ಇತ್ತೀಚೆಗೆ ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳು ಬಹಳ ಜನಪ್ರಿಯವಾಗುತ್ತಿವೆ. ಕೈಗೆಟುಕುವ ಬೆಲೆಯಲ್ಲಿ ಆಂಡ್ರಾಯ್ಡ್ ಫೋನುಗಳು ಲಭ್ಯವಾಗುತ್ತಿರುವಂತೆ ಹೆಚ್ಚಿನ ಜನ ಇದನ್ನೇ ಕೊಳ್ಳುತ್ತಿದ್ದಾರೆ. ಆದರೆ ಮೊಬೈಲ್ ಫೋನು ಕೊಂಡ ನಂತರ ಎಲ್ಲರೂ ಸಾಮಾನ್ಯವಾಗಿ ಕೇಳುವ ಪ್ರಶ್ನೆ - “ಇದರಲ್ಲಿ ಕನ್ನಡ ಬಳಸುವುದು ಹೇಗೆ?”ಎಂಬುದು.
ಆಂಡ್ರಾಯ್ಡ್ ಗೂಗಲ್ ಕಂಪೆನಿಯವರು ನಿರ್ಮಿಸಿರುವ ಆಪರೇಟಿಂಗ್ ಸಿಸ್ಟಮ್. ಇದನ್ನು  ಮೂಲತಃ ಗ್ನು/ಲಿನಕ್ಸ್ ಕರ್ನೆಲ್ ಬಳಸಿ ನಿರ್ಮಿಸಲಾಗಿದೆ. ಆಂಡ್ರಾಯ್ಡ್ ವ್ಯವಸ್ಥೆಯಲ್ಲಿ ಕನ್ನಡ ಹಾಗು ಹಲವು ಭಾರತೀಯ ಭಾಷೆಗಳನ್ನು ಓದಲು, ಬರೆಯಲು ಸಾಧ್ಯವಾಗಿಸುವ 'ಲೊಕ್ಯಾಲೆ' ಬೆಂಬಲ ಸದ್ಯಕ್ಕೆ ಗೂಗಲ್ ನೀಡುತ್ತಿಲ್ಲ. ಹೀಗಾಗಿ ಮೊಬೈಲ್ ಫೋನುಗಳನ್ನು ಮಾರಾಟ ಮಾಡುವ ಸ್ಯಾಮ್ಸಂಗ್, ಎಲ್ ಜಿ ಮುಂತಾದ ಕಂಪೆನಿಗಳು ಭಾರತದಲ್ಲಿ ಮಾರುತ್ತಿರುವ ಮೊಬೈಲುಗಳಿಗೆ ಭಾರತೀಯ ಭಾಷೆಗಳನ್ನು ಬಳಸಲು ಅಗತ್ಯವಿರುವ  ಫಾಂಟು, ಲೊಕ್ಯಾಲೆಗಳನ್ನು ಅಳವಡಿಸಿ ಮಾರುತ್ತಿವೆ. ಹಾಗೆಂದು ಭಾರತದಲ್ಲಿ ಮಾರಾಟಕ್ಕಿರುವ ಎಲ್ಲ ಮೊಬೈಲು ಫೋನುಗಳಲ್ಲೂ ಈ ಸವಲತ್ತು ಇಲ್ಲ! ಹೀಗಾಗಿ ಸ್ಮಾರ್ಟ್ ಫೋನು ಕೊಳ್ಳುವ ಮುನ್ನ  "ಇದರಲ್ಲಿ ಕನ್ನಡ ಸರಿಯಾಗಿ ಬರುತ್ತದೆಯೇ?” ಎಂದು  ಮಾರಾಟ ಮಾಡುತ್ತಿರುವವರಿಗೆ ವಿಚಾರಿಸಿ ಕೊಳುವುದು ಸೂಕ್ತ. ಹೆಚ್ಚು ಬಳಕೆದಾರರು ಹೀಗೆ ವಿಚಾರಿಸುತ್ತಿದ್ದರೆ ಮಾತ್ರ ಕನ್ನಡದ ಬಳಕೆಗೆ ಇರುವ ಬೇಡಿಕೆಯ ಅರಿವು ಮೊಬೈಲ್ ಮಾರುವ ಕಂಪೆನಿಗಳಿಗೆ ಆದೀತು. ಗೆಳೆಯರು ಯಾರಾದರೂ ಈಗಾಗಲೇ ಕೊಂಡಿರುವ ಮೊಬೈಲ್ ಫೋನ್ ಇದ್ದರೆ ಅದರಲ್ಲೊಮ್ಮೆ ಯುನಿಕೋಡ್ ಕನ್ನಡ ಬಳಸುವ ಯಾವುದಾದರೂ ವೆಬ್ಸೈಟು (ಉದಾಹರಣೆಗೆ: ಕನ್ನಡ ವಿಕಿಪೀಡಿಯ ಅಥವ ಸಂಪದ.ನೆಟ್) ತೆರೆದು ನೋಡಿದರೆ ಆ ಮೊಬೈಲ್ ಫೋನಿನಲ್ಲಿ ಕನ್ನಡ ಬರುತ್ತದೆಯೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದು.

