ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
___LINK_OPEN_imageanchor="1" href="https://lh5.googleusercontent.com/-4-5clOuI0Co/TXXjl80oygI/AAAAAAAAAD4/7yL3Zzpeefs/s1600/189447_157778524276389_147712111949697_291780_1631456_n.jpg"___
ಅಂತೂ ಇಂತೂ 'ನಮ್ಮ ಬೆಳಗಾವಿ'ಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿದೆ! 'ಇನ್ಫೋಸಿಸ್'ನ ಎನ್.ಆರ್.ನಾರಾಯಣ ಮೂರ್ತಿಯವರು ಸಮ್ಮೇಳನವನ್ನು ಉದ್ಘಾಟಿಸುತ್ತಿರುವುದು ನನಗಂತೂ ಖುಶಿಯಾಗಿದೆ. ಕನ್ನಡ ನಾಡಿನಲ್ಲಿ ಹುಟ್ಟಿದ ಯಾವುದೇ ಕನ್ನಡಿಗ ಸಹ ಕನ್ನಡ ಸಮ್ಮೇಳನ ಉದ್ಘಾಟಿಸಲು ಅರ್ಹ ಅನ್ನೋದು ನನ್ನ ಅಭಿಪ್ರಾಯ. ಪ್ರತೀ ಸಾಹಿತ್ಯ ಸಮ್ಮೇಳನಗಳಲ್ಲಂತು ಬರೀ ಸಾಹಿತಿಗಳದೇ ದರ್ಬಾರು, ಇನ್ನು ವರ್ಷಪೂರ್ತಿ ಸಭೆ ಸಮಾರಂಭಗಳಲ್ಲೇ ಜೀವನ ಸಾಗಿಸೋ ರಾಜಕಾರಣಿಗಳು, ಮಠಾದೀಶರನ್ನೂ ನೋಡಿ ನೋಡಿ ಸಾಕಾಗಿ ಹೋಗಿದೆ. ಕೆಲವೇ ಕೆಲವು ಮಠಾದೀಶರು, ರಾಜಕಾರಣಿಗಳನ್ನು ಬಿಟ್ಟರೆ ಬಹುತೇಕರದ್ದು ಅದೇ ಹಳಸಲು, ಬೋರಿಂಗ್ ಭಾಷಣ. ಹೀಗಾಗಿ ಇವರನ್ನು ಹೊರತುಪಡಿಸಿದವರೊಬ್ಬರು ಉದ್ಘಾಟಿಸುತ್ತಿರುವುದು ಸ್ವಾಗತಾರ್ಹ. ಇನ್ನು ನಾರಾಯಣ ಮೂರ್ತಿಗಳಿಗಿರುವ ಜಾಗತಿಕ ಮನ್ನಣೆಯಿಂದ ಸಮ್ಮೇಳನಕ್ಕೆ ತಕ್ಕ ಮೀಡಿಯಾ ಕವರೇಜೂ ಸಿಗುತ್ತದೆ. ಮತ್ತು ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಐಶ್ವರ್ಯ ರೈ ಬಚ್ಚನ್ ಅವರ ಆಗಮನವಾಗಲಿದೆ! ಆಮಂತ್ರಣ ಪತ್ರಿಕೆ
'ವೀರ ಸೌಧ' ದಿಂದ ಮೆರವಣಿಗೆ:
'ವೀರ ಸೌಧ' ಬೆಳಗಾವಿಯ ಐತಿಹಾಸಿಕ ಸ್ಥಳಗಳಲ್ಲೊಂದು. ೧೯೨೪ರಲ್ಲಿ ೩೯ನೇ ಕಾಂಗ್ರೆಸ್ ಅಧಿವೇಶನ ನಡೆದಿದ್ದು ಇಲ್ಲಿಯೇ. ಮಹತ್ಮಾ ಗಾಂಧೀಜಿಯವರು ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದು ಒಂದೇ ಸಲ. ಹೀಗಾಗಿ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ ಏಕೈಕ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ ಎಂಬ ಖ್ಯಾತಿಗೆ ಈ ಸ್ಥಳ ಪಾತ್ರವಾಗಿದೆ. ಸಮ್ಮೇಳನಕ್ಕೆಂದು ತೆಗೆದ ನೀರಿನ ಬಾವಿಯನ್ನು ಕಾಂಗ್ರೆಸ್ ಬಾವಿಯೆಂದೇ ಕರೆಯುತ್ತಾರೆ(ಬಿ.ಜೆ.ಪಿಯವರೂ ಸಹ!).ಮಹತ್ಮ ಗಾಂಧಿಯವರ ಜೊತೆ ಮೊತಿಲಾಲ್ ನೆಹರು, ಜವಾಹರಲಾಲ್ ನೆಹರು, ಅನ್ನಿ ಬೆಸಂಟ್, ವಲ್ಲಭ ಭಾಯ್ ಪಟೇಲ್ ಮುಂತಾದವರಿದ್ದರು(ಅವತ್ತಿನ ಕಾಂಗ್ರೆಸ್ಸೇ ಹಾಗಿತ್ತು!). ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಅವರು ಅಧಿವೇಶನದಲ್ಲಿ ಹಾಡಿ ಎಲ್ಲರ ಪ್ರಶಂಸೆ ಗಳಿಸಿದ್ದು ಸಹ ಇಲ್ಲಿನ ಐತಿಹಾಸಿಕ ಘಟನೆ.
