ಅನಂತ ಸುಖದ ಸ್ವರ್ಗದ ಹಾದಿಯಲಿ

ಸಚ್ಚಿದಾದಂದದ ಅನ್ವೇಷಣೆಯಲಿ    

ಭಕ್ತಿ- ಜ್ನಾನ ಯೋಗದಲೆಯ ಮೇಲೆ ತೇಲುತ್ತಿರಲು

ಜಪ-ತಪ ಧ್ಯಾನ ಯೋಗದಲಿ ಒಂದಾಗಿ ಬೆರೆತಿರಲು

ಕಾಣದ ಕೈಯೊಂದು, ಮಾಯೆಯ ಸುಳಿಯೊಂದು

ರಸತಳ- ಪಾತಾಳಕೆ ಸೆಳೆದೊಯ್ದಿತು.

ಎಲ್ಲಿ ಅರ್ಥ-ಕಾಮದ ವಿಷ  ಜಂತುಗಳಿರುವುದೋ

ಅವಿದ್ಯೆಯ ಬಿರುಗಾಳಿ ಬೀಸುವುದೋ

ಅವರ್ಣದ ಮೋಡ ಮುಸುಕಿರುವುದೋ 

ಎಲ್ಲಿ ಭ್ರಾಂತಿಯಲಿ ಬಾಳು ತೊಳಲುತ್ತಿರುವುದೋ

ಮನ, ವಿಕ್ಷೇಪ , ವಿಕಾರಗಳ ಬಲಿಯಾಗಿರುವುದೋ

ಇಂದ್ರಿಯಗಳ ಪೈಶಾಚಿಕ  ನೃತ್ಯ  ಸಾಗಿರುವುದೋ

ಎಲ್ಲಿ ಅಹಂ ! ಅಹಂ ! ಎಂದು ಜೀವ ಘೀಳಿಡುವುದೋ

ಅಲ್ಲಿ,

                 ನರಕ ತಾಪದಲಿ

                 ಪಾಪ ಕೂಪದಲಿ

                                         ಸೆರೆಯಾಳಾಗಿರುವೆ

              ಬಂಧನವೆಲ್ಲಾ  ತೊರೆದು

              ಮನವ  ನಿಗ್ರಹಿಸಿ

ಆ ಪ್ರೇಮ-ಸಾಗರದಲಿ  ನಾನೊಂದು ಹನಿಯಾಗುವ ಬಯಕೆ

ಪರಮಾತ್ಮನಲ್ಲಿ  ಒಂದಾಗುವ ತವಕ ಜೀವಕೆ  !

 

ಶ್ರೀ ನಾಗರಾಜ್.