ವೈಕುಂಠೈಕಾದಶಿ ಕಳೆದಿದೆ. ಆಸ್ತಿಕ ಸಜ್ಜನ, ವಿಷ್ಣು ಭಗವನ್ಮೂರ್ತಿಯ ದರ್ಶನ ತುಂದಲಿತರಾಗಿ ಉತ್ತರ ದ್ವಾರಾ ಹೊರವಂದು ಪುಣ್ಯಾರ್ಜಿತರಾಗಿದ್ದಾರೆ. ದ್ವಾದಶಿಯ ಪುಣ್ಯ ಪಾರಣೆಯ ನಂತರ ಇಂದು ಸ್ವಲ್ಪ ವಿರಮಿತರಗಿದ್ದಾರು. ಶ್ರೀವಿದ್ಯಾಪ್ರಸನ್ನತೀರ್ಥರ ಶ್ರೀನಿವಾಸಾನುಸಂಧಾನದ ’ದರ್ಶನ’ವನ್ನು ಆಸ್ತಿಕ ಜನರಿಗೆ ಪರಿಚಯಿಸಿದರೆ ತಪ್ಪಾಗಲಾರದೆಂಬ ಅನುಮಾನದಿಂದ ಒಂದು ಹಾಡಿನ ವಿಶ್ಲೇಷಣೆಯ ಸಾಹಸಕ್ಕೆ ಕೈಯಿಕ್ಕಿದ್ದೇನೆ.
ಈ ದರ್ಶನದ ಪುಣ್ಯ ಸಹಜ ಸಾಧಾರಣವಾದದ್ದಲ್ಲ.
ಪುಣ್ಯ, ಪೂರ್ವಾರ್ಜಿತವಿದು ಸುರಮಾನ್ಯ|
ಶ್ರೀನಿಲಯನ ದರುಶನ ಪುಣಯ | ಪ |
ಚೆನ್ನಿಗನೀತನು ಸುಜನರ ಪೊರೆಯಲು
ಪನ್ನಗಾಚಲದಿ ಬಂದು ನಿಂತಿರುವುದು || ಪುಣ್ಯ ||
ಈ ಮೂರ್ತ ಸ್ವರೂಪನಿಗೆ ನೈವೇದ್ಯ ಸಲ್ಲಿಸಿ ಪ್ರಸಾದ ಸ್ವೀಕರಿಸಲು ಏಕಾದಶಿ ವ್ರತ ಅಡ್ಡಿಯಾಯಿತಲ್ಲವೇ? ಚಿಂತೆ ಬೇಡ.
ರಾಜ್ಯವಿವಗೆ ಹದಿನಾಲಕ್‌ಉ ಲೋಕಗಳು |
ಭೋಜ್ಯ ಚರಾಚರ ಜಗವೆಲ್ಲಾ ರಾಜೀವಾಲಯನಾಥನಿವನು ಬಲು
ಸೋಜಿಗದಲಿ ನಿಂದಿಹ ನೋಡಿ ||
ಪೂಜ್ಯಚರಣಚರ ಗುರು ವ್ಯಾಸರಾಜ ಯತಿ
ರಾಜರಾರ್ಚಿತ ದ್ವಿಷಡಾಬ್ದದ ಪೂಜೆಯ || ಪುಣ್ಯ ||
ಶ್ರೀ ವ್ಯಾಸರಾಜ ಯತಿಗಳು ರಾಯನಿಯುಕ್ತರಾಗಿ ಹನ್ನೆರಡು ವರ್ಷ ತಿರುಪತಿ ಕ್ಷೇತ್ರದ ಮೇಲ್ವಿಚಾರಣೆಯಲ್ಲಿದ್ದರೆಂಬುದು ಪ್ರತೀತಿ. ಬಹುಶಃ ಈಗಿನ ಟಿಟಿಡಿಯಂಥಾ ಆಗಿನ ವ್ಯವಸ್ಥೆಯ ಸಿಇಓ ಥರದ ಅಧಿಕಾರ ನಿರ್ವಹಿಸಿದ್ದರೋ ಏನೋ?! ಆ ವ್ಯಾರಾಜಮಠದ ಪೀಠಾಧಿಪತಿಗಳಾಗಿ, ವಿದ್ಯಾಪ್ರಸನ್ನತೀರ್ಥರು, ಈ ಅಂಶವನ್ನು ನೆನಪು ಮಾಡಿಕೊಂಡಿರುವುದು ಸಹಜವೇ ಎನಿಸುತ್ತದೆ.
ನಿನ್ನೆ, ಸಾಲಂಕೃತ ಶ್ರೀಮೂರ್ತಿಯನ್ನು ನೋಡಿ ಆನಂದಿಸಿದ್ದೀರಲ್ಲವೇ? ಆನಂದತೀರ್ಥ ಮುನಿಗಳ ಪೀಠದ ಜವಾಬ್ದಾರಿಯುಳ್ಳ ಪ್ರಸನ್ನತೀರ್ಥರು, ಅಂತಹ ಆನಂದದ ಸ್ವರೂಪವನ್ನು ವಿಶ್ಲೇಷಿಸಿರು ಸೊಬಗು ನೋಡಿ,
ಸೌಂದರ್ಯದ ಖನಿ ಇವನು ಎಲ್ಲರನು |
ತಂದೆಯಂತೆ ಸಲಹುವ ಸತತ ||
ಒಂದೊಂದೆಡೆಯಲೂ ವ್ಯಾಪ್ತನಿವನು ಮ-
ತ್ತೊಂದೆಡೆಯಲಿ ಸುಲಭದಿ ಸಿಗನು!
ನಂದಿತೀರ್ಥಪರಿವಾರಜನರು ಇವ-
ರೆಂದು ಮುಂದೆ ನಿಂತಿರುವುದು || ಪುಣ್ಯ ||
ಒಂದೇ ಎಡೆಯಲ್ಲಿ ಉತ್ಕಟತೆಯಿಂದ ಈತನನ್ನು ಹುಡುಕಲು ಹೋದರೆ, ಬಹುಶಃ ಹಿರಣ್ಯಕಶಿಪುವಿನೆದುರಿನ ಕಂಬದಂತೆ ಒಡೆದು ಕಾಣಿಸಿಕೊಂಡಾನೇನೋ? ಜೋಕೆ! ಭೀತಿ ಬೇಡ ತೀರ್ಥರದ್ದೇ ಅಭಯವಚನ ಇಂತಿದೆ,
ಪದ್ಮಾವತಿ ವಲ್ಲಭನಿವ ಮುನಿಜನ-
ಹೃದ್ಗತ ಪ್ರಕಟಾಮಿತ ಚರಿತ |
ಮುಗ್ಧಜನರು ಪರಮಾದರ ತೋರಲು
ಸ್ನಿಗ್ಧನಾಗುವನು ನಿಮಿಷದಲಿ!
ಛದ್ಮಕೆ ದೂರನು ಭಕುತ ಪ್ರಸನ್ನನು
ಉದ್ಧರಿಸಲು ಈ ಸದ್ಮಕೆ ಬಂದಿರುವುದು || ಪುಣ್ಯ ||
’ಛದ್ಮಕೆ ದೂರನು’ ಎಂಬ ಎಚ್ಚರಿಕೆಯನ್ನು ಮಾತ್ರಾ ಮರೆಯದಿರುವುದು ಕ್ಷೇಮ!
ವೈಕುಂಠೈಕಾದಶಿ ಮಾರನೆ ದಿನ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!