ಈಗಾಗಲೇ ನನ್ನ ಬಳಿ ಒಂದು ಆಂಡ್ರಾಯ್ಡ್ ಫೋನು ಇದೆ. ಇದರಲ್ಲಿ ಕನ್ನಡ ಹೇಗೆ? ಎಂಬುದು ಪ್ರಶ್ನೆಯಾದರೆ, ಮೊದಲು ಮೊಬೈಲ್ ಮಾರುತ್ತಿರುವ ಕಂಪೆನಿಯ ಕಸ್ಟಮರ್ ಸಪೋರ್ಟ್ ನಂಬರಿಗೆ ಫೋನು ಮಾಡಿ ನಿಮ್ಮ ಮೊಬೈಲಿನಲ್ಲಿ ಕನ್ನಡ ಬರುತ್ತಿಲ್ಲ ಎನ್ನುವುದರ ಕುರಿತು ಅವರ ಗಮನ ಸೆಳೆಯುವುದು ಮೊದಲು ಮಾಡಬೇಕಾದ ಕೆಲಸ! ಹೀಗೆ ಮಾಡಿದರೆ ಈಗ ಕನ್ನಡದ ಬೆಂಬಲವಿಲ್ಲದಿದ್ದರೂ ಮುಂದೊಮ್ಮೆ ನಿಮ್ಮ ಮೊಬೈಲ್ ಫೋನಿನ ಮಾಡೆಲ್ಲಿಗೂ ಕನ್ನಡದ ಬೆಂಬಲ ಹೊರತರುವತ್ತ ಗಮನ ನೀಡಾರು. ಎರಡನೆಯ ಹೆಜ್ಜೆ - ನಿಮ್ಮ ಮೊಬೈಲ್ ಫೋನಿನ ಫರ್ಮ್ವೇರ್ ಆವೃತ್ತಿಗೆ ಯಾವುದಾದರೂ ಅಪ್ಡೇಟ್ ಇದೇಯೇ ಎಂಬುದನ್ನು ವಿಚಾರಿಸಿ ನೋಡಿ ಅಥವ ಇಂಟರ್ನೆಟ್ಟಿನಲ್ಲಿ ಹುಡುಕಿ ನೋಡಿ. ಬಹುತೇಕ ಹಲವು ಹೊಸ ಮೊಬೈಲ್ ಫೋನುಗಳಿಗೆ ಈ ರೀತಿಯ ಅಪ್ಡೇಟುಗಳು ಭಾರತೀಯ ಭಾಷೆಗಳನ್ನು ಓದಲು ಬೇಕಿರುವ ಸವಲತ್ತುಗಳನ್ನು ಹೊತ್ತು ತರುತ್ತವೆ.
ಇನ್ನು ಹೊಸತನ್ನು ಕಲಿಯಬೇಕು, ಪ್ರಯೋಗ ಮಾಡಿ ನೋಡಿಬಿಡೋಣ ಎನ್ನುವ ಸಾಹಸಿಗರಿಗೆ xda-developers  ಎನ್ನುವ ಒಂದು ಆನ್ಲೈನ್ ಸಮುದಾಯವಿದೆ. ಇಲ್ಲಿ  ಸಿಗುವ ಪರ್ಯಾಯ ಆಂಡ್ರಾಯ್ಡ್‌ ವ್ಯವಸ್ಥೆ ಭಾಷೆಯ ಸಲಕರಣೆಗಳನ್ನಷ್ಟೇ ಅಲ್ಲ, ಇನ್ನೂ ಹಲವು ಸವಲತ್ತುಗಳನ್ನು ಹೊತ್ತು ತರುವ ಫರ್ಮ್ವೇರುಗಳು ಸಿಗುತ್ತವೆ.
ಮೊಬೈಲಿನಲ್ಲಿ ಕನ್ನಡ ಓದುವುದು ಸರಿ, ಬರೆಯುವುದೂ ಸಾಧ್ಯವುಂಟೋ?  ಸಾಧ್ಯವಿದೆ. ಗೂಗಲ್ ಆಂಡ್ರಾಯ್ಡ್ ಮಾರ್ಕೆಟ್ಟಿನಲ್ಲಿ Kannada Anysoft Keyboard ಎಂದು ಹುಡುಕಿ ನೋಡಿ. ನುಡಿ ತಂತ್ರಾಂಶದಲ್ಲಿ ಟೈಪ್ ಮಾಡುವ ರೀತಿಯಲ್ಲೇ ಇದನ್ನು ಬಳಸಿ ಟೈಪ್ ಮಾಡಬಹುದು. ಬರಹ ರೀತಿಯ ಕೀಲಿ ಮಣೆ ಸದ್ಯಕ್ಕೆ ಇಲ್ಲ.

