ಗೆಳತಿ ನಿನ್ನಲ್ಲಿಂದು ಕಳಳಕಳಿಯ ಕೋರಿಕೆಯು 
ಬಳಿ ನಿಂತು ತಿಳಿ ಹೇಳು, ತಿಳಿಯದೇನೂ ನನಗೆ |
ಬಿಳಿಯ ಹಾಳೆಯ ಮನವ ಗೆಳೆಯನಾ ಬಳಿ ಬಿಟ್ಟೆ
ಬಳಿದ ಬಣ್ಣವನಿಂದು ಅಳಿಸಲಾರದೆ ಹೋದೆ ||
 
ಬಳಕೆಯದು ಹೆಚ್ಚಾದ ಬಳಿಕ ಕಂಡಿಹ ಭಾವ
ಮುಳುಗಿಯೆ ಬಿಡುವೆನೊ ಹಳಹಳಿಸಿದೆ |
ಪ್ರೀತಿಯೋ ಸುಳಿವಿಲ್ಲ ಪ್ರೇಮವೋ ತಿಳಿದಿಲ್ಲ
ಪ್ರಣಯವದು ಮುಂದಾಗಿ ತಳಮಳಿಸಿದೆ ||
 
ಕಡು ಕೆಂಪು ಕಡು ನೀಲಿ ಕಡು ಹಸಿರು ಬಳಿ ಸೇರಿ
ಕಲಸಿಕೊಂಡಿದೆ ಭಾವ ಬಣ್ಣಗಳೆಂತೆಯೆ |
ಬೆಳಗುಗಳು ಹಳತಾಯ್ತು ಕಳೆದು ಹೋದವು ನಿಶೆಯು
ಇಳಿಯಲಾರದೆ ಕುಳಿತೆ ಕಲ್ಲಿನಂತೆಯೆ ||
 
ಗೆಳತಿ ನೀ ಹೇಳೆನಗೆ ಬೆಳೆದಿರುವ ಈ ಭಾವ
ಸೆಳೆತ ಪ್ರೀತಿಯದೆ ಅದು ಇರಲುಂಟು ಹೌದೆ?
ಸುಳಿಯಿದು ಕಾಮದ್ದು ಛಳಿಯಿದು ಮೋಹದ್ದು
ಪಳೆಯುಳಿಕೆ ಆಗದೆ ಕೈ ಹಿಡಿವುದೆ?
 
ಬಲು ಚೆನ್ನ ಈ ಪ್ರೀತಿ ಕೆಲ ಕಾಲ ಭಯ ಭೀತಿ
ಬಲಿತ ಪ್ರೇಮದ ಭಾವ ಆತಂಕಮಯ |
ಕಲಕುವ ಮನವಿಹುದು ನಲುಗುವ ತನುವಿಹುದು
ಕಲಿತ ಮಾತುಗಳೆಲ್ಲ ಅಯೋಮಯ ||
 
ಗೆಳೆಯ ನಿಂತಿಹನಲ್ಲಿ ಹಳದಿ ಧೋತರದಲ್ಲಿ
ಹಳದಿಯನೆ ತೊಟ್ಟು ಬಾರೆಂದಿಹನು |
ತಾಳಿಯನೆ ಕಟ್ಟುವೆನು ಬಾಳುವೆಯ ಜೊತೆಯಲ್ಲಿ
ಮಳೆ ಗಾಳಿ ಚಳಿ ಇಲ್ಲ ನಿನಗೆ ಎಂದಿಹನು ||
 
ಬಿಳಲು ಬಿಟ್ಟಿದೆ ಪ್ರೀತಿ ಏಳು ಬೀಳಿನ ಭೀತಿ
ಕಳೆದು ಮುಂದಿಡಲೆ ಹೆಜ್ಜೆ ಅವನ ಎಡೆಗೆ?
ಕಲಿಕೆಯದು ಬಲು ಚಂದ ಚೆಲುವುತನ ಅವನಿಂದ
ಸೆಳೆತವಿದು ಇರುವುದೇ ಕಡೆಯವರೆಗೆ?
 
ಬಿಳಿ ಮೋಡ ಕಪ್ಪಾಗಿ ತಿಳಿನೀರ ಸುರಿವಂತೆ
ಕಳಿವುದೆ ನಮ್ಮ ಫಲ ಜೀವನ?
ಬಿಳಿ ರಾತ್ರಿ ಕರಿ ಹಗಲು ಇಳೆಯ ನೋಡುವ ತನಕ
ನಲಿವುದೇ ನಮ್ಮ ಅನುಭಾವನ?