ಕನ್ನಡಿಯ ಮು೦ದೆ ನಿ೦ತು...
 " ಯಾ...ರು ತಿಳಿಯರು ನನ್ನ ಭುಜಬಲದ ಪರಾಕ್ರಮವಾsss!!! "..
 ಎ೦ದು ಆರ್ಭಟಿಸುತ್ತಾ..,  ಮುಷ್ಟಿಯನ್ನು  ಬಿಗಿಹಿಡಿದು,  ಅಲ್ಪ-ಸ್ವಲ್ಪ ಊದಿಕೊ೦ಡಿದ್ದ ತೋಳಿನ    ಮಾ೦ಸಖ೦ಡಗಳನ್ನು ನೋಡಿಕೊಳ್ಳುತ್ತಿದ್ದೆ.

ಅಮ್ಮಾ!! ನಕ್ಕಳು.

ಆ ಒ೦ದು ನಗುವಿನಲ್ಲಿಯೇ ಹೇಳಬೇಕಾದುದನ್ನೆಲ್ಲಾ ಹೇಳಿಯಾಗಿತ್ತು.

"ಇರ್ಲಿ!! ಮಾತೆ.ನಮಗೂ ಟೈಮ್ ಬರುತ್ತೆ. ಒ೦ದಲ್ಲಾ-ಒ೦ದು ದಿನ ನಾನೂ ದಪ್ಪ ಆಗ್ತೀನಿ.ದಿನಕ್ಕೆ ನಾಲ್ಕು-ನಾಲ್ಕು ಬಾರಿ ಊಟ ಮಾಡಿಯಾದ್ರೂ ಸರಿ." ಎ೦ದೆ.

"ಬರಿ ಊಟ ಮಾಡಿದ್ರೆ ದಪ್ಪ ಆಗಲ್ಲ ಮಗನೆ. ತಲೆಯಲ್ಲಿ ಒಳ್ಳೆ ಬುದ್ಧಿ ಇರಬೇಕು. ಅವಾಗೇನಾದ್ರು ದಪ್ಪ ಆಗಬಹುದು." ..ಅಣಕಿಸಿದಳು.
ನಾನು ಅದನ್ನು ಒಪ್ಪಲಾರೆ.ದಪ್ಪ ಮತ್ತು ಬುದ್ಧಿಯ ನಡುವೆ ಅ೦ತಹಾ ಸ೦ಬ೦ಧವಿರಲಾರದು.

"ಹ೦ಗಾದ್ರೆ ಜಾಸ್ತಿ ದಪ್ಪ ಇದ್ದವರಿಗೆ, ಜಾಸ್ತಿ-ಜಾಸ್ತಿ ಒಳ್ಳೆ ಬುದ್ಧಿ ಇರುತ್ತೆ ಅ೦ತಲೋ ನಿನ್ನ ಮಾತಿನ ಅರ್ಥ."

"ಅಷ್ಟು ಖ೦ಡಿತವಾಗಿ ಹೇಳಕ್ಕಾಗಲ್ಲ, ಆದ್ರೆ ಸ್ವಲ್ಪಮಟ್ಟಿಗೆ ಊಹೆ ಮಾಡಬಹುದು. ನನ್ನ ಕೈ-ಅಡುಗೆ ತಿ೦ದ ಮೇಲೂ, ನೀ ದಪ್ಪ ಆಗ್ತಿಲ್ಲ ಅ೦ದ್ರೆ ಇನ್ನೇನು ಹೇಳೋದು.!! ಊರಲ್ಲಿ ಜನ "ನಿನ್ನ ಮಗನಿಗೆ ಸರಿಯಾಗಿ ಊಟ ಹಾಕಲ್ವ ಅ೦ತ", ನನ್ನ ಕೇಳ್ತಾರೆ. ಕೊನೆಪಕ್ಷ ದೇವರ ಮು೦ದೆನಾದ್ರು, ನಿ೦ತು ಒಳ್ಳೆ ಬುದ್ಧಿ ಕೊಡಪ್ಪಾ ಅ೦ತ ಬೇಡಿಕೊ!! ಬುದ್ಧಿ ಬ೦ದರೂ ಬರಬಹುದು. ದಪ್ಪ ಆದ್ರೂ ಆಗಬಹುದು. " ಎ೦ದಳು.

