'ಆಂಟೇರಿಯೋ ಸೈನ್ಸ್ ಸೆಂಟರ್' ಗೆ ಹೋಗಲು, ನಾವು ಮೊದಲು ಯೋಚಿಸಿದ್ದು ಜೂನ್ ೨೦ ರಂದು. ಆದರೆ ಅಲ್ಲಿಗೆ ನಾವು ೧೬ ನೆಯ ತಾರೀಖೆ ಹೋದೆವು. ಅದಕ್ಕೆ ಕಾರಣ, ಜೂನ್ ೧೬ ರಂದು 'ನಯಾಗರ ಫಾಲ್ಸ್' ಗೆ ಹೋಗಬೇಕಾಗಿತ್ತು. ಆದರೆ ಅಂದು ಸೈಕಲ್ ಸವಾರರ ಪ್ರತಿಯೋಗಿತೆ ಇದ್ದದ್ದರಿಂದ ನಾವು ರಸ್ತೆಯಲ್ಲಿ ಜಾಗವಿಲ್ಲದೆ ಮನೆಗೆ ವಾಪಸ್ ಬರಬೇಕಾಯಿತು. 'ಬೇರೆ ಏನು ಮಾಡೋಣ', ಎಂದು ಆಲೋಚಿಸಿದಾಗ, ಹೊಳೆದದ್ದು, 'ಇಂದೇ ಏಕೆ ಆಂಟೇರಿಯೋ ಸೈನ್ಸ್ ಸೆಂಟರ್ ಗೆ ಹೋಗಬಹುದಲ್ಲಾ,' ಎಂದು...ಹೀಗೆ 'ಸೈನ್ಸ್ ಸೆಂಟರ್' ನಮಗೆ ಅತಿ ಮುದಕೊಟ್ಟಿತು.
ಈ ಹುಡುಗನ ಹೆಸರು, 'ಡೇವಿಡ್ ', (ಹೆಸರು ಬದಲಾಯಿಸಿದ್ದೇನೆ) ಅವನು ಅದೆಷ್ಟು ಬೇಗ ಈ ಮಾಡೆಲ್ ಮಾಡಿದ ! ಅವರಮ್ಮ ನಂತೂ ಆನಂದದಿಂದ ಚಪ್ಪಾಳೆ ತಟ್ಟಿ ಸಂಭ್ರಮಿಸಿದ ನೋಟವನ್ನು ನಾವು ನೋಡಿಯೇ ಅದರ ಮಹತ್ವವನ್ನು ತಿಳಿಯಬೇಕು. ಅಲ್ಲಿಯೇ ನಿಂತಿದ್ದ ನಾನು, ಆಕೆಯ ಅಪ್ಪಣೆಪಡೆದು 'ಡೇವಿಡ್ ' ನ ಚಿತ್ರವನ್ನು ಸೆರೆಹಿಡಿದೆ. ಈ ಪ್ರಸಂಗ ನನಗೂ ಮತ್ತು ನನ್ನ ಪತ್ನಿಗೂ ಕೊಟ್ಟ ಸಂತಸವನ್ನು ಪದಗಳಲ್ಲಿ ಬಣ್ಣಿಸಲಾರೆ !
ಕೆಳಗೆ ತೋರಿಸಿರುವ ಮಗುವೊಂದು ಪುಟ್ಟ ಪೆಟ್ಟಿಗೆಗಳನ್ನು ಎತ್ತರಕ್ಕೆ ಪೇರಿಸಿ, ತನ್ನ ಎತ್ತರವನ್ನು ಅಳತೆ ಮಾಡುತ್ತಿದೆ....
ಇನ್ನೊಂದು ಮಗು, ಕೆಂಪು ಕಾರಿನಲ್ಲಿ ಕುಳಿತು ತಾನೇ ಡ್ರೈವ್ ಮಾಡಲು ಪ್ರಯತ್ನಿಸಿ ಯಶಸ್ಸನ್ನು ಪಡೆಯಿತು. ತಂದೆ ತಾಯಂದಿರು ದೂರದಲ್ಲಿ ನಿಂತು ಅದರ ಪ್ರಗತಿಯನ್ನು ಹೊಗಳಿ ಹಾಡಿದರು !
