“ಎಲ್ಲರಿಗಾಗಿ ವೇದ” ಬರಹದ ಸರಣಿಯಲ್ಲಿ ವರ್ಣಾಶ್ರಮದ ಬಗ್ಗೆ ಲೇಖನವನ್ನು ಓದಿದ ಮಿತ್ರರೊಬ್ಬರು ಕೇಳಿದ ಪ್ರಶ್ನೆಗೆ ಅದೇ ಕಾಲಮ್ ನಲ್ಲಿ ಉತ್ತರಿಸುವುದೇ ಸೂಕ್ತವೆಂದು ಇಲ್ಲಿ ಬರೆಯುತ್ತಿರುವೆ.

ಪ್ರಶ್ನೆ:

ನೀವು ಬ್ರಾಹ್ಮಣರ ಹಲವು ಕರ್ತವ್ಯಗಳನ್ನು ಬರೆದಿದ್ದೀರಿ, ಅದೆಲ್ಲಾ ಇಂದಿನ ಕಾಲಕ್ಕೆ ಎಷ್ಟು ಪ್ರಸ್ತುತ?

ನನ್ನ ವಿವರಣೆ:

ಆಗುತ್ತಿರುವ ಒಂದು ತಪ್ಪಿನ ಬಗ್ಗೆ ಮೊದಲು ಓದುಗರ ಗಮನ ಸೆಳೆಯುವೆ. “ಬ್ರಾಹ್ಮಣ ವರ್ಣ” ಎಂದೊಡನೆ ಅದನ್ನು ಇಂದಿನ ಬ್ರಾಹ್ಮಣ   ಜಾತಿಗೆ ಸಮೀಕರಿಸುವುದು. ಅದು ಹಾಗಲ್ಲ. ವೇದದಲ್ಲಿ ನಾಲ್ಕು ವರ್ಣಗಳ ಬಗ್ಗೆ ಹೇಳಿದೆ. ಅದನ್ನು ಇಂದಿನ ಜಾತಿಗೆ ಸಮೀಕರಿಸುತ್ತಾ ಹೋದರೆ …..

೧. ಬ್ರಾಹ್ಮಣ:- ಈಗ ಬ್ರಾಹ್ಮಣ ಹೆಸರಿನ ಒಂದು  ಜಾತಿ ಇದೆ.

೨. ಕ್ಷತ್ರಿಯ :- ಈ ಹೆಸರಿನಲ್ಲೂ ಒಂದು ಜಾತಿ ಇದೆ

೩. ವೈಶ್ಯ:- ಈ ಹೆಸರಿನಲ್ಲೂ ಒಂದು ಜಾತಿ ಇದೆ

೪.ಶೂದ್ರ:- ಈ ಹೆಸರಿನಲ್ಲಿ ಜಾತಿ ಇದೆಯೇ? ಯಾವುದು ಮೇಲಿನ ಮೂರು ಜಾತಿಯ ವ್ಯಾಪ್ತಿಗೆ ಬರುವುದಿಲ್ಲ, ಅವರೆಲ್ಲಾ ಶೂದ್ರರೇ?

ಹಾಗಾಗಿ ಅಂದಿನ ವರ್ಣ ಬೇರೆ. ಇಂದಿನ ಜಾತಿ ಬೇರೆ. ನಿಜವಾಗಿ ಜಾತಿಯ ಪದವನ್ನೂ ನಾವಿಂದು ತಪ್ಪಾಗಿ ಬಳಸುತ್ತಿದ್ದೇವೆ. ಅದೇನೇ ಇರಲಿ ಇಂದಿನ ಜಾತಿ ವ್ಯವಸ್ಥೆ ಅಂದಿನ ವರ್ಣ ವ್ಯವಸ್ಥೆ ಒಂದೇ ಅಲ್ಲ.

ಹಾಗಾದರೆ ಬ್ರಾಹ್ಮಣರ ಕರ್ತವ್ಯದ ಬಗ್ಗೆ ಬರೆದಿದ್ದೀರಲ್ಲಾ? ಅಂದರೆ ,ಹೌದು ವೇದದ ಅನುಸಾರ ಬ್ರಾಹ್ಮಣ ನೆನಸಿಕೊಳ್ಳಬೇಕಾದರೆ

೧. ಬ್ರಹ್ಮಾನಂದದ ಸವಿಯನ್ನು ಕಾಣುವ ಬ್ರಹ್ಮಜ್ಞಾನಿಗಳಾಗಿರಬೇಕು

೨. ಈಶ್ವರೀಯ ಜ್ಞಾನವನ್ನು ಪ್ರಸರಿಸಿಸುತ್ತಾ ಇರಬೇಕು.

