ನನ್ನ ಭ್ರಾತೃತ್ವ ಭಾವನೆ
         ನಮ್ಮ ಕುಟುಂಬದಲ್ಲಿ ಜರುಗಿದ ಒಂದು ಸಂಘಟನೆಯನ್ನು ನಾನು ಜ್ಞಾಪಿಸಿಕೊಳ್ಳುತ್ತಿದ್ದೇನೆ. ನನ್ನ ತಾತ ಮತ್ತು ಮುತ್ತಾತ ಇವರನ್ನು ’ಅಂಬಲಕಾರರ್’ - ಸದ್ಗುಣ ನೇತಾರರು ಎಂದು ರಾಮೇಶ್ವರದಲ್ಲಿ ಕರೆಯುತ್ತಿದ್ದರು. ಈ ದ್ವೀಪಕ್ಕೆ ರಾಮನು, ರಾವಣನ ವಿರುದ್ಧ ಯುದ್ಧಸಾರಿದ ಸ್ಥಳವೆನ್ನುವ ಮಹತ್ವವಿದೆ. ಆ ಪ್ರಸಂಗದ ಕುರುಹಾಗಿ ಈ ದ್ವೀಪವು ರಾಮನ ದಿವ್ಯಸಂಗಾತಿಯಾದ ಸೀತೆಯೊಟ್ಟಿಗೆ ಅವನ ಕಲ್ಯಾಣೋತ್ಸವವನ್ನು ನಡೆಸುವುದರ ಮೂಲಕ ಆಚರಿಸುತ್ತದೆ. ’ರಾಮರ್ ತೀರ್ಥಮ್’ ಎನ್ನುವ ಹೊಂಡದಲ್ಲಿ (ಪುಷ್ಕರಣಿಯಲ್ಲಿ) ಅಲಂಕೃತ ವಿಗ್ರಹಗಳನ್ನು ಹೊತ್ತೊಯ್ಯಲು ದೊಡ್ಡದಾದ ತೇಲುವ ವೇದಿಕೆಯನ್ನು ನನ್ನ ಮುತ್ತಜ್ಜನವರು ಒದಗಿಸುತ್ತಿದ್ದರು. ಆ ಹೊಂಡವು ಬಹಳ ಆಳವಾಗಿದೆ. ಬಂಗಾರದ ಆಭರಣಗಳಿಂದ ಅಲಂಕರಿಸಲ್ಪಟ್ಟ ಶ್ರೀ ರಾಮನ ವಿಗ್ರಹವನ್ನು ಈ ತೇಲುವ ವೇದಿಕೆಯ ಮೇಲಿರಿಸಿ, ಹೊಂಡದ ಮಧ್ಯದಲ್ಲಿರುವ ಸಣ್ಣ ಮಂಟಪದ ಸುತ್ತಲೂ ಕೊಂಡೊಯ್ಯಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಈಗಲೂ ಸಹ ಪೂರ್ತಿ ರಾಮೇಶ್ವರ ಪಟ್ಟಣವೇ ಅಲ್ಲಿ ನೆರೆದಿರುತ್ತದೆ ಅದನ್ನು ವೀಕ್ಷಿಸಲು.
 
          ಒಂದು ವರ್ಷ ನನ್ನ ಮುತ್ತಜ್ಜ ಆ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾಗ ಒಂದು ಅವಘಡ ಸಂಭವಿಸಿತು. ಆ ವಿಗ್ರಹವು ಉರುಳಿ ಬಿದ್ದು ಅ ಹೊಂಡದಲ್ಲಿ ಮುಳುಗಿತು. ಇಡೀ ರಾಮೇಶ್ವರ ಪಟ್ಟಣವೇ ನೋಡುತ್ತಿದ್ದಂತೆ, ನನ್ನ ಮುತ್ತಜ್ಜ ಯಾವುದೇ ಪ್ರಚೋದನೆ ಅಥವಾ ಹಿಂಜರಿಕೆಯಿಲ್ಲದೆ ಆ ಹೊಂಡದೊಳಕ್ಕೆ ಎಗುರಿ ಆ ವಿಗ್ರಹವನ್ನು ಮೇಲೆತ್ತಿ ತಂದ. ರಾಮೇಶ್ವರ ದೇವಸ್ಥಾನದ ಅರ್ಚಕ ಮಂಡಳಿಯು ’ಮುತಲ್ ಮರಿಯಾತೈ’ (ಮೊದಲ ಮರ್ಯಾದೆ - First Honour) ಎನ್ನುವ ಬಿರುದನ್ನು ನಮ್ಮ ಕುಟುಂಬಕ್ಕೆ ಪ್ರದಾನ ಮಾಡಿದರು. ಆ ದಿನ ರಾಮೇಶ್ವರದ ಮಸೀದಿಯಲ್ಲಿ ಆ ವಿಗ್ರಹವನ್ನು ಕಾಪಾಡಿದ್ದಕ್ಕಾಗಿ ಮತ್ತು ಭಗವಂತನ ಅನುಗ್ರಹ ನಮ್ಮ ಕುಟುಂಬದ ಮೇಲೆ ಉಂಟಾಗಿದ್ದಕ್ಕಾಗಿ ಆ ಸರ್ವಶಕ್ತನಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
 
          ನಾನು ಈ ಘಟನೆಯನ್ನು ಯಾವಾಗಲೂ ಮಾನವನ ಭ್ರಾತೃತ್ವ ಮತ್ತು ಸಮಬಾಳ್ವೆಯ ಒಂದು ಜ್ವಲಂತ ಉದಾಹರಣೆಯನ್ನಾಗಿ ಪರಿಗಣಿಸುತ್ತೇನೆ, ಅದರಲ್ಲೂ ವಿಶೇಷವಾಗಿ ಈ ದಿನಗಳಲ್ಲಿರುವ ದೃಷ್ಟಿಕೋನದಿಂದ. ನಾವು ಎಲ್ಲೇ ಇದ್ದರೂ ಕೂಡಾ ಈ ರೀತಿಯ ಸಹೋದರತ್ವದ ಭಾವನೆಗಳನ್ನು ಪೋಷಿಸಲಾಗುವುದಿಲ್ಲವೇ?
 
ವಿ.ಸೂ.: ಈ ಲೇಖನವು,ಡಾll ಅಬ್ದುಲ್ ಕಲಾಂ ಅವರು ನಿಮ್ಮೊಂದಿಗೆ ಮಾತನಾಡುತ್ತಾರೆ – ಒಂದು ಸಂಗ್ರಹ ಗ್ರಂಥ (Dr. Abdul Kalam Speaks to you – A Compilation), ಪ್ರಕಟಣೆ: ಶ್ರೀ ಸಂತ್ ಗಜಾನನ್ ಮಹರಾಜ್ ತಾಂತ್ರಿಕ ಮಹಾವಿದ್ಯಾಲಯ, ಶೇಗಾಂವ್– ೪೪೪೨೦೩, ಬುಲ್ಡಾನಾಜಿಲ್ಲೆ, ಮಹರಾಷ್ಟ್ರರಾಜ್ಯ; ಆಂಗ್ಲ ಭಾಷೆಯ ಪುಸ್ತಕದ ೩೩ರಿಂದ ೩೪ನೇ ಪುಟಗಳ ಅನುವಾದದ ಭಾಗ.