ಆಲದ ಬಿಳಿಲಿನ ಬಳಿಯಲಿ ಸುಳಿಯುವ
ಅಳಿಲಿನ ಮರಿಗಳು ಬಿಳಿಲಿನ ಸುಳಿಯಲಿ
ತಂಪಿನ ತಂಗಾಳಿ ಮುಂಜಾನೆ ಮಂಜಲಿ
ಹೊರಳುತ್ತ ಇಳಿಯುತ್ತ ಹಾರುತ್ತ ಏರುತ್ತ
ಕುಣಿಯುತ್ತ ಕಿರುಚುತ್ತ ಆಟವನಾಡುತ್ತ
ತಾರಕ ಸ್ವರದಲಿ ಕಿಚಕಿಚಗುಟ್ಟುತ್ತ
ಸುತ್ತೆಲ್ಲ ಸದ್ದಲಿ ಗದ್ದಲ ಮಾಡುತ್ತ
ಹದ್ದಿಲ್ಲ ಬದ್ದಿಲ್ಲ ಬಿದ್ದೇಳೊ ಭಯವಿಲ್ಲ
ಹೊತ್ತಿಲ್ಲ ಗೊತ್ತಿಲ್ಲ ಸುತ್ತಾಲ ಪರಿವಿಲ್ಲ
ಫಕ್ಕನೆ ಮೇಲೆರಗಿ ಘಕ್ಕನೆ ಮುಕ್ಕುವ
ಕುಕ್ಕುವ ಕಾಗೆಗೆ ಬೆಕ್ಕಿನ ಹೊಂಚಿಗೆ
ಹದ್ದಿನ ಕಣ್ಣೀಗೆ ನರಿಗಳ ಸಂಚಿಗೆ
ಕುರಿಗಳ ತರದಲಿ ಬಲಿಯಾಗೊ ಮರಿಗಳ
ಅಳಲಿನ ತಾಯ್ಗಳ ತೊಳಲಿನ ಕಳವಳ
ಕೂಗಿನ ಕೀಚಲಿ ಎಚ್ಚೆತ್ತ ಮರಿಗಳು
ಅಯ್ಯಯ್ಯೋ ಹದ್ದೀನ ಕಣ್ಣೀಗೆ ಬಿದ್ದೇವು
ಅಮ್ಮಮ್ಮೋ ಬೆಕ್ಕಿನ ಪಂಜಕ್ಕೆ ಸಿಲುಕೇವು
ಅಬ್ಬಬ್ಬೋ ಕಾಗೆಯ ಕೊಕ್ಕೀಗೆ ಸಿಕ್ಕೇವು
ಅಪ್ಪಪ್ಪೋ ನರಿಯಣ್ಣ ಹೊಂಚಾಕಿ ಕುಂತಾನ
ಎದ್ದೇವೊ ಬಿದ್ದೇವೊ ಸತ್ತೇವೊ ಕೆಟ್ಟೇವೊ
ಕೂಗುತ್ತ ಅರಚುತ್ತ ಕಿರುಚುತ್ತ ಚೀರುತ್ತ
ಕುಯ್ಯೋ ಮರ್ರೋ ಬರ್ರೋ ಎನ್ನುತ್ತ
ಏಳುತ್ತ ಬೀಳುತ್ತ ಗೋಳಿಟ್ಟು ಹೊರಳ್ಯಾಡಿ
ಅಮ್ಮಾನ ಮಾತನ್ನ ಕೇಳ್ಲಿಲ್ಲ ನಾವೆಲ್ಲ
ಇನ್ಮುಂದೆ ಹಿಂಗೆಲ್ಲ ದೇವ್ರಾಣೆ ಮಾಡಲ್ಲ
ಹಾಡ್ಹ್ಯಾಡಿ ಭೋರ್ಯಾಡಿ ಬಾಯ್ಬಾಯಿ ಬಡ್ಕಂಡು
ಆಲದ ಬಿಳಿಲಿನ ಸುಳಿಗಳ ಮೇಲಿಂದ
ಧುಮ್ಮಿಕ್ಕಿ ದೂಕಾಡಿ ನೂಕಾಡಿ ಮುನ್ನುಗ್ಗಿ
ಓಡೋಡಿ ಕೂಗ್ಯಾಡಿ ಗೂಡೀಗೆ ಮರಳ್ಯಾವ
ತಾಯಳಿಲು ಸಂತಸದ ನಿಟ್ಟುಸಿರ ಬಿಟ್ಟಾವ
ಪ್ರತಿಕ್ರಿಯೆ (1)