'ಆಂಟೆರಿಯೋ ಸೈನ್ಸ್ ಸೆಂಟರ್' ನ ಒಳಗಡೆ ಹೋದರೆ, ಅಲ್ಲಿನ ಮಕ್ಕಳ ಪರಿಸರದ ಮಳಿಗೆ ಮಕ್ಕಳಿಗೋಸ್ಕರವಾಗಿಯೇ ಹೇಳಿಮಾಡಿಸಿದಂತಿದೆ. ಅದೆಷ್ಟು ಆಟಿಕೆಗಳು, ನೆಲದ ಮಟ್ಟದಲ್ಲೇ ಇಲ್ಲಾ ಆಟದ ಸಾಮಾನುಗಳು. ಮಕ್ಕಳೇ ಎಲ್ಲವನ್ನೂ ಅವರಿಗೆ ಬೇಕಾದ ಹಾಗೆ ಒಪ್ಪವಾಗಿ ಪೇರಿಸಬಹುದು. ಆಟವಾಡಲು ಬಳಸಬಹುದು. ಅವರಿಗೆ ಯಾರೂ ಇದು ಮಾಡಬೇಡ; ಅದು ಬೇಡ. ಇಲ್ಲಿ ನಿಲ್ಲು, ಅಲ್ಲಿ ಹತ್ತಬೇಡ, ಇತ್ಯಾದಿ ಯಾವ ಹದ್ದುಬಸ್ತುಗಳು ಇಲ್ಲ. ಅವರಿಗೆ ಏನಾದರು ಗೊತ್ತಿಲ್ಲದ ವಸ್ತುಗಳನ್ನೂ ಮುಟ್ಟಿ ಗಾಯ ಮಾಡಿಕೊಳ್ಳುವ ಪರಿಸ್ಥಿತಿಯೂ ಇಲ್ಲ. ಆದರೆ ಅವರ ಜೊತೆ ಒಬ್ಬ ಮನೆಯ ಹಿರಿಯ ವ್ಯಕ್ತಿ ಇರಲೇ ಬೇಕು. ಈ ಪರಿಸರದಲ್ಲಿ ಮಕ್ಕಳು ತಮಗೆ ಗೊತ್ತಿಲ್ಲದಂತೆ ಏನಾದರೂ ಹೊಸದನ್ನು ಮಾಡುತ್ತಾರೆ. ಅದನ್ನು ಮಾಡುವಾಗ ಮಧ್ಯದಲ್ಲಿ ಬರುವ ತೊಡಕು-ತೊಂದರೆಗಳನ್ನೂ ಅವರೇ ನಿವಾರಿಸಿಕೊಳ್ಳುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ಮಕ್ಕಳು ತಮ್ಮ ಪುಟ್ಟ ಪುಟ್ಟ ಕೆಲಸಗಳಲ್ಲಿ ತನ್ಮಯರಾಗಿರುವುದನ್ನು ನಾವು ನೋಡಿ ಆಶ್ಚರ್ಯಪಡುತ್ತೇವೆ. ಅವರಮುಖದಲ್ಲೇ ಏನೋ ಮಹಾ ಕಾರ್ಯವನ್ನೂ ಸಾಧಿಸಿದ ಗೆಲುವಿನ ಮಂದಹಾಸ, ನಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ !
ಕೊನೆಯಲ್ಲಿ, ಸಾಮೂಹಿಕವಾಗಿ ಮಕ್ಕಳ ವಯೋಮಿತಿಯನ್ನು ಅನುಸರಿಸಿ 'ಆಂಟೆರಿಯೋ ಸೈನ್ಸ್ ಸೆಂಟರ್' ನ ಮುಖ್ಯ ಆಯೋಜಕರು ಅವರಿಗೆ 'ಕಾರ್ಯಶಾಲೆ' ಗಳನ್ನು ಆಯೋಜಿಸುತ್ತಾರೆ. ಅವೆಲ್ಲವೂ ಅತ್ಯಂತ ಸುಂದರವಾಗಿ ನಡೆಸಲ್ಪಡುತ್ತವೆ. ನಾವು ಅಲ್ಲೇ ಮಕ್ಕಳ ಕೆಲವು ಆಟಿಕೆಗಳನ್ನು ಅವರು ಸಜಾಯಿಸಿ ಎಷ್ಟು ಚೆನ್ನಾಗಿ ಪ್ರದರ್ಶನಕ್ಕೆ ಇಡುವುದನ್ನು ನೋಡಿ ಆನಂದಿಸಿದೆವು. ಮತ್ತೊಂದು ವಿಚಾರವೆಂದರೆ, ಅಲ್ಲಿ ನಾವು ಫೋಟೋಗಳನ್ನು ತೆಗೆಯಲು ಯಾವ ಪ್ರತಿಬಂಧವೂ ಇಲ್ಲ. ಮಕ್ಕಳ ಮತ್ತು ಪಾಲಕರ 'ಏಕಾಂತತೆ',(ಪ್ರೈವೆಸಿ)ಯನ್ನೂ ಮಾತ್ರ ಕಾಯ್ದುಕೊಳ್ಳಬೇಕು. ಅದಕ್ಕೆ ಹೆಚ್ಚು ಆದ್ಯತೆ ಕೊಡುತ್ತಾರೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!