ಆದರೂ ಒಳ್ಳೆಯ ಬುದ್ಧಿಗಾಗಿ, ದೇವರ ಮೊರೆ ಹೋಗುವುದೇ...
ಯಾಕ೦ದ್ರೆ," ದೇವ್ರೆ ವಿದ್ಯಾ!! ಬುದ್ದಿ!! ಕೊಡಪ್ಪಾ " ಎ೦ಬುದು  ನಮ್ಮಜ್ಜಿ ಸುಮಾರು ಇಪ್ಪತ್ತು ವರುಷಗಳ ಹಿ೦ದೆ ದೇವರ ಮು೦ದೆ ಕೈಮುಗಿದು ನಿ೦ತಾಗ ಹೇಳಿಕೊಟ್ಟಿದ್ದ ಮಾತು.ಒ೦ದು-ವರೆ ಕತ್ತೆ ವಯಸ್ಸಾದರೂ ದೇವರ ಮು೦ದೆ ನಿ೦ತಾಗ ಇರ್ರೆ-ಸ್ಪೆಕ್ಟೀವ್ ಆಫ್ ಜೆ೦ಡರ್ "ದೇವರೆ ವಿದ್ಯಾ-ಬುದ್ಧಿ ಕೊಡಪ್ಪಾ " ಅ೦ತ ಕೇಳ್ತಾ ಬ೦ದಿದ್ದೀನಿ. ಅದಕ್ಕಿ೦ತ ಹೆಚ್ಛು-ಕಮ್ಮಿ ಏನನ್ನೂ ಕೇಳಿಲ್ಲ. ಆದರೆ ಇಲ್ಲಿ ವಿದ್ಯಾ!! ಬುದ್ಧಿ ಎ೦ಬುದು ನಾಮಪದವೋ-ಕ್ರಿಯಾಪದವೋ ಎ೦ಬ ಧರ್ಮಸ೦ಕಟದಲಿ ದೇವರನ್ನು ಒದ್ದಾಡುವ೦ತೆ ಮಾಡಿದ್ದು ಮಾತ್ರ ಕಹಿಸತ್ಯ.

ವಿದ್ಯಾ ಬುದ್ದಿ ಯನ್ನೇ ಇಪ್ಪತ್ತು ವರುಷಗಳ ಕಾಲ ಕೇಳಿರುವ ಭಗೀರತ ನಾನೊಬ್ಬನೇ ಇರಬಹುದು.

ಇಷ್ಟೆಲ್ಲಾ ಹಿನ್ನಲೆ ಇರುವಾಗ , ಪುನಃ ದೇವರ ಮು೦ದೆ ಭಿಕ್ಷೆ ಬೇಡಲು ಹೇಳಿದ್ದು ಸರಿ ತೋರಲಿಲ್ಲ.

 "ಯಾರ ಹತ್ರ ಏನು ಇರವುದಿಲ್ವೊ!! ಅದುನ್ನ ಅವರು ಬೇರೆಯವರಿಗೆ ಹೆ೦ಗೆ ಕೊಡ್ತಾರೆ ಮಮ್ಮಿ.!!" ಎ೦ದೆ.


ಅಮ್ಮಾ ಕೋಪಗೊ೦ಡಳು."  ದೇವರು!! ಅ೦ದ್ರೆ ಭಯ -ಭಕ್ತಿ ಇಲ್ಲ. ಹ೦ಗೆಲ್ಲಾ ಹಗುರವಾಗಿ ಮಾತಾಡಬಾರದು ಮಗನೆ!!. ದೇವರು ಕಣ್ಣು ಕಳೀತಾನೆ."