ಸಮ್ಮೇಳನದ ಪ್ರಧಾನ ಆಕರ್ಷಣೆ ಮಾರ್ಚ್ ೧೧ರಂದು ನಡೆಯುವ ಮೆರವಣಿಗೆ ಆಗಲಿದೆ. ಬೆಳಿಗ್ಗೆ ೧೦ ಗಂಟೆಗೆ 'ವೀರ ಸೌಧ'ದಿಂದ ಉದ್ಘಾಟಣಾ ಮೆರವಣಿಗೆ ಹೊರಡಲಿದೆ. ಪ್ರತಿ ಜಿಲ್ಲೆಯಿಂದ ಒಂದು ಸ್ಥಬ್ಧ ಚಿತ್ರ, ಬೆಳಗಾವಿ ಜಿಲ್ಲೆಯ ಹಿರಿಮೆ ಸಾರುವ ಐದು ಸ್ಥಬ್ಧಚಿತ್ರಗಳು, ಜನಪದ ಕಲಾ ತಂಡಗಳು, ಕನ್ನಡ ಚಲನಚಿತ್ರ ರಂಗದ ೫೦೦ ಜನ ಕಲಾವಿದರು, ನಟ-ನಟಿಯರ ಸಹಿತ ಒಂಭತ್ತು ಸ್ಥಬ್ಧಚಿತ್ರಗಳು, ಮೈಸೂರು ದಸರಾದ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತ 'ಬಲರಾಮ'ನ ನೇತ್ರತ್ವದಲ್ಲಿ ಆನೆ, ಕುದುರೆ , ಒಂಟೆಗಳು, 'ಪೋಲೀಸ್ ಬ್ಯಾಂಡ್'ಗಳು, ೧೦೮ ಎತ್ತಿನ ಗಾಡಿಗಳು, ೧೦೦೮ ಮಂದಿ ಪೂರ್ಣ ಕುಂಬ ಹೊತ್ತ ಮಹಿಳೆಯರು! ಎಲ್ಲ ಒಟ್ಟಿಗೆ ಹೆಜ್ಜೆ ಹಾಕುಲಿದ್ದಾರೆ. ಹೀಗಾಗಿ ಉದ್ಘಾಟಣಾ ಮೆರವಣಿಗೆ ವೈಭವೋಪೇತವಾಗಿ, ಅವಿಸ್ಮರಣೀಯವಾಗಿ ನೆರವೇರುವುದರಲ್ಲಿ ಸಂಶಯವಿಲ್ಲ. ಯಾವುದೇ ಪ್ರಚಾರ, ಆಹ್ವಾನಗಳಿಲ್ಲದಿದ್ದರೂ ಪ್ರತೀ ವರ್ಷ ರಾಜ್ಯೋತ್ಸವದಲ್ಲಿ ಬೆಳಗಾವಿಯಲ್ಲಿ ಸಾವಿರಾರು ಜನ ಕನ್ನಡಿಗರು ಸ್ವಯಂ ಪ್ರೇರಣೆಯಿಂದ ಸೇರುತ್ತಾರೆ. ಇನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಚಾರ ಕೈಗೊಂಡಿರುವಾಗ ಯಾವ ಪ್ರಮಾಣದಲ್ಲಿ ಜನ ಸೇರಬಹುದೆಂಬುದನ್ನು ಯಾರಾದರೂ ಊಹಿಸಬಹುದು.
