ನಾನು ಇತೀ್ತಚೆಗೆ ಓದಿದ ಡಗ್ಲಾಸ್ ಹಾಫ್ಸಟೇಟರನ "___LINK_OPEN_href="http://en.wikipedia.org/wiki/G%C3%B6del,_Escher,_Bach"___ಗೋಡೆಲ್, ಎಶ್ಚರ್, ಬಾಕ್: ಆ್ಯನ್ ಎಟೆರ್ನಲ್ ಬ್ರೈಡ್" ಪುಸ್ತಕ ಕೃತಕ ಬುದ್ಧಿಮತ್ತೆ, ಪ್ರೋಗ್ರಾಮಿಂಗ್ ಬಾಷೆಗಳ ವಿನ್ಯಾಸ, ಝೆನ್ ಕಥೆಗಳು, ತತ್ವಶಾಸ್ತ್ರ, ಗೋಡೆಲ್ ನ ಅಪೂರ್ಣತೆಯ ಪ್ರಮೇಯ, "ಆಲಿಸ್ ಇನ್ ವಂಡರಲ್ಯಾಂಡ್" ಮಾದರಿಯ ಸಂಭಾಷಣೆಗಳು, ತರ್ಕಶಾಸ್ತ್ರದ ವಿಧ್ಯುಕ್ತ ವ್ಯವಸ್ಥೆ(formal system), ಡಿ.ಎನ್.ಎ ಎನ್ಕೋಂಡಿಗ್, ಎಶ್ಚರ್ನ ಕಲೆ, ಬಾಕ್ ನ ಸಂಗೀತ- ಹೀಗೆ ಹತ್ತು ಹಲವು ವಿಷಯಗಳ ಸುಸಂಬದ್ಧ ಹೆಣಿಗೆ, ಸುರಳೀತ ನಿರೂಪಣೆಯಿಂದ ಗಮನ ಸೆಳೆಯಿತು. ಈ ಪುಸ್ತಕಕ್ಕೆ ೧೯೮೦ರ ಪ್ರತಿಷ್ಟಿತ ಪುಲಿಟ್ಝರ್ ಪ್ರಶಸ್ತಿ ದೊರಕಿದೆ. ಗಣಿತ, ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಬಗೆಗಿನ ನನ್ನ ಅಜ್ಞಾನದಿಂದಾಗಿ ಅಲ್ಲಲ್ಲಿ ಅನುಸರಿಸಲು ತೊಡಕೆನಿಸಿದರೂ, ಓದುವಾಗ ಎಲ್ಲಿಯೂ ಸಂಪೂರ್ಣ ಹಾದಿತಪ್ಪಿದ ಅನುಭವವಾಗಲಿಲ್ಲ.
ಜಡ ವಸ್ತುವಾದ ನ್ಯೂರಾನ್ ಗಳಿಂದ ಮನುಷ್ಯನ ಮೆದುಳಿನ ಚೇತನದ, ಬುದ್ಧಿಮತ್ತೆಯ ಬೆಳವಣಿಗೆ, ಪ್ರಜ್ಞೆಯ ಸಾಧ್ಯತೆ ಈ ಪುಸ್ತಕದ ಒಂದು ಪುನರಾವರ್ತಿತ ವಿಷಯ. self-reference ಮತ್ತು recursion ಈ ಪುಸ್ತಕದ ಇನ್ನೊಂದು recurring theme. ಹೇಗೆ ಕಣ ಭೌತಶಾಸ್ತ್ರಜ್ಞ ಮೂಲಭೂತ ಕಣಗಳ ಸ್ತರದಲ್ಲಿ, ಪರಮಾಣು ಭೌತಶಾಸ್ತ್ರಜ್ಞ ಪರಮಾಣುವಿನ ಸ್ತರದಲ್ಲಿ, ರಸಾಯನ ಶಾಸ್ತ್ರಜ್ಞ ಅಣುವಿನ ಸ್ತರದಲ್ಲಿ ವಾಸ್ತವವನ್ನು ಪರಿಭಾವಿಸುತ್ತಾರೋ ಹಾಗೆ ಮನುಷ್ಯನ ಮೆದಳು ನ್ಯೂರಾನ್ಗಳಿಂದ ವಿವಿಧ ಸ್ತರದ ಸಂಕೇತ ವ್ಯವಸ್ಥೆಯನ್ನ ನಿರ್ಮಿಸಿ ಪ್ರಜ್ಞೆಯ(consciousness) ನಿರ್ಮಿತಿಗೆ ಕಾರಣವಾಗುತ್ತದೆ. ಗಣಕ ವ್ಯವಸ್ಥೆಯನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದೂ abstraction ಗಳ ಮೂಲಕವೇ. ಉದಾಹರಣೆಗೆ ನಾವು ಪ್ರೋಗ್ರಾಮ್ ಮಾಡುವಾಗ ನಮ್ಮ ಪ್ರೋಗ್ರಾಮ್ ಪ್ರೊಸೆಸರ್ನ ಫ್ಲಿಪ್ ಫ್ಲಾಪನ್ನು ಹೇಗೆ ಮಾರ್ಪಡಿಸುತ್ತದೆ ಅಂತ ಯೋಚಿಸುವುದಿಲ್ಲ. (ಈ ವಿಷಯದ ಬಗ್ಗೆ ಒಂದು ಕುತೂಹಲಕರ ಲೇಖನ ನೋಡಿ…).
ಪುಸ್ತಕದಲ್ಲಿ anagram, pun ಮೊದಲಾದ ಪದಗಳ ಜೊತೆ ಆಟ ಹೇರಳವಾಗಿದೆ.ಅಂತೆಯೆ ಹೊಸ ಹೊಸ ಹೊಳಹುಗಳು. ಯೋಚನೆ, ಯೋಚನೆಯ ಬಗ್ಗೆ ಯೋಚನೆ, ಯೋಚನೆಯ ಬಗ್ಗೆ ಯೋಚನೆಯ ಬಗ್ಗೆ ಯೋಚನೆ ; ಕನಸು, ಕನಸಿನ ಬಗ್ಗೆ ಕನಸು ಹೀಗೆ meta ಸ್ತರದಲ್ಲಿ ಚಿಂತನೆ, ಅದಕ್ಕೆ ಇಂಬು ಕೊಡುವಂತೆ ಎಶ್ಚರ್ನ paradoxical ಚಿತ್ರಗಳು ಈ ಪುಸ್ತಕದ ವಿಶೇಷ.
ಅಂದ ಹಾಗೆ ನೀವು "ಆಲಿಸ್ ಇನ್ ವಂಡರಲ್ಯಾಂಡ್" ಓದಿಲ್ಲವಾದರೆ ನಾ ಕಸ್ತೂರಿಯವರ "ಪಾತಾಳದಲ್ಲಿ ಪಾಪಚ್ಚಿ"ಯನ್ನು ಖಂಡಿತ ಓದಿ. ಕನ್ನಡದ್ದೇ ಕಥೆ ಅನ್ನುವ ಹಾಗೆ ಸೊಗಸಾಗಿ ರೂಪಾಂತರಿಸಿದ್ದಾರೆ. ಅನುವಾದ ಅಕಾಡಮಿಯ ವತಿಯಿಂದ ಸುಲಭ ಬೆಲಗೆ ಈ ಪುಸ್ತಕ ಪುನರ್ಮುದ್ರಿತವಾಗಿದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!