯವಿಲ್ಲ.ದಿಗ್ವಿಜಯದ ನಂತರ ಒಂದುವರೆ ವರ್ಷಗಳಷ್ಟು ಕಾಲ ಈ ಯಾಗದಲ್ಲಿ ವೈದಿಕ ಕಾರ್ಯಕ್ರಮಗಳು ನಡೆಯುತ್ತವೆ.ಈ ಯಾಗವನ್ನು ಮಾಡಿ ಅವಭೃತ ಸ್ನಾನ ಮಾಡಿದವನು "ಸಾಮ್ರಾಟ್" ಪದವಿಗೇರುತ್ತಾನೆ.ಯುಧಿಷ್ಠಿರನು ಮುಂದೆ ಈ ಯಾಗವನ್ನು ಮಾಡುತ್ತಾನೆ.
ಅದಿರಲಿ- ದ್ರೌಪದಿಯು ಇಲ್ಲಿ ರಾಜಸೂಯದ ಕರ್ತೃ ಹೇಗಾದಳು?ಅವಳು ಯಾವಾಗ ಎಲ್ಲ ರಾಜರುಗಳ ಮೇಲೆ ವಿಜಯ ಗಳಿಸಿದಳು?ಎಂದರೆ-
ದ್ರೌಪದಿಯ ಸ್ವಯಂವರವು ಪಾಂಚಾಲ ದೇಶದಲ್ಲಿ ನಡೆಯಲಿರುವುದೆಂಬುದನ್ನು ಕೇಳಿ ಅವಳ ಸೌಂದರ್ಯಾತಿಶಯಗಳನ್ನು ಮೊದಲೇ ಕೇಳಿದ್ದ ರಾಜರುಗಳು ಅವಳನ್ನು ಪಡೆದುಕೊಳ್ಳುವ ಅಭಿ ಲಾಷೆಯಿಂದ,ದೇಶ ವಿದೇಶಗಳಿಂದ ಪಾಂಚಾಲಕ್ಕೆ ಬಂದು ಸೇರಿದರು.ಸ್ವಯಂವರ ಮಂಟಪದಲ್ಲಿ ಸ್ವಯಂವರ ಮಾಲಿಕೆಯನ್ನು ಹಿಡಿದು ದ್ರೌಪದಿಯು ಸಭಾ ಪ್ರವೇಶವನ್ನು ಮಾಡಿದೊಡನೆಯೇ ಎಲ್ಲ ರಾಜರ ಕಂಗಳೂ ದ್ರೌಪದಿಯ ಮುಖಮಂಡಲದ ಮೇಲೆ ನೆಟ್ಟವು.ಆ ತಮ್ಮ ಕಂಗಳನ್ನು ರಾಜರು ಹಿಂದೆಗೆಯಲಾರದಾದರು.
ಮಂಡಲವೆಂದರೆ ಮುಖ ಹಾಗೂ ದೇಶ ಎಂದರ್ಥ ಎಲ್ಲ ಮಂಡಲಾಧಿಪರೂ ದ್ರೌಪದಿಯ ರೂಪ ಲಾವಣ್ಯಕ್ಕೆ ಮಾರು ಹೋಗಿ ಅವಳ ಮುಖಮಂಡಲದ ಸೌಂದರ್ಯದ ಸಾರವನ್ನು ಹೀರುವುದರಲ್ಲಿ ತಮ್ಮನ್ನು ತಾವೇ ಮರೆತು ಬಿಟ್ಟರು.ಆದ್ದರಿಂದ ದ್ರೌಪದಿಯು ತನ್ನ ಮೊಗದ ಸೌಂದರ್ಯ ಹಾಗೂ ತೇಜಗಳಿಂದ(ಅಗ್ನಿಯ ಮಗಳಲ್ಲವೇ?)ಎಲ್ಲ ರಾಜರನ್ನು ಗೆದ್ದು ಬಿಟ್ಟಳು.ಪರ್ಯಾಯವಾಗಿ ಅವರ ದೇಶಗಳನ್ನೆಲ್ಲ ಗೆದ್ದಂತಾಯಿತು.ಹೀಗೆ ರಾಜಮಂಡಲವು ಜಿತವಾಯ್ತು.ಆದ್ದರಿಂದ ದ್ರೌಪದಿಯು ರಾಜಸೂಯದ ಕರ್ತೃವಾದಳು.