ಆಂಡ್ರಾಯ್ಡಿನಲ್ಲಿ ಕನ್ನಡದ ಮತ್ಯಾವ ಅಪ್ಲಿಕೇಶನ್ನುಗಳಿವೆ? ಆಂಡ್ರಾಯ್ಡಿನಲ್ಲಿ ಕನ್ನಡ ಕಲಿಯುವ ತಂತ್ರಾಂಶದಿಂದ ಹಿಡಿದು ಕನ್ನಡ ಹಾಡು, ರೇಡಿಯೋ ಕೇಳುವ ತಂತ್ರಾಂಶಗಳವರೆಗೂ ಇವೆ. ಸಂಪದ.ನೆಟ್ ಆನ್ಲೈನ್ ಸಮುದಾಯ ಹೊರತಂದಿರುವ ಮೇರು ಸಾಹಿತಿಗಳ ಶ್ಯಾವ್ಯ ಸಂದರ್ಶನ ನೇರ ಮೊಬೈಲಿನಲ್ಲಿ ಕೇಳಬಹುದಾದ 'ಸಂಪದ ಶ್ರಾವ್ಯ' ಲಭ್ಯವಿದೆ. ಚಂದ್ರಶೇಖರ ಕಂಬಾರ, ಪೂರ್ಣಚಂದ್ರ ತೇಜಸ್ವಿ ಹಾಗು ಇನ್ನೂ ಹಲವು ಮೇರು ಬರಹಗಾರರ ಸಂದರ್ಶನಗಳನ್ನು ಕನ್ನಡ ಲೊಕ್ಯಾಲೆ ಇಲ್ಲದ ಆಂಡ್ರಾಯ್ಡ್ ಫೋನುಗಳಲ್ಲೂ ಬಳಸಿ ಕೇಳಬಹುದಾಗಿದೆ. ಆಂಡ್ರಾಯ್ಡ್ ಮಾರ್ಕೆಟ್ಟಿನಲ್ಲಿ 'Sampada Kannada' ಎಂದು ಹುಡುಕಿ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಕನ್ನಡದ ಹಾಡುಗಳನ್ನು ಮೊಬೈಲಿನಲ್ಲಿಯೇ ಕೇಳಲು ಕನ್ನಡ ರೇಡಿಯೋ ಇದೆ. ವೀಡಿಯೋ ವೀಕ್ಷಿಸಲು 'ಗಿರ್ಮಿಟ್' ಎಂಬ ಅಪ್ಲಿಕೇಶನ್ ಇದೆ. ಆಂಡ್ರಾಯ್ಡ್ ಮಾರ್ಕೆಟ್ಟಿನಲ್ಲಿ 'Kannada' ಎಂದು ಹುಡುಕಿದರೆ ಇವೆಲ್ಲ ತಂತ್ರಾಂಶಗಳೂ ಪಟ್ಟಿಯಾಗುತ್ತವೆ.

ಇತ್ತೀಚೆಗೆ ಹಲವು ಭಾರತೀಯ ಕಂಪೆನಿಗಳು ಸ್ಮಾರ್ಟ್ ಫೋನುಗಳನ್ನು ಮಾರುವ ಎಷ್ಟೋ ಕಂಪೆನಿಗಳಿಗೆ ಭಾರತೀಯ ಭಾಷೆಗಳನ್ನು ಅಳವಡಿಸುವಲ್ಲಿ ಸಹಾಯ ಮಾಡುತ್ತಿವೆ. ಎರಡು ವಾರಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಡ್ರಾಯ್ಡ್-ಕಾನ್ ಎಂಬ ಆಂಡ್ರಾಯ್ಡ್ ಸಮ್ಮೇಳನದ ಸಮಯ ಉಡುಪಿಯ ರೋಬೋಸಾಫ್ಟ್ ಹೀಗೊಂದು ಕಂಪೆನಿಗೆ ಭಾರತೀಯ ಭಾಷೆಗಳನ್ನು ಅಳವಡಿಸಿದ ಆಂಡ್ರಾಯ್ಡ್ ಹೊರತರುವಲ್ಲಿ ಸಹಾಯ ಮಾಡುತ್ತಿದೆ ಎಂಬ ಸುದ್ದಿ ಪ್ರಮುಖ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಜನ ತಮ್ಮದೇ ಭಾಷೆಯಲ್ಲಿ ಮೊಬೈಲ್ ಫೋನುಗಳನ್ನು ಬಳಸುವಂತೆ ಸಾಧ್ಯವಾದರೆ ಕನ್ನಡ ಸಾಹಿತ್ಯವಷ್ಟೇ ಅಲ್ಲ, ಕನ್ನಡ ಪುಸ್ತಕಗಳು, ಕನ್ನಡ ಸಿನಿಮಾ - ಹಾಡು ಎಲ್ಲ ಮತ್ತಷ್ಟು  ಜನರಿಗೆ ಸುಲಭವಾಗಿ ತಲುಪುವ ಸಾಧ್ಯತೆಗಳಿವೆ.

(ಈ ಲೇಖನ ೨, ಡಿಸೆಂಬರ್, ೨೦೧೧ರ 'ವಿಜಯ ನೆಕ್ಸ್ಟ್' ಪತ್ರಿಕೆಯಲ್ಲಿ ಪ್ರಕಟವಾಗಿದೆ)

ಚಿತ್ರಃ ಹರಿ ಪ್ರಸಾದ್ ನಾಡಿಗ್