ಹಕ್ಕಿಗಳ ಹಾಡು.
ಕೇಳದೆ ನಿಮಗೆ, ಹಕ್ಕಿಗಳ ಚಿಲಿ ಪಿಲಿ,
ದೂರದಲ್ಲಿ, ಕಾನನದಲ್ಲಿ, ಹಾಡು ಹೇಳುತಿವೆ,
ನಾವು ಹಾರುವೆವು, ಹಾರುತ ಹಾಡುವೆವು,
ಹಾಡುತ ನಲಿಯುವೆವು, ಎಂದೆಂದೂ
ನಮ್ಮ ನಿತ್ಯದಲ್ಲಿ, ಹಾರುವ ತವಕದಲಿ,
ಹುಡುಕುವೆವು ನಮ್ಮ ಬಾಳ ಬುತ್ತಿಯನು
ಹುಡುಕುತ ಬುತ್ತಿಯ, ಲೆಕ್ಕಿಸದೆ ಸುಡುವ ನೆತ್ತಿಯ
ಕಟ್ಟುವೆವು ಮೆತ್ತನೆಯ ಗೂಡೊಂದನು
ಹುಡುಕುತ ಆಹಾರ, ನೀಡುವೆವು ಸಹಕಾರ
ಹಂಚದೆ ತಿನ್ನೆವು ನಾವುಗಳು ಎಂದೆಂದೂ
ಹಾರುತ ಹಾಡುತ, ಕಲಿಯುವೆವು ನಾವೆಂದು,
ಜೀವನದಲಿ ಏರಲು, ಇತಿ ಮಿತಿ ಇಲ್ಲೆಂದು,
ಕೇಳದೆ ನಿಮಗೆ, ಹಕ್ಕಿಗಳ ಚಿಲಿ ಪಿಲಿ,
ದೊರದಲ್ಲಿ ಕಾನನದಲ್ಲಿ, ಹಾಡು ಹೇಳುತಿವೆ,
ಹಾರುವೆವು ಸಾರುವೆವು ಅವಲಂಬಿಸೆವು ನಾವೆಂದೂ
ಪೋಷಿಸುವೆವು, ಪಾಲಿಸುವೆವು. ರೆಕ್ಕೆ ಬಲಿವವರೆಗೂ
ನಮ್ಮ ಸ್ವರದ ಇಂಪಿನಲ್ಲಿ, ಸಂಘಟನೆಯ ಗುಂಪಿನಲ್ಲಿ,
ನುಡಿಯುವೆವು, ನಡೆಯುವೆವು ಒಂದಾಗಿ ಬಾಳೆಂದು
ಮೇಲೆ ಮೇಲೆ ಹಾರುತ್ತಾ, ಮೇಲು ಕೀಳೆಂಬುವುದಿಲ್ಲ
ಒಂದಾಗಿ ಸಾಗುತ್ತಾ ಗುರಿಯ ತಲುಪುವೆವು ಎಲ್ಲಾ
ಅರಿಯೆವು, ನುಡಿಯೆವು. ಬಯಸೆವು ದ್ವೇಷವನೆಂದೊ,
ಚಿಲಿಪಿಲಿಯಲ್ಲಿ ನುಡಿಯುವೆವು ಸಂಘರ್ಷ ಬೇಡೆಂದು
ನಮ್ಮ ರೆಕ್ಕೆಯ ಸದ್ದಲ್ಲಿ, ವಿರೋಧವ ದೂಡುವೆವು,
ನಮ್ಮ ಕೊಕ್ಕಿನ ಮೂನಚಲ್ಲಿ, ಸೊಕ್ಕನ್ನು ಮುರಿಯುವೆವು.
ಸಾಗರವ ದಾಟುವೆವು ಹುಡುಕುವೆವು ನೆಲೆಯನ್ನು,
ಕಟ್ಟುವೆವು ಸುಂದರ ಗೂಡೂಂದನ್ನು, ಸಲಹುವೆವು ಕೊಸನ್ನು,
ನಿಲ್ಲೆವು, ವಿಶ್ರಮಿಸೆವು ಎಂದೂ ಗುರಿ ತಲುಪುವವರೆಗೂ
ತಲುಪಿದ ಗುರಿಯಲ್ಲಿ, ಸಂಸಾರ ಹೂಡುವೆವು,ಜೊತೆಯಲ್ಲೆ ಬಾಳುವೆವು
ತೂರುವೆವು ಸಂದುಗೊಂದುಗಳಲ್ಲಿ, ಸೇರುವೆವು ಬಂದು ಬಳಗದಲ್ಲಿ,
ದುಗುಡ ದುಮ್ಮಾನಗಳಿಲ್ಲ ಇಲ್ಲಿ, ಹಾಡುವೆವು ನಲಿದು ಕುಣಿದು
ನೋಡುವೆವು, ನುಡಿಯುವೆವು, ತೋರುವೆವು, ತವಕಿಸುವೆವು,
ಪ್ರಕ್ರತಿ ವಿಕೋಪಗಳ ಮುನ್ಸೂಚನೆಯನ್ನು, ಏರಿಳಿತಗಳನ್ನು
ಕೊಲ್ಲಬೇಡಿ ನಮ್ಮನ್ನು, ಹಿಡಿದು ಆನಂದಿಸದಿರಿ ಇನ್ನೆಂದೂ
ಬದುಕಿಸುವೆವು ನಿಮ್ಮನ್ನು, ಸ್ಮರಿಸಿ, ಸಹಿಸಿರಿ ನಮ್ಮನ್ನು,
ಬದುಕಲು ಬಿಡಿ ನಮ್ಮನ್ನು, ದಣಿಸದಿರಿ ನಮ್ಮನ್ನು,
ಬಣ್ಣ ಬಣ್ಣವ ಕಾಣಿರಿ, ಬಾಣ ಬಿರುಸುಗಳ ಬಿಸುಡಿರಿ
ನಾವಿಂದು ನುಡಿಯುವೆವು, , ನಮ್ಮನ್ನನುಸರಿಸಿರೆಂದು,
ಹರಸುವೆವು ನಿಮ್ಮ ಜೀವನ ನಮ್ಮಂತೆ ಸುಗಮವಾಗಿರಲೆಂದು
-ಮಧ್ವೇಶ್
ಪ್ರತಿಕ್ರಿಯೆ (3)