ಶುದ್ಧ ವಿದ್ಯಾ ಬಗ್ಗೆ ಮತ್ತಷ್ಟು ವಿಚಾರಗಳು:
ಇದು ಶಿವನಿಂದ ಪ್ರಾರಂಭಿಸಿ ಲೆಕ್ಕ ಮಾಡಿದಾಗ ಹದಿನೈದನೆಯ ತತ್ವವಾಗಿದೆ. ಈ ತತ್ವದಲ್ಲಿ, ‘ನಾನು (ಪರಶಿವ)’ ಮತ್ತು ‘ಇದು (ಪ್ರಕೃತಿ)’ ಎನ್ನುವ ಎರಡೂ ಪ್ರಜ್ಞೆಗಳು ಸಮಾನ ಪ್ರಾಧಾನ್ಯತೆಯನ್ನು ಪಡೆದಿರುತ್ತದೆ. ಮೊಳಕೆಯೊಡೆದ ಪ್ರಪಂಚವು ಬೇರೆಯಾಗಿ ಕಂಡುಬಂದರೂ, ’ಗುರುತಿಸುವಿಕೆ’ಯು (ಪರಶಿವ ಮತ್ತು ಪ್ರಕೃತಿ ಬೇರೆ ಬೇರೆ ಎಂದು ಗುರುತಿಸುವುದು) ಅದರ ಒಳಗೆ ಇನ್ನೂ ತೆಳುವಾದ ದಾರದಂತೆ ಇರುತ್ತದೆ. ಇಲ್ಲಿ ವಿವಿಧತೆಯ ಪ್ರಾರಂಭಿಕ ಗುರುತನ್ನು ಕಾಣುತ್ತೇವೆ ಮತ್ತು ಕ್ರಿಯೆಯು ಇಲ್ಲಿ ಪ್ರಧಾನ ತತ್ವವಾಗಿದೆ. ಇಲ್ಲಿ ಪ್ರಜ್ಞೆಯ ಸ್ವರೂಪವು, ’ನಾನು’ ಹಾಗೂ ’ನಾನು ಮತ್ತು ಇದು ಕೂಡಾ’ ಸ್ಥಿತಿಯಲ್ಲಿರುತ್ತದೆ. ವಿದ್ಯಾ ತತ್ವದಲ್ಲಿ ಮೂರು ವಿಧಗಳಿದ್ದು ಅವಾವುವೆಂದರೆ - ಶುದ್ಧ ವಿದ್ಯಾ, ಸಹಜ ವಿದ್ಯಾ, ಮತ್ತು ಕಂಚುಕ ವಿದ್ಯಾ (ವಿದ್ಯಾ ಕಂಚುಕ) ಅಥವಾ ಪರಿಮಿತ ಜ್ಞಾನ. ಇಲ್ಲಿ ಐದನೆಯ ತತ್ವವಾದ ’ಸದ್ವಿದ್ಯಾ’ ಮತ್ತು ’ಶುದ್ಧವಿದ್ಯಾ’ ಎರಡೂ ಒಂದೇ ಆಗಿವೆ, ಸಹಜವಿದ್ಯಾ ಎಂದರೆ ಸಹಜವಾದ ಜ್ಞಾನ (ತತ್ವವಲ್ಲ). ಸಹಜ ಜ್ಞಾನವು ಪರಶಿವನ ಪ್ರತ್ಯೇಕತೆಯು ಮೊಳಕೆಯೊಡೆಯುವುದನ್ನು (ಹೊರ ಹೊಮ್ಮುವುದನ್ನು) ಪ್ರತಿಪಾದಿಸುತ್ತದೆ; ಏಕೆಂದರೆ ’ಸಹಜವಿದ್ಯಾ’ವನ್ನು ಶುದ್ಧವಿದ್ಯಾ ಅಥವಾ ಅಪ್ಪಟ ಜ್ಞಾನವೆಂದು ಕರೆಯಲಾಗಿದೆ.
