ಒಂಟಿತನದ ಭಾವ ಕಾಡುವಾಗ
ಪೂರ್ವಾಪರಗಳ ಪರದೆ ಸರಿಸಿ  
ಚಿಂತಿಸಬೇಕು ಒಂದೆರಡು ವಿಷಯಗಳ
ಮನಸ್ಸಿನ ಕ್ಲೇಶಗಳ ಸೋಂಕಿಲ್ಲದೆ
 
ಕಣ್ಣುಮುಚ್ಚಿ ತಂದುಕೊಳ್ಳಿ ಅರಿವಿಗೆ
ವಯಸ್ಸಿನಲ್ಲಿ ಹೃದಯ ಮಿಡಿದಾಗ
ಸಹಜ ಸಂಗತಿಗಳ ಒಂದೆರಡು ಘಳಿಗೆ
ಕಾಲ್ಪನಿಕ ವಿಸ್ಮಯಗಳ ಭ್ರಮೆಯಿಲ್ಲದೆ
 
ಸಂಬಂಧಗಳ ಬಣ್ಣಗಳು ಮಾಸುವಾಗ
ನೆನಪುಗಳ ಜೀವಂತಿಕೆ ಕಾಲವಾಗದಿರಲು
ಕಳೆಯಬೇಕು ಒಂದೆರಡು ಹನಿಗಳ
ನೆಮ್ಮದಿ ಸಿಗುವುದೆಂಬ ತರ್ಕವಿಲ್ಲದೆ
 
ವಿಷಮ ಸ್ಥಿತಿಗಳಲ್ಲಿ ಗೊಂದಲಗಳೆದ್ದರೆ
ತೆಗೆದುಕೊಳ್ಳಿ ನೈಜತೆಯ ಪರವಾಗಿ
ಗಟ್ಟಿಯಾದ ಒಂದೆರಡು ನಿರ್ಧಾರಗಳ
ಪರಿಣಾಮಗಳ ಕುರಿತು ಭಯವಿಲ್ಲದೆ
 
ಸಕಲವನ್ನು ಮುಕ್ತವಾಗಿ ಹಂಚಿಕೊಳ್ಳಲು
ಬದುಕಿನ ಪಯಣದಲಿ ಜೊತೆಯಾಗಿ
ನಿಕಟವಾದ ಒಂದೆರಡು ಸಂಪರ್ಕಗಳಿರಲಿ
ವ್ಯಕ್ತಿಗತ ನಿಲುವುಗಳ ಬೇಲಿಯಿಲ್ಲದೆ
 
ಸುತ್ತಲಿನ ಅವಕಾಶದಲ್ಲಿ ಘಟಿಸುವ
ನೈಸರ್ಗಿಕ ಸಂಗತಿಗಳ ಅನಿವಾರ್ಯತೆಗೆ
ಹುಡುಕಬೇಕು ಒಂದೆರಡು ಕಾರಣಗಳ
ಅವಶ್ಯಕತೆಯ ಪ್ರಶ್ನೆಗಳಿಗೆ ಅರ್ಥವಿಲ್ಲದೆ
 
ನಮ್ಮೊಳಡಗಿರುವ ಕವಿಯು ಎಚ್ಚೆತ್ತು
ಕವಿತೆ ಹುಟ್ಟುವ ಸಮಯವೆದುರಾದಾಗ
ಬರೆಯಬೇಕು ಒಂದೆರಡು ಸಾಲು
ಯಾವುದೇ ಮುಜುಗರಗಳ ಹಂಗಿಲ್ಲದೆ
 
- ಪ್ರಮೋದ್ ಶ್ರೀನಿವಾಸ