ಶಠ ಶಕಟ ನಾನು ಕಾಲಾತೀತ ಕಾಲ ಮೂಸೆಯಲೆದ್ದು ಬಂದ
ಪರಿಪೂರ್ಣ ನಾನೆಂದರೆ ಹಾಗೆ ತಿದ್ದಲಾರರೆನ್ನನಿನ್ನು ತಿದ್ದಲು
ಳಿಸಿಲ್ಲಮತ್ತೇನನು ಆಧುನಿಕ ತಾಂತ್ರಿಗರ ಕೆಂಗಣ್ಣ ಗುರಿ ನಾನು
ಶತ ಸಹಸ್ರಮಾನಗಳಿತಿಹಾಸವೆನಗುಂಟು ಅಂದುಹೇಗಿದ್ದೆನೊ
ಇಂದಿಗೂ ಹಾಗೆ ಏನೊಂದು ಬದಲಾವಣೆಯೊಲ್ಲದ ಕರ್ಮಠ ಶಠ ಶಕಟ ನಾನು
ಇತಿಹಾಸದುದ್ದವ ಬಲ್ಲೆ ವರ್ತಮಾನದಗಲವ ನೋಡುತಿಹೆ
ಭವಿಷ್ಯಬೇಕಿಲ್ಲ  ಕಾಲಾತೀತನೆಂದೆನೆಲ್ಲ.
ದೇವ ದಾನವ ಯುದ್ಧದಿ ಕೈಕೇಯಿ ಕೈ ಕಿರು ಬೆರಳೆ ಕೀಲಾಗಿ
ದಶರಥನಿಗುರುಳಾಗಿ ವನವಾಸಿ ರಾಮನಾದುದಬಲ್ಲೆ
ಬಾಲ ಹನುಮನಾಡಿದ ಹಂಪೆಯ ಪಂಪಾ ಕ್ಷೇತ್ರವ ಬಲ್ಲೆ
ವಾಲಿ ಸುಗ್ರೀವ ದಾಯಾದಿ ಕದನದಿ ಮೋಸದಿಂದಲೆ
ವಾಲಿಯ ಕೊಂದ ರಾಮ ಬಾಣವನು ಕಂಡಿಹೆ
ಜೀವಮಾನವೆ ಕಾದ ಶಬರಿಯೆಂಜಲ ಫಲಗಳ ಸುಕೃತದಿ
 ತಿಂದ ಶ್ರೀರಾಮ ವದನಾರವಿಂದವ ಕಂಡೆ
ರಾವಣನ ಹತ್ತು ತಲೆಗಳೇನು ಕಪಿಗಳ ತರಲೆಯನಲ್ಲದೆ
ಹನುಮಾದಿಯಂಗದರ ಶೌರ್ಯ ಸಾಹಸವ ಕಂಡಿಹೆನು
ಗರ್ಭವತಿ ಜಾನಕಿಯ ಕಾಡಿಗಟ್ಟಿದ ರಾಮ ಚಾಡಿಮಾತನು ಕೇಳಿ
ಸೌಮಿತ್ರಿಯ ತಾಪ ಸೀತೆಯ ಶೋಕ ಕೂಡಾ ಕಂಡವನು
ಪುಟ್ಟ ಲವ ಕುಶರು ಪಟ್ಟಾಭಿರಾಮನ ಪಟ್ಟದ ಕುದುರೆಯ
ಪಟ್ಟು ಬಿಡದೆ ಕಟ್ಟಿ ಹಾಕಿದಟ್ಟಹಾಸವನು ಕಂಡಿಹೆ
ಭೂದೇವಿ ಬಾಯ್ಬಿರಿದು ಶ್ರೀರಾಮ ಪಟ್ಟಮಹಿಷಿಯ
ರಾಮನೆದುರಲೆ ನುಂಗಿದುದ ದಂಗಾಗಿ ಕಂಡವನು ನಾ
ಅಂದೂ ಹಾಗೆಯೇ ಇಂದೂ ಹಾಗೆಯೇ ಮುಂದೆಂದೂ
ಹೀಗೆಯೇ ಇರುವವನು ನಾನು ಕರ್ಮಠ ಶಠ ಶಕಟ ನಾನು
ಪರಶುರಾಮ ಭೀಷ್ಮಾದಿ ಭೀಮ ಭೀಷಣರ ನೋಡಿಹೆ
ನಂದಗೋಕುಲದಿ ನಲಿದ ಬಾಲ ಮುಕುಂದ ಬಲಭದ್ರರ ಕಂಡೆ
ಏಕಲವ್ಯನ್ಹೆಬ್ಬರಳ ತಾ ಕಲಿಸದಿಹ ವಿದ್ಯೆಗೆ ಗುರುದಕ್ಷಿಣೆಯ
ಹೊಣೆಯಾಗಿಸಿದ ದಾರುಣ ಗುರು ದ್ರೋಣನನು ನೋಡಿಹೆ
ಕಂಸ ಚಾಣೂರ ಮುಷ್ಠಿಕರಂತ್ಯವನು ಕಂಡವನು
ಶಿಶುಪಾಲ ಜರಾಸಂಧರ ದಾರುಣ  ಸಾವ ನೋಡಿಹೆನು
ಪಾಂಡವರು ಭಂಡತನದಿ ತಿರಿದುಂಡದನು ಕಂಡೆ
ಜಗಜಟ್ಟಿ ಭೀಮ ಬಂಡಿಯನ್ನವ ತಿಂದು ತೇಗಿದುದ ಕಂಡೆ
ಸ್ವಯಂವರದಿ ಮತ್ಸ್ಯಯಂತ್ರವ ಭೇದಿಸಿದವನರ್ಜುನ
ದ್ರೌಪದಿಯ ಪಂಚಪಾಂಡವರು ಹಂಚಿ ಕೊಂಡುದ ಕಂಡೆ
ಪಕ್ಷಪಾತಿ ಶ್ರೀಕ್ರಿಷ್ಣ ಸಂಧಾನವನು ಮುರಿದುದ ಕಂಡಿಹೆನು
ಕುರುಕ್ಷೇತ್ರ ಯುದ್ಧದಿ ಕ್ರಿಷ್ಣಸಾರಥ್ಯ ಸುಖವನುಂಡಿಹೆನು
ನಾ ಹೀಗೆಯೇ ಇರುವವನು  ಕರ್ಮಠ ಶಠ ಶಕಟ ನಾನು