ಮೊನ್ನೆ ಅಣ್ಣಾ ಹಜಾರೆಯವರು ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಲೋಕಪಾಲ್ ಬಿಲ್ ಗಾಗಿ ಆಮರಣ ಉಪವಾಸದ ಸತ್ಯಾಗ್ರಹ ಕೈಗೊಂಡರು. ಇಡೀ ದೇಶ ಅವರ ಸಮರ್ಥನೆಗೆ ನಿಂತುಕೊಂಡಿತು. ದೇಶದಾದ್ಯಂತ ಅಣ್ಣಾ ಹಜಾರೆಯವರದ್ದೇ ಚರ್ಚೆ. ಆದರೆ ಭ್ರಷ್ಟಾಚಾರ ನಿರ್ಮೂಲನೆ ಎಂಬುದು ನಮ್ಮ ದೇಶದಲ್ಲಿ ಸಾಧ್ಯವೇ ಎಂಬ ಪ್ರಶ್ನೆ ನನ್ನನ್ನು ಮೊದಲಿಂದಲೂ ಕಾಡುತ್ತಿದೆ. ನನ್ನ ಸಿನಿಕತನವೆನ್ನಿ, ಆದರೆ ಯಾವುದೇ ಲೋಕಪಾಲ್ ಮಸೂದೆಯಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ ಎಂಬುದು ನನ್ನ ಖಚಿತ ಅನಿಸಿಕೆ. ಮೊನ್ನೆ ಶನಿವಾರ ಮುಂಬಯಿ ಮಿರರ್ ಪತ್ರಿಕೆಯಲ್ಲಿ ಖ್ಯಾತ ಅಂಕಣಕಾರ ಭಾವಿನ್ ಜಂಖಾರಿಯಾ ಕೂಡ, ’ಪೀಪಲ್ ಹೂ ಲೀವ್ ಇನ್ ಗ್ಲಾಸ್ ಹೌಸಸ್...’ ಎಂಬ ತಮ್ಮ ಲೇಖನದಲ್ಲಿ ಇದೇ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ಅನುಮತಿ ಪಡೆದು ಅವರ ಆ ಲೇಖನವನ್ನು ಅನುವಾದಿಸಿ ಇಲ್ಲಿ ಪ್ರಕಟಿಸುತ್ತಿದ್ದೇನೆ.
“ಗಾಜಿನ ಮನೆಯಲ್ಲಿರುವವರು...”
ಮುಂಬಯಿಯ ಕಿಂಗ್ಸ್ ಸರ್ಕಲ್ ಪ್ರದೇಶದಿಂದ ಡಾನ್ ಬಾಸ್ಕೋ ಶಾಲೆಗೆ ಹೋಗಲು ಒಂದು ಕಿರಿದಾದ ವನ್-ವೇ ಮಾರ್ಗವಿದೆ. ಪ್ರತಿ ದಿನ ಅಲ್ಲೇ ಇರುವ ಖಾಲ್ಸಾ ಕಾಲೇಜಿನ ಮಕ್ಕಳು ಆ ಮಾರ್ಗದಲ್ಲಿ ವನ್-ವೇ ಮಾರ್ಗದ ನಿಯಮಗಳ ಪರಿವೆಯೇ ಮಾಡದೇ, ತಮ್ಮ ಮೋಬೈಕುಗಳಲ್ಲಿ ಅಡ್ಡಾಡುತ್ತ ಇರುತ್ತಾರೆ.
