ಒಂದೇ ರಾಗದಿ ಸುರಿವ
ಮಳೆಯ ಸೊಬಗನು
ಸವಿಯುತ್ತಿದ್ದೆ ಕಿಟಕಿಯ
ಸರಳುಗಳ ಎಡೆಯಿಂದ
ಹೊರ ಚಾಚಿದೆ ಕೈಗಳನು
ತಟ-ಪಟನೆ ಮಳೆ ಹನಿಗಳು
'ಕಚಗುಳಿ' ಇಟ್ಟವು ಕೈಗಳಿಗೆ
ನೆನಪಾಯ್ತು ಬಾಲ್ಯದ ಆ ದಿನಗಳು
ಮುಂಬಾಗಿಲ ಮುಚ್ಚಿದೆ ಮೆಲ್ಲಗೆ. . .
ಹಿಂದಿನ ಬಾಗಿಲಲಿ ಅಂಗಳಕ್ಕಿಳಿದೆ
ಮಳೆ ಹನಿಗಳು ತನುವ ತೋಯಿಸುತಿರೆ
ಮೈ ಮನದ ತುಂಬಾ. . .ಹೊಸ ಹರುಷ !
ಕೆಲಸ, ಕಾರ್ಯಗಳ ನಾ ಮರೆತೆ
ಗಡಿಯಾರ ಗಂಟೆಗಳ ಗಮನಿಸದೆ. . .
ಚಿಂತೆಗಳೇ ಇರದ ಮುಗ್ದ ಮನದ
ಪುಟಾಣಿ ಹುಡುಗಿಯಂತಾದೆ. . !
ಕುಕ್ಕರುಗಾಲಲಿ ಕುಳಿತು ;
ಹರಿದು ಹೋಗುವ ನೀರಲಿ
ಎಲೆಗಳ ತೇಲಿ ಬಿಟ್ಟೆ
ಒಂದೊಂದಾಗಿ. . .ಬಲು ಖುಷಿಯಲಿ. . .
ಕಿಲ,ಕಿಲ ನಗುವ ಸದ್ದಿಗೆ
ನಾ ಬಂದೆ ವಾಸ್ತವಕೆ !
ನಗುತ್ತಿದ್ದರು ನನ್ನೆರಡು ಮಕ್ಕಳು
'ಅಮ್ಮ'ನ ಹೊಸ ಅವತಾರಕೆ . . !
ಪ್ರತಿಕ್ರಿಯೆ (4)