೩. ಅಹಿಂಸಕರೂ, ತಪಸ್ವಿಗಳೂ ಆಗಿದ್ದು  ಇವರು ಅವಿರತ ದುಡಿಮೆಯಲ್ಲಿ ವಿಶ್ವಾಸವಿಟ್ಟವರಾಗಿರಬೇಕು.

ಈ ಗುಣಗಳನ್ನು ಹೊಂದಿದ ಇಂದಿನ ಯಾವುದೇ ಜಾತಿಯ ಕುಟುಂಬದಲ್ಲಿ ಹುಟ್ಟಿದ್ದರೂ ಅವನು ಬ್ರಾಹ್ಮಣ. ಅಂದರೆ ಬ್ರಾಹ್ಮಣ ಎಂಬುದು ಅವನ ಪದವಿಯಾಗಬೇಕು.ಹಾಗಾದರೆ ರೂಢಿಯಲ್ಲಿ ಬ್ರಾಹ್ಮಣಜಾತಿ ಎಂಬುದು ಇದೆಯಲ್ಲಾ?

ಇದೆ.ಇರಲಿ. ಆ ಜಾತಿಯು ವೇದಾನುಸಾರ ಬ್ರಾಹ್ಮಣನಾಗಿರಬೇಕಾದರೆ ಆ ಅರ್ಹತೆಯನ್ನು  ಗಳಿಸಿಕೊಳ್ಳಬೇಕು, ಅಷ್ಟೆ. ಇಂದಿನ ದಿನಗಳಲ್ಲಿ ಬಹಳ ಜನ “ರಾಜಕುಮಾರ” “ರಾಷ್ಟ್ರಪತಿ” ಹೆಸರಿನ ಜನರಿದ್ದಾರೆ!!

ಈ ಲೇಖನ ಪ್ರಕಟಿಸುವುದಕ್ಕಿಂತ ಮುಂಚೆ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಗಮನಕ್ಕೆ ತಂದೆ. ಅವರ ಅಭಿಪ್ರಾಯವನ್ನು ಇಲ್ಲಿ ಪ್ರಕಟಿಸಿರುವೆ

-ಹರಿಹರಪುರ ಶ್ರೀಧರ್

 

ಶ್ರೀಯುತರೇ!

ಬ್ರಾಹ್ಮಣಾದಿ ವರ್ಣಗಳ ಬಗ್ಗೆ ನೀಡಿರುವ ಮಾಹಿತಿ ಸೂಕ್ತವಾಗಿದೆ.

ಮತ್ತೆ ಮತ್ತೆ ಹೇಳಬೇಕಾದ ಮಾತೆಂದರೆ,  ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರ ನಡುವೆ ಮೇಲು-ಕೀಳುಗಳಿಲ್ಲ.

ಅಜ್ಞಾನದ ವಿರುದ್ಧ ಹೋರಾಡಿ ಬ್ರಾಹ್ಮಣನು ಸಮಾಜದ ಸೇವೆ ಮಾಡುತ್ತಾನೆ.

ಅನ್ಯಾಯದ ವಿರುದ್ಧ ಹೋರಾಡಿ ಕ್ಷತ್ರಿಯನು ಸಮಾಜದ ಸೇವೆ ಮಾಡುತ್ತಾನೆ.

ಅಭಾವದ ವಿರುದ್ಧ  ಹೋರಾಡಿ ವೈಶ್ಯನು ಸಮಾಜದ ಸೇವೆ ಮಾಡುತ್ತಾನೆ.

ಆಲಸ್ಯದ ವಿರುದ್ಧ ಹೋರಾಡಿ ಶೂದ್ರನು ಸಮಾಜದ ಸೇವೆ ಮಾಡುತ್ತಾನೆ.

ಎಲ್ಲರೂ ತಮ್ಮನ್ನು ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿರುವಾಗ ಮೇಲು-ಕೀಳುಗಳು ಕಲ್ಪಿತವಲ್ಲವೇ?!!

 

-ವೇದಾಧ್ಯಾಯೀ ಸುಧಾಕರಶರ್ಮ