ಕಳೆದ ವಾರ ನನ್ನ ಓರ್ವ ವೈದ್ಯ ಮಿತ್ರರನ್ನು ಭೇಟಿಯಾಗಲು ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ಬಂದರು. ಆ ವ್ಯಕ್ತಿಗೆ ಮತ್ತೊಮ್ಮೆ ಮೊಣಕಾಲಿನ ಆಪರೇಶನ್ ಮಾಡಿಸಿಕೊಳ್ಳಲಿಕ್ಕಿತ್ತು. ಈ ವ್ಯಕ್ತಿಯು ತನ್ನ ಮೆಡಿಕಲ್ ಹಿಸ್ಟರಿಯನ್ನು ಇನ್ಶೂರನ್ಸ್ ಕಂಪನಿಯಿಂದ ಬಚ್ಚಿಟ್ಟಿದ್ದರಂತೆ ಹಾಗೂ ಆ ವೈದ್ಯರೂ ಕೂಡ ತಮ್ಮ ಮೆಡಿಕಲ್ ಶೀಟಿನಲ್ಲಿ ಆ ಬಗ್ಗೆ ಉಲ್ಲೇಖಿಸಬಾರದು ಎಂದು ಕೋರಿಕೊಂಡರಂತೆ. ಹಾಗೆ ಮಾಡಲು ಸಾಧ್ಯವಿಲ್ಲ ಎಂದು ನನ್ನ ಗೆಳೆಯ ಹೇಳಿದಾಗ ’ನಾನು ಬೇರೊಬ್ಬ ವೈದ್ಯರ ಬಳಿ ಹೋಗುತ್ತೇನೆ’ ಎಂಬ ಸಭ್ಯ (?) ಬೆದರಿಕೆಯನ್ನೊಡ್ಡಿದರಂತೆ ಆ ವ್ಯಕ್ತಿ.
ಒಂದೆರಡು ತಿಂಗಳ ಹಿಂದೆ ನನ್ನ ಗೆಳೆಯನೊಬ್ಬನ ಮಗ, ಒಂದು ಹೊಸತಾಗಿ ಬಿಡುಗಡೆಯಾದ ಹಿಂದಿ ಚಲನಚಿತ್ರದ ಪೈರೇಟೆಡ್ ಪ್ರತಿಯ ಡಿವಿಡಿಗಳನ್ನು ತಯಾರಿಸಿ, ಆತನ ಹುಟ್ಟುಹಬ್ಬದಂದು ಅತಿಥಿಗಳಿಗೆ ’ರಿಟರ್ನ್ ಗಿಫ್ಟ್’ ಆಗಿ ನೀಡುತ್ತಿದ್ದ. ಹೀಗೆ ಮಾಡುವುದು ತಪ್ಪು ಎಂದು ನಾನು ಅವನ ತಂದೆಗೆ ಹೇಳಿದಾಗ, ಆತ ನನ್ನನ್ನೊಮ್ಮೆ ಮೇಲಿಂದ ಕೆಳಗಿನವರೆಗೆ ’ಅಯ್ಯೋ ಮೂರ್ಖ’ ಎಂದುಕೊಳ್ಳುತ್ತ ನೋಡಿದರು.
ಇಂಥವರಲ್ಲಿ ಬಹುತೇಕ ಜನರು, ಅಣ್ಣಾ ಹಜಾರೆ ಉಪವಾಸಕ್ಕೆ ಕುಳಿತಾಗ ಎರ್ರಾಬಿರ್ರಿ ಎಸ್.ಎಮ್.ಎಸ್ ಕಳಿಸಿದವರೇ, ಫೇಸ್ ಬುಕ್ಕಿನಲ್ಲಿ ಕಾಸ್ ಮೆಸೇಜುಗಳನ್ನು ಕಳಿಸಿದವರೇ.
