ನೋಡುತ್ತ ಬಂದಿದ್ದೇನೆ
ನನಗೆ ಬುದ್ಧಿ ಬಂದಂದಿನಿಂದ
ಬೆಂಬಿಡದೆ ಭೂತದಂತೆ
ಹಿಂಬಾಲಿಸುತ್ತಿರುವ ನನ್ನ ನರೆಳನ್ನ
ಏನನ್ನೂ ಬಯಸದೆ
ಹೋದರೆ ಹೋಗುತ್ತ ನಿಂತೆರೆ ನಿಲ್ಲುತ್ತ
ಹಿಂಬಾಲಿಸುತ್ತಿದೆ ನನ್ನ
ಬೆಂಗಾವಲಾಗಿ ಯಕ್ಷ ಪ್ರಶ್ನೆಯಾಗಿ
ಹಲವು ಬೆಳಕುಗಳಲಿ
ಹಲವು ಕೋನಗಳಲಿ ನನ್ನ ನೆರಳ ಸೃಷ್ಟಿ
ಗೊಂದಲವಾಗಿದೆ ಎನಗೆ
ನೆರಳುಗಳು ಸತ್ಯವೆ ಮಿಥ್ಯವೆ ಎಂದು
ಅವು ಏಕೆ ಹುಟ್ಟುತ್ತವೆ ಮೌನವಾಗಿರುತ್ತವೆ ?
ಕತ್ತಲಲಿ ಮಾಯವಾಗುತ್ತವೆ ಆಗಲೂ
ಸಹ ಹಿಂಬಾಲಿಸುತ್ತವೋ ಏನೋ ?
ಅಂಧಕಾರದಲಿ ನೆರಳ ಗ್ರಹಿಸಲಾಗದ ಮಿತಿ
ನನ್ನ ದೃಷ್ಟಿಯದೋ ಎನೋ ?
ಮುಗ್ಧ ಬಾಲ್ಯದಲಿ ಗಾಡಾಂಧಕಾರದಲಿ
ಕೃತಕ ಬೆಳಕುಗಳಲ್ಲಿ ಬೆಂಬತ್ತಿದ ನೆರಳು
ನನ್ನನ್ನು ಭೂತದಂತೆ ರಾಕ್ಷಸನಂತೆ
ಯಮ ಕಿಂಕರನಂತೆ ಕಾಡಿ
ದಿಗಿಲುಗೊಳಿಸಿದ್ದುಂಟು ಸಾವು
ಬೆನ್ನಟ್ಟಿದಂತಾಗಿ ಬೆಚ್ಚಿ ಬೀಳಿಸಿದ್ದುಂಟು
ತಿರು ತಿರುಗಿ ನೋಡಿದರೂ ಮುಖ
ಮಾಡದ ಮಾತುಗಳಿಗೆ ಕೈಗಳಿಗೆ
ಸಿಕ್ಕದ ಮುಖೇಡಿ ನೆರಳು
ಕಷ್ಟ ಕಾರ್ಪಣ್ಯ ಸುಖ ದುಃಖದ ಎಲ್ಲ
ಸಂಧರ್ಭಗಳಲೂ ಗೊಣಗದೆ ಆಕ್ಷೇಪಿಸದೆ
ಬೆನ್ನಿಗಿರುವ ಮೌನಿ ನೆರಳು
ತಂದೆ ತಾಯಿ ಬಂಧು ಬಳಗ ಎಲ್ಲ
ಇಂದಿಗೂ ಬಿಟ್ಟಗಲದ ಸ್ನೇಹಿತ
ಬಾಲ್ಯದಲಿ ಭೂತವಾಗಿ ಬಹಳ
ಹೆದರಿಸಿದ್ದ ನೆರಳು
ಯೌವನದಲಿ ಕುತೂಹಲಿಯಾಗಿದ್ದ
ವಾರ್ಧಕ್ಯದಲಿ ಅರ್ಥವಾಗುತ್ತಿದ್ದಾನೆ
ಯಾರೆನ್ನ ಬಿಟ್ಟಗಲಿದರೂ
ಆತನೆನ್ನ ಹಿಂಬಾಲಿಸುತ್ತಿದ್ದಾನೆ
ನಿರ್ವಿಕಾರವಾಗಿ ಯಾವುದೇ
ಫಲಾಪೇಕ್ಷೆಯಿಲ್ಲದೆ
ಹೊರಟಿರುವೆ ದೀರ್ಘ ಪಯಣ ಸಾಗಲಿ
ನಿಲ್ಲಲಿ ಪಯಣ ವೆಲ್ಲಿಗೇ ಮುಗಿಯಲಿ
ಬೆಂಬತ್ತಿದ್ದಾನೆ ಜೊತೆಗಾರನಾಗಿ
ಭಯ ಹುಟ್ಟಿಸುತ್ತಿಲ್ಲ ತನಗಾಗಿ ಏನೂ
ಕೇಳುತ್ತಿಲ್ಲ ಆತ್ಮ ವಿಶ್ವಾಸ ಹುಟ್ಟಿಸಿದ್ದಾನೆ
ಜೊತೆಗಿರುವೆನೆಂದು
ಅಂತ್ಯದ ನಂತರ ಎಲ್ಲಿಗೆ ಹೋಗುತ್ತಾನೆ ?
ಗೊತ್ತಿಲ್ಲ ! ಬಹುಶಃ ಆಗಲೂ ಸಹ
ಬೆನ್ನಿಗಿರುತ್ತಾನೋ ಏನೋ
ಕರ್ಮ ಫಲವಾಗಿ " ನೆರಳ ರೂಪ " ವಾಗಿ
ಪ್ರತಿಕ್ರಿಯೆ (6)