ವಿ.ಸೂ: ಮೇಲಿನ ವಿವರಣೆಯು ತ್ರೈತ ಸಿದ್ಧಾಂತ ಅಂದರೆ ಪಶು, ಪಾಶ ಮತ್ತು ಪಶುಪತಿ ಈ ಮೂರು ವಸ್ತುಗಳನ್ನು ಒಳಗೊಂಡ ಪಾಶುಪತ ಮತದ ಸಿದ್ಧಾಂತದ ಪ್ರಕಾರ ವಿವರಿಸಲಾಗಿದೆ. ಇದರ ಅಲ್ಪ-ಸ್ವಲ್ಪ ಬದಲಾವಣೆಯನ್ನು ನಾವು ಕಾಶ್ಮೀರ ಶೈವತತ್ವ ಮತ್ತು ತಮಿಳು ಶೈವಸಿದ್ಧಾಂತದಲ್ಲಿ ಕಾಣಬಹುದು.
*******
ಲಲಿತಾ ಸಹಸ್ರನಾಮ ೨೬ರಿಂದ ೩೧
Karpūravīṭikāmodha-samākarṣi-digantarā कर्पूरवीटिकामोध-समाकर्षि-दिगन्तरा (26)
೨೬.ಕರ್ಪೂರವೀಟಿಕಾಮೋಧ-ಸಮಾಕರ್ಷಿ-ದಿಗಂತರಾ
’ಕರ್ಪೂರವೀಟಿಕಾ’ ಎನ್ನುವುದು ಹಲವಾರು ಸುವಾಸನಾಯುಕ್ತ ವಸ್ತುಗಳನ್ನು ಸೇರಿಸಿ ತಯಾರಿಸಿದ ಒಂದು ಪದಾರ್ಥ, ಇದನ್ನು ವೀಳೆ ಎಲೆಯ ತಾಂಬೂಲದಲ್ಲಿ ಸೇವಿಸುತ್ತಾರೆ. ಇದರಲ್ಲಿ ಉಪಯೋಗಿಸುವ ವಸ್ತುಗಳೆಂದರೆ, ಕೇಸರಿ, ಏಲಕ್ಕಿ, ಲವಂಗ, ಕರ್ಪೂರ, ಕಸ್ತೂರಿ, ಜಾಪತ್ರೆ ಮತ್ತು ಜಾಕಾಯಿ. ಈ ಮೂಲ ಸಾಮಗ್ರಿಗಳನ್ನು ಚೆನ್ನಾಗಿ ಪುಡಿಮಾಡಿ ಅವುಗಳನ್ನು ಪುಡಿಮಾಡಿದ ಕಲ್ಲುಸಕ್ಕರೆಯೊಂದಿಗೆ ಬೆರೆಸುತ್ತಾರೆ. ಈ ಕರ್ಪೂರವೀಟಿಕದ ಪುಡಿಯನ್ನು ವೀಳೆದೆಲೆಯೊಂದಿಗೆ ಅಗಿದಾಗ ಅದು ಸುಗಂಧದಿಂದ ಕೂಡಿದ ಪರಿಮಳವನ್ನು ಬೀರುವುದಲ್ಲದೆ ಬಹಳಷ್ಟು ಸವಿರುಚಿಯನ್ನು ಹೊಂದಿರುತ್ತದೆ. ದೇವಿಯು ಕರ್ಪೂರವೀಟಿಕಾವನ್ನು ಅಗಿದಾಗ ಅದು ಇಡೀ ಪ್ರಪಂಚಕ್ಕೆ ಸುಗಂಧವನ್ನು ಬೀರುತ್ತದೆ. (ಹೆಚ್ಚಿನ ವಿವರಗಳನ್ನು ೫೯೯ನೇ ನಾಮದ ಚರ್ಚೆಯಲ್ಲಿ ನೋಡೋಣ). ’ಲಲಿತಾ ತ್ರಿಶತಿ’ಯ (’ಪಂಚದಶೀ’ ಮಂತ್ರದ ಆಧಾರದ ಮೇಲೆ ರಚಿಸಿದ ೩೦೦ ನಾಮಾವಳಿಗಳು) ೧೪ನೇ ನಾಮವು ಕೂಡಾ ಇದೇ ಅರ್ಥವನ್ನು ಹೊಮ್ಮಿಸುತ್ತದೆ. ಬಹುಶಃ ದೇವಿಯು ಅಮಾಯಕರನ್ನು ಈ ಸುಗಂಧ ದ್ರವ್ಯದ ಪರಿಮಳದಿಂದ ತನ್ನೆಡೆಗೆ ಆಕರ್ಷಿಸುತ್ತಾಳೆ ಎನ್ನುವುದು ಇದರ ಅರ್ಥವಾಗಿರಬಹುದು. ಜ್ಞಾನಿಗಳು ಭಕ್ತಿಯ ಮೂಲಕ ಅವಳನ್ನು ಸಮೀಪಿಸಬಹುದು ಆದರೆ ಅಮಾಯಕರು ಅಥವಾ ಅಜ್ಞಾನಿಗಳಿಗೆ ಅವಳ ಕೃಪೆಯನ್ನು ಹೊಂದಲು ಉತ್ತೇಜನ ನೀಡುವ ವಸ್ತುವಿನ ಅವಶ್ಯಕಯಿದೆ. ಈ ರೀತಿ ಉತ್ತೇಜನವನ್ನೀಯುವ ವಸ್ತುವು ಆ ಸುಗಂಧಭರಿತ ಪರಿಮಳವಾಗಿದೆ.
