ಅಮ್ಮಾ ಆಗಲೆ ಏಳಿಸಿ ಬಿಟ್ಟೆಯಾ

ಇಲಿಗಳ ಸಭೆಯು ಮುಗಿಯಲೇ ಇಲ್ಲ

ಮೀಸೆಯ ಇಲಿಗಳ ಹಲ್ಲಿನ ಕೊರೆತ

ಮೂಸುವ ಇಲಿಗಳ ಮೂಗಿನ ಮಸೆತ

ಸೈನಿಕ ಇಲಿಗಳ ಪಹರೆಯ ಜೋರು

ನಾಯಕ ಇಲಿಗಳ ಜಗಳದ ನಡುವೆ

ಪಹರೆಯ ಇಲಿಗಳು ಕೂಗಲು ಸದ್ದು

ಮೂಷಿಕ ರಾಜನು ಬಂದನು ಎದ್ದು

ಠೊಣಪ ಬೆಕ್ಕಿನ ಸೊಕ್ಕಿನ ಕಾಟದ

ವಿವರದ ವರದಿಯ ಮಂತ್ರಿಯು ನೀಡಿದ

ಬೆಕ್ಕಿನ ಕಾಟವ ಬಿಟ್ಟರೆ ಹೀಗೆಯೆ

ನಮ್ಮಯ ಪೀಳಿಗೆ ಉಳಿಯದು ಮುಂದೆ

ಬೆಕ್ಕನು ಕೊಲ್ಲುವ ಬಲ ನಮಗಿಲ್ಲ

ಶಕ್ತಿಯ ಬದಲು ಯುಕ್ತಿಯ ಹೂಡಿ

ಬೆಕ್ಕಿನ ನಡಿಗೆಯ ಸುಳಿವದು ಸಿಕ್ಕರೆ

ಛಕ್ಕನೆ ಬಿಲವನು ಸೇರಲು ಸಾಕು

ಬೆಕ್ಕಿನ ಕೊರಳಿಗೆ ಘಂಟೆಯ ಕಟ್ಟುವ

ಬಿಸಿಬಿಸಿ ಚರ್ಚೆಯು ನಡೆಯುತಲಿತ್ತು

ಸ್ವಲ್ಪವೆ ಹೊತ್ತಲಿ ಮುಗಿಯತಲಿತ್ತು

ಅವಸರ ಮಾಡಿ ಏಳಿಸಿ ಬಿಟ್ಟೆ

ಒಳ್ಳೆಯ ಕನಸನು ಕೆಡಿಸಿಯೆ ಬಿಟ್ಟೆ

ಎನ್ನಲು ಪುಟ್ಟ ಅಳುವಿನ ಮುಖದಲಿ

ಅಪ್ಪನ ಪೆಟ್ಟು ಬೀಳುವ ಮೊದಲೆ

ಶಾಲೆಗೆ ಹೋಗುವ ತಯಾರಿ ನಡೆಸು

ಎಂದಳು ಅಮ್ಮ ಗಲ್ಲವ ಸವರುತ

ಅಕ್ಕನು ಬಂದು ಏನೂ ಎನ್ನಲು

ಪುಟ್ಟನ ಕನಸಿನ ಇಲಿಗಳ ಸಭೆಯು

ಮುಗಿಯುವ ಮೊದಲೆ ಏಳಿಸಿ ಬಿಟ್ಟೆ

ಅದಕೇ ಪುಟ್ಟನ ಮುನಿಸಿನ ಸಿಟ್ಟು

ಈದಿನ ರಾತ್ರೆ ಮಲಗಲು ಮತ್ತೆ

ಕನಸದು ಪಕ್ಕಾ ಎಂದಳು ಅಕ್ಕಾ

ಶಾಲೆಗೆ ಹೋಗಲು ಎದ್ದನು ಪುಟ್ಟ

ಮನಸಿನ ತುಂಬ ಹೊತ್ತಿಹ ಕನಸನು

ನಾನಾ ರೀತಿಯ ಇಲಿಗಳ ಗತ್ತನು

ಮಿತ್ರರಿಗೆಲ್ಲಾ ಬಿಡದೆ ಹೇಳಲು

ಪುಟ್ಟನ ಕತೆಗೆ ಹೊಗಳಿಕೆ ಸುರಿಮಳೆ

ಠಣಠಣ ಘಂಟೆ ಕೇಳಿದ ಹುಡುಗರು

ಠೊಣಪ ಬೆಕ್ಕಿನ ಸೊಕ್ಕಿದ ಕೊರಳಿಗೆ

ಶಾಲೆಯ ಘಂಟೆಯೆ ಭರ್ಜರಿ ಕೊಡುಗೆ

ಇಲಿಗಳ ಕನಸು ಆಗಲಿ ನನಸು

ಘಂಟೆಯ ಕಾಟ ನಮಗೂ ಇಲ್ಲ

ಬೆಕ್ಕಿನ ಕಾಟ ನಿಮಗೂ ಇಲ್ಲ