" ಮುಖವಿದು ರಾಜರಾಜನ ಪೋಲ್ದುದಲಕಾವೇಷ್ಟಿ ತತ್ವದಲಿ."
ರಾಜರಾಜನೆಂದರೆ ಕುಬೇರ.
ರಾಜರಾಜೋ ಧನಾಧಿಪಃ(ಅಮರಕೋಶ)
ದ್ರೌಪದಿಯ ಮುಖವು ರಾಜರಾಜನೆಂದು ಪ್ರಸಿದ್ಧನಾದ ಕುಬೇರನಿಗೆ ಸಮನಾಯ್ತು ಎನ್ನುತ್ತಾನೆ ಕವಿ.
ಹೇಗೆ?
ಕುಬೇರನು ಅಲಕೆಯಲ್ಲಿ ಅರ್ಥಾತ್ ಅಲಕಾನಗರದಲ್ಲಿ ವೇಷ್ಟಿತನಾಗಿದ್ದಾಬೆ.ಆದ್ದರಿಂದ "ಅಲಕಾವೇಷ್ಟಿತ".
"ಅಲಕಾ" ಎಂದರೆ ಮುಂಗುರುಳು ಎಂದು ಇನ್ನೊಂದರ್ಥ.ದ್ರೌಪದಿಯು ಸುಂದರವಾದ ಮುಂಗುರುಳುಗಳಿಂದ ಶೋಭಿತಳಾಗಿರುವುದರಿಂದ ಅವಳೂ ಅಲಕಾವೇಷ್ಟಿತಳಾಗಿದ್ದಾಳೆ.ಆದ್ದರಿಂದ ಅಲಕಾವೇಷ್ಟಿ ತತ್ವದಲ್ಲಿ ಇಬ್ಬರೂ ಸಮಾನರು.
"ರಾಜನುದ್ಯಾನದವೊಲಾಸ್ಯಸರೋಜವಾಯ್ತು"
ಉದ್ಯಾನದಲ್ಲಿ ಸಾವಿರಾರು ಪುಷ್ಪಗಳಿದ್ದರೂ ಕಮಲ ಪುಷ್ಪವೇ ಉದ್ಯಾನಕ್ಕೆ ಅತ್ಯಂತ ಭೂಷಣ.
ಅದು ದ್ರೌಪದಿಗೆ ಹೇಗೆ ಅನ್ವಯಿಸುತ್ತದೆ?
ಇಲ್ಲಿ ಪಾಂಚಾಲನ ಸ್ವಯಂವರ ಮಂಟಪವೇ ಒಂದು ಸುಂದರ ಉದ್ಯಾನ.ರಾಜರ ಮುಖಗಳೆಲ್ಲಾ ಒಂದೊಂದು ಸುಂದರ ಪುಷ್ಪಗಳು.ದ್ರೌಪದಿಯ ಆಸ್ಯವು ಈ ಪುಷ್ಪೋದ್ಯಾನದ ಅತ್ಯಂತ ಶೋಭಿತವಾದ ಸರೋಜ.ಆದ್ದರಿಂದ ಆಸ್ಯಸರೋಜವಾಯ್ತು,
"ತಮಾಲ ಪತ್ರ ವಿರಾಜಿತವು"
ತಮಾಲವೆಂದರೆ ಕನ್ನಡದಲ್ಲಿ ಹೊಂಗೆಯ ಗಿಡ.ಸಂಸ್ಕೃತದಲ್ಲಿ ಇದಕ್ಕೆ ತಾಪಿಚ್ಛ ಎಂದು ಹೇಳುತ್ತಾರೆ.(ತಮಾಲಸ್ತಿಲಕೆ ಖಡ್ಗೇ ತಾಪಿಚ್ಛೇ ವರುಣದ್ರುಮೇ -ಮೇದಿನೀಕೋಶ)
ತಮಾಲವೆಂದರೆ ತಿಲಕ ಅರ್ಥಾತ್ ಹಣೆ ಬೊಟ್ಟು ಎಂದರ್ಥ.ತಮಾಲ ಪತ್ರ ಎಂದರೆ ಹಣೆಗಿಡುವ ತಿಲಕ ಎಂದರ್ಥ.ದ್ರೌಪದಿಯ ಹಣೆಯು ಹೊಂಗೆಯ ಎಲೆಯ ಆಕಾರದ ತಿಲಕದಿಂದ ರಾರಾಜಿಸುತ್ತಾ ಆಕೆಯ ಮುಖ ಸೌಂದರ್ಯಕ್ಕೆ ಇಮ್ಮಡಿ ಅಂದವನ್ನು ತಂದಿತ್ತು ಎಂಬುದು ಮುಖ್ಯಾರ್ಥ.