Nija-sallāpa-mādurya-vinirbhartsita-kacchpī निज-सल्लाप-मादुर्य-विनिर्भर्त्सित-कच्छ्पी (27)
೨೭.ನಿಜ-ಸಲ್ಲಾಪ-ಮಾಧುರ್ಯ-ವಿನಿರ್ಭರ್ತ್ಸಿತ-ಕಚ್ಛಪೀ
ಸರಸ್ವತಿಯ ವೀಣೆಗೆ ’ಕಚ್ಛಪೀ’ ಎಂದು ಹೆಸರು. ಕಲೆಗಳ ಅಧಿದೇವತೆಯಾದ ಸರಸ್ವತೀ ದೇವಿಯ ಕೈಯ್ಯಲ್ಲಿ ಅದರಿಂದ ಅಮೋಘವಾದ ಸುಶ್ರಾವ್ಯವು ಹೊಮ್ಮುತ್ತದೆ. ಆದರೆ ಲಲಿತಾದೇವಿಯ ಸ್ವರವು ಕಚ್ಛಪೀ ವೀಣೆಯ ಧ್ವನಿಗಿಂತ ಮಧುರವಾಗಿದೆ.
ಸೌಂದರ್ಯ ಲಹರಿಯ ೬೬ನೇ ಶ್ಲೋಕವು, "ವಾಣಿಯು(ಸರಸ್ವತಿಯು) ಶಿವನ ವಿವಿಧ ಮಹಿಮಾನ್ವಿತವಾದ ಲೀಲೆಗಳನ್ನು ತನ್ನ ವೀಣೆಯಿಂದ ನುಡಿಸುತ್ತಿದ್ದರೆ; ಅದಕ್ಕೆ ನೀನು ತಲೆಯಾಡಿಸುತ್ತಾ ಮೆಚ್ಚುಗೆಯ ನುಡಿಗಳನ್ನು ಉಲಿದಾಕ್ಷಣ ಸರಸ್ವತಿಯು ತನ್ನ ವೀಣೆಯನ್ನು ಅದರ ಪೆಟ್ಟಿಗೆಯೊಳಗಿಟ್ಟು ಮುಚ್ಚಿಡುತ್ತಾಳೆ. ವೀಣೆಯ ತಂತಿಯ ಮಧುರ ಝೇಂಕಾರವನ್ನು ನಿನ್ನ ಮೃದು ಮತ್ತು ಇಂಪಾದ ಮೆಚ್ಚುಗೆಯ ನುಡಿಗಳು ಅಣಕಿಸುತ್ತವೆ" ಎಂದು ಹೇಳುತ್ತದೆ.
ಹಿಂದಿನ ನಾಮಕ್ಕೆ ಕೊಟ್ಟ ವಿವರಣೆಯನ್ನೇ ಇಲ್ಲಿಯೂ ಕೊಡಬಹುದು; ತನ್ನ ಇಂಪಾದ ಧ್ವನಿಯಿಂದ ದೇವಿಯು ಅಜ್ಞಾನಿಗಳನ್ನು ತನ್ನೆಡೆಗೆ ಆಕರ್ಷಿಸುತ್ತಾಳೆ.