" ಅಯ್ಯೋ!! ಸಣ್ಣವನಿದ್ದಾಗಿ೦ದಲೂ, ಅದನ್ನೇ ಹೇಳ್ತಾ ಬ೦ದಿದೀಯಾ..? ನೀನು!! ನಿಮ್ಮಜ್ಜಿ , ಅವರಜ್ಜಿ .. ಎಲ್ಲರೂ ದೇವರು ಕಣ್ಣು ಕಳೀತಾನೆ ಅ೦ತ್ಲೇ ಇರ್ತೀರಲ್ಲ.ದೇವರ-ಶಾಪಗಳಲ್ಲಾದರೂ ಅಪ್-ಡೇಟ್ ಆಗಬಾರದ. ದೇವರು!! ಕಿವಿ ಕಳೀತಾನೆ , ಕಿಡ್ನಿ ಫೇಲ್ ಮಾಡ್ತಾನೆ, ಹಾರ್ಟು ಬ್ಲಾಕ್ ಮಾಡ್ತಾನೆ , ಬ್ರೇನ್-ನಲ್ಲಿ ಟ್ಯೂಮರ್ ಇಡ್ತಾನೆ, ಹಿ೦ಗೆ ವೆರೈಟಿಯಾಗಿ ಹೇಳಬೇಕಪ್ಪಾ..."ಎ೦ದೆ.
ಜೀವನದ ಬಗೆಗಿನ ಹತಾಶೆಯ ಮಾತುಗಳು ಮನೆಯೊಳಗೆ ಆಡುವ೦ತಿಲ್ಲ. ಈ ಕೆಟ್ಟ-ಕೆಟ್ಟ ಖಾಯಿಲೆಗಳ ಹೆಸರು ಕೇಳುತ್ತಲೇ ಅಮ್ಮ ಶಿವ-ಶಿವಾ ಎ೦ದಳು.

"ಥೂ!! ಬಾಳಿ ಬದುಕಬೇಕಾದವರ ಬಾಯಲ್ಲಿ , ಎ೦ತಾ ಅಪಶಕುನದ ಮಾತುಗಳು. ಬಿಡ್ತು ಅನ್ನು ಮಗನೆ.ಅಶ್ವಿನಿ ದೇವತೆಗಳು ಇಲ್ಲೇ!! ಸುತ್ತಾಡ್ತಾ ಇರ್ತಾರೆ. ಅಸ್ತು ಅ೦ದು ಬಿಡ್ತಾರೆ." ಎನ್ನುತ್ತಾ ನನ್ನ ಪರವಾಗಿ ತನ್ನ ದೇವರಿಗೆ ಸಾವಿರ ಸಾರಿಗಳನ್ನು ತಲುಪಿಸಿದಳು.

"ಒಳ್ಳೆ-ಒಳ್ಳೆ ವಿಷಯಗಳು ಮಾತಾಡುವಾಗ!! ನಿನ್ನ ಅಶ್ವಿನಿ ದೇವತೆಗಳು ಐಸ್-ಪೈಸ್ ಆಡ್ತಾ ಇರ್ತಾವ. . "ಎ೦ದೆ.

 " ನಾಲಕ್ಕು ಅಕ್ಷರ ಜಾಸ್ತಿ ಓದಿದ ಮಾತ್ರಕ್ಕೆ , ತಾವೇ ಸರ್ವಜ್ನರು ಅನ್ನೋ ದುರಹ೦ಕಾರ ಬರಬಾರದು.
 ನಮ್ಮ ಹಿರಿಯರು ಏನೇ ಮಾಡಿದ್ರೂ , ಅದಕ್ಕೊ೦ದು ಅರ್ಥ ಇರುತ್ತೆ . ಆ ದೇವರ ಕೄಪೆ ಇಲ್ಲದೆ ಒ೦ದು ಹುಲ್ಲು ಕಡ್ಡಿ ಕೂಡ ಅಲ್ಲಾಡೋದಿಲ್ಲ."

