ಮುರಕಲು ಗುಡಿಸಿಲ ಮಂದದ ಬೆಳಕಲಿ
ಬೆಂದಿಹ ಜೀವದ ಭಂಗದ ಬದುಕಿನ
ಹರುಕಲು ಸೀರೆಯ ಸೇರಿಸಿ ಕಟ್ಟಿದ
ಜೋಲಿಯ ಜೂಕಲಿ ಅಳುತಿಹ ಕಂದನ
ಎದೆಯನು ಮೀಟುವ ತಾಯಿಯ ಕರುಳಿನ
ತುಡಿತದಿ ತೂಗುವ ತಾನದ ಜೋಗುಳ
ನಾಭಿಯ ನಾಳದ ಬಂಧದ ಬದುಕಿನ
ಕನಸನು ಕೊನರಿಸಿ ಮನಸನು ಅರಳಿಸಿ
ಜೀವನ ಜಂಜಡ ಜಡತೆಯ ತೊಡೆಯುವ
ಸಂತಸ ಚಿಲುಮೆಯ ಅಮ್ಮೆಯ ಕನ್ನುಡಿ
ಜೀವಿಯ ಜಾಲದ ಮೂಲದ ಮುನ್ನುಡಿ
ಸೃಷ್ಟಿಯ ಹಬ್ಬದ ಅಬ್ಬೆಯ ಹೊನ್ನುಡಿ
ಸಗ್ಗದಿ ದೊರೆಯದ ಹಿಗ್ಗಿನ ತಾಯ್ನುಡಿ
ಕರ್ತನ ತರ್ಕಕು ನಿಲುಕದ ನಲ್ನುಡಿ
ಮರ್ತ್ಯದ ಮಾತೆಯ ಅಮೃತ ಲಲ್ನುಡಿ
ಮಹಿಯಲಿ ಮಹಿಮೆಯ ಅಮ್ಮನ ಸಿಹಿನುಡಿ
ಬರಮನ ಬಯಕೆಯ ಅವ್ವೆಯ ಜೋನುಡಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!