ಜೀವನದ ನಿಜ ಪಥದಿ ಅಡಿಯೂರಪ್ಪ
ತಾನೆಲ್ಲರನು ಹಳಿದು ತುಳಿದು ಮೇಲೆದ್ದವನು
ಏನಾದರೂ ಸರಿಯೆ ತಾ ಗೈದುದೆಂದವನು
ಬದಿಕೂತ ದಿನದಿಂದ ಬಡಬಡಿಸುತಿಹ ನೋಡು
ದುಡಿದವರಿಗಿಲ್ಲಿ ಬೆಲೆಯಿಲ್ಲ ಎನುತಿಹನು
ಹಿಡಿತದಲಿ ಎಲ್ಲರಿರಲೆಂದು ಬಯಸುವನು ||೧||
ವೀರತೆಯಲಿರುವವರ ಹಗಲಿರುಳು ದುಡಿದವರ
ಹೋರಾಟಕೆಂದು ಮನೆ ಸಿರಿ ತೊರೆದು ಹೊರಟವರ
ನೀನಗ್ರಗಣ್ಯನಾದಾದಿನದಿ ಮರೆತಿದ್ದೆ
ಹೀನ ಜನರನೆ ನಿನ್ನ ಸುತ್ತವಿರಿಸಿದ್ದೆ
ಹಿಂದಿನವರನು ಹಿಂದೆ ಹಿಂದೆ ತಳ್ಳಿದ್ದೆ ||೨||
ಅಡಿಗಲ್ಲನಿಟ್ಟವರ ಇಟ್ಟಿಗೆಗಳಾದವರ
ಅಡಗಿಸಿದೆ ಗಾರೆಯಲಿ ನಿನ್ನರಗು ರಂಗುಗಳ
ಮೇಲ್ನೋಟ ಥಳಥಳಿಸಿ ಒಳ ಹೂರಣವ ಕೊಳೆಸಿ
ಅಲ್ಲೆಲ್ಲ ಕ್ರಿಮಿ ಕೀಟ ಸಂಚಾರವತಿಯಾಗಿ
ನಿಸ್ಸಾರದಲಿ ಹೆಮ್ಮೆ ಎಂದು ಭ್ರಮಿಸಿದ್ದೆ ||೩||
ಆದರ್ಶ ಹುಡಿಯಾಯ್ತು ಸ್ವಾರ್ಥತನ ಮಿಗಿಲಾಯ್ತು
ಬೇಧವಿಲ್ಲದೆ ತತ್ವ ಸಿದ್ಧಾಂತ ಬದಿಗಾಯ್ತು
ನೀತಿಯಿಲ್ಲದೆ ಧರ್ಪ ಧನದಾಸೆ ನೆಲೆಯಾಗಿ
ಪ್ರೀತಿಯೆಂಬುದು ತಾನು ತನ್ನವರಿಗಾಗಿ
ಬಿಸಿತಾಗೆ ಬದಲಾಗುತೇನೆ ಎನುತಿದ್ದೆ ||೪||
ಬಹುಮತಕೆ ಕೊಡು ಕೋಟಿ ಭಿನ್ನಮತಕಿದೆ ಕೋಟಿ
ಸಹಕರಿಸಬೇಕೆಂದು ಮಟ ಮಂದಿರಕೆ ಕೋಟಿ
ಲೂಟಿಯಲ್ಲದೆ ಮತ್ತದೇನು ಸಾಧನೆಯಿತ್ತು ?
ಕೋಟಿ ಹೃದಯದ ಭಾವಕೇನು ಬೆಲೆಯಿತ್ತು ?
ಸಂಸ್ಕಾರವೆಂಬುದು ಆಚಾರಕಿರದಿತ್ತು ||೫||
ಅಂದು ಸಂಘಸ್ಥಾನ ಹೇಳಿಲ್ಲವೇ ಕಥೆಯ
ಇಂದು ನೀ ನೋಡಯ್ಯ ಹಿರಿಯರಾ ವ್ಯಥೆಯ
ಕಣ್ಮುಚ್ಚಿ ಸಜ್ಜನರು ಬಿಟ್ಟ ನಿಟ್ಟುಸಿರು
ತಿನ್ನುತಿದೆ ಕರ್ಮಫಲ ಭೂತ ಬಂದಿದಿರು
ಇನ್ನಾದರು ತಿದ್ದಿ ಕೊಂಡಿರುತ ಬಾಳು ||೬||
ವಸುಧೆ ರಮಣರು ಲಕ್ಷ ಲಕ್ಷ ಸತ್ತಿಹರು
ವ್ಯಸನವಿಲ್ಲದೆ ಅನ್ಯರನ್ನಿವಳು ಒಪ್ಪಿಹಳು
ನೀನು ಕೊಸರಾಡದಿರು ನಾಯಕರು ಇಲ್ಲೆಂದು
ಏನೇನೋ ಮಾಡಿ ಮಾತಾಡಿ ಗುಲ್ಲೆಂದು
ಜನರಾಡಿ ಕೊಳ್ಳುವರು ಮರುಳಾಟವೆಂದು ||೭||
ಸಿಟ್ಟಾಗದಿರು ಸಹನೆ ವಹಿಸಿ ನೀ ಕೇಳು
ಗುಟ್ಟಾಗಿ ಉಳಿದಿಲ್ಲ ಈ ಎಲ್ಲ ಹಾಳು
ನಿನ್ನ ಸನ್ಮಾರ್ಗಗಳ ಮುಖವಾಡ ತೆಗೆದಿರಿಸಿ
ನಿನ್ನವರ ಒಣಗುಬಣ ಭಿಗುಮಾನ ಬದಿಗಿರಿಸಿ
ಜೀವನದ ನಿಜ ಪಥದಿ ನೀ ಅಡಿಯೂರಪ್ಪ ||೮||
- ಸದಾನಂದ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಭೂವಿಮಾನ ಯಾನ
ನಾವಿದ್ದೇವೆ
ಬೇಡಿಕೆ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (6)