ಸರಸರ ಸರಸರ ಹರಿಯುತ ಸರಿಯುತ
ಭುಸುಭುಸು ಗುಟ್ಟುತ ಸದ್ದನು ಮಾಡುತ
ಬಿಲಬಿಲ ದಿಂದಲಿ ಇಣುಕುತ ನೋಡುತ
ಬಂದನು ನಾಗಣ್ಣ
ಕರಕರ ಗಸಗಸ ಹಲ್ಲನು ಕಡಿಯುತ
ಮುಷ್ಠಿಯ ಉಜ್ಜುತ ಕೈಯನು ಮಸೆಯುತ
ಪಿಳಿಪಿಳಿ ಕಣ್ಣನು ಬಿಡುತಾ ನೋಡಿದ
ಮರದಲಿ ಮಂಗಣ್ಣ
ಚಂಗನೆ ಎಗರಿ ಕೀರ್ ಕೀರ್ ಚೀರಿ
ತಕತಕ ಕುಣಿಯುತ ನಿಂದನು ಮಂಗಣ್ಣ
ಸರ್ರನೆ ತಿರುಗಿ ಮೇಲಕ್ಕೆ ಎಗರಿ
ಅಕ್ಕ ಪಕ್ಕ ಆಡುತ ಬೆದರಿದ ನಾಗಣ್ಣ
ಎತ್ತಿದ ಹೆಡೆಯನು ಪಟ್ಟನೆ ಹೊಡೆಯುತ
ಝಳಪಿಸಿ ನಿಂತನು ಭುಸ್ ಭುಸ್ ನಾಗಣ್ಣ
ಚಾಚಿದ ಕಾಲನು ಸಟ್ಟನೆ ಎಳೆಯುತ
ಅಣಕಿಸಿ ನಿಂತನು ಗೇರ್ ಗೇರ್ ಮಂಗಣ್ಣ
ತಟ್ಟನೆ ಚಾಚುತ ಗಟ್ಟಿಲಿ ಹಿಡಿದನು
ನಾಗನ ಹೆಡೆಯನು ಕೈಯಲಿ ಮಂಗಣ್ಣ
ಗಿರಗಿರ ಸುತ್ತುತ ಪರ ಪರ ಸರಿಸುತ
ಮಂಗನ ಕೈಯನು ಹೆಣದನು ನಾಗಣ್ಣ
ಹೆಡೆಯನು ಹಿಡಿದಿಹ ಮಂಗಣ್ಣ
ಕೈಯನು ಹೆಣೆದಿಹ ನಾಗಣ್ಣ
ಅಂತೆಯೆ ಆಸೆಯು ನಾಗನ ಹೆಡೆಯದು
ಹಿಡಿದಿಹ ಕೈಯದು ನಮ್ಮಯ ಮನಸದು
ಸಡಲಿಸೆ ಹಿಡಿತವ ವಿಷದಾ ನಂಟದು
ಹೆಣಿಗೆಯ ಬಿಗಿತವು ಕುಣಿಕೆಯ ಗಂಟದು
ನಾಗರ ಹೆಡೆಯದು ನೋಡಲು ಸುಂದರ
ಹಿಡಿಯಲು ಹೋದರೆ ನೋವಿನ ಹಂದರ.
ಪ್ರತಿಕ್ರಿಯೆ (6)