ದಾರಿ




ಲಾಗಾಯ್ತಿನಿಂದಲೂ ಇದು ದಾರಿ
ಆಮೇಲಾಯ್ತು ಇದು ಹೆದ್ದಾರಿ
ಇದೀಗ ಘೋಷಿಸಲಾಯ್ತು 
ಇದು ರಾಷ್ಟ್ರೀಯ ಹೆದ್ದಾರಿ


ನಮ್ಮ ಹುಡುಗಾಟಿಕೆಯ ಕಾಲದಲಿ
ಈ ರಸ್ತೆಗೆ ನಮ್ಮ ನೇತಾರನ ಹೆಸರಿರಿಸಿ
ಆ ಕೊನೆಯಲಿ ಅವನದೇ ಪುತ್ಥಳಿಯಿರಿಸಿ
ನಾವು ಕುಣಿದು ಕುಪ್ಪಳಿಸಿದ ದಾರಿ


ಇಕ್ಕೆಲಗಳಲಿ ಹಳೆಯ ಸಾಲುಮರಗಳು
ಮತ್ತೊಂದಿಷ್ಟು ನಮ್ಮ ವನಮಹೋತ್ಸವದ 
ಗಿಡಗಳು ಹಸಿರು ತೇರುಗಳಾಗಿ
ತಂಪು ನೀಡಿದ ದಾರಿ


ಪಲ್ಲಕ್ಕಿ ತೇರುಗಳು, ಭಜನೆ ಬಾಜಭಜಂತ್ರಿಗಳು
ಮರಗಾಲು, ಹುಲಿವೇಷಗಳು
ಚಳುವಳಿ, ಪ್ರತಿಭಟನೆಗಳು
ಕಲಾಮೇಳಗಳು ಸಾಗಿಬಂದ ದಾರಿ


ಪಶ್ಚಿಮದ ಬಂದರು ನಗರಕೆ
ಪೂರ್ವದ ಸುಂದರ ನಗರಿಯ
ಈ ದಾರಿಯಿಂದಲೇ ಬೆಸೆಯುವರಂತೆ
ಪ್ರಗತಿಯ ಪಥವನು ರಚಿಸುವರಂತೆ


ಹಾಂ ! ಸಿಡಿಲೊಂದು ಬಂದೆರಗಿತು
ರಸ್ತೆಯಗಲೀಕರಿಸಲಾಗುವುದೆಂದು
ಸಾಲುಮರಗಳ ಕಡಿಯುವರೆಂದು
ಅಂಗಡಿ ಮುಂಗಟ್ಟು ಪುಡಿಗಟ್ಟುವರೆಂದು


ಬಂದೇ ಬಂದರು ಅಭಿವೃದ್ಧಿಯ ಹರಿಕಾರರು
ಮೇಲಿನವರ ಆಣತಿಯ ಶಿರಸಾವಹಿಸುವವರು
ಮರಗಿಡಗಳ ಶಿರಶ್ಚೇದನ ಮಾಡುವರು
ಹಕ್ಕಿಪಿಕ್ಕೆಗಳ ಚಲ್ಲಾಪಿಲ್ಲಿಯಾಗಿಸುವರು


ನಾವು ಹಳೆಯ ಗೆಳೆಯರು ಸಾಗುತ್ತಿದ್ದೇವೆ
ಮುಸ್ಸಂಜೆಯ ವಿಹಾರಕೆ ಇದೇ ದಾರಿಯಲಿ
ಹಲವು ಲೋಖಾಭಿರಾಮಗಳ ಪ್ರಸ್ಥಾಪದಲಿ
ರಸ್ತೆಯ ಬಗ್ಗೆ ಮಾತು ತೇಲಿಸುತಲಿ


ಕೆಲವರು ಹೇಳುವರು ಹೀಗೇ ಇರಲೆಂದು
ಹಲವರೆನ್ನುವರು ಬದಲಾಗಲೆಂದು
ವಾದ ವಿವಾದ, ಪ್ರತಿಭಟನೆ ಪ್ರತಿರೋಧ
ಕೊನೆಗೊಮ್ಮೆ ಎಲ್ಲ ಸ್ಥಬ್ದ


ಬೇಕಿತ್ತೆ ನಮಗೀ ಅಗಲೀಕರಣ
ಯೋಚಿಸುವಾಗಲೇ ಕಿವಿಯ ತಲುಪಿತೊಂದು ರಿಂಗಣ
ಅದೋ ಬರುತಿದೆ ಡೈನೋಸಾರಸ್ ಯಂತ್ರ
ಸಾರಿ ಹೇಳುತಿದೆ ರಸ್ತೆಯಗಲೀಕರಣದ ಮಂತ್ರ


***