ಪುಸ್ತಕ ಪ್ರದರ್ಶನ: ನಾನು ಕಾತರದಿಂದ ಕಾಯುತ್ತಿರುವುದು ಪುಸ್ತಕ ಪ್ರದರ್ಶನಕ್ಕೆ. ಬೆಳಗಾವಿದೆ ವಿಧಾನ ಸೌಧ ಬಂದರೂ ಒಂದು ಸುಸಜ್ಜಿತ ಕನ್ನಡ ಪುಸ್ತಕ ಮಳಿಗೆ ಇಲ್ಲದಿರುವುದು ದೊಡ್ದ ದುರಂತ! ಪುಸ್ತಕ ಪ್ರದರ್ಶನ ನಮ್ಮ ಆರ್.ಎಲ್.ಎಸ್ ಕಾಲೇಜಿನ ಆಟದ ಮೈದಾನದಲ್ಲಿ ನಡೆಯಲಿದೆ.
ಪ್ರವಾಸ : ಬೆಳಗಾವಿ ನಗರದಲ್ಲಿ ನೋಡಲೇಬೇಕಾದ ಪ್ರಮುಖ ಸ್ಥಳಗಳೆಂದರೆ ವೀರಸೌಧ, ಕೋಟೆ ಪ್ರದೇಶದಲ್ಲಿರುವ ರಾಮಕ್ರಿಷ್ಣ ಮಿಶನ್ ಆಶ್ರಮ (೧೮೯೨ರಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಮೊದಲನೇ ದಕ್ಶಿಣ ಭಾರತದ ಪ್ರವಾಸದ ವೇಳೆ ಅಕ್ಟೋಬರ್ ೧೯ರಿನಂದ ಅಕ್ಟೋಬರ್ ೨೭ರವರೆಗೆ ೯ ದಿನ ಇಲ್ಲಿ ತಂಗಿದ್ದರು.೧೮೯೩ರ ಚಿಕಾಗೋದ ವಿಶ್ವ ಸರ್ವ ಧರ್ಮ ಸಮ್ಮೇಳನಕ್ಕೆ ಹೋಗುವ ವಿಚಾರ ಸ್ವಾಮಿ ವಿವೇಕಾನಂದರಲ್ಲಿ ಮೊಳಕೆಯೊಡೆದಿದ್ದು ಇಲ್ಲಿಯೇ ಎಂದು ನಂಬಲಾಗಿದೆ.), ಅದರ ಮುಂದುಗಡೆ ಇರುವ ಪುರಾತನ ಕಮಲ ಬಸದಿ, ಕೋಟೆ ಕೆರೆ. ಪಕ್ಷಿ ವೀಕ್ಷಣೆ, ಟ್ರೆಕ್ಕಿಂಗ್ ಗೆ ಹೋಗೊರಿದ್ರೆ ಬೆಳಗಾವಿಯ ವ್ಯಾಕ್ಸಿನ್ ಡೀಪೊ ಪ್ರದೇಶ, ಸಮೀಪದ ಬುತ್ತರಾಮಟ್ಟಿಯ ಕಿರು ಮ್ರುಗಾಲಯದ ಹತ್ತಿರದ ಗುಡ್ಡಕ್ಕೆ ಹೋಗಬಹುದು. ಕಿತ್ತೂರು ಕೋಟೆ, ನವಿಲು ತೀರ್ಥ, ಗೋಕಾಕ್ ಜಲಪಾತ, ಗೊಡಚಿನಮಲ್ಕಿ ಜಲಪಾತ, ನಮ್ಮ 'ಹಿಡ್ಕಲ್ ಜಲಾಶಯ', ದೂದಸಾಗರ ಜಲಪಾತ, ವಜ್ರ ಜಲಪಾತ, ಆಸೋಗಾ ಜಲಪಾತ ಬೆಳಗಾವಿಯ ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ಸ್ಥಳಗಳು. ಸಮೀಪದ ಮಹಾರಾಷ್ಟ್ರದ ಅಂಬೋಲಿ ಘಾಟಿಗೂ ಭೇಟಿ ನೀಡಬಹುದು. ಗೋವಾ ಸಹ ಬೆಳಗಾವಿಗೆ ನೂರೈವತ್ತು ಕಿ.ಮೀ ದೂರದಲ್ಲಿದೆ.