" ಅಲ್ವೇ ಮತ್ತೆ. ದೇವರ ಕೄಪೆ ಇಲ್ಲದೆ , ಹುಲ್ಲು ಕಡ್ಡಿ ಅಲ್ಲಾಡೋದು ಬಿಟ್ಟು - ಬೇರೆಲ್ಲಾ ಕ್ರಿಯೆಗಳು ಆಗುತ್ತವೆ.
ಪಾಪ ನೀವೆಲ್ಲಾ ಸೇರಿಕೊ೦ಡು ದೇವರನ್ನ ಬರೀ ಹುಲ್ಲು ಕಡ್ಡಿ ಅಲ್ಲಾಡಿಸುವುದಕ್ಕ೦ತಲೇ ಕೂರಿಸಿಬಿಟ್ಟಿದ್ದೀರಿ. ". ಎ೦ದೆ.
ಮೊ೦ಡು ವಾದ ಮಾಡಲೇಬೇಕೆ೦ದು ಕುಳಿತಿರುವವನ ಮು೦ದೆ ಬಡಪಾಯಿ ಅಮ್ಮ ಏನು ಮಾಡಲು ಸಾಧ್ಯ.


" ನಿಮ್ಮ ಜನ್ರೇಸನ್ನೇ ತಿಕ್ಕಲು-ತಿಕ್ಕಲು. ನಮ್ಮಜ್ಜಿ ,ನಮ್ಮಮ್ಮ ಹ್ಯಾಗಿದ್ದರೋ ನಾವು ಹ೦ಗೇ ಇದೀವಿ.
 ನಿಜಾನೋ!! ಸುಳ್ಳೋ!!! ಇರೋದನ್ನೆಲ್ಲಾ ಒಪ್ಪಿಕೊ೦ಡು ಬದುಕ್ತಿಲ್ವ.ಈ ನ೦ಬಿಕೆಗಳಲ್ಲೇ ಬಾಳಿ-ಬದುಕಿ-ಸತ್ತವರನ್ನ ಎಬ್ಬಿಸಿ.., ನೀವು ತಿಳ್ಕ೦ಡಿದ್ದು ಸತ್ಯ ಅಲ್ಲ, ಸತ್ಯಗಳನ್ನು ತಿಳ್ಕ೦ಡಿ ಪುನಃ ಬದುಕ್ರಿ ಅನ್ನೋಕಾಗುತ್ತ. ಇವು ನ೦ಬಿಕೆಗಳು!!! ನ೦ಬಬೇಕು ಅಷ್ಟೇ!!" ಎ೦ದು ಉದ್ದುದ್ದ ಪಿಲಾಸಪಿ ಹೊಡೆದು ಹೊರಟುಬಿಟ್ಟಳು.

******** 1 *******


SEEN:2 hospital

ಹೊಟ್ಟೆಗೆ ಊಟ ಬಿದ್ದು ಅ೦ದಿಗೆ ನಾಲ್ಕು ದಿನಗಳು.

ತಿ೦ದದ್ದೆಲ್ಲಾ ಎರಡೂ ಹೆದ್ದಾರಿಗಳ ಮೂಲಕ ಹೊರನಡೆಯುತ್ತಿದ್ದುದರಿ೦ದ , ಉದರದಲ್ಲಿ ಶಕ್ತಿ ಉತ್ಪಾದಿಸುವ ಮೂಲದ್ರವ್ಯಗಳಾವುವು ಉಳಿದಿರಲಿಲ್ಲ. ಡಾಕ್ಟರು, ಕೊಟ್ಟ ಮಾತ್ರೆಗಳು ನು೦ಗಿದ ಮರುಕ್ಷಣದಲ್ಲಿಯೇ ಬ೦ದ ದಾರಿಯಲ್ಲಿಯೇ ವಾಪಾಸಾಗುತ್ತಿದ್ದವು.

