ಸುತ್ತೆಲ್ಲ ದಶ ದಿಕ್ಕುಗಳಾಚೆಗೆಲ್ಲ

ಹಬ್ಬಿ ಹರಡಿದೆ ಮೌನ

ಮೌನವೆ ! ಏಕೆ ಹೀಗೆ ವ್ಯಾಪಿಸುತಿರುವೆ?

ಯಾವ ಸಾಧನೆಯ ಹುನ್ನಾರವಿದು

 

ಮೌನ ಬೇಡ ಮಾತು ಬೇಕೆನಿಸುತಿದೆ

ಏನು ಮಾತಾಡುವುದು ? ಶಬ್ದ ಹೊರಡುತ್ತಿಲ್ಲ

ತುಕ್ಕು ಹಿಡಿದಿವೆ ಬಳಸದೆ ಕೂಡಿಟ್ಟ ಶಬ್ದಗಳು

ಕೊಳೆಯುತ್ತಿವೆ ಮೌನದ ಕೊಚ್ಚೆ ಗುಂಡಿಯಲಿ

 

ಮೌಢ್ಯದ ಪರಮಾವಧಿಯ ಮೌನ ದೊರೆಯೆ!

ಕಳಚಿಬಿಡು ಮೌನದ ಕರಿಗವಚ  

 ಸವಕಲು ಶಬ್ದಗಳಿಗೆ ಸಾಣೆ ಹಿಡಿದು ಹೊಳಪು ಕೊಟ್ಟು

ವರ್ತಮಾನದಲಿ ಚಲಾವಣೆಗೆ ಬಿಡು

 

ಹಬ್ಬಿ ಹರಡುತ್ತದೆ ಶಬ್ದಗಳ ಮಹಾ ಶರಧಿ

ದಶ ದಿಕ್ಕು ತ್ರಿಲೋಕಗಳಾಚೆಗಳಿಗೂ

ತಂತಾನೆ ಜೀವದಳೆಯುತ್ತೆ ' ಮೌನ ಕಣಿವೆ '

ಹೊಸ ಅರ್ಥ ಪಡೆಯುತ್ತೆ ಹೊಸ ಬಾಳು ಬದುಕು