ಅಣ್ಣಾ ಹಜಾರೆ ಮಾಡಿದ ಸತ್ಕಾರ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸಬೇಕಾದದ್ದೇ. ಅದ್ಭುತ ಟೈಮಿಂಗ್ ಅವರದು. ಅಷ್ಟೇ ಅಲ್ಲ, ಸಮಾಜ ಸೇವೆಯನ್ನೇ ತಮ್ಮ ಕರಿಯರ್ ಆಗಿಸಿದ ಎಷ್ಟೋ ಜನರು ಕೂಡ ಕೈಗೆ ಸಿಕ್ಕಿದ ಈ ಅವಕಾಶವನ್ನು ಬಿಡದೇ ತಾವೂ ಈ ಕ್ರಾಂತಿಯಲ್ಲಿ ಧುಮುಕಿದರು, ಅಣ್ಣಾ ಹಜಾರೆಗೆ ಬೆಂಬಲ ನೀಡಿದರು, ಭಾಷಣಗಳ ಮೇಲೆ ಭಾಷಣದ ಸುರಿಮಳೆ ಆಯ್ತು. ಎಲ್ಲವೂ ಚೆನ್ನಾಗಿಯೇ ನಡೆಯಿತು ಅನ್ನಿ.
ಆದ್ರೆ ನಾನು ಮಾತ್ರ ಒಬ್ಬ ನಿಷ್ಪ್ರಯೋಜಕ ಸಿನಿಕ.
ಲೋಕಾಯುಕ್ತ ಪ್ರತಿನಿಧಿಗಳು ಸ್ವತಃ ಭ್ರಷ್ಟರಾಗಿರುವುದಿಲ್ಲ ಎಂಬುದನ್ನು ಹೇಗೆ ಖಚಿತಪಡಿಸುತ್ತೀರಿ?
ಇಂದು ಅಣ್ಣಾ ಹಜಾರೆಯವರಿಗೆ ಬೆಂಬಲ ನೀಡುತ್ತಿರುವ ಮಧ್ಯಮ ವರ್ಗೀಯ ಜನರಲ್ಲಿ 80% ಕ್ಕಿಂತ ಹೆಚ್ಚಿನ ಜನರು ಸ್ವತಃ ಯಾವುದೋ ಒಂದು ರೀತಿಯಲ್ಲಿ ಭ್ರಷ್ಟರಾಗಿರುವಾಗ, ಏನಾದರೂ ಬದಲಾಗಲು ಹೇಗೆ ಸಾಧ್ಯ? ಕಾಮನ್ ವೆಲ್ಥ್ ಕ್ರೀಡೆಗಳ ಹಗರಣ ಅಥವಾ 2ಜಿ ಹರಾಜು ಹಗರಣ ಅಕಸ್ಮಾತ್ತಾಗಿ ಬಂದು ಅಪ್ಪಳಿಸಿದ ಘಟನೆಗಳಂತೂ ಅಲ್ಲವಲ್ಲ. ಇಂಥ ಹಗರಣಗಳಲ್ಲಿ ಶಾಮೀಲಾಗಿರುವ ಜನರು ನಮ್ಮ ನಿಮ್ಮಂಥವರೇ ಸ್ವಾಮಿ. ಫಿಲ್ಮ ಪೈರಸಿ ಮಾಡುವ, ಹಳೆಯ ಶಸ್ತ್ರಕ್ರಿಯೆಯ ವಿಷಯವನ್ನು ಮುಚ್ಚಿಡುವ, ಆಗಾಗ ಟ್ರಾಫಿಕ್ ನಿಯಮಗಳನ್ನು ಮುರಿಯುವ ನಮ್ಮ ನಿಮ್ಮಂಥವರೇ.
ಇಂದು ಅಣ್ಣಾ ಹಜಾರೆಯವರನ್ನು ಬೆಂಬಲಿಸುವ ವಿದ್ಯಾರ್ಥಿಗಳಿಗೆ ಕೇಳಿ ನೋಡಿ, ಪರೀಕ್ಷೆಗಳ ಮೊದಲು ಪ್ರಶ್ನೆ ಪತ್ರಿಕೆ ಸಿಗುತ್ತಿದೆ ಎಂದರೆ ಇವರು ಬೇಕಾದಷ್ಟು ಹಣ ನೀಡಿ ಅವನ್ನು ಪಡೆದುಕೊಳ್ಳಲು ಪ್ರಯತ್ನಿಸುವುದಿಲ್ಲವೇ? ಯಾವ ಕಾಲೇಜು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತದೋ, ಅದನ್ನು ಬಿಟ್ಟು ಅಟೆಂಡನ್ಸ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಕಾಲೇಜನ್ನು ಇವರು ಆಯ್ದುಕೊಳ್ಳುವುದಿಲ್ಲವೇ?