ಈ ಪದ್ಯದಲ್ಲಿ ಕವಿಯು ದ್ರೌಪದಿಯ ಮುಖವರ್ಣನೆಯನ್ನು ಮಾಡಿದ್ದಾನೆ.
ಹೀಗೆ ಕುಮಾರವ್ಯಾಸನು ಅರ್ಥಗರ್ಭಿತ ಪದಪುಂಜಗಳನ್ನು ಪ್ರಯೋಗಿಸಿ ತನ್ನ ಕಾವ್ಯವನ್ನು ಪ್ರಗಲ್ಭ ಗೊಳಿಸಿರುವುದು ಮಾತ್ರವಲ್ಲದೇ ಓದುಗರ ಹೃದಯವನ್ನೇ ಸೂರೆಗೊಂಡಿದ್ದಾನೆ.
ಮುಂದುವರಿಯುವುದು
ಪ್ರತಿಕ್ರಿಯೆ (4)
ಎಲ್ಲ ರಸಗಳೂ.. ಅನ್ನೋದು ಉತ್ಪ್ರೇಕ್ಷೆ ಅನ್ನಿಸಿದರೂ ಕುಮಾರವ್ಯಾಸನ ಕೃತಿ ಭಕ್ತಿ ರಸ ( ಒಮ್ಬತ್ತರೊಳಗಿಲ್ಲ!) ದ ಔತಣ. ಈತನ ಭಕ್ತಿರಸ ( ಆ ಮೂಲಕ ನಮ್ಮ) ಹೊಳೆಯಾಗಿ ಹರಿಯೋದನ್ನು ಅನೇಕ ಬಾರಿ ನಾವು ಕಾಣಬಹುದು. ೨. "ಅಡುಮುಟ್ಟದ ಸೊಪ್ಪಿಲ್ಲ" ಎಂಬಂತೆ ಕುಮಾರವ್ಯಾಸನು ಸ್ಪರ್ಶಿಸದವಿಷಯಗಳಿಲ್ಲವಾದ್ದರಿಂದ ಕಾವ್ಯಕೆ ಗುರು ಎಂದು ಹೇಳಿಕೊಂಡರೆ ಅದರಲ್ಲಿ ಅತಿಶಯೋಕ್ತಿಯೇನಿದೆ. ಇದರ ಬಗ್ಗೆ ಹೆಚ್ಚು ಬರೆಯಿರಿ. ತಿಳಿಯುವ ಆಸಕ್ತಿ ಇದೆ. ೨. ಅವನು ಎಷ್ಟು ಕವಿಗಳಿಗಾಧಾರವಾಗಿಲ್ಲ?
ನಿಜಕ್ಕೂ ಅವನು ನಂತರದ ಅನೇಕ ಕವಿಗಳ ಮೇಲೆ ಪ್ರಭಾವ ಬೀರಿದ್ದಾನೆ. ವ್ಯಾಸ ಭಾರತವನ್ನು ಕನ್ನಡದಲ್ಲಿ ಬರೆದರೂ ಪಂಪನ ( ಮತ್ತು ರನ್ನ ಮತ್ತು ಹರಿಹರರ ) ಪ್ರಭಾವವನ್ನು ಸ್ಪಷ್ಟವಾಗಿ ಗುರ್ತಿಸಬಹುದು. droupadi ಮುಖ varNaneya prastaapakke ಧನ್ಯವಾದಗಳು. 3. ಆದ್ದರಿಂದ ದ್ರೌಪದಿಯು ರಾಜಸೂಯದ ಕರ್ತೃವಾದಳು..