Mandasmita-prabhāpūra-majjatkāmeśa-mānasā मन्दस्मित-प्रभापूर-मज्जत्कामेश-मानसा (28)
೨೮. ಮಂದಸ್ಮಿತ-ಪ್ರಭಾಪೂರ-ಮಜ್ಜತ್ಕಾಮೇಶ-ಮಾನಸಾ
ಸ್ಮಿತ ಅಂದರೆ ಕಿರುನಗೆ ಮತ್ತು ಮಂದಸ್ಮಿತವೆಂದರೆ ವಿಶೇಷ ಆಕರ್ಷಣೀಯವಾದ ನಗೆ. ಕಾಮೇಶನೆಂದರೆ ಶಿವ. ಲಲಿತಾಂಬಿಕೆಯು ಶಿವನ ಎಡತೊಡೆಯ ಮೇಲೆ ಕುಳಿತಾಗ ಅವರನ್ನು ಕಾಮೇಶ್ವರ ಮತ್ತು ಕಾಮೇಶ್ವರಿ ಎಂದು ಕರೆಯುತ್ತಾರೆ. ಈ ರೂಪವು ಅರ್ಧನಾರೀಶ್ವರ ರೂಪಕ್ಕೆ ಭಿನ್ನವಾಗಿದೆ. ಶಿವನು ಶ್ರೀಲಲಿತೆಯ ವಿಶೇಷವಾದ ಮಂದಹಾಸದಲ್ಲಿ ಮುಳುಗಿರುತ್ತಾನೆ ಎನ್ನುವುದು ಈ ನಾಮಾವಳಿಯ ಶಬ್ದಶಃ ಅರ್ಥ.
ಕಾಮ ಎಂದರೆ ಬಿಂದು ಅಥವಾ ಚುಕ್ಕೆ. ಬಿಂದುವು ಕಾಮಕಲಾ ಬೀಜವಾದ ’ಈಂ’(ईं)ನ ಅಂಶವೂ ಆಗಿದೆ. ಈ ಬೀಜಾಕ್ಷರದಲ್ಲಿ ಎರಡು ಬಿಂದುಗಳಿವೆ ಒಂದು ಸೂರ್ಯನ್ನು ಪ್ರತಿನಿಧಿಸಿದರೆ ಮತ್ತೊಂದು ಚಂದ್ರನನ್ನು ಪ್ರತಿನಿಧಿಸುತ್ತದೆ. ಬಿಂದುವು ಅಹಂಕಾರವನ್ನು ಕೂಡಾ ಪ್ರತಿನಿಧಿಸುತ್ತದೆ. ’ಕಾಮ’ ಮತ್ತು ’ಕಲಾ’ ಎರಡೂ ಶಬ್ದಗಳು ಆಸೆ/ಬಯಕೆ ಎನ್ನುವ ಅರ್ಥವನ್ನು ಹೊಂದಿವೆ. ಮನಸ್ಸೇ ಎಲ್ಲಾ ಆಸೆಗಳ ಮೂಲ. ಯಾವಾಗ ಸಾಕ್ಷಾತ್ ಪರಶಿವನೇ ಶ್ರೀ ಲಲಿತೆಯ ಸಮ್ಮೋಹಕ ನಗೆಯಲ್ಲಿ ಮುಳುಗಿಹೋಗಿದ್ದಾನೆಂದರೆ (ಲೀನವಾಗಿದ್ದಾನೆಂದರೆ) ಮತ್ತೇನು ಹೇಳಬೇಕು, ಅದು ಅವಳ ಹೆಚ್ಚುಗಾರಿಕೆಯನ್ನು ಕುರಿತು ಹೇಳುತ್ತದೆ.
ದೇವಿಯು ಅಮಾಯಕ ಜನರನ್ನು ತನ್ನ ಮಂದಹಾಸದಿಂದ ಆಕರ್ಷಿಸಿ ಅವರಲ್ಲಿ ಜ್ಞಾನವನ್ನು ತುಂಬಿ ಮುಕ್ತಿಯನ್ನು ಕರುಣಿಸುತ್ತಾಳೆ.