ಬೆಳಗಾವಿಯ ರಾಮಕೃಷ್ಣ ಮಿಶನ್ ಆಶ್ರಮ
ಸ್ವಾಮೀ ವಿವೇಕಾನಂದರು ತಂಗಿದ್ದ ಮನೆ(ಈಗ ನವೀಕರಿಸಲಾಗಿದೆ)
ನಮ್ಮ ಹಿಡಕಲ್ ಜಲಾಶಯ
ಗೋಕಾಕ್ ಜಲಪಾತ
ಗೊಡಚಿನಮಲ್ಕಿ ಜಲಪಾತ
ಎಡವಿದ ಸರ್ಕಾರ: ಸಮ್ಮೇಳನದ ದಿನಾಂಕವನ್ನು ಸ್ವಲ್ಪ ಮುಂಚೆಯೇ ನಿರ್ಧರಿಸಿದ್ದರೆ ಇನ್ನೂ ಹೆಚ್ಚಿನ ಕೆಲಸಗಳು ಬೆಳಗಾವಿಯಲ್ಲಿ ನಡೆಯುತ್ತಿದ್ದವೇನೋ. ಬೆಳಗಾವಿ ನಗರದ ಮೂಲಭೂತ ಸೌಕರ್ಯಗಳಿಗಾಗಿ ವಿಶೇಷಾನುದಾನ ಅಂತ ೧೦೦ಕೋಟಿಗಳನ್ನು ಯಡಿಯೂರಪ್ಪನವರು ಬಿಡುಗಡೆ ಮಾಡಿದ್ರು. ವಿಶ್ವ ಕನ್ನಡ ಸಮ್ಮೇಳನಕ್ಕೆ ಅಂತ ೩೦ಕೋಟಿ ರೂಪಾಯಿಗಳನ್ನು ಸರ್ಕಾರ ವ್ಯಯಿಸುತ್ತಿದೆ. ಇನ್ನು ಮಹಾನಗರ ಪಾಲಿಕೆ, ನಗರಾಭಿವ್ರುದ್ಧಿ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ ಇವೆಲ್ಲ ಕೂಡಿ ಕೆಲಸ ಮಾಡಿದ್ದರೆ ಬೆಳಗಾವಿಯಲ್ಲಿ ಮೆರವಣಿಗೆ ಹೋಗೋ ದಾರಿಯನ್ನಾದರೂ ಕಾಂಕ್ರೀಟ್ ರಸ್ತೆಯಾಗಿ ಮಾಡಬಹುದಿತ್ತು. ಇನ್ನು ಗೋಡೆಗಳಿಗೆ ಕಲಾವಿದರಿಂದ ಚಿತ್ರ ಬರೆಸಿದಂತೆ 'ಪ್ಲಾಸ್ಟಿಕ್ ಬ್ಯಾನರ್'ಗಳಿಗೆ ಬದಲಾಗಿ ಅವನ್ನೂ ಕಲಾವಿದರಿಂದ ಬರೆಸಿದ್ದರೆ ಪರಿಸರ ಸ್ನೇಹಿ ಕೆಲಸವೂ ಆಗುತ್ತಿತ್ತು, ಕಲಾವಿದರಿಗೆ ಸಹಾಯ ಮಾಡಿದ ಹಾಗೂ ಆಗುತ್ತಿತ್ತು. ಇನ್ನು ಸಮ್ಮೇಳನದ ಪ್ರಯುಕ್ತ ಹೊಸ ವೆಬ್ಸೈಟು ಆರಂಭಿಸಬೇಕಿತ್ತು. ಇರುವ ಬೆಳಗಾವಿಯ ವೆಬ್ಸೈಟಲ್ಲೆ ಸಮ್ಮೇಳದ ವೆಬ್ಸೈಟ್ ಅಳವಡಿಸಲಾಗಿದೆ. ಅದೂ ಹೇಳಿಕೊಳ್ಳುವ ಗುಣಮಟ್ಟದ್ದಾಗಿಲ್ಲ. ಅದನ್ನೂ ಜಾಹೀರಾತುಗಳಲ್ಲಿ ನೀಡದೇ ಇದ್ದಿದ್ದರಿಂದ ಬಹಳಷ್ಟು ಜನರಿಗೆ ವೆಬ್ಸೈಟ್ ಇರುವುದು ಗೊತ್ತಾಗಿಲ್ಲ. ಸಮ್ಮೇಳನಗಳನ್ನು ನಡೆಸುವ ಬಗ್ಗೆ ನಮ್ಮ ದೇಶದ ಉಳಿದ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರ ಗುಜರಾತಿನಿಂದ ಕಲಿಯಬೇಕಾದದ್ದು ಬಹಳಷ್ಟಿದೆ!
