ಅಲ್ಲಿ ಚಂದ ಗೋಡೆಯ, ಗಟ್ಟಿ ಮಾಡಿನ ಬೆಚ್ಚನೆ ಮನೆಯಲ್ಲಿ ಒಡೆದ ಕನ್ನಡಿ ಅಶುಭಸೂಚಕ.

ಇಲ್ಲಿ ಮೋಟು ಗೋಡೆಯ, ಸೋಗೆ ಮಾಡಿನ, ಅರೆಮನೆಯಲ್ಲಿ,

ಗೋಡೆ ತೂತು ಮುಚ್ಚಲೇನೊ ಎಂಬಂತೆ, ಹಚ್ಚಿರುವ

ಒಡೆದ ಕನ್ನಡಿಯ ಚೂರಲ್ಲಿ, ಇಣಿಕಿ ನೋಡುತ್ತಿದ್ದಾಳೆ ಪೋರಿ,

ಮುಗ್ಧ ಮೊಗದ ಮೇಲೆ ಬೆಳಕಿನ ಮಾಯಾಲೋಕ..!

ನನಗಾದ ಅನ್ಯಾಯ, ಅವನಿಗೆ ಅತ್ಯವಶ್ಯಕ ಅನುಕೂಲ...

[ ;-) ತಮ್ಮ ಹೇಳುತ್ತಾನೆ, ನೀನೆ ಅವಕಾಶ ಕೊಡದೆ ನಿನಗ್ಯಾರೂ ಅನ್ಯಾಯ ಮಾಡುವುದಿಲ್ಲ.. ]

ನನಗೆ ಮೆಚ್ಚಿದ ಮೊಗ್ಗಿನ ದಂಡೆಯ

ತಾಯಿ ಬಳ್ಳಿ ಅಳುತ್ತಿರಬಹುದು, ಮಕ್ಕಳಿಲ್ಲ,

ಇವರು ಮುಡಿದು ಮುದುಡಿಸಲು,

ನನ್ನ ಹೊಕ್ಕಳ ಹೂವ ಕೊಯ್ದರಲ್ಲಾ..!

ಆಟವಾಡಿ ನಲಿಯಬೇಕಿದೆ ತುಂಟ ಕಂದನಿಗೆ,

ಕೈ ತುಂಬ ಕೊಳೆ, ಜೇಬಲ್ಲೆರಡು ಕಲ್ಲು.

ಅಮ್ಮ ಬಿಡುವುದಿಲ್ಲ, ಆರೋಗ್ಯಕ್ಕೆ ಒಳ್ಳೆಯದಲ್ಲ,

ಇರಲಿ ಕೈ ಕಾಲು ಶುಭ್ರ,

ಕಂದ ಕೇಳುವುದಿಲ್ಲ - ಮನೆಯೆಲ್ಲ ಗುಲ್ಲು..

ಅಮ್ಮ ಕಿವಿಗೊಡಳು, ಬಾಗಿಲ ಚಿಲುಕ ಗಟ್ಟಿ ಹಾಕಿಹಳು,

ಅವಳಿಗೆ ಗೊತ್ತು ಕಂದನಿಗೇನು ಒಳ್ಳೆಯದೆಂದು.

ಕಂದನ ಕನಸು ಅಮ್ಮನದ್ದಾಗುವುದು ಹೇಗೆ?

ಕಂದನ ಖುಷಿಯ ಚಿಲುಮೆ ಕಲ್ಲು ಮಣ್ಣಾಟ,

ಅಮ್ಮನಿಗೋ ಬೇರೆಯದೆ ನೋಟ!

ಕನ್ನಡಿ ಚೂರು,ನನಗಾದ ಅನ್ಯಾಯ, ಮೊಗ್ಗಿನ ದಂಡೆ, ಮಕ್ಕಳಾಟ..

ಎಲ್ಲೆ ನೋಡಿ - ಎಲ್ಲ ವಿರುಧ್ಧ ಭಾವನೆಗಳ ಹೊಯ್ದಾಟ

ಆದರೂ..

ಒಡೆದ ಕನ್ನಡಿ ಚೂರಲ್ಲೆ ಬೆಳಕ ಪ್ರತಿಫಲನ

ಕೊಳೆ ಕೈಗಳ ಬೊಗಸೆಯಲ್ಲೆ ನಲಿವಿನ ಅನುರಣನ ___LINK_OPEN_href="http://bp3.blogger.com/_GMLph4mGk9c/Rd6rr44Qw3I/AAAAAAAAAAY/yuYpAkp_YVI/s1600-h/broken.jpg"___

ತನ್ನ ಜೀವಜಲ ಹಿಂಡಿ ಕೊಟ್ಟ ಬಳ್ಳಿಯ ಮೊಗ್ಗೆಯಲ್ಲೆ ಘಮಘಮಿಸುವ ಚೇತನ

ಪಟ್ಟ ಸಾವಿರ ನೋವೆ,

ಒಂದು ನಲಿವಿನ ಕ್ಷಣಕ್ಕೆ ಜೀವನವಿಡೀ ಕಾಯುವ ಭರವಸೆ ತುಂಬುವುದು...

ಈ ಎಲ್ಲ ಚಿತ್ರಗಳಾಚೆ ಇರುವ ಇನ್ಯಾವುದೊ ಚಿತ್ರ ನೋಡಲು

ಬೇಕಿದೆ ಕವಿಯೆ,

ನಿಮ್ಮ ಕಣ್ಗಳ ಕಾಣ್ಕೆ;

ನೀವೆ ಹೇಳಿದ್ದಿರಲ್ಲ:

ನೊಂದ ಹೃದಯವೇ ಹಾಡ ಕಟ್ಟುವುದು...!