ಇನಿಯ ಕಟ್ಟಿದ ಹೊಸ ತಾಳಿಯನೆ ನೋಡುತ್ತ
ತುಸು ನಾಚಿಕೆಯಿಂದ ಮುದುಡುತ್ತ, ಆನಂದದಿಂದ ಬೀಗುತ್ತ
ಕುಳಿತಿದ್ದೆ.
ದೂರದಲ್ಲಿ ಅಪ್ಪ, ಅಮ್ಮ - ಕಣ್ಣಂಚಿನಲ್ಲಿ ನೀರಿಡುತ್ತ
ನಿಂತಿದ್ದರು.
ನನ್ನ ಕಂಗಳು ಒದ್ದೆ, ಅಗಲಿಕೆಗಲ್ಲ... ಕೋಪಕ್ಕೆ,
ನನ್ನ ಆಯ್ಕೆಗೆ ವಿರೋಧವಾಡಿದ್ದಕ್ಕೆ!
ಕುಳಿತಲ್ಲಿಂದ ಕದಲದೇ ಕಣ್ಣೀರಿನ ಮಂಜಿನಲ್ಲೇ
ನೆಲ ನೋಡುತ್ತ ಕುಳಿತೆ.
ಇನಿಯನೆಂದ, ಅಗೋ ನೋಡು, ನಿನ್ನ ಹೆತ್ತವರು,
ಅವರ ಕಣ್ಣೀರು ನಿನ್ನ ಮದುವೆಗಲ್ಲ,
ನಿನ್ನ ಕೋಪಕ್ಕೆ. ಅಲ್ಲಗಳೆಯದಿರು; ಅವರಿಂದಲೇ ನೀನು.
ಬುಸುಗುಡುವ ಹಾವಿನಂತೆ ಉಸುರಿದೆ.
ನನಗೇನು ಮಾಡಿದ್ದಾರೆ ಅವರು? ಅವರಿಂದ ನಾನಲ್ಲ.
ನನಗೆ ನನ್ನದೇ ಗುಣಗಳಿವೆ.
ಇನಿಯನೆಂದ. ನೀನು ಮಾಡಿದ ಕೋಡುಬಳೆ ರುಚಿ ನಿಮ್ಮ ಅಮ್ಮನ ಪಾಠ.
ನೀನು ಹಾಡಿದ ರೀತಿ, ನಿಮ್ಮ ತಂದೆಯ ಪಾಠ.
ನಿನ್ನ ಚೆಲುವುತನ, ಚೊಕ್ಕತನ, ಅಪ್ಪ, ಅಮ್ಮನ ಮೇಳೈಸಿದ ಗುಣ.
ನಿನ್ನ ವಿದ್ಯೆ, ಪ್ರೌಢಿಮೆ, ಅವರ ಹೈಸ್ಕೂಲ ಪದವಿ.
ನಿನ್ನ ನಗು, ಕರುಣೆ, ಬುದ್ಧಿವಂತಿಕೆ ಎಲ್ಲ ಅವರ ಕೊಡುಗೆ.
ಅವರದಲ್ಲದ್ದು, ಕೇವಲ ನಿನ್ನದೇ ಅಗಿರುವುದು ನಿನ್ನ ಕೋಪ, ಹಠ, ಕಲ್ಲು ಮನಸು
ಗರ್ವ, ಅಹಂ, ಮೋಸ, ಬಿರುಸುನುಡಿ, ದೊಡ್ಡಸ್ತಿಕೆ...
ಇನ್ನಾದರೂ ಬಿಟ್ಟು ಮುಂದೆ ನಡೆ.
ಅವರ ಪ್ರೀತಿಯನು ಅವರಿಗುಣಿಸು, ಅಶೀರ್ವದಿಸುವರು ಮನದುಂಬಿ.
ಹಾರೈಕೆಯೇ ನಮಗೆ ಶ್ರೀರಕ್ಷೆ.
ಮೆಲ್ಲನೆದ್ದು ನಡೆದೆ, ನನ್ನದೆಲ್ಲವನ್ನೂ ಬಿಟ್ಟು...
ಅವರೆಡೆಗೆ, ಅವರ ಪ್ರೀತಿಯೊಂದಿಗೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!