ಬೇಜಾರು: ಮರೆತಿಲ್ಲದಿದ್ದರೂ ವಿಶ್ವ ಕನ್ನಡ ಸಮ್ಮೇಳನದ ಈ ಸಂದರ್ಭದಲ್ಲಿ ಪದೇ ಪದೇ ನೆನಪಾಗುತ್ತಿರುವುದು ಸಿ.ಅಶ್ವತ್ಥ್ ಅವರು! ಅವರಿದ್ದಿದ್ದರೆ ಸಮ್ಮೇಳನದ ಹೊಳಪೇ ಬೇರೆ ಇರುತ್ತಿತ್ತು. ಬಹುಶಃ ಲೋಕಾಯುಕ್ತರಾದ ಸಂತೋಷ ಹೆಗ್ಡೆಯವರು ಆಗಮಿಸುತ್ತಿಲ್ಲ!
ಸರ್ಕಾರಕ್ಕೆ ಅಭಿನಂದನೆ : ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಬಗ್ಗೆ ಮೊದಲು ಪ್ರಸ್ತಾಪ ಆದದ್ದು ಕುಮಾರ ಸ್ವಾಮಿ-ಯಡಿಯೂರಪ್ಪನವರ ಸಮ್ಮಿಶ್ರ ಸರ್ಕಾರವಿದ್ದಾಗ. ಆಗಿಂದ ಸಮ್ಮೇಳನದ ದಿನವನ್ನು ಮೂಂದೂಡುತ್ತಿರುವುದರಿಂದ ಬೆಳಗವಿಗೆ ಆದ ಉಪಯೋಗ ಬಹಳಷ್ಟು! ಈ ಮೊದಲು ಬೆಳಗಾವಿಯಲ್ಲಿ ಸಮ್ಮೇಳನದ ದಿನಾಂಕ ನಿರ್ಧಾರವಾಗುತ್ತಿದ್ದಂತೆ ರಸ್ತೆಗಳಲ್ಲಿ 'ಡಿವೈಡರ್ಗ'ಳನ್ನು ಮಾಡಿ ಮಧ್ಯೆ ಗಿಡ ಬೆಳೆಸಲು ಶುರು ಮಾಡಿದ್ರು. ಅವುಗಳ ಮಧ್ಯೆ ಇದ್ದ ಏರ್ಟೆಲ್ ಜಾಹೀರಾತುಗಳು ಇಂಗ್ಲೀಷಿನಲ್ಲಿದ್ದವು. ಸಮ್ಮೇಳನದ ಕೆಲಸ ಶುರುವಾದ ತಕ್ಷಣ ಅವನ್ನು ತೆಗೆದು ಮೇಲೆ ಕನ್ನಡದಲ್ಲಿ ಬರೆದು ಕೆಳಗೆ ಸಣ್ಣ ಅಕ್ಷರಗಳಲ್ಲಿ ಇಂಗ್ಲೀಷಿನಲ್ಲಿ ಬರೆಸಿ ಹಾಕಿಸಿದ್ದರು! ಇನ್ನು ಸಮ್ಮೇಳನ ಮುಂದೂಡಿದ್ದರಿಂದ ಬೆಳಗಾವಿ ರಸ್ತೆಗಳು ಮತ್ತೆ ಮತ್ತೆ ಡಾಂಬರೀಕರಣಗೊಂಡವು! ಹೊಸ ಫುಟ್ ಪಾತುಗಳು ನಿರ್ಮಾಣಗೊಂಡವು. ಸಮ್ಮೇಳನದ ನೆಪದಲ್ಲಿ ನಡೆಯುತ್ತಿರುವ ಕೆಲಸಗಳಿಂದ ಸಾವಿರಾರು ಜನರಿಗೆ ಕೆಲಸ ದೊರೆತಿದ್ದು ಸಮ್ಮೇಳನದ ಯಶಸ್ಸೆಂದೇ ನನ್ನ ಅನಿಸಿಕೆ. ಹೀಗಾಗಿ ಸರ್ಕಾರಕ್ಕೆ ಅಭಿನಂದನೆ ಹೇಳಲೇಬೇಕು.