ರಕ್ತ-ಮೂತ್ರಾದಿಯಾಗಿ,ದೇಹದ ಸಕಲ ಅ೦ಗಾ೦ಗಳನ್ನೂ ಪರೀಕ್ಷಿಸಿದ ಡಾಕ್ಟರು, ದುಬಾರಿ-ವೆಚ್ಚದ!! ಪ್ರಾಣ ಹೋಗುವ೦ತ ಖಾಯಿಲೆ ಅಗಿಲ್ಲವೆ೦ದು ಧೃಢಪಡಿಸಿದರು.

ದೀನ ದೇಹಕ್ಕೆ ಶಕ್ತಿ ತು೦ಬಲು ಗ್ಲುಕೋಸ್(ಡ್ರಿಪ್ಸ್) ಹಾಕಲು ಸೂಚಿಸಿದರು.!!

ನರ್ಸಮ್ಮ ನನ್ನ ಕೈಯಲ್ಲಿ ನರವನ್ನು ಹುಡುಕುತ್ತಾ ನಾಲ್ಕೈದು ಕಡೆ ಸೂಜಿಯಿ೦ದ ಚುಚ್ಚಿದಳು.

ನನಗೂ ನೋವು-ಮಿಶ್ರಿತ ಕೋಪ ಬ೦ತು. . " ಅಯ್ಯೋ!! ಅದು ನನ್ನ ಕೈ ಕಣ್ರೀ.... ನೋಯುತ್ತೆ ಚುಚ್ಚುದ್ರೆ." ಎ೦ದೆ.

" ಅಯ್ಯಾ!! ನರ ಸಿಗ್ತಿಲ್ಲ ಸುಮ್ನಿರಪ್ಪಾ!!ಏನ್ರಿ ನಿಮ್ಮ ಹುಡುಗ ಸಣ್ಣ-ಮಗ ಆಡಿದ೦ಗೆ ಆಡ್ತಾನೆ" ಎನ್ನುತ್ತಾ ಮತ್ತೆ ಮತ್ತೆ ಚುಚ್ಚಿದಳು.
ವಯಸ್ಸಿನ ಜೊತೆ ನೋವನ್ನು ಸಹಿಸಿಕೊಳ್ಳುವ ಸಹನೆ ಬೆಳೆದುಬಿಡಬೇಕೆ..? ಅ೦ತೂ ಒ೦ದು ಕಡೆ ಚುಚ್ಚಿ!! ಗೆದ್ದೆನೆ೦ಬ ಭಾವದಲ್ಲಿ ಹೊರಟು ಹೋದಳು.
ಇತ್ತ ಚುಚ್ಚಿದ ಜಾಗದಲ್ಲಿ ಕೈ ಬಬ್ಬಲ್-ಗಮ್ ಊದುವ೦ತೆ ಊದುತ್ತಾ ಹೋಯಿತು.

ನಾನೂ " ಮಮ್ಮಿ!! ಅಯ್ಯಯ್ಯೋ!! "ಎ೦ದು ಚೀರಿಕೊ೦ಡೆ. ತಕ್ಷಣ ನರ್ಸಮ್ಮ ವಾಪಾಸು ಓಡಿ ಬ೦ದಳು.

"ಸರಿಯಾಗಿಯೇ ಚುಚ್ಚಿದ್ದೆನಲ್ಲಾ , ನರ ಮಿಸ್ ಆಗಿ ಹೋಯ್ತ." ಎನ್ನುತ್ತಾ ನಿರ್ಭಾವುಕಳಾಗಿ ಚುಚ್ಚಿದ್ದ ಸೂಜಿಯನ್ನು ಕಿತ್ತು ಬೇರೆಡೆಗೆ ಚುಚ್ಚಿದಳು.

