ಮನದಮೂಲೆಯಲೊಂದು ಕನಸುಂಟು
ಕನಸಿಗೆ ರೆಕ್ಕೆಪುಕ್ಕಗಳುಂಟು
ಕನಸ ನನಸಮಾಡಲು ಸಾಲುಸಾಲು ಸಾಲಕೊಡಿಸುವ
ಬಂಟರಪಡೆಯ ಪ್ರವರದಲೆಲ್ಲದಕು ಸಾಲಗಳುಂಟು
ಮನೆಯಜಾಗಕೆ ಸಾಲ ಮನೆಯ ಕಟ್ಟಲು ಸಾಲ
ಮನಸಿನ ಮಂಡಿಗೆಗೂ ಸಾಲ ಮನೆಯಾಕೆಯ
ಮೈಮೇಲಿನ ಬಂಗಾರಕೂ ಸಾಲ
ಮಕ್ಕಳೋದಿಗೆ ಸಾಲ ಮಗಳಮದುವೆಗೆ ಸಾಲ
ಅಳಿಯ ರಾಯನ ಚಪಲಕೆ ಸಾಲ ಮಗನ ಮೋಜಿಗೆ ಸಾಲ
ಮಿತ್ರನ ತಾಪತ್ರಯಕು ಸಾಲ
ಪ್ರವಾಸಕ್ಕೆ ಸಾಲ ಪ್ರಸ್ಥಕ್ಕೆ ಸಾಲ ಪ್ರಸವಕ್ಕೂಸಾಲ
ಚಾರ್ವಾಕ ನಾಲಿಗೆಯ ಮಸಾಲೆಗೂ ಸಾಲ
ಸಾಲ ತೀರಿಸಲೂ ಸಾಲ ಸಾಲದಿಂದಲೆ ಸಕಲ ಸರ್ವ ಸುಖ
ಸಾಲದಲೆ ಹಾಲೋಗರ
ಸಾಲವುಂಟು ಅದಕಂಟುವ ಬಡ್ಡಿಯುಂಟು ಚಕ್ರಬಡ್ಡಿಯುಂಟು
ಜೊತೆಗೆ ನೆಂಚಿಗೆಯಾಗಿ ಸುಸ್ತಿಬಡ್ಡಿಯುಂಟು
ಜೊತೆಯಲಿತರ ಖರ್ಚುಗಳ ಬರೆಯೂ ಉಂಟು
ಸಾಲಮಾಡಲೆಂಟೆದೆಯುಂಟು ಕಿಬ್ಬದಿಯ ಕೀಲುಂಟು
ಅದಮುರಿಯಲು ಸಾಲವಸೂಲಾತಿ ನಕ್ಷತ್ರಕರ ಕಿರಾತಪಡೆಯುಂಟು
ಕೊನೆಗೆ ಸಾಲದ ಸುಳಿಯಲ್ಲಿ ಸತ್ತರವನ ಸಂಸ್ಕಾರಕೂ ಸಾಲವುಂಟು
ಮನದ ನೆಮ್ಮದಿಯ ಕೆಡಿಸುವ ಮೂಲವೇ ಸಾಲ
ಸಾಲ ಸದುಪಯೋಗವಾದರದು ನಾಕ ಇಲ್ಲವಾದರದು ನರ..
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!