ಇಂದು ಅಣ್ಣಾ ಹಜಾರೆಯವರನ್ನು ಬೆಂಬಲಿಸುತ್ತಿರುವ ಸೆಲೆಬ್ರಿಟಿಗಳು, ತಮ್ಮ ಸಂಭಾವನೆಯ ಒಂದು ಭಾಗವನ್ನು ಚೆಕ್ ಮೂಲಕ ಪಡೆದುಕೊಂಡು, ತೆರಿಗೆ ಉಳಿತಾಯ ಮಾಡಲು ಒಂದು ಭಾಗವನ್ನು ನಗದಿನಲ್ಲಿ ಪಡೆದುಕೊಳ್ಳುವುದಿಲ್ಲವೇ?
ಇಂದು ಅಣ್ಣಾ ಹಜಾರೆಯವ ಬಗ್ಗೆ ಮಾತಾಡುತ್ತಿರುವ ನಮ್ಮ ನಿಮ್ಮಂಥ ಮಧ್ಯಮವರ್ಗೀಯ, ಸಾಮಾನ್ಯ ಜನರು ಟ್ರಾಫಿಕ್ ನಿಯಮ ಮುರಿದು ಪೋಲೀಸಪ್ಪನ ಕೈಗೆ ಸಿಕ್ಕುಬಿದ್ದಾಗ ಐವತ್ತೋ ನೂರೋ ನೀಡಿ ಬಚಾವಾಗುವ ಮುನ್ನ ಒಂದು ಬಾರಿಯಾದರೂ ಭ್ರಷ್ಟಾಚಾರದ ಬಗ್ಗೆ ಯೋಚನೆ ಮಾಡುತ್ತಾರೋ?
ಹಿಂದಿಯಲ್ಲಿ ಒಂದು ನಾಣ್ಣುಡಿ ಇದೆ- ಪೆಹಲೆ ಅಪನೆ ಗಿರೆಬಾಂ ಮೆಂ ಝಾಂಕ್ ಕರ್ ದೇಖಿಯೆ...” (ಮೊದಲು ನಿಮ್ಮೊಳಗಿನ ಆತ್ಮಸಾಕ್ಷಿಯನ್ನು ಪ್ರಶ್ನಿಸಿ).
ಈ ಇಡೀ ಸರ್ಕಸ್ಸನ್ನು ನೋಡಿ ನಾನು ತಬ್ಬಿಬ್ಬಾಗಿದ್ದೇನೆ. ನಾವೇ ಸ್ವತಃ ಬದಲಾಗದವರೆಗೆ, ಭ್ರಷ್ಟಾಚಾರವನ್ನು ಹೇಗೆ ತಡೆಯಬಲ್ಲೆವು? ನಮ್ಮಲ್ಲಿ 80% ದಷ್ಟು ಜನರು, ಅಥವಾ ಅದಕ್ಕಿಂತ ಹೆಚ್ಚಿನ ಜನರು ಒಂದಲ್ಲ ಒಂದು ರೀತಿಯಿಂದ ಭ್ರಷ್ಟರೇ ಆಗಿರುವಾಗ, ನಮ್ಮ ನಡುವಿಂದಲೇ ಚುನಾಯಿತರಾಗಿ ಹೋಗುವ, ಅಧಿಕಾರದಲ್ಲಿರುವ ಜನರು ಅಕಸ್ಮಾತ್ತಾಗಿ ತಮ್ಮ ನಡವಳಿಕೆಯಲ್ಲಿ ಬದಲಾವಣೆಯನ್ನು ತರುತ್ತಾರೆ ಎಂದು ನಾವು ಅಂದುಕೊಳ್ಳುವುದು ಹೇಗೆ? ಒಬ್ಬ ಕಾನ್ಸಟೇಬಲ್ ಗೆ ನಾವು ನೂರು ರೂಪಾಯಿ ಕೊಡುವುದು ಸರಿ, ಇನ್ನೊಬ್ಬ ವ್ಯಕ್ತಿ ಒಬ್ಬ ರಾಜಕಾರಣಿಗೆ ಒಂದು ಸಾವಿರ ಕೋಟಿ ಕೊಟ್ಟರೆ ತಪ್ಪು ಹೇಗಾದೀತು? ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳನೇ, ಅಲ್ಲವೇ?
