ಚಿನ್ನದ ಸಂಕೋಲೆ
ಹೆಣ್ಣನ್ನು ನಾವು ಬಹಳ ಗೌರವಿಸುತ್ತೇವೆ
' ಯತ್ರ ನಾರ್ಯಸ್ತು ಪೂಜ್ಯಂತೆ
ರಮಂತೆ ತತ್ರ ದೇವತಾ' ಕ್ಷಮಯಾ ಧರಿತ್ರಿ
ಭೂಮಿ ತೂಕದ ಹೆಣ್ಣು ಎಂದೆಲ್ಲ
ಹೆಣ್ಣನ್ನು ಹಾಡಿ ಹೊಗಳಿದ ಆರ್ಯೋಕ್ತಿಗಳ ನಾಡು
ಭರತಖಂಡವೀ ಗೂಡು ಪುಣ್ಯವಂತರ ಬೀಡು
ಹೆಣ್ಣಿಗೆ ನಾವೆಲ್ಲ ಎಷ್ಟು ಗೌರವ ಕೊಟ್ಟಿದ್ದೇವೆ
ಪುಣ್ಯ ಸ್ಥಾನದಲಿರಿಸದಿದ್ದೇವೆ ? ಹೆಣ್ಣನು ಹೊಗಳುತ
ಪೂಜಿಸುವ ನಾಟಕವಾಡುತ ಅವಳ ಕೈಗಳಿಗೆ
' ಚಿನ್ನದ ಸಂಕೋಲೆ ' ತೊಡಿಸಿದ್ದೇವೆ
ಧರ್ಮ ಕರ್ಮದ ಬಲೆಯಲ್ಲಿ ಕಟ್ಟಿ ಹಾಕಿದ್ದೇವೆ
ರೇಶಿಮೆ ಎಳೆಗಳ ಸುಂದರ ಬಲೆ ಹೆಣೆದು
ಅದರಲ್ಲಿಯೇ ಸುತ್ತಿ ಅವಳ ಜಿವನ ಮುಗಿದು ಹೋಗುವ
' ಮಾಯಾ ಜಾಲ ' ಸೃಷ್ಟಿಸಿದ್ದೇವೆ ಅನಾದಿ ಕಾಲದಿಂದ
ಪುರಷ ಜಾತಿಯ ಅಹಂ ಏನೆಲ್ಲ ಮಾಡಿಸಿದೆ
ತ್ರೇತಾಯುಗದಲಿ ಸೀತೆಯನು ಕಾಡಿಗಟ್ಟಿದ್ದೇವೆ
ದ್ವಾಪರದಿ ದ್ರೌಪದಿಯ ಸೀರೆ ಸೆಳೆದಿದ್ದೇವೆ
ಗಾಂಧಾರಿಯ ಕಣ್ಣಿಗೆ ಬಟ್ಟೆ ಕಟ್ಟಿದ್ದೇವೆ
ತನ್ನದಲ್ಲದ ತಪ್ಪಿಗೆ ಅಹಲ್ಯೆಯನು ಕಲ್ಲಾಗಿಸಿದ್ದೇವೆ
ವಾಲಿ ಸುಗ್ರಿವರ ಬಲಾಬಲದಲಿ
ತಾರೆಯನು ಕಾಲ್ಷೆಂಡು ಮಾಡಿದ್ದೇವೆ
ದುಷ್ಯಂತನ ಮರೆವಿಗೆ ಶಕುಂತಲೆಯನು
ಅವಮಾನಿಸಿದ್ದೇವೆ ಪುರಾಣ ಇತಿಹಾಸಗಳುದ್ದಕೂ
ಶೋಷಿತ ಹೆಣ್ಣುಗಳ ವ್ಯಥೆಯ ಕಥೆ
ವರದಕ್ಷಿಣೆಯ ಆಶೆಗೆ ಹೆಣ್ಣುಗಳ ಕೊಲ್ಲುತ್ತೇವೆ
ಸುಡುತ್ತೇವೆ ನೇಣು ಹಾಕುತ್ತೇವೆ
ವಿಷ ಕುಡಿಸುತ್ತೇವೆ ಚಾರಿತ್ರ್ಯ ಶಂಕಿಸುತ್ತೇವೆ
ಸಹಗಮನ ಮಾಡಿಸಿದ್ದೇವೆ
ಹೆಣ್ಣೆಂದು ಅವಳನು ಅವಮಾನಿಸುತ್ತೇವೆ
ಎಲ್ಲ ನೈತಿಕ ಗುಣಗಳ ಭಾರ ಅವಳಿಗೆ ಹೊರಿಸಿ
ಬಂದಿಯಾಗಿರಿಸಿದ್ದೇವೆ ಇಂದಿಗೂ ಮುಗಿದಿಲ್ಲ
ಅವಳ ಶೋಷಣೆ ವ್ಯಥೆಯ ಕಥೆ
ಸ್ತ್ರೀ ಸ್ವಾತಂತ್ರದ ಮಾತುಗಳನಾಡುತ
ಸುಂದರ ಕನಸುಗಳ ಬಂದಿಗಳನಾಗಿಸುತ
ಕಾಮನ ಬಿಲ್ಲುಗಳ ಸೃಜಿಸುತ್ತ
ನಯ ನಾಜೂಕುಗಳ ಬಲೆ ಹೆಣೆಯುತ್ತ
ರಂಗು ರಂಗುಗಳ ಖೆಡ್ಡಾ ತೋಡುತ್ತ
ಬಲ;ಿ ಹಾಕುತ್ತಿದ್ದೇವೆ ' ಸ್ತ್ರೀ ಸಂಕುಲ '
ತ್ರೇತ ದ್ವಾಪರ ಕಲಿ ಯುಗ ಯಾವುದೇ ಇರಲಿ
ಮುಕ್ತಿಯಿಲ್ಲ ಹೆಣ್ಣಿಗೆ ' ಚಿನ್ನದ ಸಂಕೋಲೆ ' ಯಿಂದ
*****
ಪ್ರತಿಕ್ರಿಯೆ (2)