Anākalita-sādṛśya-cibuka-śrī-virājitā अनाकलित-सादृश्य-चिबुक-श्री-विराजिता (29)
೨೯. ಅನಾಕಲಿತ-ಸಾದೃಶ್ಯ-ಚಿಬುಕ-ಶ್ರೀ-ವಿರಾಜಿತಾ
ದೇವಿಗೆ ಅತ್ಯಂತ ಸುಂದರವಾದ ಗದ್ದವಿದೆ. ಸೌಂದರ್ಯಲಹರಿಯ ೬೭ನೇ ಶ್ಲೋಕವು, "ನಿನ್ನ ಅಸದೃಶ ಗದ್ದವು ಶಿವನ ಮುಂಗೈಯ್ಯಿಂದ ಪದೇ ಪದೇ ಎತ್ತಿ ಹಿಡಿಯಲ್ಪಟ್ಟು, ನಿನ್ನ ಕೆಳದುಟಿಯ ಅದರಾಮೃತವನ್ನು ಸವಿಯ ಬಯಸುವ ಅವನ ಆತುರತೆಯನ್ನು ತೋರಿಸುತ್ತದೆ." ಎಂದು ಹೇಳುತ್ತದೆ.
Kāmeśa-baddha-māṅgalya-sūtra-śobhita-kandharāकामेश-बद्ध-माङ्गल्य-सूत्र-शोभित-कन्धरा (30)
೩೦. ಕಾಮೇಶ-ಬದ್ಧ-ಮಾಂಗಲ್ಯ-ಸೂತ್ರ-ಶೋಭಿತ-ಕಂಧರಾ
ದೇವಿಯ ಕುತ್ತಿಗೆಯು ಕಾಮೇಶ್ವರನು ಕಟ್ಟಿದ ಮಾಂಗಲ್ಯ ಸೂತ್ರದಿಂದ ಅಲಂಕೃತವಾಗಿದೆ. ಸೌಂದರ್ಯ ಲಹರಿಯ ೬೯ನೇ ಶ್ಲೋಕವು ಹೀಗೆ ವರ್ಣಿಸುತ್ತದೆ, "ನಿನ್ನ ಕುತ್ತಿಗೆಯ ಮೇಲಿರುವ ಮೂರು ಗೆರೆಗಳು ಎಲ್ಲೆ(ಗಡಿ/ಅಂಚು)ಗಳಂತೆ ಹೊಳೆಯುತ್ತಾ ನಿನ್ನ ಮದುವೆಯ ಸಮಯದಲ್ಲಿ ಕಟ್ಟಿದ ಮಂಗಳ ಸೂತ್ರದ ಎಳೆಗಳ ಸಂಖ್ಯೆಯನ್ನು ಸೂಚಿಸುತ್ತವೆ; ಅದರೊಂದಿಗೆ ಸಂಗೀತದ ಪೂರ್ಣಸ್ವರಶ್ರೇಣಿಯ ಭಂಡಾರ ಅಥವಾ ವಿವಿಧ ಇಂಪಾದ ರಾಗಗಳ ಖಜಾನೆಯ ಎಲ್ಲೆಯನ್ನು ಇಲ್ಲವಾಗಿಸುತ್ತದೆ”.
ಮಂಗಳಸೂತ್ರವನ್ನು ಕಟ್ಟುವ ಪದ್ಧತಿಯು ವೇದಗಳಲ್ಲಿ ಚರ್ಚಿತವಾಗದ ಕಾರಣ ಈ ಪದ್ಧತಿಯು ಕಾಲಾನಂತರದಲ್ಲಿ ಸೇರ್ಪಡೆಯಾಗಿರಬಹುದು. ಸಾಮುದ್ರಿಕ ಶಾಸ್ತ್ರ(ದೇಹ ರಚನೆಯನ್ನು ವಿಶ್ಲೇಷಿಸುವ ಶಾಸ್ತ್ರ)ದ ಪ್ರಕಾರ ಮೂರು ಸೂಕ್ಷ್ಮ ಗೆರೆಗಳನ್ನು ಹಣೆ, ಕಣ್ಣುಗಳು ಅಥವಾ ಸೊಂಟದ ಮೇಲೆ ಹೊಂದಿರುವುದು ಸಮೃದ್ಧಿಯ ಸಂಕೇತವಾಗಿದೆ.