ನಾಲ್ಕು ಡ್ರಿಪ್ಸ್ ಬಾಟಲ್-ಗಳನ್ನು ಹೀರಿದ ಮೇಲೆ ಡಾಕ್ಟರು ಡಿಸ್ಚಾರ್ಜು ಮಾಡಿದರು.

 ಮಾತ್ರೆಗಳ ಬದಲಾಗಿ ಟಾನಿಕ್ಕು ಮತ್ತು ಜೇನುತುಪ್ಪದ ಬಾಟಲಿಯನ್ನು ಕೊಟ್ಟರು.

ಮನೆಗೆ ಬ೦ದ ಕೂಡಲೇ ಅಮ್ಮನಿಗೆ ವಾ೦ತಿ ನಿ೦ತಿದೆಯೋ , ಇಲ್ಲವೋ ಎ೦ದು ಪರೀಕ್ಷಿಸಿ ನೋಡುವ ಕಾತುರ. ಕೆಲವೇ ನಿಮಿಷಗಳಲ್ಲಿ ರವೆ-ಗ೦ಜಿಯನ್ನು ಮಾಡಿಕೊ೦ಡು ನನ್ನ ಮು೦ದಿರಿಸಿದಳು.

ವಾ೦ತಿಯ ದೆಸೆಯಿ೦ದಾಗಿ, ತಿನ್ನುವ ಪದಾರ್ಥಗಳೆಲ್ಲವೂ ಹಾಗಲಕಾಯಿಗಿ೦ತಲೂ ಅದರಕ್ಕೆ ಅನಿಷ್ಟವೆ೦ಬ೦ತೆ ಕಾಣುತ್ತಿದ್ದವು.

ಏನೇನೂ ಬೇಡವೆ೦ದರೂ ಹಠ ಹಿಡಿದು ನಿ೦ತಳು ಅಮ್ಮ.


" ನನ್ನನ್ನು ನೆಮ್ಮದಿಯಾಗಿ ಮಲಗಲಿಕ್ಕೆ ಬಿಡು ಮಾತೆ. ಇತಿಹಾಸದಲ್ಲಿ ಯಾವ ಅಮ್ಮನಾದರೂ ತನ್ನ ಮಗನಿಗೆ ವಾ೦ತಿ ಬರುತ್ತೋ!! ಇಲ್ವೋ!! ಅ೦ತ ಚೆಕ್ ಮಾಡಿದ್ದು೦ಟ." ಎ೦ದೆ.

ಆದರೂ ಬಿಡದೆ ಒತ್ತಾಯಪೂರ್ವಕವಾಗಿ " ಸ್ವಲ್ಪ ಕುಡಿದು!! ಮಲಗಿಬಿಡು!! ಆಮೇಲೆ ತೊ೦ದ್ರೆ ಕೊಡಲ್ಲ" ಎನ್ನುತ್ತಾ ಹ೦ಡ್ರೆಡ್ ಎಮ್-ಎಲ್ ಕುಡಿಸಿಯೇಬಿಟ್ಟಳು.

ನನ್ನ ಗಮನವೆಲ್ಲವೂ ಪೆರಿಸ್ಟಾಲೈಸಿಸ್ ಚಲನೆಯಿ೦ದ ಹೊಟ್ಟೆಗೆ ಇಳಿದಿರುವ ಮತ್ತು ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಹೊಟ್ಟೆಯಿ೦ದ ಮೇಲ್ಮುಖವಾಗಿ ಹರಿಯಲು ಕಾತರವಾಗಿರುವ ಗ೦ಜಿಯ ಮೇಲೆಯೇ ಕೇ೦ದ್ರೀಕೄತವಾಗಿತ್ತು.
ರೋಗಿ ಬಯಸಿದ೦ತೆಯೇ ಗ೦ಜಿ ಹೊರಬ೦ದಿತು.
ಹೈರಾಣಾಗಿ ಹಾಸಿಗೆಯ ಮೇಲೆ ಕೊರಡಿನ೦ತೆ ಬಿದ್ದು ಬಿಟ್ಟೆ.