ಮುಂದಿನ ಸಮ್ಮೇಳನದವರೆಗೂ ಕಾಯದಿರಿ! ಕರ್ನಾಟಕ ಏಕೀಕರಣದ ನಂತರ ನಡೆಯುತ್ತಿರುವ ಎರಡನೇ ವಿಶ್ವ ಕನ್ನಡ ಸಮ್ಮೇಳನವಿದು. ಈ ಮೊದಲು ೧೯೮೫ರಲ್ಲಿ ಮೈಸೂರಿನಲ್ಲಿ ಮೊದಲ ’ಶ್ವ ಕನ್ನಡ ಸಮ್ಮೇಳನ’ ಡೆದಿತ್ತು. ಅದನ್ನು ಉದ್ಘಾಟಿಸಿದ್ದು ನಮ್ಮ ಶಿವರಾಮ ಕಾರಂತರು!(ಆಗ ಬರಗಾಲ ಇದ್ದಿದ್ದರಿಂದ ಕೆಲವರು ಕಾರಂತರಿಗೆ ಪತ್ರ ಬರೆದು ಸಮ್ಮೇಳನಕ್ಕೆ ಬರಬೇಡಿ ಎಂದು ಪತ್ರಬರೆದಿದ್ದರಂತೆ. ಸಮ್ಮೇಳನದಲ್ಲಿ ಪಾಲ್ಗೊಂಡು ಅದನ್ನು ಪ್ರಸ್ತಾಪಿಸಿ "ಬರ ಅಂತ ಮಸಾಲೆ ದೋಸೆ ತಿನ್ನೋದು ಬಿಟ್ಟಿದ್ದಾರೆಯೇ?!" ಅಂತ ಐತಿಹಾಸಿಕ ಹೇಳಿಕೆ ಕೊಟ್ಟಿದ್ದರಂತೆ!) ೨೫ ವರ್ಷಗಳ ನಂತರ ಬೆಳಗಾವಿಯಲ್ಲಿ ಎರಡನೆಯ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿದೆ. ಮುಂದೆ ಯಾವಾಗ ನಡೆಯುತ್ತೋ ಯಾರಿಗ್ಗೊತ್ತು?! ಹೀಗಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಕನ್ನಡೋತ್ಸವಕ್ಕೆ ತಪ್ಪದೇ ಬನ್ನಿ!
ಗೋಪಾಲ್ ಮಾ ಕುಲಕರ್ಣಿಮಾರ್ಚ್ ೦೮, ೨೦೧೧ · ೧೫ ವರ್ಷಗಳ ಹಿಂದೆ
ಉತ್ತಮ ಲೇಖನ ಧನ್ಯವಾದಗಳು.ತುಂಬಾ ಚೆನ್ನಾಗಿದೆ.
Kadasiddeshwar Karaguppiಮಾರ್ಚ್ ೦೯, ೨೦೧೧ · ೧೫ ವರ್ಷಗಳ ಹಿಂದೆ
ಧನ್ಯವಾದಗಳು
ಕೇಶವಮಾರ್ಚ್ ೧೧, ೨೦೧೧ · ೧೫ ವರ್ಷಗಳ ಹಿಂದೆ
ಅನೇಕ ವರ್ಷಗಳ ನಂತರ ವಿಶ್ವ ಕನ್ನದ ಸಮ್ಮೇಳನ ನಡೆಯುತ್ತಿರುವುದೆ ಅತ್ಯಂತ ಸಂತೋಷದ ಸಂಗತಿ.