ಈ ವ್ಯಾಖ್ಯಾನ ಸರಿ ಅನ್ನಿಸಲಿಲ್ಲ. ನೀವು ಹಾಕಿದ ಭಾಮಿನಿಯಲ್ಲಿ "ರಾಜಸೂಯದ ಕರ್ತೃವೋಲ್ ಜಿತ " ಅನ್ನೋ ಸಾಲನ್ನ ಗಮನಿಸಿದರೆ ರಾಜಸೂಯ ಯಾಗದ ಕರ್ತೃ "ಅಂತೆ" ( ಓಲ್) ಗೆದ್ದ ಮುಖ ಮಂಡಲ ...
ರಾಜರನ್ನು ಗೆದ್ದ ರಾಜಸೂಯಯಾಗದ ಕರ್ತುವಿನ ಮುಖ ಮಂಡಲಕ್ಕೆ ಈ ಸ್ವಯಂವರದ ರಾಜರನ್ನು ತನ್ನ ಸೌಂದರ್ಯದಿಂದ ? ಗೆದ್ದ? ದ್ರೌಪದಿಯ ಮುಖಮಂಡಲವನ್ನು ಕುಮಾರವ್ಯಾಸ ಹೋಲಿಸುತ್ತಿದ್ದಾನೆ. ಇಲ್ಲಿ "ಸಾಮ್ಯತೆ" ಮುಖ ಮಂಡಲವೇ ಹೊರತು ರಾಜಸೂಯ ಯಾಗದ ಕರ್ತುತ್ವ ವಲ್ಲ. ಮತ್ತು ಸಾಮ್ಯತೆ ಯನ್ನು "ಮುಖವಿದು ರಾಜರಾಜನ ಪೋಲ್ದುದಲಕಾವೇಷ್ಟಿ ತತ್ವದಲಿ" ಅನ್ನೋ ಸಾಲಿನಲ್ಲಿ ಬರೆದೂ ಬಿಟ್ಟಿದ್ದಾನೆ. ರಾಜ ರಾಜ ಅಂದ್ರೆ ನನ್ನ ದೃಷ್ಟಿಯಲ್ಲೂ ಎಲ್ಲರನ್ನು ಗೆದ್ದು ರಾಜ ಸೂಯ ಯಾಗ ಮಾಡುತ್ತಿರುವ ರಾಜಸೂಯ ಯಾಗದ ಕರ್ತುವೆ ಹೊರತು ಕುಬೇರನಲ್ಲ. ಅಲಕಾವೇಷ್ಟಿ ತತ್ವ ಆಸಕ್ತಿಕರವಾಗಿದೆ. aadare artha aagalilla. ಧನ್ಯವಾದಗಳು.( ಇನ್ನೂ ಹೆಚ್ಚು ಇದರ ಬಗ್ಗೆ ಬರೆಯಲು ಆಗುತ್ತಾ ನೋಡಿ.) ೪. ರಾಜಸೂಯದ ಕರ್ತೃವೋಲ್ ಜಿತ
ರಾಜಮಂಡಲವಾಯ್ತು ಮುಖವಿದು
ರಾಜರಾಜನಪೋಲ್ದುದಲಕಾವೇಷ್ಟಿತತ್ವದಲಿ
ರಾಜನುದ್ಯಾನದವೊಲಾಸ್ಯ ಸ
ರೋಜವಾಯ್ತುತಮಾಲ ಪತ್ರವಿ
ರಾಜಿತವು ಜನಮೇಜಯ ಕ್ಷಿತಿಪಾಲ ಕೇಳೆಂದ
ಯಾಕೋ ಈ padyavannu naanu Odidaaga nanage bEreyade reeti artha vaaytu. ನಿಮ್ಮ barahagaLannu munduvarisi. namage kumaara vyaasanannu Odisi.