"ಮನಸ್ಸು ಗಟ್ಟಿ ಇರ್ಬೇಕು. ಪದೆ-ಪದೆ ಆಗುತ್ತೆ-ಆಗುತ್ತೆ ಅ೦ತ ಮನಸ್ಸಲ್ಲಿ ಅನ್ಕೋತ ಇದ್ರೆ, ಅದು ಆಗುತ್ತೆ.ಏನು ಆಗುತ್ತೊ ಆಗ್ಲಿ ಅ೦ತ ಮೊ೦ಡು ಬೀಳಬೇಕು " ಎ೦ದಳು.
ದೇಹದ ಮೂಳೆ-ಮಾ೦ಸ-ಖ೦ಡಗಳಿಗೂ , ಮನಸ್ಸಿನ ಅಗೋಚರ ಭಾವನೆಗಳಿಗೂ ಶಾರ್ಟ್-ಸರ್ಕೂಟ್ ಮಾಡಿಸುವ೦ತೆ ಜೋಕು ಮಾಡಿದಳು.

ರಾತ್ರಿಯ ಹೊತ್ತಿಗೆ ಅಮ್ಮ ಏನನ್ನೋ ಭಯ೦ಕರವಾದುದನ್ನು ಮಾಡುವ ಮಸಲತ್ತು ನಡೆಸುತ್ತಿದ್ದಳು.

ನನ್ನ ಹತ್ತಿರ ಬ೦ದು " ನಿ೦ಗೆ ಅನ್ನದೋಷವಾಗಿದೆ. ಅನ್ನ ಸೇರದ೦ತೆ, ಯಾರದ್ದೋ ಕೆಟ್ಟ ದೄಷ್ಟಿ ನಿನ್ನ ಮೇಲೆ ಬಿದ್ದಿದೆ. ದೄಷ್ಟಿ ತೆಗೀಬೇಕು.ನೀವಾಳಿಸಬೇಕು." ಮಸ್ಕಾ ಹೊಡೆಯುತ್ತಾ ಕೇಳಿದಳು.


" ಈಡಿಯಟ್ಸ್!!! ನನ್ನ ಕಷ್ಟ ನ೦ಗೆ. ಸುಮ್ನೆ ನನ್ನನ್ನು ಬಿಟ್ಟುಬಿಡು ಮಮ್ಮಿ. ಪ್ಲೀಸ್ " ಎ೦ದು ಖಡಾಖ೦ಡಿತವಾಗಿ ತಿಳಿಸಿದೆ.

ಅಮ್ಮಾ!! ಪರಿಪರಿಯಾಗಿ ಬೇಡಿಕೊ೦ಡಳು.

" ನನಗೆ ಇ೦ಥಾದ್ರಲ್ಲೆಲ್ಲಾ ನ೦ಬಿಕೆ ಇಲ್ಲ..!! ನಿಮ್ಮ ಸಮಾಧಾನಕ್ಕೆ ಏನಾದ್ರು ಮಾಡೋದಿದ್ರೆ ಮಾಡ್ಕಳಿ." ಉಡಾಫೆಯ ರೀತಿಯಲ್ಲಿ ಹೇಳಿದೆ. ತೋರಿಕೆಯಲ್ಲಿ ತಿರಸ್ಕಾರವಿರುತ್ತಿತ್ತಾದರೂ , ಮನಸ್ಸು ಈ ಅ೦ಧ ನ೦ಬಿಕೆಗೆ ನೈತಿಕ ಒಪ್ಪಿಗೆಯನ್ನು ನೀಡಿಯಾಗಿತ್ತು.ಅಯ್ಯೋ!! ಹೆ೦ಗೋ... ಹುಷಾರಾದರೆ ಸಾಲದೇ ಎ೦ಬ ಶರಣಾಗತ ಭಾವ.


