ಸಿಡಿಮಿಡಿಗುಟ್ಟುತ ಗಡಿಬಿಡಿ ಗುಂಡ |

ತಡಬಡಮಾಡುತ ಓಡುತ ಬಂದ |

ಅಡಿಗೆ ಮನೆಯ ಅಡಕಲು ಗಡಿಗೆ |

ಬಡಬಡ ಮಾಡುತ ಇಳಿಸಲು ಕೆಳಗೆ |

ಬಡಿಗೆಯ ಕುಟ್ಟುತ ಅಡಿಗೆಯ ಅಜ್ಜಿಯು |

ತಟವಟ ಬೈಯುತ ಒಳಗಡೆ ಕಾಲಿಡೆ |

ಹೆದರಿದ ಗುಂಡನು ಗಲಿಬಿಲಿ ಗೊಂಡು |

ತಡಬಡ ಮಾಡುತ ಗಡಿಗೆಯ ಒಡೆದ  || 1 ||

 

ಒಡೆಯುವ ಗಡಿಗೆಯ ಸದ್ದನು ಕೇಳಿ |

ಗಡಗಡ ನಡುಗುವ ಅಜ್ಜನ ಗುಡುಗು |

ಓಡುತ ಬಂದಳು ಗುಂಡನ ಅಮ್ಮ |

ಅಡಿಗೆಯ ಮನೆಯ ದಡಬಡ ಸದ್ದಿಗೆ |

ಪಕ್ಕದ ಕೋಣೆಯ ಅಕ್ಕನು ಬರಲು |

ಆಡಲು ಹೋಗದೆ ಅಡಿಗೆಯ ಮನೆಯ |

ಅಡಕಲ ಗಡಿಗೆಯ ಗೊಡವೆಯ ಬಿಡೆಯ |

ಎನ್ನುತ ಗುಂಡನ ಗಲ್ಲವ ಹಿಂಡಲು   || 2 ||

 

ಧೈರ್ಯದಿ ಗುಂಡನು ಮಿತ್ರರಿಗೆಲ್ಲಾ |

ಕೊಬ್ಬರಿ ಬೆಲ್ಲವ ಕೊಡಲು ಎನ್ನಲು |

ನೆಲುವಿನ ಮೇಲಿನ ಗಡಿಗೆಯ ತೆಗೆದು |

ಕೈಯಲಿ ಕೊಟ್ಟಳು ಕೊಬ್ಬರಿ ಬೆಲ್ಲ   |

ನೋಡದೊ ಹೊರಗಡೆ ರಿಕ್ಕು ಸಿದ್ದು |

ಚಿಂಟು ಪೃಥ್ವಿ ಲಿಕ್ಕಿ ಗಗ್ಗು |

ಪುಟ್ಟಿ ಪಿಂಕಿ ಕೀರ್ತಿ ಶಶಿ |

ಕಾದಿದೆ ಹೊರಗಡೆ  ಎಲ್ಲರ ದಂಡು |

ಆಡಿರಿ ಇಲ್ಲಿಯೆ ಚಿನ್ನಿ ದಾಂಡು  || 3 ||

 

ಜಗಳವ ಕಾಯದೆ ಗಲಭೆಯ ಮಾಡದೆ |

ಪಕ್ಕದ ಮನೆಯ ಗಾಜನು ಒಡೆಯದೆ |

ಆಟವ ಮುಗಿಸಿ ಬೇಗನೆ ಬನ್ನಿರಿ  |

ಮುಖವನು ತೊಳೆದು ದೀಪವ ಬೆಳಗಿ  |

ಸರಸ್ವತಿ ದೇವಿಯ  ಸ್ತೋತ್ರವ ಹೇಳಿ |

ಪಾಠವ ಮುಗಿಸಿ ಊಟವ ಮಾಡಿರಿ |

ಕಥೆಯನು ಹೇಳುವೆ ಮಲಗುವ ಮೊದಲು |      

ಹಾರಿದ ಗುಂಡ ಆಡಲು ಹೊರಗಡೆ |

ಒಡೆದಿಹ ಗಡಿಗೆಯ ಚೂರನು ಆರಿಸಿ |

ಹೊರಗಡೆ ಎಸೆದಳು ಗುಂಡನ ಅಮ್ಮ  || 4 |