ಅದಲ್ಲದೇ ಈ ಲೋಕಪಾಲ, ಲೋಕಾಯುಕ್ತ ಮುಂತಾದವು, ನಮ್ಮ ಸ್ವಭಾವವನ್ನು ಹೇಗೆ ಬದಲಾಯಿಸಬಲ್ಲವು? ಇಂದು ತಮ್ಮ ಏರ್ ಕಂಡಿಶನ್ಡ್ ಮನೆಯಲ್ಲಿ, ಲ್ಯಾಪ್ ಟಾಪ್ ಎದುರಿಗೆ ಕುಳಿತು ತಮ್ಮ ಸೆಲ್ ಫೋನ್ ನಿಂದಲೋ ಅಥವಾ ಕಂಪ್ಯೂಟರ್ ಮುಖಾಂತರವೋ, ತಮ್ಮ ಅಡ್ರೆಸ್ ಬುಕ್ ನಲ್ಲಿರುವ ಎಲ್ಲರಿಗೂ ಒಂದೊಂದು ಮೆಸೇಜ್ ಕಳಿಸಿ ಬೀಸಾಡುವ ಜನರು ಎಂದಾದರೂ ತಮ್ಮ ಜೀವನಶೈಲಿಯನ್ನು ಬದಲಾಯಿಸುವ ವಚನ ನೀಡಬಲ್ಲರೇ? ಜೈಲಿಗೆ ಹೋದರೂ ಪರವಾಗಿಲ್ಲ, ತಪ್ಪು ಮಾಡಿದರೆ ಪೋಲೀಸನಿಗೆ ಲಂಚ ಕೊಡಲಾರೆ ಎಂದು ಹೇಳಬಲ್ಲರೇ?
ನನ್ನ ಬಳಿ ಉತ್ತರವಿಲ್ಲ. ಸರಳವಾದ ನೇರವಾದ ಉತ್ತರ ಬಹುಶಃ ಯಾರಲ್ಲೂ ಇಲ್ಲ.
ಆದರೆ ನನಗೊಂದು ಸಂಗತಿ ಗೊತ್ತಿದೆ. ಜಗತ್ತು ಬದಲಾಗಬೇಕಾದರೆ ಮೊದಲು ನಾವು ಬದಲಾಗಬೇಕು. ಅಲ್ಲಿಯವರೆಗೆ ಇನ್ನೊಬ್ಬರ ಮನೆಯ ಮೇಲೆ ಕಲ್ಲು ತೂರುವುದು ಬೇಡ.
ಮೂಲ ಲೇಖನ ಇಲ್ಲಿದೆ: http://tinyurl.com/3h4hw36
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಗುಮ್ಮನೆಲ್ಲಿಹ ತೋರಮ್ಮ!
ಹುಟ್ಟು ಹಬ್ಬದ ಹಿತಾಶಯಗಳು
ಮನ್ನಾ ಡೇ.. ಹ್ಯಾಪಿ ಬರ್ಥ್ ಡೆ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (7)