Kanakāṅgada-keyūra-kamanīya-bhujanvitā कनकाङ्गद-केयूर-कमनीय-भुजन्विता (31)
೩೧. ಕನಕಾಂಗದ-ಕೇಯೂರ-ಕಮನೀಯ-ಭುಜಾನ್ವಿತ
ಕನಕ-ಬಂಗಾರದ; ಅಂಗದ – ಬಳೆ ಅಥವಾ ಕಡಗ; ಕೇಯೂರ-ತೋಳುಗಳಲ್ಲಿ ಧರಿಸುವ ಒಂದು ವಿಧವಾದ ಆಭರಣ. ದೇವಿಯು ಬಂಗಾರದ ಬಳೆ ಮತ್ತು ಕೇಯೂರಗಳನ್ನು ಧರಿಸಿದ್ದಾಳೆ. ಬಹುಶಃ ಅದು ಈ ಕೆಳಗಿನದನ್ನು ಸೂಚಿಸಬಹುದು. ಇವೆರಡೂ ಆಭರಣಗಳು ಬಂಗಾರದಿಂದ ಮಾಡಲ್ಪಟ್ಟು ಕೈಗಳಲ್ಲಿ ಧರಿಸಲ್ಪಡುತ್ತವೆ; ಅವು ಮೇಲ್ನೋಟಕ್ಕೆ ವಿವಿಧ ಆಕಾರಗಳನ್ನು ಹೊಂದಿದ್ದರೂ ಕೂಡಾ ಅವುಗಳ ಅಂತಃಸತ್ವವು ಒಂದೇ ವಸ್ತುವಿನಿಂದ (ಬಂಗಾರದಿಂದ) ಮಾಡಲ್ಪಟ್ಟಿದೆ. ಜೀವಿಗಳ ಆಕಾರವು ವಿವಿಧ ರೀತಿಯದಾಗಿದ್ದರೂ ಕೂಡಾ ಅವೆಲ್ಲವುಗಳಲ್ಲಿ ಅಂತರ್ಗತವಾಗಿರುವ ಪರಬ್ರಹ್ಮವು ಒಂದೇ ಆಗಿದೆ.
*******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 26-31 http://www.manblunder.com/2009/07/lalitha-sahasranamam-26-31.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
ಪ್ರತಿಕ್ರಿಯೆ (5)
.
ಲಲಿತಾ ಸಹಸ್ರನಾಮ ೨೬ರಿಂದ ೩೧
__________________________________
.
೨೬. ಕರ್ಪೂರವೀಟಿಕಾಮೋಧ-ಸಮಾಕರ್ಷಿ-ದಿಗಂತರಾ
.
ಜ್ಞಾನಿಜನ ಭಕ್ತಿ ಮುಖೇನ, ಅಮಾಯಕರ ಅಜ್ಞಾನ ಘನ
ಕರ್ಪೂರವೀಟಿಕಾಸುಗಂಧವ, ದೇವಿ ಪಸರಿಸಿ ಆಕರ್ಷಣ
ಕೇಸರಿ ಏಲಕ್ಕೀ ಲವಂಗ ಕಸ್ತೂರಿ ಜಾಪತ್ರೆ ಜಾಕಾಯಿಗೆ
ಕಲ್ಲುಸಕ್ಕರೆಪುಡಿ ತಾಂಬೂಲದೆ ಪರಿಮಳಿಸೊ ತಾಯಿಗೆ ||
.
೨೭. ನಿಜ-ಸಲ್ಲಾಪ-ಮಾಧುರ್ಯ-ವಿನಿರ್ಭರ್ತ್ಸಿತ-ಕಚ್ಛಪೀ
.