ರಾಜಮಂಡಲವಾಯ್ತು ಮುಖವಿದು
ರಾಜರಾಜನಪೋಲ್ದುದಲಕಾವೇಷ್ಟಿತತ್ವದಲಿ
ರಾಜನುದ್ಯಾನದವೊಲಾಸ್ಯ ಸ
ರೋಜವಾಯ್ತುತಮಾಲ ಪತ್ರವಿ
ರಾಜಿತವು ಜನಮೇಜಯ ಕ್ಷಿತಿಪಾಲ ಕೇಳೆಂದ
೧. ರಾಜಸೂಯದ ಕರ್ತೃ:
ಸುತ್ತಮುತ್ತಲಿನ ( ಜಗತ್ತಿನ?!) ರಾಜರನೆಲ್ಲ ಗೆದ್ದ , ಗೆದ್ದು ರಾಜರ ರಾಜ ಆಗಿ, ಆ ಮೂಲಕ ರಾಜಸೂಯಯಾಗಕ್ಕೆ ನಿಂತವ. ರಾಜ ರಾಜ ಅನ್ನೋ ಪದವೂ ಇವನನ್ನೇ ಸೂಚಿಸುತ್ತೆ. ೨. ಓಲ್ ::
ವಿಭಕ್ತಿ ಪ್ರತ್ಯಯ . ಅರ್ಥ "ಅಂತೆ" , ಹೋಲಿಕೆ ಮಾಡಲು ಬಳಸುತ್ತಿರುವ ಪದ. ೩. ಜಿತ :: ಗೆದ್ದ ೪. ರಾಜ ಮಂಡಲ :: ರಾಜ್ಯ ೫. ಮುಖವಿದು : ಈ ಮುಖ ೬. ರಾಜ ರಾಜನ : ಮೇಲೆ ಹೇಳಿದಂತೆ ರಾಜಸೂಯಯಾಗದ ಕರ್ತೃವಿನ ೭. ಪೋಲ್ದುದು :: ಹೊಲಿಕೆಯಾಗುವುದು ( 'ಹೋಲುತ್ತೆ' ಅನ್ನುವ ಮಾತನ್ನು ಹಮನಿಸಿದರೆ ಈ ಪದದ ಅರ್ಥ ತಿಳಿಯುತ್ತೆ. ) ೮. ಅಲಕಾವೇಷ್ಟಿತತ್ವ ದಲ್ಲಿ. ಅಲಕಾ ಅಂದರೆ ಮುಂಗುರುಳು. ಸೌಂದರ್ಯ ವರ್ಣನೆಯಲ್ಲಿ ಸುಂದರಿಯ ಈ ಮುಂಗುರುಳಿಗೆ ಅವುಗಳ ಚೇಷ್ಟೆಗೆ ತನ್ನದೇ ಆದ ಸ್ತಾನವನ್ನು ಕವಿಗಳು ಕೊಟ್ಟಿದ್ದಾರೆ. ಬಹುಶ ಇಲ್ಲಿ ದ್ರೌಪದಿಯ "ಸೌಂದರ್ಯ" ಕ್ಕೆ ಸ್ವಯಂವರಕ್ಕೆ ಆಗಮಿಸಿದ ರಾಜರೆಲ್ಲ ಸೋತರು ಅನ್ನುವುದನ್ನು ಕುಮಾರವ್ಯಾಸ ಅಲಕಾವೇಷ್ಟಿತತ್ವ ಅನ್ನೋ ಪದದಲ್ಲಿ ಸೂಚಿಸುತ್ತಿದ್ದಾನೆ. ಇನ್ನು 'ಅಲಕಾವೇಷ್ಟಿ' ಅನ್ನೋ ಪದವೇ ಏಕೆ? ಈ ಪದದ Ouಚಿತ್ಯವೇನು? ಸೌಂದರ್ಯವನ್ನು ಸೂಚಿಸಲು ಬೇರೆ ಪದ ಯಾಕೆ ಬಳಸಲಿಲ್ಲ ಅನ್ನುವಾಗ ಕುಬೇರನೊಡನೆ ( ದುಡ್ದೊಡೆಯ) ಸಾಮ್ಯತೆ ( ರಾಜಸೂಯ ಯಾಗದ ಕರ್ತುವೂ ಎಲ್ಲ ರಾಜರ ಕಪ್ಪ ಕಾಣಿಕೆಗಳಿಂದ ಕುಬೇರನಷ್ಟೇ? ಶ್ರೀಮಂತ ಅನ್ನೋ ಅರ್ಥದಲ್ಲಿ) ಎರಡೆರಡನ್ನು ಒಂದೇ ಪದದಲ್ಲಿ ಸೂಚಿಸಲು