ನಿನ್ನೆ ಪಾರ್ಥರು ಕೊಟ್ಟ 'ಪದ್ಯ ಪಾನ'ದ ಲಿಂಕು ನೋಡಿದೆ (http://padyapaana.com/) - 'ದ್ರೌಪದಿ ವಸ್ತ್ರಾಪಹರಣದ' ಚಿತ್ರವಿತ್ತು (72). ಷಟ್ಪದಿ, ಛಂಧಸ್ಸು ವ್ಯಾಕರಣ ಜ್ಞಾನ ನನಗಿಲ್ಲದ ಕಾರಣ, ಆ ಪ್ರಕಾರದಲ್ಲಿ ರಚಿಸಲು ನನಗೆ ಬರದು. ಆದರೂ ಚಿತ್ರ ನೋಡಿ ಮೂಡಿದ ದ್ರೌಪದಿಯ ಭಾವಗಳಿಗೆ ಧ್ವನಿ ಕೊಡಲು ನೋಡಿದೆ - ಅದರ ಫಲಿತ ಈ ಕೆಳಗಿದೆ, ಈಗ ಸಂಪದಿಗರ ಮುಂದೆ - ನಾಗೇಶ ಮೈಸೂರು
ಪಾಂಚಾಲಿಯ ಹಾಡು
ದುರುಳ ಸೆಳೆ ಸೆಳೆದನೆ ಬಳಿ ಸಾರಿ
ಕೈ ಸೆರಗಿಗಿಟ್ಟಾ ಧೂರ್ತತನ ಭಾರಿ
ಏನು ಮಾಡಲಿತ್ತೆ ಅಸಹಾಯಕತೆ
ಆಗಬೇಕಿತ್ತೆ ಭಾರತ ಮುನ್ನುಡಿಕಥೆ!
ನನ್ನಾರ್ತನಾದಕೆ ಕೃಷ್ಣಾ ಮುರಾರಿ
ಮಾನ ಕಾಪಾಡಿದನಲ್ಲವೆ ಆಭಾರಿ
ಜಟ್ಟಿಗಳೈವರೆ ಕುಳಿತರೆ ಮುದುರಿ
ಕೇಶವಾ ನೀನಿಲ್ಲದಿರಿನ್ಯಾರ ದಾರಿ!
ದ್ಯೂತದಲಿ ಕೂತವರವರೆ ಐವರು
ಹರಿದಂಚಿದರೂ ನನ್ನೇಕೆ ಹೂತರು
ಪಣವಿಟ್ಟರು ಇಡಿಜೀವನ ಮುಡಿಪು
ಪಣಕಿಡೆ ಜೂಜಾಟಕೆ ಯಾರೆ ಕಾಪು?
ಯಾರೊ ದುರ್ಯೋಧನ ದುಷ್ಟಜನ
ರಾಜಕೀಯಕೇಕೆಳೆಯೆ ಹೆಣ್ಗಳ ಮನ
ಲಜ್ಜೆಯೆ ಅಭರಣವಾದವರ ಜೀವನ
ಬಿಚ್ಚಲ್ಹೀಗೆಲ್ಲ ಸರಿಯೆ ಹೆಣ್ಣಲ್ಲ ಕವನ!
ಬಟ್ಟೆಯ ಬಿಚ್ಚೆ ಹುಚ್ಚುಚ್ಚೆ ಮನಸ್ವೇಚ್ಛೆ
ಯುಗಕೆಲ್ಲ ಸ್ಪೂರ್ತಿ ದುಷ್ಕರ್ಮಿ ಕೆಚ್ಚೆ
ಮೌನದೀ ಕೂತರೇಕೆಲ್ಲ ಮಹಾ ರಥಿ
ಉತ್ತೇಜಿಸಿದಂತಲ್ಲವೆ ಭವಿತಸಂತತಿ?
ಓದಲೇಕಿಷ್ಟಾಸೆ ಬೆತ್ತಲಿಸೀ ಗುಂಪಲೆ
ತಾಯ್ತಂಗಿಸತಿಗಳಿಗಿಷ್ಟೆ ಕಟ್ಟಿದ ಬೆಲೆ
ಬ್ರಹ್ಮಸೃಷ್ಟಿಯನೆ ನಮ್ಮುದರಕೆ ಕಟ್ಟಿ
ನಾವ್ಹೆತ್ತು ಅನುಭವಿಸಲೇಕಿ ದುರ್ಗತಿ?
ಸದ್ಯ ಜೀವಂತ ಮುರಾರಿಗೆ ಹೃದಯ
ಸಜ್ಜನರಿನ್ನೂ ಅಷ್ಟಿಷ್ಟಿದ್ದವರಾ ವಿಷಯ
ಹೇಗೊ ಬದುಕಿತೆ ದ್ವಾಪರದ ದ್ರೌಪತಿ
ಕಲಿಯುಗದಲಿ ಹೆಣ್ಣಿಗೆ ಏನಪ್ಪಾ ಗತಿ?
- ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
ಪ್ರತಿಕ್ರಿಯೆ (4)