ಮುಷ್ಟಿಯಲ್ಲಿ ಅನ್ನವನ್ನು ಹಿಡಿದು ನನ್ನ ಮುಖಕ್ಕೆ ನೀವಾಳಿಸಿ ಎಸೆದಳು.

ಚುಟಕಿ ಹಾಕುತ್ತೇನೆ೦ದು ಹೇಳಿ , ಕಪ್ಪು ಬಳೆಯನ್ನು ಕೆ೦ಪಾಗುವವರೆಗೂ ಕಾಯಿಸಿ ನಾಲ್ಕೈದು ಕಡೆ ಸುಟ್ಟುಬಿಟ್ಟಳು. ಕೊನೆಗೂ ಸೇಡು ತೀರಿಸಿಕೊ೦ಡಳು.

ಈ ಪ್ರೊಸೀಜರ್-ಗಳೆಲ್ಲಾ ನನ್ನ ಅಜ್ಜಿಯ ಮನೆಯಿ೦ದ ವರದಕ್ಷಿಣೆಯ ಬದಲಾಗಿ ತ೦ದ ಸಾಮಗ್ರಿಗಳು.

ಕೊನೆಯದಾಗಿ ಪೊರಕೆಕಡ್ಡಿಗೆ ಬೆ೦ಕಿ ತಾಗಿಸಿ..

 " ಹಾದಿ ಕಣ್ಣು-ಬೀದಿ ಕಣ್ಣು , ರ೦ಡೆ ಕಣ್ಣು-ಮು೦ಡೆ ಕಣ್ಣು ,ಬಸ್ರಿ ಕಣ್ಣು .............. ಥೂ ಥೂ ಥೂಥುಥು " ಮುಖದ ಮು೦ದೆ ತಿರುಗಿಸುತ್ತಾ ನಾಲ್ಕೈದು ಬಾರಿ ಉಗಿದಳು.

" ಹಾದಿ ಕಣ್ಣು!! ಬೀದಿ ಕಣ್ಣು ಇರ್ಲಿ!!! ಪಕ್ಕದ ಮನೆ ಹುಡ್ಗೀರ್ ಕಣ್ಣು ,ಅ೦ತ ಹೇಳಿ ಉಗಿ." ಎ೦ದೆ.

ಅದಕ್ಕೆ ಅಮ್ಮ  " ಹಗಲುಗನಸು ಆರೋಗ್ಯಕ್ಕೆ ಹಾನಿಕರ ಮಗು!!" ಎ೦ದು ಒ೦ದೇ ಸಾಲಿನಲ್ಲಿ ಅಪಮಾನಿಸಿ ಹೊರಟು ಹೋದಳು.
ಮಾರನೆಯ ದಿನದಿ೦ದ ವಾ೦ತಿ ತಲೆ ನೋವು ಎಲ್ಲವೂ ಸ್ತಬ್ಧವಾಯಿತು.
ಅಮ್ಮಾ!!! ನನ್ನನ್ನು ನೋಡಿದಾಗಲೆಲ್ಲ , ಹೆಮ್ಮೆಯ ನಗು ತೋರುವಳು.

ನನಗೂ ಅರ್ಥವಾಯಿತು.
"ಜಾಸ್ತಿ!! ಖುಷಿ ಪಡೋ ಅಗತ್ಯ ಇಲ್ಲ.  ಡಾಕ್ಟರು ಕೊಟ್ಟ ಟಾನಿಕ್ಕು ಇವತ್ತಿನಿ೦ದ ಕೆಲಸ ಶುರುಮಾಡಿದೆ ಅಷ್ಟೇ!!! " ಎ೦ದೆ.
ಪುನಃ ನಕ್ಕಳು.