ಈ ಪ್ರಯೋಗ ಮಾಡಿದ್ದಾನೆ. ಕುಬೇರನಷ್ಟು ದುಡ್ಡು ನೋಡಿದ /ಪಡೆದ ರಾಜಸೂಯ ಯಾಗದ ಕರ್ತುವಿನ ಮುಖ ಮಂಡಲ, ಮತ್ತು ಮುಂಗುರುಳಿನ ಮೋಡಿಯಿಂದ, ತನ್ನ ಸೌಂದರ್ಯವನ್ನು ಇಮ್ಮದಿಗೊಲಿಸಿಕೊಂಡ, (raajarannu geddu tanna hemmeyannoo,) ದ್ರೌಪದಿಯ ಮುಖಮಂಡಲ ಇವೆರಡನ್ನೂ "ಅಲಕಾವೇಷ್ಟಿ ತತ್ವ" ಸೂಚಿಸುತ್ತಿದೆ. ೯. ರಾಜನುದ್ಯಾನದವೊಲಾಸ್ಯ ಸರೋಜವಾಯ್ತು ಇದನ್ನು ಬಿಡಿಸಿ ಬರೆದರೆ ರಾಜನ ಉದ್ಯಾನದ ಓಲ್ ಆಸ್ಯ ಸರೋಜ ಆಯ್ತು ರಾಜನ ಉದ್ಯಾನ ಎಲ್ಲ ಉದ್ಯಾನಗಳಿಗೂ ಕಿರೀಟ ಪ್ರಾಯ , ಹಾಗೆಯೇ ಕಮಲಕ್ಕೆ ಎಲ್ಲ ಹೂಗಳಲ್ಲಿ ತನ್ನದೇ ಆದ ಸ್ತಾನವಿದೆ. ಹಾಗೆ ತಮಾಲ ಪತ್ರ ವಿರಾಜಿತವಾದ ದ್ರೌಪದಿ ಮುಖ "ಮುಖ ಕಮಲವಾಯ್ತು. (ಇಲ್ಲಿ ಕಮಲಕ್ಕೂ ದ್ರೌಪದಿ ಮುಖಕ್ಕೂ ಅಬೇಧವಿದೆ). ಅಲ್ಲಿನ ಇತರ ಮುಖಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಈ ಸಾಲು ದ್ರೌಪದಿಯ ಮುಖ ಕಮಲಕ್ಕೆ ತಂದುಕೊಡುತ್ತೆ. ಸಾರಾಂಶ: ಇಲ್ಲಿನ ಪದ್ಯ ತನ್ನ ಸೌಂದರ್ಯ ಮಾತ್ರದಿಂದ ಅಲ್ಲಿನೆಲ್ಲ ರಾಜರನ್ನು ಗೆದ್ದ ದ್ರೌಪದಿಯ ಮುಖದಲ್ಲಿನ ಹೆಮ್ಮೆ ಯನ್ನು ಹೇಳ್ತಾ ಇದೆ. ಆ ಮೂಲಕ ದ್ರೌಪದಿಯnnu soundaryavannu vaRnisittide. mukhadallina hemme, khushi, raajasooyayaagada kartu, mattu droupadi ge "samaanadharma". ...... nanna vivaraNe tappu anniisidare hELi. nanage kannaDa saahityadalli aasakti. note: nanna vivarane ati vaachya annisuttide. nanna aniske prakaara vivarane ativaachya aagabaaradi, aadare rasa keTTu hOgutte.