ಆದರೆ ಈನಿಟ್ಟಿನಲ್ಲಿ ನಡೆದ ವಾದ ವಿವಾದಗಳು ನಿಜಕ್ಕೂ ಖೇದಕರ. ಮೊದಲಿಗೆ ಉಧ್ಘಾಟಕರ ಅಯ್ಕೆಯ ವಿವಾದ ನಂತರ ಸಮ್ಮೇಳನದ ಚಿನ್ಹೆಯ ವಿವಾದ... ಕೊನೆಗೆ ಆಹ್ವಾನದ ವಿವಾದ ..... ನಿಜಕ್ಕೂ ಈ ವಿವಾದಗಳನ್ನು ಹುಟ್ಟುಹಾಕುವ ಅಗತ್ಯವಿತ್ತೆ .... ವಿಶ್ವ ಕನ್ನಡ ಸಮ್ಮೇಳನವೆಂದರೆ ಕನ್ನಡಿಗರು ಹಾಗು ಕರ್ಣಾಟಕದಲ್ಲೇ ಇರುವವರಿಗೆ ಇದು ತಮ್ಮ ಮನೆಯ ಕಾರ್ಯಕ್ರಮವಿದ್ದಂತೆ .... ನಮ್ಮ ಮನೆಯ ಸಮಾರಂಭಕ್ಕೆ ನವೇ ಆಹ್ವನ ಬಯಸುವುದು ಉಚಿತವಲ್ಲ ಎಂಬುದು ನನ್ನ ಭಾವನೆ .... ಪ್ರಸ್ತುತ ನಡೆಯುತ್ತಿರುವೆ ಸಮ್ಮೇಳನದ ಪ್ರಭಾವದಿಂಲಾದರೂ ಎಲ್ಲ ಕನ್ನಡಿಗರು ಒಂದಾಗಿ ಕನ್ನಡ ನಾಡು ಹಾಗು ನುಡಿಯ ಉನ್ನತಿಗಾಗಿ ಶ್ರಮಿಸುವ ಒಗ್ಗಟ್ಟನ್ನು ತಾಯಿ ಭುವನೇಶ್ವರಿ ದಯಪಾಲಿಸಲಿ ಎಂದು ಆಶಿಸುವ,
ಜೋಕುಮಾರಮಾರ್ಚ್ ೧೨, ೨೦೧೧ · ೧೫ ವರ್ಷಗಳ ಹಿಂದೆ
ಕಾಡೇಶ್ ಅವರ ಕಡಿಕೂ ನೀವು ಸಂಪದ ದಾಗ ಬಂದಿದ್ದು ನೋಡಿ ಖುಶಿ ಆತು, ಅದರಲ್ಲೂ ನೀವು ಇಡೀ ಬೆಳಗಾಂವಿ ಜನರ ಪರವಾಗಿ ಆಹ್ವಾನ ಪತ್ರಿಕೆ ಕೊಟ್ಟು ಕನ್ನಡಿಗರಿಗೆ ಬೆಳಗಾಂವಿಯ ಕುಂದಾ ರುಚಿ ತೋರಿಸಿಬಿಟ್ರಿ! ಶಬ್ಬಾಶ!!. ಇವತ್ತಿನ ಕಾರ್ಯಕ್ರಮಾ ನೋಡಾಕ ಜನ ಮರಾಟಿ - ಕನ್ನಡಾ ಎಂಬ ಭೇದ - ಭಾವ ಮರೆತು ಜಾತ್ರಿಯಂಗ ಕೂಡಿತ್ತು, ನನಗ ಗೊತ್ತಿದ್ಧಂಗ ಇಷ್ಟ ಜನ ಬೆಳಗಾವ್ಯಾಗ ಸೇರಿದ್ದು ಕಾಂಗ್ರೆಸ್ಸಿನ ಮೊದಲ ಅಧಿವೇಶನ ಆದಾಗ ಮಾತ್ರ ಅಂತ.
Kadasiddeshwar Karaguppiಮಾರ್ಚ್ ೧೬, ೨೦೧೧ · ೧೫ ವರ್ಷಗಳ ಹಿಂದೆ
ಜೋಕುಮಾರ್ ಅವರ, ನೀವು ಬೆಳಗಾವ್ಯಾವ್ರ? ನಿಮ್ಮ ಕಮೆಂಟ್ ನೋಡಿ ಭಾಳ ಖುಶಿ ಆತ್ ನೋಡ್ರಿ.
ಲೇಖನಗಳು, ಪುಸ್ತಕಗಳು ಅವುಗಳ ಮೂಲ ಭಾಷೆಯಲ್ಲೇ ಇರುತ್ತವೆ. ಪುಟದ ಮೇಲಿನ ಕನ್ನಡ | English ಬಟನ್ನಿಂದ ಯಾವಾಗ ಬೇಕಾದರೂ ಬದಲಿಸಬಹುದು.Articles and books stay in their original language. Change this any time with the ಕನ್ನಡ | English switch at the top of the page.
ಪ್ರತಿಕ್ರಿಯೆ (3)