ಆಲಿಸುತಿಹ ಭಕ್ತ ಕೋಟಿಗೆ, ಸುಶ್ರಾವ್ಯ ಮಧುರ ಕರ್ಣಾನಂದ
ಕಲಾಧಿದೇವತೆ ಸರಸ್ವತಿ ಕಚ್ಛಪಿ ವೀಣೆಗೂ ಮೀರಿದ ಸುನಾದ
ಲಲಿತೆಯನೋಲೈಸಲೆ ಶಿವಲೀಲೆ ನುಡಿಸಿದರು ವೀಣಾಪಾಣಿ
ದೇವಿನುಡಿ ಝೇಂಕಾರಕೆ ನಾಚಿ ಸಂದೂಕ ಸೇರಿಸುವಳೆ ವಾಣಿ ||
.
೨೮. ಮಂದಸ್ಮಿತ-ಪ್ರಭಾಪೂರ-ಮಜ್ಜತ್ಕಾಮೇಶ-ಮಾನಸಾ
.
ಕಿರುನಗೆಯ ಮಂದಸ್ಮಿತ, ಅಜ್ಞಾನಿಗಾಕರ್ಷಿಸಿ ನೀಡೆ ಜ್ಞಾನ
ಲಲಿತೆಯ ಸಮ್ಮೋಹಕ ನಗೆಯಲಿ, ಪರಶಿವನೆ ಆಗಿ ಲೀನ
ಕಾಮೇಶ್ವರನ ಕಾಮೇಶ್ವರಿ ಲಲಿತೆ, ಕೂತಳೆ ಶಿವನೆಡತೊಡೆ
ಮನಸಾಗಿ ಆಸೆಯೆಲ್ಲದರ ಮೂಲ, ಭಕ್ತರಾಶೆಯಾಗಿ ಕಾಡೆ ||
.
೨೯. ಅನಾಕಲಿತ-ಸಾದೃಶ್ಯ-ಚಿಬುಕ-ಶ್ರೀ-ವಿರಾಜಿತಾ
.
ಸೌಂದರ್ಯದ ಅಧಿದೇವತೆ, ದೇವಿ ಲಲಿತೆಯ ಸ್ಪರ್ಶ
ಕಾತುರತೆಯಲಿ ಶಿವನ ಮುಂಗೈ, ಗದ್ದವನ್ಹಿಡಿದ ದೃಶ್ಯ
ಆಧರಾಮೃತ ಲಹರಿ, ಸಮ್ಮೋಹನಗೊಳಿಸುವಾ ಪರಿ
ಶರಣಾಯ್ತೆ ಪುರುಷಾ ಪ್ರಕೃತಿ, ಸಮನ್ವಯದ ಕುಸುರಿ ||
.
೩೦. ಕಾಮೇಶ-ಬದ್ಧ-ಮಾಂಗಲ್ಯ-ಸೂತ್ರ-ಶೋಭಿತ-ಕಂಧರಾ
.
ದೇವಿ ಕೊರಳನಲಂಕರಿಸಿದ ಮಂಗಳ ಸೂತ್ರ
ಪ್ರಿಯಕಾಮೇಶ್ವರ ದೇವಿಗದೆಷ್ಟು ಪ್ರೀತಿ ಪಾತ್ರ
ಸೂಕ್ಷ್ಮಗೆರೆಯಂಚು ಕತ್ತಿನಾ ನತ್ತಾಗಿ ಮೂರೆಳೆ
ಎಲ್ಲೆ ಮೀರಿದಿಂಪು ರಾಗಭಂಡಾರ ಸುರಿಮಳೆ ||
.
೩೧. ಕನಕಾಂಗದ-ಕೇಯೂರ-ಕಮನೀಯ-ಭುಜಾನ್ವಿತ
.
ಬಂಗಾರದ ಬಳೆ ಕಡಗ ತೋಳ್ಬಂದಿ ಆಭರಣಗಳ ಸಹಿತ
ಉಜ್ವಲ ಮೈಕಾಂತಿಸಮೇತ ಸುವರ್ಣಕಾಂತಿ ರಾರಾಜಿತ
ಹೊಳೆವ ಆಕಾರಗಳನೇಕ ಅಂತಃಸತ್ವವಾದಂತೇ ಏಕೈಕ
ಜೀವಿಗಳನೇಕ ಅಂತರ್ಗತ, ಪರಬ್ರಹ್ಮವೇಕವೆನ್ನೆ ಸಾಧಕ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು